Deepak Chahar: ದೀಪಕ್ ಚಾಹರ್ ಸ್ಥಾನಕ್ಕೆ ಭಾರತದ ಈ ಖ್ಯಾತ ವೇಗಿಯನ್ನು ಸೇರಿಸಿಕೊಳ್ಳಿ ಎಂದ ಅಭಿಮಾನಿಗಳು  | CSK fans says make Ishant Sharma to replacement for Deepak Chahar who is ruled out of IPL 2022


Deepak Chahar: ದೀಪಕ್ ಚಾಹರ್ ಸ್ಥಾನಕ್ಕೆ ಭಾರತದ ಈ ಖ್ಯಾತ ವೇಗಿಯನ್ನು ಸೇರಿಸಿಕೊಳ್ಳಿ ಎಂದ ಅಭಿಮಾನಿಗಳು 

ದೀಪಕ್ ಚಾಹರ್

ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಐಪಿಎಲ್​ ಪಂದ್ಯಾವಳಿಯಲ್ಲಿ ದೊಡ್ಡ ಹಿನ್ನಡೆ ಅನುಭವಿಸಿದೆ. ಇದಕ್ಕೆ ಮುಖ್ಯ ಕಾರಣ, ಅವರ ಸ್ಟಾರ್ ಬೌಲರ್ ದೀಪಕ್ ಚಾಹರ್ (Deepak Chahar) ಅನುಪಸ್ಥಿತಿ. ಅದಾಗ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಮೂಲಕ ಸಿಎಸ್​ಕೆ ಕಮ್​ಬ್ಯಾಕ್ ಮಾಡಿದೆ. ಆದರೆ ಅಲ್ಲಿ ಪವರ್​ಪ್ಲೇಯಲ್ಲಿ ಬೌಲ್ ಮಾಡುವ ಸಾಮರ್ಥ್ಯವಿರುವ ವೇಗಿಯ ಕೊರತೆ ಇದೆ. ಸಿಎಸ್​ಕೆ ಮಂಗಳವಾರ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್​ಗಳ ಮೂಲಕ ಬೌಲಿಂಗ್ ಆರಂಭಿಸಿತ್ತು. ದೀಪಕ್ ಚಾಹರ್ ಪವರ್​ಪ್ಲೇಯಲ್ಲಿ ಬೌಲ್ ಮಾಡುವ ಹಾಗೂ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದರು. ಇದು ಕಳೆದ ಸೀಸನ್​ಗಳಲ್ಲಿ ಚೆನ್ನೈಗಿದ್ದ ದೊಡ್ಡ ಪ್ಲಸ್ ಆಗಿತ್ತು. ಈ ವರ್ಷ ಗಾಯದ ಸಮಸ್ಯೆಯಿಂದ ದೀಪಕ್ ಚಾಹರ್ ಕಣಕ್ಕಿಳಿಯುವುದಿಲ್ಲ ಎಂದು ವರದಿಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಯಾವ ಆಟಗಾರನನ್ನು ನೇಮಿಸಿಕೊಳ್ಳಬಹುದು ಎನ್ನುವ ಬಗ್ಗೆ ಅಭಿಮಾನಿ ವಲಯದಲ್ಲಿ ಚರ್ಚೆ ಆರಂಭವಾಗಿದೆ.ಈ ನಡುವೆ ದೀಪಕ್ ಸ್ಥಾನಕ್ಕೆ ಭಾರತ ಕಂಡ ಶ್ರೇಷ್ಠ ವೇಗಿ ಇಶಾಂತ್ ಶರ್ಮಾ ಹೆಸರು ಜೋರಾಗಿ ಕೇಳಿಬರುತ್ತಿದೆ.

ಇದುವರೆಗೆ 93 ಐಪಿಎಲ್ ಪಂದ್ಯಗಳನ್ನು ಆಡಿರುವ ಇಶಾಂತ್ ಶರ್ಮಾ ದೀಪಕ್ ಚಾಹರ್ ಬದಲಿಗೆ ಪ್ರಸ್ತುತ ಲಭ್ಯವಿರುವ ಉತ್ತಮ ಬೌಲರ್​ಗಳಲ್ಲಿ ಒಬ್ಬರು. 33 ವರ್ಷದ ಇಶಾಂತ್​ಗೆ ವಯಸ್ಸು ತಡೆಯಾಗಬಹುದೇ ಎನ್ನುವ ಅನುಮಾನಗಳಿದ್ದರೂ, ಸಿಎಸ್​ಕೆ ತಂಡ ಅನುಭವಿ ಆಟಗಾರರಿಂದ ಉತ್ತಮ ಪ್ರದರ್ಶನ ಪಡೆಯುವಲ್ಲಿ ಪರಿಣತಿ ಹೊಂದಿದೆ. ಹೀಗಾಗಿ ಅನುಭವಿ ಸಿಎಸ್​ಕೆ ಪಡೆಗೆ ಇಶಾಂತ್ ಉತ್ತಮ ಆಯ್ಕೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

