ಇಂದು ಜಿಲ್ಲೆಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿ ಸ್ಥಳೀಯ ಶಾಸಕರು ಬಿಜೆಪಿ ಜೆಡಿಎಸ್ ವಿರುದ್ದ ವಾಗ್ವಾದ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಇಂದು(ಜ.24) ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನ ಹಮ್ಮಿಕೊಂಡಿದ್ದು, ಸಾವಿರಾರು ಜನ ಕಾರ್ಯಕರ್ತರು, ಮುಖಂಡರು ನಗರದ ಭಗತ್ ಸಿಂಗ್ ಕ್ರೀಡಾಂಗಣಕ್ಕೆ ಬಂದಿದ್ದು ಎಲ್ಲರೂ ಸಹ ನಾಯಕರ ಭಾಷಣಕ್ಕೆ ಎರಡು ಗಂಟೆಗಳಿಗೂ ಅಧಿಕ ಕಾಲ ಕಾದು ಕುಳಿತಿದ್ದರು. ಬಳಿಕ ಕೈ ನಾಯಕರು ಬರ್ತಿದ್ದಂತೆ ವೇದಿಕೆ ಮೇಲೇರಿ ಮೈಕ್ ಹಿಡಿದು ಜೆಡಿಎಸ್ ಮತ್ತು ಬಿಜೆಪಿ ವಿರುದ್ದ ಮಾತಿನ ಯುದ್ದವನ್ನ ನಡೆಸಿದರು. ಮೊದಲಿಗೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್(D. K. Shivakumar) ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದೆ ಬರ್ತಿವಿ ಆದರೆ ಬೆಳಗಾವಿನಲ್ಲಿ ಒಬ್ಬ ಮಾಜಿ ಮಂಚದ ಮಂತ್ರಿ 10 ಕೋಟಿ ಹೆಚ್ಚಾಗಿ ಖರ್ಚು ಮಾಡಿಯಾದರೂ ಸರಿ ಒಂದು ಓಟಿಗೆ 6 ಸಾವಿರ ಹಣಕೊಟ್ಟು ಕೊಂಡುಕೊಳ್ತಿವಿ ಅಂತಿದ್ದಾನೆ. ಅಂತವರ ವಿರುದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿಕೆ ಶಿವಕುಮಾರ್ ಬಾಷಣ ಮುಗಿಸಿ ಬರ್ತಿದ್ದಂತೆ ಮೈಕ್ ಮುಂದೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಬಿಜೆಪಿ ವಿರುದ್ದ ಮಾತಿನ ಯುದ್ದವನ್ನ ಮುಂದುವರೆಸಿದ್ರು. ನಾವು ಬಿಜೆಪಿ ಪಾಪದ ಪುರಾಣದ ಪುಸ್ತಕ ಹೊರ ತಂದಿದ್ವಿ ಹೀಗಾಗಿ ಬಿಜೆಪಿ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನ ಮಾಡ್ತಿದೆ. ಅಲ್ಲದೆ ನಮ್ಮಲ್ಲೆ ಇದ್ದು ನಮ್ಮಿಂದ ಹೋದ ಪಕ್ಕದ ಕ್ಷೇತ್ರದ ಗಿರಾಕಿಯಿಂದ ನಮ್ಮ ಮೇಲೆ ಆರೋಪಗಳನ್ನ ಬೊಮ್ಮಾಯಿ ಮಾಡಿಸುತ್ತಿದ್ದಾನೆ. ಬೊಮ್ಮಾಯಿ ಈಸ್ ಕ್ರಿಮಿನಲ್ ಎಂದಿದ್ದಾರೆ. ಜೊತೆಗೆ ಬೊಮ್ಮಾಯಿ ಮತ್ತು ಅವರ ಮಂತ್ರಿ ಮಂಡಲ ಹೇಗೆ ಅಂದ್ರೆ ನಾವು ಶಾಲೆಯಲ್ಲಿ ಆಲಿಬಾಬ ಮತ್ತು ಕಳ್ಳರು ಅಂತ ಓದಿದ್ವಿ ಹಾಗೆ ಇವರು ಭೂತದ ಬಾಯಲ್ಲಿ ಮಂತ್ರ ಹೇಳಿಸುತ್ತಾರೆ ಎಂದು ಕಿಡಿಕಾರಿದರು. ಇನ್ನು ಮುಂದೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನೇಕಾರರಿಗೆ 20 ಹೆಚ್ಪಿ ವಿದ್ಯುತ್ ಉಚಿತವಾಗಿ ನೀಡಲಿದ್ದೇವೆ. ಜೊತೆಗೆ 50 ಕ್ವಿಂಟಾಲ್ವರೆಗೂ ರೈತರ ರಾಗಿಯನ್ನ ಸರ್ಕಾರ ಖರೀದಿ ಮಾಡಲಿದೆ ಎಂದು ಭರವಸೆ ನೀಡಿದರು.