Diwali Sales: 10 ವರ್ಷದಲ್ಲೇ ದೀಪಾವಳಿಯಲ್ಲಿ ದಾಖಲೆ ಮಾರಾಟ; 1.25 ಲಕ್ಷ ಕೋಟಿ ರೂಪಾಯಿಯಷ್ಟು ಖರೀದಿಸಿದ ಜನರು | Diwali 2021 Sales Amounted To Rs 1.25 Lakh Crore According To CAIT This Is Record Amount In 10 Years


Diwali Sales: 10 ವರ್ಷದಲ್ಲೇ ದೀಪಾವಳಿಯಲ್ಲಿ ದಾಖಲೆ ಮಾರಾಟ; 1.25 ಲಕ್ಷ ಕೋಟಿ ರೂಪಾಯಿಯಷ್ಟು ಖರೀದಿಸಿದ ಜನರು

ಸಾಂದರ್ಭಿಕ ಚಿತ್ರ

ಈ ದೀಪಾವಳಿಯಲ್ಲಿ ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, 1.25 ಲಕ್ಷ ಕೋಟಿ ರೂಪಾಯಿಗಳಷ್ಟು ದೊಡ್ಡ ಮಟ್ಟದ ವ್ಯಾಪಾರಕ್ಕೆ ಸಹಾಯ ಮಾಡಿದ್ದಾರೆ. ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ವ್ಯಾಪಾರ ಅಂಕಿ-ಅಂಶವಾಗಿದೆ ಎಂದು ವರ್ತಕರ ಒಕ್ಕೂಟವಾದ ಅಖಿಲ ಭಾರತ ವರ್ತಕರ ಒಕ್ಕೂಟ (CAIT) ಶುಕ್ರವಾರ ಹೇಳಿದೆ. ಸುಮಾರು 7 ಕೋಟಿ ವರ್ತಕರನ್ನು ಪ್ರತಿನಿಧಿಸುವ ಸಿಎಐಟಿ, ಇದು ಮುಂದಿನ ದಿನಗಳಲ್ಲಿ ವರ್ತಕ ಸಮುದಾಯದಲ್ಲಿ ಉತ್ತಮ ವ್ಯಾಪಾರ ನಿರೀಕ್ಷೆಗಳ ಕಿಡಿಯನ್ನು ಜಾಗೃತಗೊಳಿಸಿದೆ ಎಂದು ಹೇಳಿದೆ. ಈ ಮೊದಲು ಒಕ್ಕೂಟವು ಅಂದಾಜು ಮಾಡಿದಂತೆ, ಒಟ್ಟಾರೆ ಈ ವರ್ಷ ದೀಪಾವಳಿ ವ್ಯಾಪಾರದ ಎಲ್ಲ ಬಗೆಯಲ್ಲೂ ಸೇರಿ ಸುಮಾರು 1 ಲಕ್ಷ ಕೋಟಿ ರುಪಾಯಿ ವ್ಯವಹಾರ ಆಗಬಹುದು ಅಂದುಕೊಂಡಿತ್ತು. ಈ ವರ್ಷದ ಅಂತ್ಯದ ವೇಳೆಗೆ, ಗ್ರಾಹಕರಿಂದ ಖರ್ಚು ಮಾಡುವ ಮೂಲಕ ಸುಮಾರು 3 ಲಕ್ಷ ಕೋಟಿಗಳಷ್ಟು ಒಳಹರಿವು ಇರಲಿದೆ ಎಂಬ ಅಂದಾಜಿದೆ.

“ಕಳೆದ ಎರಡು ವರ್ಷಗಳ ಅಂತರದ ನಂತರ, ಈ ವರ್ಷ ದೆಹಲಿ ಸೇರಿದಂತೆ ದೇಶಾದ್ಯಂತ ದೀಪಾವಳಿ ಹಬ್ಬವು ಹೊಸ ಚೈತನ್ಯ ಹಾಗೂ ಉತ್ಸಾಹವನ್ನು ತಂದಿದೆ. ಕಳೆದ ಒಂದು ವಾರದಿಂದ ದೇಶಾದ್ಯಂತದ ಮಾರುಕಟ್ಟೆಗಳಲ್ಲಿ ಗ್ರಾಹಕರ ನೂಕು-ನುಗ್ಗಲಿನಿಂದ ಇದು ಚೆನ್ನಾಗಿ ಅನುಭವಕ್ಕೆ ಬರುತ್ತದೆ. ಮತ್ತು ಅವರು ತಮ್ಮ ಎರಡು ವರ್ಷಗಳ ಖರೀದಿಗಳ ಅಂತರವನ್ನು ಭರ್ತಿ ಮಾಡುತ್ತಿದ್ದಾರೆ ಎಂದು ತೋರುತ್ತದೆ,” ಎಂಬುದಾಗಿ ಸಿಎಐಟಿ ಹೇಳಿಕೆಯಲ್ಲಿ ತಿಳಿಸಿದೆ.

