Covid 19: ಒಮಿಕ್ರಾನ್ ಭೀತಿಯ ನೆರಳಿನಲ್ಲಿ ಆರೋಗ್ಯ ಸಚಿವರಿಂದ ಮಹತ್ವದ ಸಭೆ: ಲಸಿಕೆ ಪಡೆಯಲು ನಿರ್ಲಕ್ಷ್ಯ ತೋರುವವರಿಗೆ ದಂಡದ ಬಿಸಿ ಮುಟ್ಟಿಸಿ ಎಂದ ತಜ್ಞರು | Health Minister Dr K Sudhakar Conduct Meeting with Experts on Omicron Variant Threat in Karnataka


Covid 19: ಒಮಿಕ್ರಾನ್ ಭೀತಿಯ ನೆರಳಿನಲ್ಲಿ ಆರೋಗ್ಯ ಸಚಿವರಿಂದ ಮಹತ್ವದ ಸಭೆ: ಲಸಿಕೆ ಪಡೆಯಲು ನಿರ್ಲಕ್ಷ್ಯ ತೋರುವವರಿಗೆ ದಂಡದ ಬಿಸಿ ಮುಟ್ಟಿಸಿ ಎಂದ ತಜ್ಞರು

ಆರೋಗ್ಯ ಸಚಿವ ಡಾ ಕೆ ಸುಧಾಕರ್

ಬೆಂಗಳೂರು: ಲಸಿಕೆ ಪಡೆಯಲು ತಾತ್ಸಾರ ತೋರುತ್ತಿರುವವರಿಗೆ ಎಚ್ಚರಿಕೆ ಮೂಡಿಸುವಂಥ ಕ್ರಮಗಳನ್ನು ಜಾರಿಮಾಡಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂಬ ಮಾತು ಪ್ರಬಲವಾಗಿ ಕೇಳಿಬರುತ್ತಿದೆ. ಇದೇ ಹೊತ್ತಿನಲ್ಲಿ ಎರಡು ಡೋಸ್ ಲಸಿಕೆ ಪಡೆಯದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬಾರದು ಎಂಬ ಅಭಿಪ್ರಾಯವು ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ವ್ಯಕ್ತವಾಯಿತು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು. ಕಾನೂನು ತಂದು, ದಂಡ ಹಾಕಿ ಲಸಿಕೆ ನೀಡುವ ಚಿಂತನೆ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಎರಡನೇ ಡೋಸ್ ಲಸಿಕೆ ಪಡೆಯದಿರುವವರಿಗೆ ಮುಂದಿನ ದಿನಗಳಲ್ಲಿ ಆಸ್ಪತ್ರೆ ವೆಚ್ಚ ಭರಿಸಬಾರದು ಎಂದು ತಜ್ಞರ ಸಮಿತಿ ಶಿಫಾರಸು ‌ಮಾಡಿದೆ. ಮಾಲ್ ಸೇರಿದಂತೆ ಅನೇಕ ಕಡೆ 2 ಡೋಸ್​ ಲಸಿಕೆ ಕಡ್ಡಾಯ ಮಾಡುವ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಲಹೆಯ ಮೇರೆಗೆ ಸಭೆ ನಡೆಸಲಾಗಿದೆ. ಒಮಿಕ್ರಾನ್ ವೈರಸ್​​ ಸೋಂಕು ನಿಯಂತ್ರಣಕ್ಕೆ ಪೂರಕವಾಗಿ ಆಸ್ಪತ್ರೆ ವ್ಯವಸ್ಥೆ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಲಾಗಿದೆ. ಅನೇಕ ತಂತ್ರಜ್ಞಾನ ಬಳಸಿ ಕ್ವಾರಂಟೈನ್​ ಆ್ಯಪ್ ಮಾಡಿದ್ದೇವೆ. ವಿದೇಶಿ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ ಟೆಸ್ಟ್​ ಕಡ್ಡಾಯಗೊಳಿಸಿದ್ದೇವೆ. ಪ್ರತಿನಿತ್ಯ 2,500 ಜನರಿಗೆ ಕೊವಿಡ್​ ಟೆಸ್ಟ್​ ಮಾಡುತ್ತಿದ್ದೇವೆ. ವಿದೇಶಿ ಪ್ರಯಾಣಿಕರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ರೋಗ ಲಕ್ಷಣ ಇದ್ದರೆ 5ನೇ ದಿನ, ರೋಗ ಲಕ್ಷಣ ಇಲ್ಲದಿದ್ದರೆ 7ನೇ ದಿನ ಆರ್​ಟಿಪಿಸಿಆರ್ ಕೋವಿಡ್​ ಟೆಸ್ಟ್​ ಮಾಡಲಾಗುವುದು ಎಂದು ಹೇಳಿದರು.

