Cryptocurrency: ಕ್ರಿಪ್ಟೊಕರೆನ್ಸಿ ಹೂಡಿಕೆ ಹೆಚ್ಚಾದರೆ ಏನು ಅಪಾಯ: ಇಲ್ಲಿದೆ ಸಂಪೂರ್ಣ ವಿವರ | Cryptocurrency Explained in Kannada Why RBI Hesitates to Entertain Bitcoin in India


Cryptocurrency: ಕ್ರಿಪ್ಟೊಕರೆನ್ಸಿ ಹೂಡಿಕೆ ಹೆಚ್ಚಾದರೆ ಏನು ಅಪಾಯ: ಇಲ್ಲಿದೆ ಸಂಪೂರ್ಣ ವಿವರ

ಪ್ರಾತಿನಿಧಿಕ ಚಿತ್ರ

ವಿಶ್ವದ ಕೆಲವು ದೇಶಗಳಲ್ಲಿ ಡಿಜಿಟಲ್ ಕರೆನ್ಸಿ ಚಲಾವಣೆಗೆ ಕಾನೂನಿನಲ್ಲಿ ಅವಕಾಶ ಕೊಡಲಾಗಿದೆ. ನಮ್ಮ ದೇಶದಲ್ಲಿ ಆರ್‌ಬಿಐ ಡಿಜಿಟಲ್ ಕರೆನ್ಸಿಗಳನ್ನು ನಿಷೇಧಿಸಿದ್ದರೂ, ಸುಪ್ರೀಂಕೋರ್ಟ್ ಈ ನಿಷೇಧವನ್ನು 2020ರಲ್ಲಿ ತೆಗೆದು ಹಾಕಿತು. ಆದರೆ ಕ್ರಿಪ್ಟೊಕರೆನ್ಸಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಳವಳವಂತೂ ಇದ್ದೇ ಇದೆ. ಭಾರತದಲ್ಲಿ ಎಷ್ಟು ಮಂದಿ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾರೆ? ಎಷ್ಟು ಕೋಟಿ ಹಣ ಹೂಡಿಕೆ ಆಗಿದೆ? ಕ್ರಿಪ್ಟೊಕರೆನ್ಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವು ಏನು? ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಭಾರತದಲ್ಲಿ ಹೂಡಿಕೆದಾರರು ಕ್ರಿಪ್ಟೋ ಕರೆನ್ಸಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ, ರೂಪಾಯಿಯಲ್ಲಿ ನಿಶ್ಚಿತ ಠೇವಣಿ ಮೇಲೆ ಹೂಡಿಕೆ ಮಾಡುವುದು ಕುಸಿಯುತ್ತೆ. ಬ್ಯಾಂಕ್​ಗಳಲ್ಲಿ ಠೇವಣಿಯೇ ಇಲ್ಲದಿದ್ದರೆ, ಬ್ಯಾಂಕ್​ಗಳಿಂದ ಜನರಿಗೆ ಸಾಲ ನೀಡುವ ಸಾಮರ್ಥ್ಯ ಕೂಡ ಕುಸಿಯುತ್ತೆ. ಕ್ರಿಪ್ಟೊಕರೆನ್ಸಿ ವಹಿವಾಟು ಸಂಪೂರ್ಣವಾಗಿ ಆನ್​ಲೈನ್ ಪ್ಲಾಟ್​ಫಾರಂ, ಪೋರ್ಟಲ್​ಗಳಲ್ಲಿ ನಡೆಯುತ್ತೆ. ಇದನ್ನು ಪತ್ತೆ ಹಚ್ಚುವುದು ಕಷ್ಟ. ಹೀಗಾಗಿ ಕ್ರಿಪ್ಟೊಕರೆನ್ಸಿ ವ್ಯವಹಾರದ ಆದಾಯದ ಮೇಲೆ ಆದಾಯ ತೆರಿಗೆ ವಿಧಿಸುವುದು ಕೂಡ ಕಷ್ಟ. ಕ್ರಿಪ್ಟೊಕರೆನ್ಸಿಯಂಥ ಡಿಜಿಟಲ್ ಕರೆನ್ಸಿಗಳು ರೂಪಾಯಿಗೆ ಬೆದರಿಕೆ. ಕ್ರಿಪ್ಟೋಕರೆನ್ಸಿಯನ್ನು ಕ್ರಿಮಿನಲ್ ಚಟುವಟಿಕೆ ಹಾಗೂ ಆಕ್ರಮ ಹಣ ವರ್ಗಾವಣೆಗೆ ಬಳಕೆ ಮಾಡಬಹುದು.

