
ಸಾಹಿತಿ ಡಿ.ಎಸ್.ನಾಗಭೂಷಣ ನಿಧನ
ಇವರ ‘ಗಾಂಧಿ ಕಥನ’ (Gandhi Kathana) ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಿಕ್ಕಿತ್ತು.
ಶಿವಮೊಗ್ಗ: ಖ್ಯಾತ ಸಾಹಿತಿ, ವಿಮರ್ಶಕ ಡಿ.ಎಸ್.ನಾಗಭೂಷಣ (DS Nagabhushan) ಅವರು ಗುರುವಾರ (ಮೇ 19) ಮಧ್ಯರಾತ್ರಿ 12.15ಕ್ಕೆ ಶಿವಮೊಗ್ಗದಲ್ಲಿ ನಿಧನರಾದರು. ಶಿವಮೊಗ್ಗದ ವಿದ್ಯಾನಗರ ರೋಟರಿ ಚಿತಾಗಾರದಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರ ‘ಗಾಂಧಿ ಕಥನ’ (Gandhi Kathana) ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಿಕ್ಕಿತ್ತು.
ನಿರಂತರ ಅಧ್ಯಯನ ಮತ್ತು ಬರಹವನ್ನೇ ಧ್ಯಾನಿಸುತ್ತಿದ್ದ ಅಪರೂಪದ ಬರಹಗಾರ ಡಿ.ಎಸ್.ನಾಗಭೂಷಣ್ ಬೆಂಗಳೂರಿನ ತಿಮ್ಮಸಂದ್ರದಲ್ಲಿ 1ನೇ ಫೆಬ್ರುವರಿ 1952ರಂದು ಜನಿಸಿದರು. ಆಕಾಶವಾಣಿ ದೆಹಲಿ ಕೇಂದ್ರದಲ್ಲಿ ಕನ್ನಡ ವಾರ್ತಾ ವಾಚಕರಾಗಿ 1975ರಿಂದ 1981ರವರೆಗೆ ಸೇವೆ ಸಲ್ಲಿಸಿದ್ದರು. ನಿಲಯದ ಸಹಾಯಕ ನಿರ್ದೇಶಕರಾಗಿ 7 ವರ್ಷ ಸೇವೆ ಸಲ್ಲಿಸಿದ್ದರು. 2005ರಲ್ಲಿ ಸ್ವಯಂ ನಿವೃತ್ತಿ ಪಡೆದ ನಂತರ ಓದು, ಬರವಣಿಗೆಗೆ ಬದುಕು ಮುಡಿಪಿಟ್ಟರು. ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ’, ‘ನಮ್ಮ ಶಾಮಣ್ಣ’, ‘ಕನ್ನಡದ ಮನಸು ಮತ್ತು ಇತರ ಲೇಖನಗಳು’, ‘ಕಾಲಕ್ರಮ’, ‘ಗಮನ’, ‘ಅನೇಕ’, ‘ಈ ಭೂಮಿಯಿಂದ ಆ ಆಕಾಶದವರೆಗೆ’, ‘ಮರಳಿ ಬರಲಿದೆ ಸಮಾಜವಾದ’, ‘ವಸಿಷ್ಠರು ಮತ್ತು ವಾಲ್ಮೀಕಿಯರು’, ‘ಹಣತೆ’(ಜಿಎಸ್ಸೆಸ್ ಅಭಿನಂದನೆ ಗ್ರಂಥ), ‘ಗಾಂಧಿ ಕಥನ’ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಸದ್ಯ ಅವರು ತಮ್ಮ ಪತ್ನಿ ಸವಿತಾ ನಾಗಭೂಷಣ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಿ.ಎಸ್.ನಾಗಭೂಷಣ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಮಹತ್ವದ್ದು. 2019ರಲ್ಲಿ ಪ್ರಕಟವಾದ ಗಾಂಧಿ ಕಥನ ಕನ್ನಡ ಸಹೃದಯರ ಮೆಚ್ಚುಗೆಗೆ ಪಾತ್ರವಾಗಿದ್ದ ಮಾತ್ರವಲ್ಲದೆ, ಹಲವು ಪ್ರಮುಖ ವಿಮರ್ಶಕರ ಗಮನವನ್ನೂ ಸೆಳೆದಿತ್ತು. ಈ ಪುಸ್ತಕದ ಕಥನ ವೈಖರಿ, ಈ ಪುಸ್ತಕಕ್ಕಾಗಿ ಲೇಖಕರು ನಡೆಸಿದ್ದ ಸಿದ್ಧತೆಗಳೂ ಹಲವು ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಕೃತಿಯ ಕುರಿತು ಪ್ರಕಟವಾದ ಎರಡು ಪ್ರಮುಖ ವಿಮರ್ಶೆಗಳ ಆಯ್ದ ಭಾಗವನ್ನು ಇಲ್ಲಿ ಸಂಗ್ರಹಿಸಲಾಗಿದೆ.