ಎ. ಎಸ್. ಮಕಾನದಾರ
Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಇಂದಿಗೆ ಒಂದು ವಾರದ ಹಿಂದೆ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.
ಎ. ಎಸ್. ಮಕಾನದಾರ, ನಿರಂತರ ಪ್ರಕಾಶನ ಗದಗ (A.S. Makanadar)
ಮುಲ್ಕಿ ಪರೀಕ್ಷೆ ವಾರ್ಷಿಕ ಫಲಿತಾಂಶ ಬಂತು ನಾನು ಶರಣಯ್ಯ ಸರಗಣಾಚಾರಿ ಮಠ, ರಾಘವೇಂದ್ರ, ಸಂಗಣ್ಣ, ರಾಘವೇಂದ್ರ ಭಟ್ ಮುಂತಾದ ಗೆಳೆಯರು ಪಾಸ್ ಆಗಿದ್ವಿ. ಅವ್ವ ಆಗ್ಲೇ ಮಾಸ್ಟರ್ ಪ್ಲಾನ್ ಹಾಕಿ ಎಂಟು ಎತ್ತಿನ ಕಮತ ಇರುವ ಕೊಡೇಕಲ್ಲ ಅವರ ಮನೆಯಲ್ಲಿ ನನ್ನನ್ನು ಜೀತಕ್ಕ್ ಇಡಬೇಕು ಅಂತ. ವರುಷಕ್ಕೆ ಎರಡು ಚೀಲ ಜೋಳ ಖರ್ಚಿಗೆ ಸ್ವಲ್ಪ ರೊಕ್ಕಾ ಕೊಡಂದ್ರ ಕೊಡೇಕಲ್ ಅವರು ಕೊಡತಾರ ಅಂತ ಗೊತ್ತಿತ್ತು ಅವರ ಹೊಲಕ್ಕೆ ಕಳೆವು ತೇಗಿಯಾಕ ಹೋಗಿಮುಂದ ವಿಷಯ ಪ್ರಸ್ತಾವನೆ ಮಾಡಿದ್ದಳು, ಸಾಲಿ ಸೂಟಿ ಬಿಟ್ಟಾಗ ನಿನ್ನ ಮಗನ್ನ ಕರಕೊಂಡ ಬಾರಬೇ ಮಾಬವ್ವ್, ಹಂಗ ಬಿಟ್ರ ಹುಡುಗರು ದಾರಿ ಬಿಡ್ತಾವ್. ಮೈಯಾಗ ಮುಗ್ಗಲಗೇಡಿತನ ಬೆಳಿತೈತೆ ಅಂತ ಸಾಹುಕಾರ್ ಹೇಳಿದ್ದ ಮಾತು ಅವ್ವನ ತಲೆಯೊಳಗ ಬೋರಾಣಿ ಕೊರದಂಗ ಕೊರಿತಿತ್ತು. ಅಮ್ಮ ನಾ ಪಾಸ್ ಆದೆ ದೊಡ್ಡ ಸಾಲಿಗೆ ಹೆಸರು ಹಚ್ಚಬೇಕು ಅಂತ ಹೇಳಿದ್ದ ತಡ, ಅಯ್ಯ ಭಾಡಕೋ ಮುಂಜಾನೆ ಸತ್ರ ಮಣ್ಣಿಗಿಲ್ಲ ಸಂಜಿಕೆ ಸತ್ರ ಎಣ್ಣಿಗಿಲ್ಲ ಅನ್ನೋ ಬದುಕು ನಮ್ಮದಾಗೈತೆ ನಿಮ್ಮಪ್ಪ ನೋಡಿದ್ರ ದುಡಿಯೋವ ಅಲ್ಲ ದುಕ್ಕ ಬಡಿಯುವ ಅಲ್ಲ ಕೊಡೇಕಲ್ ಸಂಗಪ್ಪ ಸಾಹುಕಾರ್ ಮನೆಗೆ ಜೀತಕ್ಕ ಹಚ್ಚತೀನಿ ನಡಿ ಸುಮ್ನೆ ಧಿಮಾಕ್ ಮಾಡಬೇಡ.
ಸಾಲಿ ಕಲ್ತು ಯಾರ್ ಬಕಬಾರ್ಲಿ ಬಿದ್ದಾರಾ ಅಂತ ಕೈ ಹಿಡ್ಕೊಂಡು ಸೀದಾ ಗಣಾಚಾರಿ ಬಸಮ್ಮನಮನೆಗೆ ಕರೆಕೊಂಡು ಹೋದ್ಲು. ಎಕ್ಕ ನೋಡಬೇ ಮಕ್ಕಳ ಕಾಲಾಗ ಸಾಕು ಸಾಕ್ ಆಗೈತೆ. ಜೀತಕ್ಕ್ ಹಾಕ್ತಿನಿ ಅಂದ್ರವಲ್ಲೆ ಅಂತ ಕುಂತಾನ. ನೀನರ ಸ್ವಲ್ಪ ಬುದ್ದಿ ಹೇಳಬೇ ಅಕ್ಕ ಅಂತ ಒಂದೇ ಸವನೆ ದಯನಾಸ ಬಿಟ್ಲು. ಗಣೇಚಾರಿ ಬಸಮ್ಮಗ ನಾವು ಅತ್ತಿ ಅಂತ ಈಗಲ್ಯೂ ಕರೀತೀವಿ. ನಮ್ಮ ಅಪ್ಪಗ ಅಣ್ಣ ಅಂತಾಳ ಆ ನಡೀಯಿಂದ ಬಸಮ್ಮನ ಅಳಿಯ, ಸೊಸೆಯಂದಿರು ಅಂತಲೇ ಸಂಬಂಧದ ನಡೆ ನಡೀತಾನ ಬಂದೇತಿ. ನಡಕೋತಾನ ಹೊಂಟೇತಿ. ಬಸಮ್ಮ ಅತ್ತಿ ನನ್ನ ಕಿವಿ ಹಿಂಡಿ ಬುದ್ದಿವಾದ ಹೇಳಿ ಜೀತಕ್ಕ ಕಳಸತಾಳ ಅಂತ ಅವ್ವನ ಲೆಕ್ಕಾಚಾರ ಆಗಿತ್ತು. ಬಾಯಿ ಮಾಡೋದು ಕೇಳಿ ಕೋಟಗಿ ಶರಣವ್ವ ಕೂಡ ಹಾಜರಿ ಹಾಕಿದಳು.