ED ಇಕ್ಕಳದಲ್ಲಿ ಮಾಜಿ ವಿಶ್ವ ಸುಂದರಿ -ಸದನದಲ್ಲಿ ಅಕ್ಷರಶಃ ರಣಚಂಡಿಯಾದ ಜಯಾಬಚ್ಚನ್​!


ಇಷ್ಟೂ ದಿನ ಸಿನಿಮಾ, ಜಾಹೀರಾತು, ಬ್ಯೂಟಿ ಮೇಳಗಳು ಅಂತಾ ಬ್ಯೂಸಿಯಾಗಿದ್ದ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಇವತ್ತು ಇಡಿ ಕಚೇರಿಯಲ್ಲಿ ಪ್ರತ್ಯಕ್ಷಳಾಗಿದ್ಲು. 5 ವರ್ಷದ ಹಿಂದೆ ಸದ್ದು ಮಾಡಿದ್ದ ಪ್ರಕರಣದ ವಿಚಾರಣೆಗೆ ಹಾಜರಾಗಿದ್ರು. ಬರೀ ಐಶ್ವರ್ಯ ರೈ ಮಾತ್ರವಲ್ಲ, ಇಡೀ ಬಚ್ಚನ್ ಕುಟುಂಬದ ಸಂಪತ್ತಿನ ಮೇಲೆಯೇ ಈಗ ಅಧಿಕಾರಿಗಳ ಕಣ್ಣು ಬಿದ್ದಿದೆ. ಒಂದು ಕಾಲದ ಮಿಸ್​ವರ್ಲ್ಡ್​ಗೆ ಸುತ್ತುಕೊಂಡಿರುವ, ಆ ಉರುಳಾದ್ರೂ ಯಾವುದು?

ಐಶ್ವರ್ಯಾ ರೈ, ಮಾಜಿ ವಿಶ್ವ ಸುಂದರಿ… ತನ್ನ ಸೌಂದರ್ಯ, ಮಾದಕ ಮೈಮಾಟದ ಮೂಲಕವೇ ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ಗೆದ್ದಿದ್ದ ಚೆಲುವೆ. ತನ್ನ ಹಸಿರು ಕಣ್ಣುಗಳ ಜೊತೆಗೆ, ನಕ್ಕರೆ ಮುತ್ತುದುರುವಂತಹ ಮುಖಚಹರೆಯ ಮೂಲಕ ಕಿರಿಯರಿಂದ ಹಿರಿಯರವರೆಗೂ ಬಿಟ್ಟ ಕಣ್ಣು ಬಿಟ್ಟೇ ನೋಡುವಂತೆ ಮಾಡಿದ್ದ ಅಂದಗಾತಿ. ವಿಶ್ವ ಸುಂದರಿಯ ಕಿರೀಟ ಧರಿಸಿ, ಬಾಲಿವುಡ್​ ಸಮುದ್ರಕ್ಕೆ ಇಳಿದ ಬೆಡಗಿ ನಟನೆಯಲ್ಲೂ ಯಶಸ್ವಿಯಾಗಿ ತನ್ನದೇ ಚಾಪು ಮೂಡಿಸಿದ್ದ ಮಾಟಗಾತಿ.. ಕಾಲ ಮೂವ್ ಆಗ್ತಾ ಇದ್ದಂತೆ ಭಾರತ ಚಿತ್ರರಂಗದ ಶೆಹೆನ್ ಶಾ ಅಂತಲೇ ಬಿರುದುಪಡೆದಿರುವ ಬಾಲಿವುಡ್​ ಬಿಗ್​, ಬಿ ಅಮಿತಾಬ್ ಬಚ್ಚನ್​ರ ಪುತ್ರ ಅಭಿಷೇಕ್ ಬಚ್ಚನ್ ಕೈ ಹಿಡಿದ್ರು ಐಶ್ವರ್ಯ.

