Deepavali Balipadyami 2021: ಬಲಿಪಾಡ್ಯಮಿ ದಿನದ ಮಹತ್ವವೇನು? ಪೂಜಾ ವಿಧಾನ ಹೇಗೆ? | Deepavali 2021 puja vidhi vidhan of deepavali balipadyami


Deepavali Balipadyami 2021: ಬಲಿಪಾಡ್ಯಮಿ ದಿನದ ಮಹತ್ವವೇನು? ಪೂಜಾ ವಿಧಾನ ಹೇಗೆ?

ಸಾಂದರ್ಭಿಕ ಚಿತ್ರ

ದೀಪಾವಳಿಯಲ್ಲಿನ ಕಾರ್ತಿಕ ಮಾಸದ ಪಾಡ್ಯ ಅಂದರೆ ಬಲಿಪಾಡ್ಯ. ಈ ದಿನದಂದು ಭಗವಂತ ವಿಷ್ಣು ವಾಮನ ರೂಪದಲ್ಲಿ ಅವತರಿಸಿ ಸರ್ವಸ್ವ ವನ್ನು ಅರ್ಪಿಸಿ ದಾಸನಾಗುವ ಸಿದ್ಧತೆಯನ್ನೂ ತೋರಿಸಿದ್ದಾನೆ. ವಾಸ್ತವದಲ್ಲಿ ಬಲಿಯು ಒಬ್ಬ ಅಸುರ ಕುಲದವನಾಗಿದ್ದಾನೆ. ಆದರೆ ಅವನು ಉದಾರ ಮನಸ್ಸಿನಿಂದ ಭಗವಂತನಿಗೆ ಶರಣಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ್ದರಿಂದ ಭಗವಂತನು ಅವನಿಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಿ ಅವನ ಜೀವನಕ್ಕೆ ಹೊಸ ಸ್ವರೂಪವನ್ನು ನೀಡಿ ಅವನನ್ನು ಉದ್ಧರಿಸಿದನು. ಅವನ ರಾಜ್ಯದಲ್ಲಿ ಅಸುರೀ ವೃತ್ತಿಗೆ ಪೂರಕವಾದಂತಹ ಭೋಗಮಯ ವಿಚಾರಗಳನ್ನು ತೊಲಗಿಸಿ ಆ ಸ್ಥಾನದಲ್ಲಿ ತ್ಯಾಗದ ಭಾವನೆಯನ್ನು ಮೂಡಿಸಿ ಜನತೆಗೆ ದೈವೀವಿಚಾರಗಳನ್ನು ನೀಡಿ ಸುಖ ಹಾಗೂ ಸಮೃದ್ದಿಯ ಜೀವನವನ್ನು ಪ್ರದಾನಿಸಿದನು.

ಈ ದಿನದಂದು ಈಶ್ವರೀ ಕಾರ್ಯವೆಂದು ಜನತೆಯ ಸೇವೆಯನ್ನು ಮಾಡುತ್ತಾ ದೇವತ್ವವನ್ನು ತಲುಪಿದ ಬಲಿಯ ಸ್ಮರಣೆಯನ್ನು ಮಾಡಬೇಕು. ಬಲಿಪಾಡ್ಯದಂದು ಬಲಿಯ ಪೂಜೆಯನ್ನು ಮಾಡುತ್ತಾರೆ. ಬಲಿಯು ರಾಕ್ಷಸ ಕುಲದಲ್ಲಿ ಜನ್ಮವೆತ್ತಿದರೂ ಅವನ ಪುಣ್ಯದಿಂದಾಗಿ ವಾಮನ ರೂಪದಲ್ಲಿ ಅವತರಿಸಿದ ಭಗವಂತನ ಕೃಪೆಯು ಅವನ ಮೇಲಾಯಿತು. ಅವನು ಸಾತ್ತ್ವಿಕ ಪ್ರವೃತ್ತಿಯುಳ್ಳ ದಾನಿರಾಜನಾಗಿದ್ದನು. ಪ್ರತಿಯೊಬ್ಬ ಮನುಷ್ಯನು ಪ್ರಾರಂಭದಲ್ಲಿ ಅಜ್ಞಾನಿಯಾಗಿರುವುದರಿಂದ ಅವನಿಂದ ಕುಕರ್ಮಗಳು ಘಟಿಸುತ್ತಿರುತ್ತವೆ. ಆದರೆ ಜ್ಞಾನ ಹಾಗೂ ಈಶ್ವರೀಕೃಪೆಯಿಂದ ದೇವತ್ವವನ್ನು ತಲುಪಬಹುದು ಎಂಬುದು ಈ ಉದಾಹರಣೆಯಿಂದ ಕಂಡುಬರುತ್ತದೆ. ಈ ರೀತಿ ನಿರ್ಭಯತೆಯಿಂದ ಸತ್ಕರ್ಮವನ್ನು ಪಾಲಿಸಿದರೆ ಅವನಿಗೆ ಮೃತ್ಯು ಭಯವು ಇರುವುದಿಲ್ಲ. ಯಮನು ಸಹ ಅವನ ಬಂಧು ಮಿತ್ರನಾಗುತ್ತಾನೆ.

ಬಲೀಂದ್ರ ಪೂಜಾ ವಿಧಾನ
ದೀಪಾವಳಿಯನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತೆ. ದೀಪಾವಳಿಯ ಮೂರನೇ ದಿನ ಪಾಡ್ಯದಂದು ತುಳಸಿಕಟ್ಟೆಯ ಸಮೀಪ ಗೋಮಯದಿಂದ ಬಲಿಚಕ್ರವರ್ತಿಯ ಏಳುಸುತ್ತಿನ ಕೋಟೆಯನ್ನು ಕಟ್ಟಿ, ಆ ಕೋಟೆಗೆ ಗಣಪತಿಯನ್ನು ಕಾವಲಿಗೆ ನಿಲ್ಲಿಸಲಾಗುತ್ತೆ. ಮನೆ ಬಾಗಿಲಿನ ಹೊಸ್ತಿಲಿಗೆ ಯಾವುದೇ ದುಷ್ಟಶಕ್ತಿಗಳು ಒಳ ಪ್ರವೇಶಿಸದಂತೆ ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತೆ. ಸಂಜೆ ಗೋಧೂಳಿ ಲಗ್ನದ ಸಮಯದಲ್ಲಿ ಮನೆಯ ಸದಸ್ಯರೆಲ್ಲಾ ಬಲೀಂದ್ರನಿಗೆ ಪೂಜೆ ಮಾಡುತ್ತಾರೆ.

ಬಲಿಪಾಡ್ಯಮಿ ಪೂಜೆ ಮಂತ್ರ
ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ|
ಭವಿಷ್ಯೇಂದ್ರ ಸುರಾರಾತೇ ವಿಷ್ಣುಸಾನ್ನಿಧ್ಯದೋ ಭವ||

ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಕಾಶ್ಮೀರದ ಗಡಿಯಲ್ಲಿ ಸಿಹಿ ಹಂಚಿಕೊಂಡ ಭಾರತ- ಪಾಕಿಸ್ತಾನ ಸೈನಿಕರು

TV9 Kannada


Leave a Reply

Your email address will not be published. Required fields are marked *