ಸಾಂಕೇತಿಕ ಚಿತ್ರ
ಲಖನೌ: 15ದಿನಗಳ ಹಿಂದೆ ಉತ್ತರ ಪ್ರದೇಶದ ಅಂಬೇಡ್ಕರ್ನಗರ ಜಿಲ್ಲೆಯಲ್ಲಿ ಪುಂಥಾರ್ ಹೆದ್ದಾರಿಯಲ್ಲಿ, ಕಾರೊಂದು ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದ ಘಟನೆ ನಡೆದಿತ್ತು. ಕಾರು ಕೂಡ ಸಿಕ್ಕಾಪಟ್ಟೆ ನುಜ್ಜುಗುಜ್ಜಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೃತ ವ್ಯಕ್ತಿಯನ್ನು ಉದ್ಯಮಿ ಸಂಜಯ್ ವರ್ಮಾ ಎಂದು ಗುರುತಿಸಿದ್ದರು. ಸಂಜಯ್ ವರ್ಮಾ ಒಬ್ಬರೇ ಕಾರಿನಲ್ಲಿ ಇದ್ದರು. ಮೊದಲು ಪೊಲೀಸರು, ಸಂಜಯ್ ವರ್ಮಾ ಕುಡಿದು ಕಾರು ಚಾಲನೆ ಮಾಡಿದ ಪರಿಣಾಮ ಟ್ರಕ್ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ ಎಂದೇ ಭಾವಿಸಿದ್ದರು. ಆದರೆ ಈ ಪ್ರಕರಣಕ್ಕೀಗ ಊಹಿಸಲು ಸಾಧ್ಯವಾಗದ ಟ್ವಿಸ್ಟ್ ಸಿಕ್ಕಿದೆ. ಇದೊಂದು ಕೊಲೆ ಎಂದು ಪಕ್ಕಾ ಆಗಿದೆ.
ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಮೃತ ಉದ್ಯಮಿಯ ಮರೋಣತ್ತರ ಪರೀಕ್ಷೆಯ ನಂತರ. ವರದಿ ಬಂದ ಬಳಿಕ ಪೊಲೀಸರೇ ಶಾಕ್ ಆಗಿದ್ದಾರೆ. ಈತ ಸತ್ತಿದ್ದು ಉಸಿರುಗಟ್ಟಿಸುವಿಕೆಯ ಕಾರಣದಿಂದ. ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೋಸ್ಟ್ಮಾರ್ಟಮ್ ರಿಪೋರ್ಟ್ ಬಂತು. ಈ ವರದಿ ಆಧರಿಸಿ ತನಿಖೆ ಶುರು ಮಾಡಿದ ಪೊಲೀಸರು ಸದ್ಯ ಸಂಜಯ್ನ ಆತ್ಮೀಯ ಸ್ನೇಹಿತನಾಗಿದ್ದ ಪ್ರವೀಣ್ ಪಟೇಲ್ ಮತ್ತು ಆತನ ಸಹಾಯಕನನ್ನು ಬಂಧಿಸಿದ್ದಾರೆ. ಹೌದು ತಾವೇ ಸಂಜಯ್ನನ್ನು ಕೊಲೆ ಮಾಡಿದ್ದೇವೆ ಎಂದು ಅವರಿಬ್ಬರೂ ಒಪ್ಪಿಕೊಂಡಿದ್ದಾರೆ.
ಭಯಂಕರ ಸಂಚು !
ಉದ್ಯಮಿ ಸಂಜಯ್ ತನ್ನ ಪತ್ನಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದ ಎಂಬ ಅನುಮಾನ ನನಗೆ ಕಾಡುತ್ತಿತ್ತು. ಹಾಗಾಗಿಯೇ ಹತ್ಯೆ ಮಾಡಿದ್ದೇನೆ ಎಂದು ಪ್ರವೀಣ್ ಹೇಳಿಕೊಂಡಿದ್ದಾಗಿ ಅಂಬೇಡ್ಕರ್ ನಗರ ಎಸ್ಪಿ ಅಲೋಕ್ ಪ್ರಿಯದರ್ಶಿ ಹೇಳಿದ್ದಾರೆ. ಪ್ರವೀಣ್ಗೆ ತನ್ನ ಪತ್ನಿ ಸಂಜಯ್ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಅನುಮಾನವಿತ್ತು. ಹಾಗಾಗಿ ಆತನನ್ನು ಕೊಲ್ಲಲು ತನ್ನ ಸಹಾಯಕ ಅಜಿತ್ ನೆರವು ಕೋರಿದ. ಇಬ್ಬರೂ ಸೇರಿ ಪ್ಲ್ಯಾನ್ ಮಾಡಿದರು. ಅದರಂತೆ ಈಗೊಂದು 15 ದಿನಗಳ ಹಿಂದೆ ಪ್ರವೀಣ್ ಪಟೇಲ್ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿ ಸಂಜಯ್ಗೆ ಆಹ್ವಾನ ನೀಡಿದ. ಸಂಜಯ್ ಕೂಡ ಪಾರ್ಟಿಗೆ ಬಂದು, ಮದ್ಯಪಾನ ಮಾಡಿದ. ಮದ್ಯದ ಅಮಲಿನಲ್ಲಿದ್ದ ಸಂಜಯ್ನ ಕತ್ತನ್ನು ಹಗ್ಗದಿಂದ ಹಿಸುಕಿದ್ದು ಅಜಿತ್. ಹೀಗೆ ಸತ್ತ ಸಂಜಯ್ನನ್ನು ಕಾರಿನಲ್ಲಿ ಹೈವೇಗೆ ಕರೆದುಕೊಂಡು ಬಂದು, ಒಂದು ಜಾಗದಲ್ಲಿ ನಿಲ್ಲಿಸಿದ ಅಜಿತ್ ತಾನು ಡ್ರೈವರ್ ಸೀಟಿಂದ ಇಳಿದ. ಬಳಿಕ ಸಂಜಯ್ನನ್ನು ಡ್ರೈವರ್ ಸೀಟ್ನಲ್ಲಿ ಕೂರಿಸಿ ಒಂದೇ ಸಲ ಜೋರಾಗಿ ಎಕ್ಸ್ಲೇಟರ್ ಕೊಟ್ಟ. ಆಗ ಆ ಕಾರು ನಿಯಂತ್ರಣ ತಪ್ಪಿ ಹೋಗಿ ಟ್ರಕ್ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಮೇಲ್ನೋಟಕ್ಕೆ ನೋಡಿದರೆ ಇದು ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ಎಂದೇ ಯಾರಿಗಾದರೂ ಅನ್ನಿಸುತ್ತದೆ. ಈಗ ಆರೋಪಿಗಳಿಬ್ಬರೂ ಸತ್ಯ ಒಪ್ಪಿಕೊಂಡಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇದನ್ನೂ ಓದಿ: ಹೊಸ ತಳಿಯ ಕೊರೊನಾ ಆತಂಕ ಹಿನ್ನೆಲೆ; ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಜೊತೆ ಸಚಿವ ಸುಧಾಕರ್ ಸಭೆ