ಸಚಿವ ಆರ್ ಅಶೋಕ್
ಬೆಂಗಳೂರು: ಇಡೀ ದೇಶದಲ್ಲಿ ಭಾರತದಲ್ಲಿಯೇ ಅತಿಹೆಚ್ಚು ಕೊರೊನಾ ಟೆಸ್ಟಿಂಗ್ ಕರ್ನಾಟಕದಲ್ಲಿ ನಡೆಯುತ್ತಿದೆ. ಐದಾರು ಜಿಲ್ಲೆಗಳಲ್ಲಿ ಲಸಿಕಾಕರಣ (vaccination) ಕಡಿಮೆಯಾಗಿದೆ. ಆ ಜಿಲ್ಲೆಗಳಿಗೆ ಹೆಚ್ಚು ಗಮನ ಕೊಡಬೇಕು. ಆ ಜಿಲ್ಲಾಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ಮಾಡ್ತೀವಿ. ಆಕ್ಸಿಜನ್ ಪ್ಲಾಂಟ್ (Oxygen Plant) ಇರುವ ಕಡೆ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಜನವರಿ 25, 26ರ ಒಳಗೆ ಇದು ಪೀಕ್ಗೆ ಹೋಗುತ್ತೆ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದರು. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಕೊರೊನಾ ವಸ್ತುಸ್ಥಿತಿ ಪರಾಮರ್ಶನಾ ಸಭೆಯ ನಂತರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದರು.
ಶುಕ್ರವಾರದ ವರೆಗೂ (ಜ.21) ಕಾದುನೋಡುವ ತಂತ್ರ ಅನುಸರಿಸುತ್ತೇವೆ. ಅಲ್ಲಿಯವರೆಗೂ ರಾತ್ರಿ ಕರ್ಫ್ಯೂ ಸೇರಿದಂತೆ ಈಗಿರುವ ಎಲ್ಲ ನಿಯಮಗಳೂ ಯಥಾವತ್ತು ಮುಂದುವರಿಯಲಿವೆ. ಜ.21ರಂದು ಮತ್ತೊಮ್ಮೆ ಸಭೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಲಾಕ್ಡೌನ್ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಹ ಲಾಕ್ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರದ (ಜ 21) ಸಭೆಯಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಜವಾಬ್ದಾರಿ ಹೊತ್ತಿರುವ ಎಲ್ಲ ಸಚಿವರೂ ಮತ್ತು ಅಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ. ಅನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಹೊಟೆಲ್ ಅಥವಾ ಇತರ ಯಾರಿಗೋ ಸಹಾಯ ಮಾಡಲೆಂದು ನಿಯಮ ಸಡಿಲಿಸಲು ಆಗುವುದಿಲ್ಲ. ಕರ್ನಾಟಕದ ಆರೂವರೆ ಕೋಟಿ ಜನರ ಪ್ರಾಣ ರಕ್ಷಣೆ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ, ವಿಶ್ವಸಂಸ್ಥೆ ಮತ್ತು ನಮ್ಮ ಕಾರ್ಯಪಡೆ ಸಮಿತಿ ಸದಸ್ಯರ ಶಿಫಾರಸುಗಳನ್ನು ಗಮನಿಸಿ, ಜನರ ಪರವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಶುಕ್ರವಾರದ ಹೊತ್ತಿಗೆ ಕೊರೊನಾ ಸೋಂಕು ಕಡಿಮೆಯಾದರೆ ಒಳ್ಳೇ ಸುದ್ದಿಯೇ ಬರಬಹುದು ಎಂದು ಸುಳಿವು ನೀಡಿದರು.