Crime News: ಮೊಬೈಲ್ ಗೇಮ್ಸ್​ ಹುಚ್ಚು ಅಂಟಿಸಿಕೊಂಡಿದ್ದ ಬೆಂಗಳೂರು ಯುವಕ ನಾಪತ್ತೆ; ಕಾರವಾರದಲ್ಲಿ ಸರ್ಕಾರಿ ಉದ್ಯೋಗಿ ಆತ್ಮಹತ್ಯೆ | Crime News Bengaluru Youth Missing after addicted to Mobile Games Government Employee Dies by Suicide in Karwar


Crime News: ಮೊಬೈಲ್ ಗೇಮ್ಸ್​ ಹುಚ್ಚು ಅಂಟಿಸಿಕೊಂಡಿದ್ದ ಬೆಂಗಳೂರು ಯುವಕ ನಾಪತ್ತೆ; ಕಾರವಾರದಲ್ಲಿ ಸರ್ಕಾರಿ ಉದ್ಯೋಗಿ ಆತ್ಮಹತ್ಯೆ

ಸಾಂಕೇತಿಕ ಚಿತ್ರ

ಬೆಂಗಳೂರು: ಮೊಬೈಲ್ ಗೇಮ್ಸ್‌ಗೆ ಅಡಿಕ್ಟ್​ ಆಗಿದ್ದ 19 ವರ್ಷದ ಯುವಕ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ಚಂದಾಪುರದಲ್ಲಿ ನಡೆದಿದೆ. 2 ತಿಂಗಳ ಹಿಂದೆ ನಾಪತ್ತೆಯಾಗಿರುವ ಪ್ರವೀಣ್ ಅಮಾಸಿ ಎಂಬ ಯುವಕ ಯಾವಾಗಲೂ ಆನ್​ಲೈನ್ ಗೇಮ್​​ (Online Games) ಆಡುತ್ತಿದ್ದ. ಗೇಮ್ ಆಡುವ ಬಗ್ಗೆ ಪೋಷಕರು ಆಗಾಗ ಬೈಯುತ್ತಿದ್ದರು. 2021ರ ಡಿ.13ರಂದು ಮನೆ ಬಿಟ್ಟು ಹೋಗಿರುವ ಪ್ರವೀಣ್ ತನ್ನ ಫೋನ್​ ಬಿಟ್ಟು ತಾಯಿ ಫೋನ್​ ತೆಗೆದುಕೊಂಡು ಹೋಗಿದ್ದ. ಬಳಿಕ ಪ್ರವೀಣ್ ಬಳಿ ಇರುವ ಮೊಬೈಲ್ ಸ್ವಿಚ್​ಆಫ್ ಆಗಿತ್ತು. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆತ ಮನೆಯಲ್ಲಿ ಬಿಟ್ಟಿರುವ ತನ್ನ ಮೊಬೈಲಿನಲ್ಲಿ ಎಲ್ಲವೂ ಡಿಲೀಟ್ ಆಗಿದ್ದು, ವಾಟ್ಸಾಪ್ ಮೆಸೇಜ್, ನಾರ್ಮಲ್ ಮೆಸೇಜ್, ಫೋಟೊಸ್ ಡಿಲೀಟ್ ಮಾಡಲಾಗಿದೆ. ಆನ್​ಲೈನ್ ಗೇಮ್ ಆಡಿ ಆತನಿಗೆ ಮಾನಸಿಕ ಅಸ್ವಸ್ಥತೆ ಉಂಟಾಗಿರುವ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಟ್ರಾಫಿಕ್ ಪೊಲೀಸರ‌ ಜೊತೆ ಬೈಕ್ ಸವಾರ ಕಿರಿಕ್ ಮಾಡಿಕೊಂಡ ಘಟನೆ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಬಳಿ ನಡೆದಿದೆ. ತ್ರಿಬಲ್ ರೈಡ್ ಹೋಗುತ್ತಿದ್ದುದಕ್ಕೆ ಪೊಲೀಸರು ದಂಡ ಹಾಕಿದ್ದರು. ಆದರೆ, ದಂಡ ಕಟ್ಟದ ಕಾರಣ ಬೈಕ್ ಸವಾರನ ಮೊಬೈಲ್ ಕಸಿದುಕೊಂಡಿದ್ದರು. ತನಗೆ ಪೊಲೀಸರು ಅವಾಚ್ಯ ಪದಗಳನ್ನು ಬಳಸಿ ಬೈದಿದ್ದಾರೆ ಎಂದು ಬೈಕ್ ಸವಾರ ಆರೋಪ ಮಾಡಿದ್ದ. ದಂಡ ಹಾಕಿ ಆದರೆ, ಅವಾಚ್ಯ ಪದಗಳನ್ನ ಬಳಸಿ ಯಾಕೆ ಬೈತೀರಾ? ಎಂದು ಆಕ್ರೋಶ ಹೊರಹಾಕಿದ್ದ. ಬೈಕ್ ಸವಾರ ಕಿರಿಕ್ ಮಾಡ್ತಾಯಿದ್ದ ಹಾಗೆ ಜನರು ಅಲ್ಲಿಗೆ ಜಮಾಯಿಸಿದ್ದರು.

