Deepti Sharma: ದೀಪ್ತಿ ಶರ್ಮಾ ಮಾಡಿದ ರನೌಟ್​ಗೆ ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್ ಸ್ತಬ್ದ: ಕಣ್ಣೀರಿಟ್ಟ ಬ್ಯಾಟರ್ | Deepti Sharma Mankad run out Charlie Dean in 3rd ODI England dressing room’s stunned Video Viral


Mankading Run Out, ENGW vs INDW: ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡದ ಪಂದ್ಯದ ಮಧ್ಯೆ ದೀಪ್ತಿ ಶರ್ಮಾ (Deepti Sharma) ಮಾಡಿದ ಮಂಕಡ್ ರನೌಟ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

Deepti Sharma: ದೀಪ್ತಿ ಶರ್ಮಾ ಮಾಡಿದ ರನೌಟ್​ಗೆ ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್ ಸ್ತಬ್ದ: ಕಣ್ಣೀರಿಟ್ಟ ಬ್ಯಾಟರ್

Deepti Sharma Mankad run out

ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ಆಂಗ್ಲರ ನಾಡಿನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ (England Women vs India Women) 3-0 ಅಂತರದಿಂದ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿದ ಸಾಧನೆ ಗೈದಿದೆ. 1999ರ ಬಳಿಕ ಇಂಗ್ಲೆಂಡ್‌ ನೆಲದಲ್ಲಿ ಭಾರತ ಏಕದಿನ ಸರಣಿ ಗೆಲ್ಲುವುದು ಇದೇ ಮೊದಲ ಬಾರಿಗಾಗಿದೆ. ಈ ಸರಣಿ ಗೆಲುವಿನ ಸಂಭ್ರಮದ ಜತೆ ಆಟಗಾರ್ತಿಯರು ಜೂಲನ್‌ ಗೋಸ್ವಾಮಿ (Jhulan Goswami) ಅವರಿಗೆ ಸ್ಮರಣೀಯ ವಿದಾಯ ಹೇಳಿದರು. ಇದರ ನಡುವೆ ಪಂದ್ಯದ ಮಧ್ಯೆ ದೀಪ್ತಿ ಶರ್ಮಾ (Deepti Sharma) ಮಾಡಿದ ಮಂಕಡ್ ರನೌಟ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಈ ಪಂದ್ಯದಲ್ಲಿ ಭಾರತ ಸವಾಲಿನ ಮೊತ್ತವನ್ನೇನು ಕಲೆಹಾಕಲಿಲ್ಲ. 169 ರನ್​ಗೆ ಆಲೌಟ್ ಆಯಿತು. ಆದರೆ, ಸುಲಭ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಕೂಡ ಭಾರತದ ರೇಣುಕಾ ಸಿಂಗ್‌ ಬೌಲಿಂಗ್ ದಾಳಿಗೆ ತತ್ತರಿಸಿತು. 65 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಇದರ ನಡುವೆ ಚಾರ್ಲಿ ಡೀನ್ ತಂಡದ ಗೆಲುವಿಗೆ ಕೊನೆಯ ವಿಕೆಟ್ ವರೆಗೂ ಏಕಾಂಗಿ ಹೋರಾಟ ನಡೆಸುತ್ತಿದ್ದರು. ಇವರ ವಿಕೆಟ್ ಭಾರತಕ್ಕೆ ಮುಖ್ಯವಾಯಿತು.