ಕ್ರಿಪ್ಟೊಕರೆನ್ಸಿ ವಹಿವಾಟು ಪತ್ತೆ ಹಚ್ಚುವುದು, ಜಫ್ತಿ ಮಾಡುವುದು ಕಷ್ಟ. ಇನ್ನು ಹೂಡಿಕೆದಾರರಿಗೂ ಕ್ರಿಪ್ಟೊಕರೆನ್ಸಿ ವಹಿವಾಟು ಸುರಕ್ಷಿತವಲ್ಲ. ಏಕೆಂದರೆ, ಕ್ರಿಪ್ಟೊಕರೆನ್ಸಿ ವ್ಯಾಲೆಟ್, ಪೋರ್ಟಲ್​ಗಳನ್ನೇ ಹ್ಯಾಕ್ ಮಾಡಬಹುದು. ಕ್ರಿಪ್ಟೊಕರೆನ್ಸಿ ಎಕ್ಸ್​ಚೇಂಜ್ ಅನ್ನೇ ಹ್ಯಾಕ್ ಮಾಡುವ ಸಾಮರ್ಥ್ಯ ನಮ್ಮ ಕರ್ನಾಟಕದ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನಿಗೆ ಇದೆ. ಹ್ಯಾಕಿಂಗ್​ನಲ್ಲಿ ಶ್ರೀಕಿ ಎಕ್ಸ್​ಪರ್ಟ್​. ಶ್ರೀಕಿ ಇಂಟರ್ ನ್ಯಾಷನಲ್ ಹ್ಯಾಕರ್. ಶ್ರೀಕಿಯಂಥ ಹ್ಯಾಕರ್​ಗಳು ಕ್ರಿಪ್ಟೋ ಕರೆನ್ಸಿ ಎಕ್ಸ್​ಚೇಂಜ್ ಅನ್ನೇ ಹ್ಯಾಕ್ ಮಾಡಿದರೆ ಹೂಡಿದ ಹಣದ ಲೆಕ್ಕ ತಪ್ಪಿ ಹೋಗುತ್ತದೆ. ಹೀಗಾಗಿ ಹೂಡಿಕೆದಾರರ ಹೂಡಿಕೆಗೆ ಯಾವುದೇ ಸುರಕ್ಷತೆ ಇರೋದಿಲ್ಲ. ಡಿಜಿಟಲ್ ಕರೆನ್ಸಿಗಳು ಸಾಕಷ್ಟು ಇವೆ. ಡಿಜಿಟಲ್ ಕರೆನ್ಸಿ ಮಾರುಕಟ್ಟೆ ಅನಿಶ್ಚಿತತೆಯಿಂದ ಕೂಡಿದ್ದು, ಬೆಲೆ ದಿಢೀರನೇ ಏರಿಕೆಯಾಗುತ್ತದೆ. ಅದೇ ರೀತಿ ಕುಸಿಯಲೂಬಹುದು.