ಅರೋಗ್ಯ ಇಲಾಖೆ ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಲವು ದೇಶಗಳಲ್ಲಿ ಓಮಿಕ್ರಾನ್ ಕೊರೊನಾ ಪ್ರಭೇದ ಕಾಣಿಸಿಕೊಂಡಿದೆ. ಅದನ್ನು ನಿಯಂತ್ರಿಸಲು ಮೊದಲ ಆದ್ಯತೆ ನೀಡಬೇಕು. ಅಕಸ್ಮಾತ್ ಭಾರತದಲ್ಲಿ ಒಮಿಕ್ರಾನ್ ವೈರಾಣು ಸೋಂಕು ಕಾಣಿಸಿಕೊಂಡರೆ ನಮ್ಮ ಸಿದ್ಧತೆ ಹೇಗಿರಬೇಕೆಂದು ಚರ್ಚಿಸಲು ಹೆಚ್ಚಿನ ಸಮಯ ವಿನಿಯೋಗ ಮಾಡಿದ್ದೇವೆ. ಆಸ್ಪತ್ರೆ ವ್ಯವಸ್ಥೆ, ವೈದ್ಯಕೀಯ ಸಂಸ್ಥೆ, ಖಾಸಗಿ ಆಸ್ಪತ್ರೆ ಸಿದ್ಧತೆ ಬಗ್ಗೆ ಚರ್ಚೆ ನಡೆದಿದೆ. ಕ್ವಾರಂಟೈನ್ ಆ್ಯಪ್ ರೂಪಿಸಲು ಹಲವು ಬಗೆಯ ತಂತ್ರಜ್ಞಾನಗಳನ್ನು ಬಳಸಿದ್ದೇವೆ. ವಿದೇಶಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರ್​ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಪ್ರತಿದಿನ 2500 ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸಿಬ್ಬಂದಿ ಬಗ್ಗೆ ಸುಧಾಕರ ಮಾಹಿತಿ ಸಂಗ್ರಹಿಸಿದರು. ಬೆಡ್‌ಗಳ ಲಭ್ಯತೆ ವಿವರ, ಪ್ರತಿದಿನದ ಟೆಸ್ಟಿಂಗ್ ಸಂಖ್ಯೆ ಮತ್ತು ಲಸಿಕೆ ನೀಡಬೇಕಾಗಿರುವವರ ವಿವರವನ್ನು ಆರೋಗ್ಯ ಸಚಿವರು ಪಡೆದುಕೊಂಡರು.

ಕೊರೊನಾ ಹೊಸ ರೂಪಾಂತರದ ಸೋಂಕು ಕಾಣಿಸಿಕೊಂಡರೆ ಹೇಗೆ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಜಿನೋಮಿಕ್ ಸೀಕ್ವೆನ್ಸ್ ಲ್ಯಾಬ್​​ಗಳ ನೋಡೆಲ್ ಆಫೀಸರ್ ಡಾ.ರವಿ ನೇತೃತ್ವದಲ್ಲಿ 10 ತಜ್ಞ ವೈದ್ಯರ ತಂಡ ರಚಿಸಿದ್ದೇವೆ. ಏಕರೂಪದ ಚಿಕಿತ್ಸಾ ಕ್ರಮ ರೂಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಒಮಿಕ್ರಾನ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡಬಹುದು ಎಂದು ವಿಶ್ಲೇಷಿಸಲಾಗಿದೆ. ರೋಗ ಎಷ್ಟು ವೇಗ ಮತ್ತು ತೀವ್ರವಾಗಿ ಹರಡುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ತಪ್ಪದೆ ಲಸಿಕೆ ತೆಗೆದುಕೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದು ನುಡಿದರು. 2ನೇ ಲಸಿಕೆ ಪಡೆಯಬೇಕಿರುವ 41 ಲಕ್ಷ ಮಂದಿ ರಾಜ್ಯದಲ್ಲಿ ಇದ್ದಾರೆ. ಇಷ್ಟು ಜನರಿಗೆ ಶೀಘ್ರ ಲಸಿಕೆ ಕೊಡುವುದಕ್ಕೆ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಲಸಿಕೆ ಅಭಿಯಾನಕ್ಕೆ ಹೆಚ್ಚು ಒತ್ತು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದ್ದಾರೆ ಎಂದರು.

ವಿದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ. ಕೆಲವು ದೇಶಗಳ ಒಮಿಕ್ರಾನ್ ದೊಡ್ಡ ಮಟ್ಟದಲ್ಲಿ ಹರಡಿದೆ. ಅಂಥ ದೇಶಗಳಿಂದ ಬಂದವರು ಇಲ್ಲಿಯೂ ಹರಡಿಸಿದರೆ ದೊಡ್ಡ ಅಪಾಯವಾಗುತ್ತದೆ. ಹೀಗಾಗಿ ಈಗಲೇ ನಿಯಂತ್ರಣ ಮಾಡುವ ಯೋಚನೆ ಇದೆ ಎಂದು ನುಡಿದರು.

ಇದನ್ನೂ ಓದಿ: Omicron: ಡಾ.ರವಿ ನೇತೃತ್ವದಲ್ಲಿ 10 ತಜ್ಞರ ತಂಡ ರಚನೆ ಮಾಡಿದ್ದೇವೆ: ಆರೋಗ್ಯ ಸಚಿವ ಸುಧಾಕರ್ ಹೇಳಿಕೆ
ಇದನ್ನೂ ಓದಿ: ಆರೋಗ್ಯ ಸಚಿವ ಡಾ. ಸುಧಾಕರ್ ನೇತೃತ್ವದ ಉನ್ನತಮಟ್ಟದ ಸಭೆ, ತಾಂತ್ರಿಕ ಸಲಹಾ ಸಮಿತಿ ನೀಡಿರುವ ಶಿಫಾರಸುಗಳು ಹೀಗಿವೆ

TV9 Kannada


Leave a Reply

Your email address will not be published. Required fields are marked *