ಡೆತ್​ನೋಟ್ ಬರೆದಿಟ್ಟು ಸರ್ಕಾರಿ ಉದ್ಯೋಗಿ ಆತ್ಮಹತ್ಯೆ:
ಕಾರವಾರ: ಕಾರವಾರ ನಗರದ ಲಾಡ್ಜ್​​ನಲ್ಲಿ ಡೆತ್‌ನೋಟ್ ಬರೆದಿಟ್ಟು ಉಪವಿಭಾಗಾಧಿಕಾರಿಗಳ ಕಚೇರಿಯ ಗುಮಾಸ್ತ ಈಶ್ವರ ಭಟ್(38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಡೆತ್​​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರವಾರ ನಗರದ ಪ್ರೀಮಿಯರ್ ಲಾಡ್ಜ್ ‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲಾಗಿದ್ದು, ಈಶ್ವರ ಭಟ್ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದರು. ನಾನು ನಿಮಗಾಗಿ ಏನೂ ಆಸ್ತಿ ಮಾಡಿಲ್ಲ, ಮಕ್ಕಳನ್ನ ಚೆನ್ನಾಗಿ ನೋಡಿಕೋ. ನನ್ನನ್ನ ಕ್ಷಮಿಸು ಎಂದು ಹೆಂಡತಿಗೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೃಷಿ ಸಹಕಾರಿ ಸಂಘದ ಕಾರ್ಯದರ್ಶಿ ಮೇಲೆ ಹಲ್ಲೆ:
ತುಮಕೂರು: ಸುಸ್ತಿ ಸಾಲ ವಸೂಲಿ ಮಾಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕೃಷಿ ಸಹಕಾರಿ ಸಂಘದ ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆಸಲಾಗಿದೆ. ಮುನಿಯೂರು ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಹಲ್ಲೆ ನಡೆಸಲಾಗಿದ್ದು, ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮುನಿಯೂರಿನ ಕಾರ್ಯದರ್ಶಿ ಗಿಡ್ಡೆಗೌಡನಿಗೆ ಸದಸ್ಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಿರ್ದೇಶಕ ಶಿವರಾಜು, ಸದಸ್ಯ ಯೋಗಾನಂದ ಎಂಬುವವರು ಥಳಿಸಿದ್ದು, ತುರುವೇಕೆರೆ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲಿ ವೃದ್ಧ ದಂಪತಿಯ ಹತ್ಯೆ:
ದಾವಣಗೆರೆ: ಅಡವಿಟ್ಟಿದ್ದ ಹಣ ಬಿಡಿಸಿಕೊಳ್ಳಲು ವೃದ್ಧ ದಂಪತಿಯನ್ನ ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಜ.25ರಂದು ಗುರುಸಿದ್ದಯ್ಯ (80), ಪತ್ನಿ ಸರೋಜಮ್ಮ(75) ಎಂಬುವವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಬೇತೂರ ಗ್ರಾಮದ ನಿವಾಸಿ ಸೇರಿ ಬೆಂಗಳೂರು ‌ಮೂಲದ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1.75 ಲಕ್ಷ ರೂಪಾಯಿ ನಗದು, 188 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ಕಬ್ಬಿನ ಗದ್ದೆ ಬೆಂಕಿಗೆ ಆಹುತಿ:
ಧಾರವಾಡ: ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದಲ್ಲಿ 5 ಎಕರೆ ಕಬ್ಬಿನ ಗದ್ದೆ ಬೆಂಕಿಗಾಹುತಿಯಾಗಿದೆ. ಓಬಪ್ಪ ದೇವರಹೇಳು, ಬಸಪ್ಪ ದೇವರಹೇಳು ಎಂಬುವವರ ಕಬ್ಬಿನ ಗದ್ದೆ ಬೆಂಕಿಗಾಹುತಿಯಾಗಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡು ಕೋಣ ಇರಿತ:
ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಕಾಡು ಕೋಣ ಇರಿತದಿಂದ ರಮೇಶ್​ ಮಾಳಗಿ ಎಂಬುವವರಿಗೆ ಗಾಯವಾಗಿದೆ. ಹೆಚ್ಚಿನ‌ ಚಿಕಿತ್ಸೆಗೆ ಗಾಯಾಳುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಡಿನಿಂದ‌ ನಾಡಿನ‌ ಕಡೆ ಬಂದಿರುವ ಎರಡು ಕಾಡುಕೋಣಗಳು ದಾಳಿ ನಡೆಸಿವೆ. 22 ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಕಾಡು ಕೋಣಗಳನ್ನ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

TV9 Kannada


Leave a Reply

Your email address will not be published.