ಕ್ರಿಪ್ಟೊಕರೆನ್ಸಿಗೆ ಆರ್‌ಬಿಐ ಮಾನ್ಯತೆ ನೀಡಿದೆಯೇ?
ಭಾರತದ ರಿಸರ್ವ್ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳಿಗೆ ಯಾವುದೇ ಮಾನ್ಯತೆ ನೀಡಿಲ್ಲ. ಕ್ರಿಪ್ಟೊಕರೆನ್ಸಿ ಸೇರಿದಂತೆ ಡಿಜಿಟಲ್ ಕರೆನ್ಸಿಯಲ್ಲಿ ಹಣಕಾಸು ವಹಿವಾಟು ನಡೆಸದಂತೆ ಬ್ಯಾಂಕ್​ಗಳಿಗೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ಇದರಿಂದ ಭಾರತದಲ್ಲಿ ಕ್ರಿಪ್ಟೊಕರೆನ್ಸಿ ವಹಿವಾಟು, ಚಲಾವಣೆ ಸ್ಥಗಿತವಾಗಿತ್ತು. ಆದರೆ, ಸುಪ್ರೀಂಕೋರ್ಟ್ 2020ರಲ್ಲಿ ಡಿಜಿಟಲ್ ಕರೆನ್ಸಿಗಳ ಚಲಾವಣೆಗೆ ಅವಕಾಶ ಕೊಟ್ಟಿದೆ. ಇದರಿಂದಾಗಿ ಡಿಜಿಟಲ್ ಕರೆನ್ಸಿಗಳ ಉದ್ಯಮ ಪುನಶ್ಚೇತನಗೊಂಡಿದೆ. ಕಳೆದ 12-18 ತಿಂಗಳಲ್ಲಿ ಡಿಜಿಟಲ್ ಕರೆನ್ಸಿಗಳ ಬೆಲೆಯಲ್ಲಿ ಬಾರಿ ಏರಿಕೆಯಾಗಿದೆ. ಈಗ ಒಂದು ಬಿಟ್ ಕಾಯಿನ್ ಬೆಲೆ 51 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. 2020ರ ಮಾರ್ಚ್​ನಲ್ಲಿ ಇದ್ದ ಮೌಲ್ಯಕ್ಕೆ ಹೋಲಿಸಿದರೆ 10 ಪಟ್ಟು ಹೆಚ್ಚಳವಾಗಿದೆ. ಕಳೆದ 12-18 ತಿಂಗಳ ಅವಧಿಯಲ್ಲಿ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹಾಗೂ ಹೂಡಿಕೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕ್ರಿಪ್ಟೊಕರೆನ್ಸಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ನಿಯಮ ಹೇಗಿದೆ?
ಕ್ರಿಪ್ಟೊಕರೆನ್ಸಿ ವಹಿವಾಟಿನಿಂದ ಬಂದ ಆದಾಯದ ಮೇಲೆ ಆದಾಯ ತೆರಿಗೆ ಅನ್ವಯವಾಗುತ್ತೆ ಎಂದು ಕೇಂದ್ರದಲ್ಲಿ ಈ ಹಿಂದೆ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ಅನುರಾಗ್ ಠಾಕೂರ್ ರಾಜ್ಯಸಭೆಗೆ ತಿಳಿಸಿದ್ದರು. ಕ್ರಿಪ್ಟೊಕರೆನ್ಸಿ ಟ್ರೇಡಿಂಗ್ ಮತ್ತು ಹೂಡಿಕೆಯಿಂದ ಬಂದ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತೆ. ಒಂದು ವೇಳೆ ಸಕ್ರಿಯ ಟ್ರೇಡಿಂಗ್ ಮಾಡುತ್ತಿದ್ದರೇ, ಅಂಥವರ ಬ್ಯುಸಿನೆಸ್ ಆದಾಯದ ಮೇಲೆ ಸ್ಲ್ಯಾಬ್ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತೆ. ಅಲ್ಪಾವಧಿಯ ಆದಾಯದ ಮೇಲೆ ಸ್ಲ್ಯಾಬ್ ಆಧಾರದ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತೆ. 3 ವರ್ಷದ ನಂತರವೂ ಕ್ರಿಪ್ಟೋ ಕರೆನ್ಸಿಗಳನ್ನು ಹೊಂದಿದ್ದು, ಆದಾಯ ಗಳಿಸಿದಾಗ, ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ವಿಧಿಸಲಾಗುತ್ತೆ.

