Disha Encounter ದಿಶಾ ಎನ್‌ಕೌಂಟರ್ ನಕಲಿ, ಆರೋಪಿಗಳ ಹತ್ಯೆ ಮಾಡಿದ ಪೊಲೀಸರ ವಿರುದ್ಧ ಕ್ರಮಕ್ಕೆ ಸಿರ್ಪುರ್ಕರ್ ಆಯೋಗ ಶಿಫಾರಸು | Disha encounter Supreme Court appointed Justice Sirpurkar commission calls killings fake


Disha Encounter  ದಿಶಾ ಎನ್‌ಕೌಂಟರ್ ನಕಲಿ, ಆರೋಪಿಗಳ ಹತ್ಯೆ ಮಾಡಿದ ಪೊಲೀಸರ ವಿರುದ್ಧ ಕ್ರಮಕ್ಕೆ ಸಿರ್ಪುರ್ಕರ್ ಆಯೋಗ ಶಿಫಾರಸು

ದಿಶಾ ಎನ್‌ಕೌಂಟರ್

Image Credit source: PTI

ಪೊಲೀಸರ ಪ್ರಕಾರ, ಆರೋಪಿಗಳು ಬಂದೂಕುಗಳನ್ನು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಆರೋಪಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ

ಹೈದರಾಬಾದ್‌ನಲ್ಲಿ(Hyderabad) 2019ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ (gang rape) ಪ್ರಕರಣದ ಆರೋಪಿಗಳನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದು ಈ ಎನ್‌ಕೌಂಟರ್ ನಕಲಿ ಎಂದು ಸುಪ್ರೀಂಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ (Sirpurkar commission) ಶುಕ್ರವಾರ ಹೇಳಿದೆ. ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ನಾಲ್ವರು ಅತ್ಯಾಚಾರ ಮತ್ತು ಕೊಲೆ ಆರೋಪಿಗಳಲ್ಲಿ ಮೂವರು ಅಪ್ರಾಪ್ತರು ಎಂದು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದ ಮೂವರು ಸದಸ್ಯರ ಸಮಿತಿ ಹೇಳಿದೆ. ಆರೋಪಿ ಪೊಲೀಸರನ್ನು ಕೊಲೆ ಆರೋಪದ ವಿಚಾರಣೆ ನಡೆಸುವಂತೆ ಸಮಿತಿಯು ವರದಿಯಲ್ಲಿ ಶಿಫಾರಸು ಮಾಡಿದೆ. 2019 ರ ನವೆಂಬರ್‌ನಲ್ಲಿ ಹೈದರಾಬಾದ್ ಬಳಿಯ ಶಂಶಾಬಾದ್‌ನಲ್ಲಿ 26 ವರ್ಷದ ಪಶುವೈದ್ಯೆಯನ್ನು ಅತ್ಯಾಚಾರವೆಸಗಿ ಹತ್ಯೆಮಾಡಿದ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಯಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದ ನಾಲ್ವರು ಆರೋಪಿಗಳ ಹತ್ಯೆಯನ್ನು ‘ದಿಶಾ ಎನ್‌ಕೌಂಟರ್‘  (Disha encounter)ಎಂದು ಕರೆಯಲಾಗಿದೆ. ಅತ್ಯಾಚಾರಕ್ಕೀಡಾಗಿ ಕೊಲೆಯಾದ ಸಂತ್ರಸ್ತೆಯ ಹೆಸರು ಗೌಪ್ಯವಾಗಿರಿಸಲು ಪೊಲೀಸರು ಸಂತ್ರಸ್ತೆಗೆ ದಿಶಾ ಎಂಬ ಹೆಸರನ್ನು ಇಟ್ಟಿದ್ದಾರೆ.  ದಿಶಾ ಸರ್ಕಾರಿ ಆಸ್ಪತ್ರೆಯಲ್ಲಿ ಪಶುವೈದ್ಯಕೀಯ ಸಹಾಯಕ ಸರ್ಜನ್ ಆಗಿದ್ದು ಒಂದು ರಾತ್ರಿ ನಾಲ್ವರು ಪುರುಷರು ಆಕೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದರು.ಹತ್ಯೆಗೈದ ನಂತರ ಆಕೆಯ ದೇಹವನ್ನು ಟ್ರಕ್‌ಗೆ ತುಂಬಿಸಿ ಸೇತುವೆಯ ಕೆಳಗೆ ಸುಟ್ಟು ಹಾಕಿದ್ದರು.

ಈ ಘಟನೆಯು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ, ತೆಲಂಗಾಣ ಪೊಲೀಸರು ತ್ವರಿತ ನ್ಯಾಯಾಲಯದ ವಿಚಾರಣೆಯ ಆಧಾರದ ಮೇಲೆ ವಿಳಂಬವಿಲ್ಲದೆ ಶಿಕ್ಷೆಯನ್ನು ನೀಡುವಂತೆ ಒತ್ತಡಕ್ಕೆ ಒಳಗಾದರು. ಎಲ್ಲಾ ಆರೋಪಿಗಳನ್ನು 2019 ರ ಡಿಸೆಂಬರ್ 6 ರಂದು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಕೆಳಗೆ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆ ಮಾಡಲಾಯಿತು.

ಪೊಲೀಸರ ಪ್ರಕಾರ, ಆರೋಪಿಗಳು ಬಂದೂಕುಗಳನ್ನು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಆರೋಪಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ. ‘ದಿಶಾ ಎನ್‌ಕೌಂಟರ್’ ಅನ್ನು ನ್ಯಾಯಬಾಹಿರ ಮರಣದಂಡನೆಯ ನಿದರ್ಶನವೆಂದು ಹಲವರು ಖಂಡಿಸಿದ್ದರೂ ದೇಶಾದ್ಯಂತ ಸಾವಿರಾರು ಜನರು ಆರೋಪಿಗಳಿಗೆ ತ್ವರಿತ ನ್ಯಾಯ ನೀಡಲಾಗಿದೆ ಎಂದು ಸಂಭ್ರಮಿಸಿದ್ದರು.

TV9 Kannada


Leave a Reply

Your email address will not be published. Required fields are marked *