ಅಮಿತಾಬ್ ಬಚ್ಚನ್ ಮನೆಗೆ ಈ ಮಾಜಿ ವಿಶ್ವ ಸುಂದರಿ ಸೊಸೆಯಾಗಿ ಹೋದಾಗಿನಿಂದ, ಜೀವನ ಸುಖಕರವಾಗಿಯೇ ನಡೀತಾ ಇದೆ. ಮುದ್ದಾದ ಹೆಣ್ಣು ಮಗುವಿಗೂ ಜನ್ಮ ನೀಡಿದ ಐಶ್ವರ್ಯ ತಾಯಿಯಾಗಿಯೂ, ತಮ್ಮ ಕರ್ತವ್ಯವನ್ನ ಅಚ್ಚುಕಟ್ಟಾಗಿ ನಿಭಾಯಿಸ್ತಾನೆ ಇದ್ದಾರೆ. ಆದ್ರೆ, ಬಚ್ಚನ್ ಕುಟುಂಬದ ಸದಸ್ಯೆಯಾಗಿರೋ ಐಶ್ವರ್ಯ ರೈ ಮೇಲೆ ಇಡಿ ಅಧಿಕಾರಿಗಳ ಕೆಂಗಣ್ಣು ಬಿದ್ದಿದೆ.

ಮಾಜಿ ವಿಶ್ವಸುಂದರಿ ಐಶ್ವರ್ಯ ರೈಗೆ ‘ಪನಾಮಾ’ ಉರುಳು!
2016ರಲ್ಲಿ ಯುಕೆಯಲ್ಲಿ ಪನಾಮಾ ಕಾನೂನು ಸಂಸ್ಥೆಯೊಂದರ 11.5 ಮಿಲಿಯನ್​ ಕೋಟಿ ತೆರಿಗೆಗೆ ಸಬಂಧಪಟ್ಟ ದಾಖಲೆಗಳು ಸೋರಿಕೆಯಾಗಿದ್ದವು. ಇದೇ ಪನಾಮ ಪೇಪರ್​​​​​ನಲ್ಲಿ 500 ಭಾರತೀಯ ಖ್ಯಾತನಾಮರ ಹೆಸರುಗಳು ಕೂಡ ಲೀಕ್ ಆಗಿತ್ತು. ಅದರಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್​ ಕುಟುಂಬಸ್ಥರ ಹೆಸರೂ ಇರುವುದು ಕೂಡ ಇದೇ ಸಂದರ್ಭದಲ್ಲಿ ಬಯಲಾಗಿತ್ತು. ಈ ಹಿನ್ನೆಲೆ ಐಶ್ವರ್ಯಾ ರೈಗೂ ಇಡಿ ಸಮನ್ಸ್​ ಜಾರಿ ಮಾಡಿತ್ತು.

ಐಶ್ವರ್ಯ ರೈ ಬಚ್ಚನ್​​ಗೆ ಜಾರಿ ನಿರ್ದೇಶನಾಲಯ ಸಮನ್ಸ್‌
ಇ.ಡಿ ಅಧಿಕಾರಿಗಳ ಎದುರು ಓಡೋಡಿ ಬಂದ ಬ್ಯೂಟಿ ಕ್ವೀನ್
ಪನಾಮಾ ಪೇಪರ್​​ನಲ್ಲಿ ಯಾರದ್ದೆಲ್ಲಾ ಹೆಸರು ರಾರಾಜಿಸುತ್ತಿದ್ದವೋ, ಅವರೆಲ್ಲರ ಮೇಲೆ ತೆರಿಗೆ ವಂಚನೆ ಮಾಡಿರುವ ಆರೋಪ ಇದೆ. ವಿದೇಶದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕೂಡಿಟ್ಟ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಾಲಿವುಡ್‌ ಸ್ಟಾರ್‌ ಅಮಿತಾಭ್ ಬಚ್ಚನ್ ಸೊಸೆ ಐಶ್ವರ್ಯಾ ರೈಗೆ ಸಮನ್ಸ್​ ನೀಡಿದ್ರು. ಇಡಿ ಸಮನ್ಸ್​​ ಹಿನ್ನೆಲೆ ಮಾಜಿ ವಿಶ್ವ ಸುಂದರಿ ಮಧ್ಯಾಹ್ನ 2.30ರ ಸುಮಾರಿಗೆ ಐಶ್ವರ್ಯ ರೈ ಇಡಿ ಅಧಿಕಾರಿಗಳ ಮುಂದೆ ಹಾಜಾರಾಗಿದ್ದಾರೆ.

