DAVID WARNER: 3 ಅರ್ಧಶತಕ ಬಾರಿಸಿದರೂ ಬೇಸರ ವ್ಯಕ್ತಪಡಿಸುತ್ತಿರುವ ವಾರ್ನರ್​ ಮಕ್ಕಳು..! | DAVID WARNER SAYS MY KIDS JUST WANT TO KNOW WHY I CANNOT GET HUNDRED LIKE JOS BUTTLER


DAVID WARNER: 3 ಅರ್ಧಶತಕ ಬಾರಿಸಿದರೂ ಬೇಸರ ವ್ಯಕ್ತಪಡಿಸುತ್ತಿರುವ ವಾರ್ನರ್​ ಮಕ್ಕಳು..!

David Warner-Buttler

ಡೆಲ್ಲಿ ಕ್ಯಾಪಿಟಲ್ಸ್‌ನ (Delhi Capitals) ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಪ್ರಸ್ತುತ ಐಪಿಎಲ್‌ನಲ್ಲಿ (IPL 2022) ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಾರ್ನರ್ ಅವರ ಅಜೇಯ 60 ರನ್​ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ದ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಉತ್ತಮ ಫಾರ್ಮ್​ನಲ್ಲಿರುವ ವಾರ್ನರ್ ಈ ಬಾರಿ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದಾಗ್ಯೂ ಅವರ ಮಕ್ಕಳು ಮಾತ್ರ ಸಂತೋಷವಾಗಿಲ್ಲ ಎಂದು ಖುದ್ದು ಡೇವಿಡ್ ವಾರ್ನರ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಾರ್ನರ್, ‘ನಾನು 3 ಅರ್ಧಶತಕ ಬಾರಿಸಿದರೂ, ಜೋಸ್ ಬಟ್ಲರ್‌ನಂತೆ ಶತಕವನ್ನು ಏಕೆ ಬಾರಿಸುತ್ತಿಲ್ಲ ಎಂದು ನನ್ನ ಮಕ್ಕಳು ಕೇಳುತ್ತಾರೆ. ಹೀಗಾಗಿ ನಾನು ಮತ್ತಷ್ಟು ಚೆನ್ನಾಗಿ ಆಡಬೇಕಿದೆ. ಮತ್ತೊಂದೆಡೆ ಮಕ್ಕಳು ಆಟವನ್ನು ಗಮನಿಸುತ್ತಿರುವುದು ಖುಷಿಯ ವಿಚಾರ ಎಂದು ವಾರ್ನರ್ ಹೇಳಿದ್ದಾರೆ. ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ಜೋಸ್ ಬಟ್ಲರ್ ಎರಡು ಶತಕ ಬಾರಿಸಿದ್ದಾರೆ. ಅಲ್ಲದೆ ಉತ್ತಮ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಅವರಂತೆ ಶತಕ ಬಾರಿಸುವುದನ್ನು ವಾರ್ನರ್ ಮಕ್ಕಳೂ ಕೂಡ ಎದುರು ನೋಡುತ್ತಿದ್ದಾರೆ.

ವಾರ್ನರ್ ಹೊಸ ಆರಂಭ:
ಆಸ್ಟ್ರೇಲಿಯಾದ ಎಡಗೈ ಓಪನರ್ ಡೇವಿಡ್ ವಾರ್ನರ್ ಕಳೆದ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಅವರ ನಾಯಕತ್ವದಲ್ಲಿ, ಸನ್‌ರೈಸರ್ಸ್ 2016 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಿತ್ತು. ಈ ಸೀಸನ್​ನಲ್ಲಿ ಡೆಲ್ಲಿ ಪರ ಆಡುತ್ತಿರುವಾಗ ವಾರ್ನರ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 191 ರನ್ ಗಳಿಸಿದ್ದಾರೆ. ಈ ವೇಳೆ 152.80 ಸ್ಟ್ರೈಕ್ ರೇಟ್​ನಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸುತ್ತಿರುವ ವಾರ್ನರ್ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಈ ಮೂಲಕ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ತಂಡವನ್ನು ಜಯದತ್ತ ಕೊಂಡೊಯ್ಯುವಲ್ಲಿ ವಾರ್ನರ್ ಕೊಡುಗೆ ನೀಡುತ್ತಿದ್ದಾರೆ. ಇದೀಗ ಮೂರು ಅರ್ಧಶತಕ ಬಾರಿಸಿರುವ ವಾರ್ನರ್ ಇದೇ ಫಾರ್ಮ್​ ಮುಂದುವರೆಸಿದರೆ ಎದುರಾಳಿ ಬೌಲರ್​ಗಳಿಗೆ ಚಿಂತೆ ಶುರುವಾಗುವುದರಲ್ಲಿ ಅನುಮಾನವೇ ಇಲ್ಲ.

TV9 Kannada


Leave a Reply

Your email address will not be published.