ಆರ್‌ಬಿಐ ನಿಲುವು ಬದಲಾಗಿದ್ದು ಹೇಗೆ?
ಭಾರತದಲ್ಲಿ ಡಿಜಿಟಲ್ ಕರೆನ್ಸಿ ಅಥವಾ ಕ್ರಿಪ್ಟೊಕರೆನ್ಸಿಗಳನ್ನು ಚಲಾವಣೆಗೆ ತರುವ ನಿಲುವಿನ ಪರ ಆರ್‌ಬಿಐ ಇಲ್ಲ. ಆದರೆ, ಆರ್‌ಬಿಐನಿಂದಲೇ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರಲು ಸಾಧ್ಯವೇ ಎಂಬ ಆಯ್ಕೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಸಮಗ್ರ ಅರ್ಥವ್ಯವಸ್ಥೆ ಹಾಗೂ ಆರ್ಥಿಕ ಸ್ಥಿರತೆಯ ದೃಷ್ಟಿಕೋನದಿಂದ ಆರ್‌ಬಿಐ ಕಳವಳ ಹೊಂದಿದೆ ಎಂದು ಆರ್‌ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಕೇಂದ್ರ ಸರ್ಕಾರವು ಈ ವರ್ಷದ ಫೆಬ್ರವರಿಯಲ್ಲಿ ದೇಶದಲ್ಲಿ ಡಿಜಿಟಲ್ ಕರೆನ್ಸಿಗಳನ್ನು ನಿಷೇಧಿಸುವ ಮಸೂದೆ ಸಿದ್ಧಪಡಿಸಿತ್ತು. ಆದರೆ, ಕೊನೆ ಕ್ಷಣದಲ್ಲಿ ಸಂಸತ್ತಿನಲ್ಲಿ ಮಂಡಿಸಲಿಲ್ಲ. ಈಗ ಡಿಜಿಟಲ್ ಕರೆನ್ಸಿ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಬದಲಾಗಿದೆ. ದೇಶದಲ್ಲಿ ಡಿಜಿಟಲ್ ಕರೆನ್ಸಿಗಳನ್ನು ಸಂಪೂರ್ಣ ನಿಷೇಧ ಮಾಡದೆ, ಅನಿಯಂತ್ರಿತ ವಹಿವಾಟಿಗೆ ಅವಕಾಶ ಕೊಡದೇ ನಿಯಂತ್ರಿಸುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ. ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆಯನ್ನು ಮುಂದಿನ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯೂ ಇದೆ. ಇದರ ಬಗ್ಗೆ ವಿವಿಧ ಇಲಾಖೆ ಹಾಗೂ ಸಂಬಂಧಪಟ್ಟ ಎಲ್ಲರೊಂದಿಗೂ ಕೇಂದ್ರ ಸರ್ಕಾರ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದೆ.

ಈಗ ಕೇಂದ್ರದ ಹಣಕಾಸಿನ ಸಂಸದೀಯ ಸ್ಥಾಯಿ ಸಮಿತಿಯು ಡಿಜಿಟಲ್ ಕರೆನ್ಸಿಯ ಬಗ್ಗೆ ತಮ್ಮ ನಿಲುವು ತಿಳಿಸುವಂತೆ ಕ್ರಿಪ್ಟೊಕರೆನ್ಸಿ ಉದ್ಯಮದಲ್ಲಿರುವವರನ್ನು ಕೇಳಿದೆ. ಈ ನಿಟ್ಟಿನಲ್ಲಿ ಇಂದು (ನ.15) ಹಣಕಾಸಿನ ಸಂಸದೀಯ ಸ್ಥಾಯಿ ಸಮಿತಿಯ ಸಭೆ ನಡೆಯುತ್ತಿದೆ. ಇದರಲ್ಲಿ ಡಿಜಿಟಲ್ ಕರೆನ್ಸಿ ಉದ್ಯಮದಲ್ಲಿರುವ ಕ್ರಿಪ್ಟೊ ಎಕ್ಸ್​ಚೇಂಜ್​ಗಳಾದ ವಜೀರ್ ಎಕ್ಸ್, ಕಾಯಿನ್ ಡಿಸಿಎಕ್ಸ್, ಕಾಯಿನ್ ಸ್ವಿಚ್ ಕುಬೇರ್ ಸೇರಿದಂತೆ ಇತರ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ತಿಳಿಸುವರು.