ಇಶಾಂತ್ ಈ ಹಿಂದೆ ಎಂ.ಎಸ್ ಧೋನಿ ನಾಯಕತ್ವದ ಅಡಿಯಲ್ಲಿ ಆಡಿದವರು. ಹೀಗಾಗಿ ಚೆನ್ನೈ ಹಿರಿಯ ಆಟಗಾರ ಧೋನಿಗೆ ಇಶಾಂತ್ ಆಟದ ಬಗ್ಗೆ ಅರಿವಿದೆ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಇಶಾಂತ್ ಶರ್ಮಾ ಉತ್ತಮ ಪ್ರದರ್ಶನ ತೋರಿದ್ದರು. ಅದಾಗ್ಯೂ ಐಪಿಎಲ್ 15ನೇ ಆವೃತ್ತಿಯ ಹರಾಜಿನಲ್ಲಿ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಇದೀಗ ದೀಪಕ್ ಚಾಹರ್​ರಂತಹ ಭಾರತೀಯ ಆಟಗಾರನ ಸ್ಥಾನಕ್ಕೆ ಪವರ್​ಪ್ಲೇಯಲ್ಲಿ ಬೌಲ್ ಮಾಡಬಲ್ಲ ಇಶಾಂತ್ ಶರ್ಮಾ ಉತ್ತಮ ಆಯ್ಕೆ ಎನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬರುತ್ತಿದೆ.

ಪ್ರಸ್ತುತ ಹರಾಜಾಗದೇ ಉಳಿದಿರುವವರಲ್ಲಿ ಇಶಾಂತ್ ಹೊರತುಪಡಿಸಿ ಮತ್ಯಾವ ಬೌಲರ್ ಕೂಡ ಅಂತಾರಾಷ್ಟ್ರೀಯ ಅನುಭವ ಹಾಗೂ ಖ್ಯಾತಿಯನ್ನು ಹೊಂದಿಲ್ಲ. ಹೀಗಾಗಿ ಇಶಾಂತ್ ಉತ್ತಮ ಆಯ್ಕೆ ಎನ್ನುವುದು ನೆಟ್ಟಿಗರ ಅಂಬೋಣ. ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಟ್ವೀಟ್​ಗಳು ಇಲ್ಲಿವೆ.

ದೀಪಕ್ ಚಾಹರ್ ಪ್ರಸಕ್ತ ಐಪಿಎಲ್​ನಲ್ಲಿ ಎರಡು ವಾರಗಳ ನಂತರ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಬೆಂಗಳೂರಿನ ಎನ್​ಸಿಎಯಲ್ಲಿ ಇರುವ ಅವರು ಮತ್ತೆ ಗಾಯಕ್ಕೆ ತುತ್ತಾಗಿದ್ದು, ಈ ವರ್ಷದ ಐಪಿಎಲ್ ಆಡುವುದು ಅನುಮಾನ ಎನ್ನಲಾಗಿದೆ. ಬ್ಯಾಟಿಂಗ್​ನಲ್ಲಿಯೂ ಉತ್ತಮ ಕೊಡುಗೆ ನೀಡಬಲ್ಲ ದೀಪಕ್​ ಚಾಹರ್​ರನ್ನು 14 ಕೋಟಿ ರೂ ನೀಡಿ ಚೆನ್ನೈ ಖರೀದಿಸಿತ್ತು. ಕಳೆದ ಸೀಸನ್​ಗಳಲ್ಲಿ ಚೆನ್ನೈ ಪರವೇ ಆಡಿದ್ದ ದೀಪಕ್ ಉತ್ತಮ ಪ್ರದರ್ಶನ ನೀಡಿ, ಜಯದ ರೂವಾರಿಯಾಗಿದ್ದರು.

TV9 Kannada


Leave a Reply

Your email address will not be published. Required fields are marked *