Delhi Pollution: ದೆಹಲಿಯಲ್ಲಿ ಸಂಪೂರ್ಣ ಲಾಕ್​ಡೌನ್​ಗೆ ಸಿದ್ಧ; ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ಕೇಜ್ರಿವಾಲ್ ಸರ್ಕಾರ | Ready for complete lockdown in delhi to control air pollution arvind kejriwal government tells supreme court sct


Delhi Pollution: ದೆಹಲಿಯಲ್ಲಿ ಸಂಪೂರ್ಣ ಲಾಕ್​ಡೌನ್​ಗೆ ಸಿದ್ಧ; ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ಕೇಜ್ರಿವಾಲ್ ಸರ್ಕಾರ

ಸುಪ್ರೀಂಕೋರ್ಟ್​

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ (Delhi Lockdown) ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಲು ನಮ್ಮ ಸರ್ಕಾರ ಸಿದ್ಧವಿದೆ. ಆದರೆ, ದೆಹಲಿ ಅಕ್ಕಪಕ್ಕದ ಪ್ರದೇಶದಲ್ಲಿಯೂ ಲಾಕ್‌ಡೌನ್ ಜಾರಿಯಾದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಸುಪ್ರೀಂಕೋರ್ಟ್‌ಗೆ (Supreme Court) ದೆಹಲಿಯ ಅರವಿಂದ್ ಕೇಜ್ರಿವಾಲ್ (Arvind Kejriwal) ಸರ್ಕಾರ ಇಂದು ಅಫಿಡವಿಟ್ ಸಲ್ಲಿಸಿದೆ. ದೆಹಲಿಯಲ್ಲಿ ವಾಯುಮಾಲಿನ್ಯ (Delhi Air pollution) ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿ, ಎನ್‌ಸಿಆರ್‌ನಲ್ಲಿ ಲಾಕ್‌ಡೌನ್‌ಗೆ ಸಿದ್ಧವಿರುವುದಾಗಿ ದೆಹಲಿ ಸರ್ಕಾರ (Delhi Government) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ದೆಹಲಿ ಚಿಕ್ಕದಾಗಿರುವುದರಿಂದ ಲಾಕ್​ಡೌನ್, ವಾಯು ಗುಣಮಟ್ಟದ ಮೇಲೆ ಸೀಮಿತ ಪರಿಣಾಮ‌ ಬೀರಲಿದೆ. ವಾಯು ಗುಣಮಟ್ಟದ ವಿಷಯವನ್ನು ಇಡೀ NCR ಪ್ರದೇಶದಲ್ಲಿ ಪರಿಹರಿಸಬೇಕು. ಕೇಂದ್ರ ಸರ್ಕಾರವು ಇಡೀ NCR ಪ್ರದೇಶದಲ್ಲಿ ಲಾಕ್​ಡೌನ್ ಮಾಡಿದರೆ ನಾವು ದೆಹಲಿಯನ್ನು‌ ಲಾಕ್​ಡೌನ್ ಮಾಡಲು ಸಿದ್ಧವಿರುವುದಾಗಿ ಕೇಜ್ರಿವಾಲ್ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದೆ. ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿದ ವಿಚಾರವಾಗಿ ಇಂದು ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್ ವಿಚಾರಣೆ ನಡೆಯುತ್ತಿದೆ.

ಕೃಷಿ ತ್ಯಾಜ್ಯದಿಂದ ಶೇಕಡಾ 10ರಷ್ಟು ಮಾತ್ರ ಮಾಲಿನ್ಯವಾಗುತ್ತಿದೆ. ರಸ್ತೆಯ ಧೂಳಿನಿಂದಾಗಿ ಹೆಚ್ಚಿನ ಮಾಲಿನ್ಯವಾಗುತ್ತಿದೆ. ಹೀಗಾಗಿ ಸಮ-ಬೆಸ ಸಂಖ್ಯೆ ವಾಹನ‌ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರಿಂದ ವಾದ ಮಂಡಿಸಿದ್ದಾರೆ. ಆದರೂ ವಾಯುಮಾಲಿನ್ಯ ಕಡಿಮೆಯಾಗದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 2 ದಿನ ಟ್ರಾಫಿಕ್ ಏಕೆ ಬಂದ್ ಮಾಡಬಾರದು? ಎಂದು ಕೇಂದ್ರ ಸರ್ಕಾರ, ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಪ್ರಶ್ನೆ ಹಾಕಿದೆ.

ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿದ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್ ವಿಚಾರಣೆ ನಡೆದಿದ್ದು, ನಾವು ಈಗ ಬಿಕ್ಕಟ್ಟಿನ ‌ಮಧ್ಯೆ ಇದ್ದೇವೆ. ಈಗ ಸಮಿತಿ ರಚನೆಯಂತಹ ಹೊಸ ಕೆಲಸ ಮಾಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್‌ ಸಿಜೆ ರಮಣ, ನ್ಯಾ. ಡಿ.ವೈ. ಚಂದ್ರಚೂಡ್, ನ್ಯಾ. ಸೂರ್ಯಕಾಂತ್ ಅವರ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಯುತ್ತಿದೆ.

ನಾವು ದೆಹಲಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಬಯಸುತ್ತೇವೆ. ಅದಕ್ಕೆ ತೆಗೆದುಕೊಳ್ಳಬೇಕಾದ ಪ್ರತಿಯೊಂದು ಹೆಜ್ಜೆಯ ಬಗ್ಗೆಯೂ ನಿಮಗೆ ಸಲಹೆ ನೀಡಲು ನಾವು ಇಲ್ಲಿಲ್ಲ. ನೀವು ಕೈಗಾರಿಕೆಗಳು ಮತ್ತು ಟ್ರಾಫಿಕ್ ಅನ್ನು ಹೇಗೆ ನಿಯಂತ್ರಿಸುತ್ತೀರಿ ಎಂಬುದು ನಿಮ್ಮ ಸಮಸ್ಯೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯದ ವಿಷಯದ ಕುರಿತು ನೀಡುತ್ತಿರುವ “ಕುಂಟು ನೆಪಗಳು” ರಾಜ್ಯ ಸರ್ಕಾರವು ಸಂಗ್ರಹಿಸುತ್ತಿರುವ ಆದಾಯ ಮತ್ತು ಅದರೊಂದಿಗೆ ಏನು ಮಾಡಲಾಗುತ್ತಿದೆ ಎಂಬುದರ ಸರಿಯಾದ ಆಡಿಟ್ ನಡೆಸಲು ನ್ಯಾಯಾಲಯವನ್ನು ಒತ್ತಾಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ತಿಳಿಸಿದೆ.

ದೆಹಲಿಯ ವಾಯುಮಾಲಿನ್ಯದ ಕುರಿತು ಶನಿವಾರ ತುರ್ತು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅಗತ್ಯವಿದ್ದರೆ ದೆಹಲಿಯಲ್ಲಿ 2 ದಿನಗಳ ಲಾಕ್​ಡೌನ್ ಮಾಡಿ ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ದೆಹಲಿಯಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಕೇಳಿದ ಕೆಲವು ದಿನಗಳ ನಂತರ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ವಾಹನಗಳನ್ನು ನಿಲ್ಲಿಸುವುದು ಮತ್ತು ಲಾಕ್‌ಡೌನ್ ಜಾರಿಗೊಳಿಸಲು ಸೂಚಿಸಿದ ಬೆನ್ನಲ್ಲೇ ಇಂದು ದೆಹಲಿ ಸರ್ಕಾರ ಲಾಕ್​ಡೌನ್​ಗೆ ಸಿದ್ಧವಿರುವುದಾಗಿ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದೆ.

ಶನಿವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಶಾಲೆಗಳನ್ನು ಸೋಮವಾರದಿಂದ ಒಂದು ವಾರದವರೆಗೆ ಮುಚ್ಚಲಾಗುವುದು ಎಂದು ಘೋಷಿಸಿದ್ದರು. ಮಕ್ಕಳು ಕಲುಷಿತ ಗಾಳಿಯನ್ನು ಉಸಿರಾಡದಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಜ್ರಿವಾಲ್ ಸಚಿವಾಲಯದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದರು. ಹಾಗೇ, ಇಂದಿನಿಂದ ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳ ಕೆಲಸಗಳನ್ನು ಮನೆಯಿಂದಲೇ ಮಾಡಲು ಕೇಜ್ರಿವಾಲ್ ಸೂಚಿಸಿದ್ದರು. ಜೊತೆಗೆ, ನವೆಂಬರ್ 17ರವರೆಗೆ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಲಾಕ್​ಡೌನ್ ಜಾರಿ; ಸುಪ್ರೀಂ ಕೋರ್ಟ್​ಗೆ ಇಂದು ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆ

Air Pollution: ಕಲುಷಿತವಾಗುತ್ತಿದೆ ಪ್ರಾಣವಾಯು; ಅತಿ ಹೆಚ್ಚು ವಾಯು ಮಾಲಿನ್ಯವಿರುವ ಭಾರತದ ಟಾಪ್ 10 ನಗರಗಳಿವು

TV9 Kannada


Leave a Reply

Your email address will not be published. Required fields are marked *