ಭಾರತದ ಎಷ್ಟು ಮಂದಿ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾರೆ?
ಬ್ರೋಕರ್ ಚೂಸರ್ ಸಂಸ್ಥೆಯ ಪ್ರಕಾರ, ಭಾರತದ 10 ಕೋಟಿ ಮಂದಿ ಡಿಜಿಟಲ್ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಆಕ್ಟೋಬರ್ ತಿಂಗಳಿನಲ್ಲಿ ಪತ್ರಿಕೆಯೊಂದರಲ್ಲಿ ಬಂದ ಜಾಹೀರಾತು ಪ್ರಕಾರ, ಭಾರತೀಯರು ಕ್ರಿಪ್ಟೊಕರೆನ್ಸಿಯಲ್ಲಿ ₹ 6 ಲಕ್ಷ ಕೋಟಿ ಹೂಡಿಕೆ ಮಾಡಿದ್ದಾರೆ. ಕ್ರಿಪ್ಟೊ ಎಕ್ಸ್​ಚೇಂಜ್​ ವಜೀರ್ ಎಕ್ಸ್, ಸಿಇಒ ನಿಶಾಲ್ ಶೆಟ್ಟಿ ಪ್ರಕಾರ, ಭಾರತದಲ್ಲಿ 1.5 ಕೋಟಿಯಿಂದ 2 ಕೋಟಿ ಜನರು ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಭಾರತದಲ್ಲಿ 2.5 ಕೋಟಿ ಜನರು ಮ್ಯುಚ್ಯುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಪ್ರಕಾರ, 8 ಜನರು ಯೂನಿಕ್ ಕ್ಲೈಂಟ್ ಕೋಡ್ ರಿಜಿಸ್ಟರ್ ಮಾಡಿಸಿದ್ದು, ಷೇರುಪೇಟೆಯಲ್ಲಿ ಷೇರು ವ್ಯವಹಾರ ಮಾಡುತ್ತಿದ್ದಾರೆ. ಆದರೆ, ಸಾಕಷ್ಟು ಮಂದಿ ಡಿಮ್ಯಾಟ್ ಖಾತೆ ತೆರೆದಿದ್ದರೂ, ಷೇರು ವಹಿವಾಟು ನಡೆಸದೇ ನಿಷ್ಕ್ರಿಯವಾದ ಖಾತೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: Best Performing Cryptocurrencies: ಬಿಟ್​ಕಾಯಿನ್, ಎಥೆರಮ್, ಶಿಬು ಇನು ಹೇಗಿದೆ ಇವುಗಳ ರಿಟರ್ನ್?
ಇದನ್ನೂ ಓದಿ: ಕ್ರಿಪ್ಟೊಕರೆನ್ಸಿ ಮೂಲಕ ಅಕ್ರಮ ವಹಿವಾಟು, ಉಗ್ರರಿಗೆ ಹಣ ಒದಗಿಸುವ ಮಾರ್ಗ ಬಂದ್ ಮಾಡುವ ಬಗ್ಗೆ ಪ್ರಧಾನಿ ಮೋದಿ ಚರ್ಚೆ

TV9 Kannada


Leave a Reply

Your email address will not be published. Required fields are marked *