ಆದರೆ, ಹಬ್ಬಕ್ಕೆ ಕೆಲವೇ ದಿನಗಳ ಮುಂಚಿತವಾಗಿ ಸಿಎಐಟಿ ತನ್ನ ಬಹಿಷ್ಕಾರದ ಕರೆಯಿಂದಾಗಿ ಚೀನೀ ರಫ್ತುದಾರರು ಈ ದೀಪಾವಳಿ ಋತುವಿನಲ್ಲಿ 50,000 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ನಷ್ಟವನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ ಎಂದು ಹೇಳಿದ್ದರು. ದೀಪಾವಳಿ ಹಬ್ಬದ ಮಾರಾಟದ ಅವಧಿಯಲ್ಲಿ ಗ್ರಾಹಕರು ಸುಮಾರು 2 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬಹುದು ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ನಿರೀಕ್ಷಿಸುತ್ತದೆ. “ಹಿಂದಿನ ವರ್ಷದಂತೆ, ಈ ವರ್ಷವೂ ಸಿಎಐಟಿ ‘ಚೀನೀ ಸರಕುಗಳನ್ನು ಬಹಿಷ್ಕರಿಸಿ’ ಎಂದು ಕರೆ ನೀಡಿದೆ ಮತ್ತು ಭಾರತೀಯ ವ್ಯಾಪಾರಿಗಳಿಂದ ಚೀನಾದ ಸರಕುಗಳ ಆಮದು ನಿಲ್ಲಿಸುವ ವಿಷಯದಲ್ಲಿ ಚೀನಾ ಸುಮಾರು ರೂ. 50,000 ಕೋಟಿಗಳಷ್ಟು ವ್ಯಾಪಾರ ನಷ್ಟವನ್ನು ಅನುಭವಿಸಲಿದೆ ಎಂಬುದು ಖಚಿತವಾಗಿದೆ,” ಎಂದು ಸಿಎಐಟಿ ಹೇಳಿದೆ.

ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್​ವಾಲ್ ಅವರು ಮಾತನಾಡಿ, ದೇಶದ 20 ‘ವಿತರಣೆ ನಗರಗಳಲ್ಲಿ’ ಸಂಶೋಧನಾ ವಿಭಾಗವು ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ದೀಪಾವಳಿ ಸರಕುಗಳು, ಪಟಾಕಿಗಳು ಅಥವಾ ಇತರ ವಸ್ತುಗಳಿಗಾಗಿ ಚೀನಾದ ರಫ್ತುದಾರರಿಗೆ ಭಾರತೀಯ ವ್ಯಾಪಾರಿಗಳು ಅಥವಾ ಆಮದುದಾರರಿಂದ ಆರ್ಡರ್ ನೀಡಿಲ್ಲ ಎಂಬುದಾಗಿ ತೋರಿಸಿದೆ ಎಂದಿದ್ದಾರೆ. ಸಮೀಕ್ಷೆಯ 20 ನಗರಗಳಲ್ಲಿ ನವದೆಹಲಿ, ಅಹಮದಾಬಾದ್, ಮುಂಬೈ, ನಾಗ್ಪುರ, ಜೈಪುರ, ಲಖನೌ, ಚಂಡೀಗಢ, ರಾಯ್‌ಪುರ, ಭುವನೇಶ್ವರ, ಕೋಲ್ಕತ್ತಾ, ರಾಂಚಿ, ಗುವಾಹತಿ, ಪಾಟ್ನಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಮದುರೈ, ಪುದುಚೆರಿ, ಭೋಪಾಲ್ ಮತ್ತು ಜಮ್ಮು ಸೇರಿವೆ.

ಇದನ್ನೂ ಓದಿ: Diwali Gift: ಈ ಕಂಪೆನಿಯಿಂದ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಎಲೆಕ್ಟ್ರಿಕ್ ಸ್ಕೂಟರ್ 

TV9 Kannada


Leave a Reply

Your email address will not be published. Required fields are marked *