ಎರಡು ಬಾರಿ ವಿಚಾರಣೆ ಮುಂದೂಡಿದ್ದ ಐಶ್ವರ್ಯ..!
ವಿದೇಶದಲ್ಲಿ ಅಕ್ರಮವಾಗಿ ಸಂಪತ್ತು ಮಾಡಿರುವ ಆರೋಪದ ಮೇಲೆ ಐಶ್ವರ್ಯ ರೈಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹಿಂದೆ ಎರಡು ಬಾರಿ ನೋಟಿಸ್ ನೀಡಿದ್ರು. ಎರಡು ಬಾರಿಯೂ ಐಶ್ವರ್ಯ ಅವರು ವಿಚಾರಣೆಗೆ ಕಾಲವಕಾಶ ಕೋರಿದ್ದರು. ಆದ್ರೆ, ಮೂರನೇ ಬಾರಿ ಅಂದ್ರೆ ಇಂದು ವಿಚಾರಣೆಗೆ ಹಾಜರಾಗಲೇಬೇಕೆಂದು, ಇಡಿ ಬಿಗಿ ಸರಪಳಿ ಹಾಕಿತ್ತು. ಮುಂದೆ ಹೆಚ್ಚು ಕಡಿಮೆ ಆಗಬಾರದು ಅಂತಾ ಎಚ್ಚೆತ್ತ ಐಶು ಇಂದು ಇ.ಡಿ ಕಚೇರಿಯಲ್ಲಿ ಹಾಜರಾಗಿದ್ದರು ಇನ್ನು, ಇಡಿ ಅಧಿಕಾರಿಗಳು ಐಶ್ವರ್ಯ ರೈ ವಿರುದ್ಧ ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆ್ಯಕ್ಟ್​ ಅಡಿಯಲ್ಲಿ, ಮನಿ ಲ್ಯಾಂಡರಿಂಗ್ ಕೇಸ್ ದಾಖಲು ಮಾಡಿದ್ದಾರೆ ಅನ್ನೋ ಮಾಹಿತಿ ಇದೆ.

