ಬೆಂಗಳೂರು ಜೆಪಿ ನಗರದಲ್ಲಿ ಸೂಪರ್ ಮಾರ್ಕೆಟ್ ಕಳ್ಳರು
ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಜೆ.ಪಿ.ನಗರ 7ನೇ ಹಂತದ ಆರ್ಬಿಐ ಲೇಔಟ್ನಲ್ಲಿರುವ ಎವರ್ ಫೈನ್ ಸೂಪರ್ ಮಾರ್ಕೆಟ್ನ ಕಬ್ಬಿಣದ ಬಾಗಿಲು ಮೀಟಿ ನುಗ್ಗಿರುವ ಕಳ್ಳರು ₹ 60 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ. ಸೂಪರ್ ಮಾರ್ಕೆಟ್ಗೆ ಮೇ 2ರ ನಸುಕಿನ 2.45ಕ್ಕೆ ಹೈಫೈ ಕಾರಿನಲ್ಲಿ ಬಂದ ಕಳ್ಳರು ಬೀಗ ಎಂಥದ್ದು ಎಂದು ಪರಿಶೀಲಿಸಿದರು. ನಂತರ ಮತ್ತೊಮ್ಮೆ 3.30ಕ್ಕೆ ಬಂದ ಕಳ್ಳರು ದೊಡ್ಡ ಮರದ ತುಂಡು ತೆಗೆದುಕೊಂಡು ಬಂದು ಷಟರ್ ಹಿಡಿದು ಮರದ ತುಂಡು ಹಾಕಿ ಮೀಟಿದರು. ಓರ್ವ ಷಟರ್ ಮೇಲೆ ಎಳೆದು ಹಿಡಿದುಕೊಂಡರೆ ಮತ್ತೊಬ್ಬಾತ ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ. ಒಳಹೋದವನು ಕ್ಯಾಶ್ ಕೌಂಟರ್ನಲ್ಲಿದ್ದ ₹ 60 ಸಾವಿರ ನಗದು ಕದ್ದು ಪರಾರಿಯಾದ. ಈ ವೇಳೆ ಷಟರ್ ಮೀಟಲು ಬಳಸಿದ್ದ ಮರದ ತುಂಡನ್ನೂ ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ, ಪರಿಶೀಲಿಸಿದರು.
ಗಾಂಜಾ ಮಾರಾಟ: ಆರೋಪಿಗಳ ಬಂಧನ
ಮೈಸೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿದರು. ಅಜ್ಮಲ್ ಖಾನ್, ಸೈಯದ್ ಆಸಿಫ್, ವಾಹಿದ್ ಪಾಷಾ ಬಂಧಿತರು. ಬಂಧಿತರಿಂದ 1 ಕೆಜಿ 750 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರ್ನಲ್ಲಿ ವ್ಯಕ್ತಿ ಮೇಲೆ ಹಲ್ಲೆ
ಹಳೇ ದ್ವೇಷದ ಹಿನ್ನೆಲೆಯಲ್ಲಿ ಬಾರ್ನಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆದಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕು ಬನ್ನೂರಿನಲ್ಲಿ ನಡೆದಿದೆ. ದಯಾನಂದ್ ಹಲ್ಲೆಗೆ ಒಳಗಾದವರು. ಗುರು, ಚಂದ್ರು ಸೇರಿದಂತೆ ಹಲವರು ಲಾಂಗ್, ಬಿಯರ್ ಬಾಟಲಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಗೊಂಡಿರುವ ದಯಾನಂದ್ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.