David Warner wife Candice warner
ಟಿ20 ವಿಶ್ವಕಪ್‌ನಲ್ಲಿ (T20 World Cup 2021) ಆಸ್ಟ್ರೇಲಿಯಾ (Australia) ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಬಾರಿ ಆಸೀಸ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದು ಡೇವಿಡ್ ವಾರ್ನರ್ (David Warner). ಟೂರ್ನಿಯುದ್ದಕ್ಕೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ 7 ಪಂದ್ಯಗಳಿಂದ 289 ರನ್ ಕಲೆಹಾಕಿದ್ದರು. ಈ ಮೂಲಕ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಎನಿಸಿಕೊಂಡರು. ಆದರೆ ಇದೇ ವಾರ್ನರ್ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಫಾರ್ಮ್ನಲ್ಲಿಲ್ಲ ಎಂಬ ವಿಷಯ ಚರ್ಚೆಗೆ ಕಾರಣವಾಗಿತ್ತು. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಕಾಣಿಸಿಕೊಂಡಿದ್ದ ವಾರ್ನರ್ ಆಡಿದ್ದು ಕೇವಲ 8 ಮ್ಯಾಚ್ ಮಾತ್ರ. ಅದರಲ್ಲೂ ಎಸ್ಆರ್ಹೆಚ್ ತಂಡ ಯುಎಇನಲ್ಲಿ ನಡೆದ ದ್ವಿತಿಯಾರ್ಧದ ಐಪಿಎಲ್ನಲ್ಲಿ ಕೇವಲ 2 ಪಂದ್ಯಗಳಲ್ಲಿ ಕಣಕ್ಕಿಳಿಸಿ ತಂಡದಿಂದ ಕೈ ಬಿಟ್ಟಿತು. ಅತ್ತ ಆ ಬಳಿಕ ವಾರ್ನರ್ ತಂಡದ ಡಗೌಟ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೆ ಸಾಮಾನ್ಯ ಪ್ರೇಕ್ಷಕನಂತೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.
ಇತ್ತ ವಾರ್ನರ್ ಅವರನ್ನು ತಂಡದಿಂದ ಕೈ ಬಿಟ್ಟಿರುವ ಬಗ್ಗೆ ಎಸ್ಆರ್ಹೆಚ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಕೇಳಿ ಬಂದಂತಹ ಉತ್ತರ ಔಟ್ ಆಫ್ ಫಾರ್ಮ್. ಹೌದು, ಎಸ್ಆರ್ಹೆಚ್ ತಂಡವು ವಾರ್ನರ್ ಅವರನ್ನು ಔಟ್ ಆಫ್ ಫಾರ್ಮ್ ಎಂದೇಳಿ ತಂಡದಿಂದ ಕೈಬಿಟ್ಟಿತ್ತು. ಆದರೆ ವಾರಗಳ ಅಂತರದಲ್ಲೇ ವಾರ್ನರ್ ಅಬ್ಬರ ಶುರುವಾಗಿತ್ತು. ಐಪಿಎಲ್ ಬೆನ್ನಲ್ಲೇ ಶುರುವಾದ ಟಿ20 ವಿಶ್ವಕಪ್‌ನಲ್ಲಿ ಡೇವಿಡ್ ವಾರ್ನರ್ ಅಬ್ಬರಿಸಿದ್ದರು. ಆ ಮೂಲಕ ಎಸ್ಆರ್ಹೆಚ್ ಟೀಮ್ ಮ್ಯಾನೇಜ್ಮೆಂಟ್ಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದರು.
