Dharwad: ಮಾನವ ಜಾತಿ ತಾನೊಂದೆ ವಲಂ; ಅಪ್ಪ, ಹರಿದ ಅಂಗಿಯ ತಾ ತೊಟ್ಟು ಬಣ್ಣಬಣ್ಣದ ಬಟ್ಟೆಯ ನನಗಿಟ್ಟ | Manava Jaati Taanonde Valam Right wing activists vandalize Muslim traders’ shop in Karnataka’s Dharwad Reaction of Manu Guruswami


Dharwad: ಮಾನವ ಜಾತಿ ತಾನೊಂದೆ ವಲಂ; ಅಪ್ಪ, ಹರಿದ ಅಂಗಿಯ ತಾ ತೊಟ್ಟು ಬಣ್ಣಬಣ್ಣದ ಬಟ್ಟೆಯ ನನಗಿಟ್ಟ

ಮನು ಗುರುಸ್ವಾಮಿ

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರಾದ ಮನು ಗುರುಸ್ವಾಮಿ ಪ್ರಸ್ತುತ ಕೆ.ಎಲ್ಇ – ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರು. ಅವರ ಕವಿತೆ ಓದಿಗೆ. 

ಬಟ್ಟೆ 

ಅಪ್ಪ ಕೊಡಿಸಿದ ಬಣ್ಣದ ಬಟ್ಟೆ ಹೇಳುತ್ತಿತ್ತು
ಮೈಕೊಡವಿ ದುಡಿದ ಅವನ ಶ್ರಮದ ಫಲ
ನನ್ನ ಮೈಯಪ್ಪಿ ಕುಳಿತ ಬಗೆಯ

ಆತನ ಹರಿದ ಅಂಗಿಗೆ ಅವ್ವ ಹತ್ತಾರು ಬಾರಿ
ತೇಪೆ ಹಾಕಿ ಭದ್ರಗೊಳಿಸಿದ್ದಳು
ಆದರೆ ನನ್ನ ಪಾಲಿಗದು ಸ್ವಪ್ನ!
ಹರಿದಂದೇ,
ಹೊಸ ಬಟ್ಟೆ ಉಡುಗೊರೆಯಾಗುತ್ತಿತ್ತು.

ಅವನಿಗೊಂದು ಕನಸು
ನಾನು ಕಲಿಯಬೇಕು; ಕಲಿತು ಬಾಗಬೇಕು.
ಅಂತೆಯೇ ಅವರಿಬ್ಬರನ್ನೂ
ಕೈಹಿಡಿದು ನಡೆಸಬೇಕು

ನಾನೂ ಅದೇ ಮಾರ್ಗದಲ್ಲಿದ್ದೆ.
ಅದಾರೋ ಬಣ್ಣದ ಬಟ್ಟೆಯ ಬದಲಿಸಿದರು
ಸಾಂಕೇತಿಕ ಉಡುಪುಗಳ ಕೊಟ್ಟರು
ನಾನೂ ಮಾರು ಹೋದೆ

ಕೇಸರಿ, ಕಪ್ಪು, ನೀಲಿ, ಹಸಿರು
ಕಣ್ಣಾಯಿಸಿದಷ್ಟೂ ಬಣ್ಣಗಳು;
ಬಣ್ಣದ ಶಾಲುಗಳು…
ಯಾವುದು ನನ್ನದು; ನನ್ನ ಧರ್ಮದ್ದು ?
ಇದೇ ಗೊಂದಲದೊಳಗೆ ನಡೆದುಬಿಟ್ಟೆ

ಈಗ ಅಪ್ಪನ ಹರಿದ ಅಂಗಿಯಾಗಲಿ
ಅವನ ಕನಸಾಗಲಿ ನನಗೆ ಮುಖ್ಯವಲ್ಲ
ಏಕೆಂದರೆ ಹರಿದ ಅಂಗಿಯ ತಾ ತೊಟ್ಟು
ಬಣ್ಣಬಣ್ಣದ ಬಟ್ಟೆಯ ನನಗಿಟ್ಟ

ಇದವನ ತಪ್ಪಲ್ಲವೆ?
ಅದಕ್ಕಾಗಿಯೇ ಅಪ್ಪನಿಗಿಂತ,
ಅವನ ಪ್ರೀತಿಗಿಂತ
ಧರ್ಮವೇ ನನಗೀಗ ಮುಖ್ಯ;
ಇದೇ ಸತ್ಯ ನೋಡಿ ಮತ್ತೆ!

ಪ್ರತಿಕ್ರಿಯೆಗಾಗಿ : [email protected]

TV9 Kannada


Leave a Reply

Your email address will not be published. Required fields are marked *