Cyclone Jawad: ಒಡಿಶಾ, ಆಂಧ್ರ ಪ್ರದೇಶಕ್ಕೆ ನಾಳೆ ಅಪ್ಪಳಿಸಲಿದೆ ಜವಾದ್ ಚಂಡಮಾರುತ; ಇಂದು ಸಂಜೆಯಿಂದಲೇ ಹೈ ಅಲರ್ಟ್ | Cyclone Jawad to Hit Odisha and Andhra Pradesh on Saturday Orange Alert issued Heavy Rain Weather Forecast


Cyclone Jawad: ಒಡಿಶಾ, ಆಂಧ್ರ ಪ್ರದೇಶಕ್ಕೆ ನಾಳೆ ಅಪ್ಪಳಿಸಲಿದೆ ಜವಾದ್ ಚಂಡಮಾರುತ; ಇಂದು ಸಂಜೆಯಿಂದಲೇ ಹೈ ಅಲರ್ಟ್

ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದ ಒಡಿಶಾ, ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಿಗೆ ನಾಳೆ (ಶನಿವಾರ) ಜವಾದ್ ಚಂಡಮಾರುತ (Jawad Cyclone) ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಭಾರೀ ಎಚ್ಚರಿಕೆಯಿಂದಿರಲು ಸೂಚನೆ ನೀಡಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದಲೇ ಮಳೆ ತೀವ್ರಗೊಳ್ಳಲಿದ್ದು, ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಚಂಡಮಾರುತದಿಂದ ಭಾರೀ ಮಳೆ ಉಂಟಾಗಲಿದೆ. ಇಂದು ಸಂಜೆ ವೇಳೆಗೆ ಬಂಗಾಳಕೊಲ್ಲಿಯಲ್ಲಿ ಜವಾದ್ ಚಂಡಮಾರುತವು ರೂಪುಗೊಳ್ಳಲಿದ್ದು, ಶನಿವಾರ ಬೆಳಿಗ್ಗೆ ಆಂಧ್ರ ಪ್ರದೇಶದ ಉತ್ತರ ಭಾಗ ಮತ್ತು ಒಡಿಶಾದ ದಕ್ಷಿಣ ಕರಾವಳಿಯ ಸಮೀಪವಿರುವ ಪ್ರದೇಶವನ್ನು ತಲುಪುವ ನಿರೀಕ್ಷೆಯಿದೆ. ಈ ಎರಡೂ ರಾಜ್ಯಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಗಂಟೆಗೆ 50 ರಿಂದ 60 ಕಿಮೀ ವೇಗದಲ್ಲಿ 70 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

ಭಾರತೀಯ ಹವಾಮಾನ ಇಲಾಖೆ (IMD) ನೀಡಿದ ಇತ್ತೀಚಿನ ಚಂಡಮಾರುತದ ಮುನ್ಸೂಚನೆಯ ಪ್ರಕಾರ, ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರದಲ್ಲೂ ಮಳೆ ಹೆಚ್ಚಾಗಲಿದೆ. ಜವಾದ್ ಚಂಡಮಾರುತವು ಡಿಸೆಂಬರ್ 4ರ ಬೆಳಿಗ್ಗೆ ಉತ್ತರ ಆಂಧ್ರಪ್ರದೇಶ-ಒಡಿಶಾದ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 100 ಕಿಲೋಮೀಟರ್​ವರೆಗೆ ಇರುತ್ತದೆ.

ಜವಾದ್ ಚಂಡಮಾರುತದ ಹಿನ್ನೆಲೆಯಲ್ಲಿ ನಾಳೆಯಿಂದ ಒಡಿಶಾದ 4 ಜಿಲ್ಲೆಗಳಿಗೆ ರೆಡ್ ಅಲರ್ಟ್, 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ, ಡಿಸೆಂಬರ್ 5 ರವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಜವಾದ್ ಚಂಡಮಾರುತದ ಅಬ್ಬರ ಒಡಿಶಾದಲ್ಲೇ ಹೆಚ್ಚಾಗಿರಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ಅಗ್ನಿಶಾಮಕ ಸೇವೆಗಳು ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ 266 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಇಂದು ಸಂಜೆಯಿಂದ ನಾಳೆಯೊಳಗೆ ಒಡಿಶಾವನ್ನು ‘ಜವಾದ್’ ಚಂಡಮಾರುತ ಅಪ್ಪಳಿಸಬಹುದು. ಪ್ರಯಾಣಿಕರ ಸುರಕ್ಷತೆಗಾಗಿ ಈಗಾಗಲೇ 95 ರೈಲುಗಳನ್ನು ರದ್ದುಗೊಳಿಸಲಾಗಿದೆ.

ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಇಂದಿನಿಂದ ಡಿ. 6ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಎನ್‌ಡಿಆರ್‌ಎಫ್ ರಾಜ್ಯದಲ್ಲಿ ಎಂಟು ತಂಡಗಳನ್ನು ನಿಯೋಜಿಸಿದೆ. ಆಂಧ್ರಪ್ರದೇಶದಲ್ಲೂ ಜವಾದ್ ಚಂಡಮಾರುತ ಪ್ರಭಾವ ಇರಲಿದ್ದು, ವಿಶಾಖಪಟ್ಟಣಂ ಮತ್ತು ಶ್ರೀಕಾಕುಳಂ ಜಿಲ್ಲೆಗಳಾದ್ಯಂತ ಎಲ್ಲಾ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಲಾಗಿದೆ. ವಿಶಾಖಪಟ್ಟಣಂ ಜಿಲ್ಲೆಯಿಂದ ಇಂದು ಮತ್ತು ನಾಳೆ ಸುಮಾರು 65 ರೈಲುಗಳನ್ನು ರದ್ದುಗೊಳಿಸಲಾಗಿದೆ.

ಜಾರ್ಖಂಡ್‌ನಲ್ಲಿ ಜವಾದ್ ಚಂಡಮಾರುತವು ಸಾಧಾರಣ ಪರಿಣಾಮ ಬೀರುವ ಸಾಧ್ಯತೆಯಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಜಾರ್ಖಂಡ್‌ಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮಳೆ ತೀವ್ರಗೊಳ್ಳಲಿದ್ದು, ಹೆಚ್ಚೇನೂ ಅಪಾಯವಿಲ್ಲ ಎನ್ನಲಾಗಿದೆ. ಚಂಡಮಾರುತದಿಂದ ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

TV9 Kannada


Leave a Reply

Your email address will not be published. Required fields are marked *