ಇದೀಗ ಟಿ20 ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆದ ಬೆನ್ನಲ್ಲೇ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಟ್ವೀಟ್ ಮಾಡಿದ್ದಾರೆ. T20 ವಿಶ್ವಕಪ್ 2021 ಫೈನಲ್‌ನಲ್ಲಿನ ಡೇವಿಡ್ ವಾರ್ನರ್ ಅವರ ಅರ್ಧಶತಕದ ಫೋಟೋವನ್ನು ಹಂಚಿಕೊಂಡ ಅವರು ‘ಔಟ್ ಆಫ್ ಫಾರ್ಮ್!!’ ಎಂದು ಬರೆದುಕೊಂಡಿದ್ದಾರೆ. ಅದರೊಂದಿಗೆ ಆಶ್ಚರ್ಯಚಕಿತ ಮತ್ತು ನಗುವಿನ ಎಮೋಜಿಯನ್ನೂ ಪೋಸ್ಟ್ ಮಾಡಿದ್ದಾರೆ.
ಇನ್ನು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಫೋಟೋವನ್ನು ಪೋಸ್ಟ್ ಮಾಡಿದ ಕ್ಯಾಂಡಿಸ್, ‘ಔಟ್ ಆಫ್ ಫಾರ್ಮ್,ಇದು ತುಂಬಾ ಹಳೆಯ ಮತ್ತು ತುಂಬಾ ತಡ ! ಎಂಬಾರ್ಥದಲ್ಲಿ ಬರೆದುಕೊಂಡಿದ್ದಾರೆ. ಇಲ್ಲಿ ವಾರ್ನರ್ ಅವರ ಪತ್ನಿಯು ಎಸ್ಆರ್ಹೆಚ್ ಫ್ರಾಂಚೈಸಿಯ ನಡೆಯನ್ನು ಪರೋಕ್ಷವಾಗಿ ಗುರಿಯಾಗಿಸಿದ್ದಾರೆ. ಅಂದರೆ ಔಟ್ ಆಫ್ ಫಾರ್ಮ್ ಅಂತ ಹೇಳೋದು ಹಳೆಯ ವಿಧಾನ, ನೀವಿನ್ನೂ ಸ್ಲೋ ಆಗಿದ್ದೀರಿ ಎಂದಿದ್ದಾರೆ. ಈ ಮೂಲಕ ಡೇವಿಡ್ ವಾರ್ನರ್ ಮುಂದಿನ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡೋದು ಅನುಮಾನ ಎಂಬುದನ್ನು ಪುಷ್ಠೀಕರಿಸಿದ್ದಾರೆ.
Out of form, too old and slow! 😳🤣 congratulations @davidwarner31 pic.twitter.com/Ljf25miQiM
— Candice Warner (@CandiceWarner31) November 14, 2021
ವಾರ್ನರ್ ಭರ್ಜರಿ ಬ್ಯಾಟಿಂಗ್:
ಡೇವಿಡ್ ವಾರ್ನರ್ ಈ ವಿಶ್ವಕಪ್‌ನಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಂತಿಮ ಪಂದ್ಯದಲ್ಲಿ 53 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇದಕ್ಕೂ ಮೊದಲು, ಸೆಮಿಫೈನಲ್‌ನಲ್ಲಿ 49, ವೆಸ್ಟ್ ಇಂಡೀಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಜೇಯ 89 ರನ್ ಗಳಿಸಿದ್ದರು. ಈ ಮೂಲಕ 289 ರನ್ ಗಳಿಸಿ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದರು. ಇದಕ್ಕೂ ಮುನ್ನ 2007 ರಲ್ಲಿ ಮ್ಯಾಥ್ಯೂ ಹೇಡನ್ ಟಿ20 ವಿಶ್ವಕಪ್‌ನಲ್ಲಿ 265 ರನ್ ಬಾರಿಸಿದ್ದು ಆಸ್ಟ್ರೇಲಿಯಾ ಪರ ದಾಖಲೆಯಾಗಿತ್ತು.
ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್: ಚಾಂಪಿಯನ್ ಪಟ್ಟಕ್ಕೇರಿದ 6 ತಂಡಗಳು
ಇದನ್ನೂ ಓದಿ: Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!
(T20 world cup 2021 David Warner wife Candice warner slams critics Australia cricket team)