ಚಾರ್ಲಿ ಡೀನ್ ವಿಕೆಟ್ ಪಡೆಯಲು ದೀಪ್ತಿ ಶರ್ಮಾ ಮಾಸ್ಟರ್ ಪ್ಲಾನ್ ರೂಪಿಸಿದರು. 44ನೇ ಓವರ್​ನಲ್ಲಿ ಸ್ಟ್ರೈಕ್​ನಲ್ಲಿದ್ದ ಫ್ರೆಯ ಡೆವಿಸ್​ಗೆ ಬೌಲಿಂಗ್ ಮಾಡಲು ಮುಂದಾದಾಗ ಚಾರ್ಲಿ ಡೀನ್ ನಾನ್​ ಸ್ಟ್ರೈಕರ್​ ಕ್ರೀಸ್​ ದಾಟಿ ಮುಂದೆ ಬಂದರು. ಇದನ್ನು ಗಮನಿಸಿದ ದೀಪ್ತಿ ತಕ್ಷಣ ಮಂಕಡ್ ರನೌಟ್ ಮಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್ 153 ರನ್​ಗೆ ಆಲೌಟ್ ಆಯಿತು. ದೀಪ್ತಿ ಶರ್ಮಾ ಮಂಕಡ್ ರನೌಟ್ ಮಾಡಿದ ವೇಳೆ ಇಡೀ ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್ ಸ್ತಬ್ದವಾಯಿತು. ಅಲ್ಲದೆ 47 ರನ್​ಗೆ ಔಟಾದ ಚಾರ್ಲಿ ಡೀನ್ ಕಣ್ಣೀರಿಡುತ್ತಾ ಮೈದಾನ ತೊರೆದರು.

ದೀಪ್ತಿ ಶರ್ಮಾ ಮಾಡಿದ ರನೌಟ್​ಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗುತ್ತಿದೆ. ಇದು ಕ್ರೀಡಾ ಸ್ಫೂರ್ತಿ ಅಲ್ಲ ಎಂದು ಇಂಗ್ಲೆಂಡ್ ಅಭಿಮಾನಿಗಳು ಹಾಗೂ ಪುರುಷ ಕ್ರಿಕೆಟ್ ತಂಡದ ಆಟಗಾರ ಸ್ಟುವರ್ಟ್ ಬ್ರಾಡ್ ಟ್ವೀಟ್ ಮಾಡಿದ್ದಾರೆ. ಆದರೆ, ಭಾರತೀಯ ಬೌಲರ್ ನಡೆಯನ್ನು ಸಮರ್ಥಿಸಿರುವ ನಾಯಕಿ ಹರ್ಮನ್​ಪ್ರೀತ್ ಕೌರ್, ನಾವೇನು ತಪ್ಪು ಮಾಡಿಲ್ಲ. ಐಸಿಸಿ ನಿಯಮವನ್ನು ಪಾಲಿಸಿದ್ದೇವೆ. ನಿಯಮದಲ್ಲಿ ಏನು ಬರೆಯಲಾಗಿದೆಯೋ ಅದನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ಟೀಮ್ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ಕೂಡ ಭಾರತದ ಆಟಗಾರ್ತಿಯರ ಪರವಾಗಿ ನಿಂತಿದ್ದಾರೆ. ಅಂದಹಾಗೆ ಐಸಿಸಿ ಇತ್ತೀಚೆಗಷ್ಟೆ ಮಂಕಡ್ ರನೌಟ್ ಅನ್ನು ತನ್ನ ಹೊಸ ನಿಯಮದಲ್ಲಿ ಜಾರಿಗೆ ತಂದಿದೆ.

3ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಟೀಮ್ ಇಂಡಿಯಾ ಕೇವಲ 169 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಮಾತ್ರ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ, ಅವಶ್ಯಕ ಅರ್ಧಶತಕ ಸಿಡಿಸಿದರು. ಭಾರತ ಕೇವಲ 29 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭ ದೀಪ್ತಿ ಮತ್ತು ಸ್ಮೃತಿ ನಡುವೆ 58 ರನ್​ಗಳ ಜೊತೆಯಾಟ ಮೂಡಿಬಂತು. ಇವರನ್ನು ಬಿಟ್ಟರೆ ಉಳಿದ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. ದೀಪ್ತಿ ಅಜೇಯ 68 ರನ್ ಗಳಿಸಿದರೆ, ಸ್ಮೃತಿ 50 ರನ್ ಸಿಡಿಸಿದರು. ಇಂಗ್ಲೆಂಡ್ ಪರ ವೇಗಿ ಕೇಟ್ ಕ್ರಾಸ್ ಗರಿಷ್ಠ 4 ವಿಕೆಟ್ ಪಡೆದರು.

TV9 Kannada


Leave a Reply

Your email address will not be published.