ಸುಪ್ರೀಂ ಕೋರ್ಟ್ ಎದುರು ಬೆಂಕಿ ಹಚ್ಚಿಕೊಂಡ ವ್ಯಕ್ತಿ
ನವದೆಹಲಿ: ದೆಹಲಿಯಲ್ಲಿರುವ ಸುಪ್ರೀಂ ಕೋರ್ಟ್ನ ಹೊರಗೆ 50 ವರ್ಷದ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ ಎಂದು ದೆಹಲಿ ಪೊಲೀಸರು ಇಂದು ತಿಳಿಸಿದ್ದಾರೆ. ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರ ದೇಹದ ಮೇಲೆ ಸಾಕಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆ ವ್ಯಕ್ತಿ ಯಾರು, ಯಾಕೆ ಕೋರ್ಟ್ ಎದುರು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದರು ಎಂಬಿತ್ಯಾದಿ ಯಾವ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಆತ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಸುಪ್ರೀಂ ಕೋರ್ಟ್ ಪಕ್ಕದಲ್ಲಿದ್ದವರು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದು, ಅಲ್ಲೇ ಇದ್ದ ಪೊಲೀಸರು ತಕ್ಷಣ ಆ ವ್ಯಕ್ತಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಬೆಂಕಿ ಹಚ್ಚಿಕೊಂಡ ಆ ವ್ಯಕ್ತಿ ರಸ್ತೆಯ ಮೇಲೆ ಮಲಗಿ ಅಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ನಾನು ಬಡ ಕುಟುಂಬದಿಂದ ಬಂದವನು. ನನ್ನ ಕುಟುಂಬ ಹಸಿವಿನಿಂದ ಬಳಲುತ್ತಿದೆ ಎಂದು ಆ ವ್ಯಕ್ತಿ ಪೊಲೀಸರಿಗೆ ಹೇಳುತ್ತಲೇ ಆತ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ಪೊಲೀಸರು ಕಿರುಚಾಡುತ್ತಾ ಆತನ ಮೈ ಮೇಲಿನ ಬೆಂಕಿಯನ್ನು ಆರಿಸಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಸುಪ್ರೀಂ ಕೋರ್ಟ್ನ ಹೊರಗೆ ಬೆಂಕಿ ಹಚ್ಚಿಕೊಂಡ ಎರಡನೇ ಘಟನೆ ಇದಾಗಿದೆ.