ಇಂದು ವಿಚಾರಣೆಗೆ ಹಾಜಾರಾದ ಐಶ್ವರ್ಯ ರೈಗೆ ಇಡಿ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ವಿದೇಶದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕೂಡಿಟ್ಟ ಆರೋಪದ ಮೇಲೆ ಪ್ರಶ್ನೆ ಮಾಡಿದ್ದಾರೆ. ವಿದೇಶದಲ್ಲಿ ನಡೆಸುತ್ತಿರುವ ಬಿಸಿನೆಸ್, ಕಟ್ಟಿರುವ ತೆರಿಗೆ, ಅಲ್ಲದೆ ವಿದೇಶಗಳಿಂದ ಪಡೆದ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಐಶ್ವರ್ಯಾ ರೈ, ತಾನು 15 ವರ್ಷಗಳ ವಿದೇಶಿ ಪಾವತಿಗಳ ಕುರಿತು ಈಗಾಗಲೇ ದಾಖಲೆಯನ್ನ ಇಡಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಖ್ಯಾತನಾಮರ ‘ಬಂಡವಾಳ’ ಬಯಲಾಗಿದ್ದೇಗೆ..?
ತಮ್ಮ ತಮ್ಮ ದೇಶದಲ್ಲಿ ಮಾತ್ರವಲ್ಲ , ಸಾಗರದಾಚೆಯಲ್ಲಿ ಸಂಪತನ್ನ ಬಚ್ಚಿಟ್ಟಿದ್ದ 2 ಲಕ್ಷದ 14 ಸಾವಿರದ 488 ಮಂದಿಗೆ ಸಂಬಂಧಿಪಟ್ಟಿದ್ದ ಸರಿಸುಮಾರು ಹನ್ನೊಂದೂವರೆ ಮಿಲಿಯನ್ ನಷ್ಟು ಅವ್ಯವಹಾರದ ದಾಖಲೆಗಳ ಮಾಹಿತಿಯನ್ನ ಪನಾಮಾ ಮೂಲದ ಕಾನೂನು ಸಂಸ್ಥೆ ಹಾಗೂ ಸೇವಾ ಕಂಪನಿ ಮೊಸ್ಸಾಕ್ ಫೋನ್ಸೆಕಾ 2015ರಲ್ಲಿ ಗುಪ್ತವಾಗಿ ಸಂಗ್ರಹಿಸಿತ್ತು. ವಿಶ್ವದ ಹಲವು ನಾಯಕರು, ಉದ್ಯಮಿಗಳು, ತೆರಿಗೆ ವಂಚನೆ ಮಾಡಿರುವ ಮ್ಯಾಟರ್​​ ರನ್ನ ಇದು ಒಳಗೊಂಡಿತ್ತು. ಈ ದಾಖಲೆಯನ್ನ ಜಾನ್ ಡೇ ಎಂಬ ಅನಾಮಧೇಯ ವ್ಯಕ್ತಿಯ ಮೂಲಕ ಜರ್ಮನಿಯ ಪತ್ರಿಕೆ ಸುಡ್ಡೆಚ್ ಝೈತುಂಗ್ ಪಡೆದುಕೊಂಡು, ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸುದ್ದಿಯನ್ನ ಪ್ರಕಟ ಮಾಡುತ್ತೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಉಂಟು ಮಾಡಿತ್ತು.

ಇದೇ ಪನಾಮ ಪೇಪರ್ಸ್​​ನಲ್ಲಿ 500 ಮಂದಿ ಭಾರತೀಯರ ಹೆಸರು ಕೂಡ ಇದ್ದ ಕಾರಣ, ದೇಶದಲ್ಲೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ಮಾಹಿತಿಯ ಮೇಲೆ ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ICIJ ಸಹಾಯದಿಂದ ಸರಿಸುಮಾರು 80 ದೇಶಗಳ 107 ತನಿಖಾ ಪತ್ರಕರ್ತತರು ಒಂದು ವರ್ಷಗಳ ಸೋರಿಕೆಯಾದ ಮಾಹಿತಿಯ ಸುತ್ತಾ ತನಿಖೆ ನಡೆಸಿದ್ರು. ಇದೇ ಪನಾಮ ಪೇಪರ್​ನಿಂದಲೇ ಇದೀಗ ದೊಡ್ಡವರ ಬಂಡವಾಳ ಬಯಲಾಗಿದ್ದು. ಇದೇ ಪನಾಮ ಪೇಪರ್ ಇಂದು ವಿಶ್ವದ ಮಾಜಿ ಸುಂದರಿಯು ತನಿಖಾಧಿಕಾರಿಗಳ ವಿಚಾರಣೆಯ ಪ್ರವಾಹವನ್ನ ಕೂಡ ಎದುರಿಸಬೇಕಾಯಿತು. ಈ ಪೇಪರ್​ನಲ್ಲಿ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ನಟ ಅಜಯ್ ದೇವಗನ್ ಸೇರಿದಂತೆ ಅನೇಕ ಭಾರತೀಯರ ಹೆಸರು ಇದೆ. ಅಲ್ಲದೇ ವಿಶ್ವದ ಅಗ್ರಗಣ್ಯ ನಾಯಕರು, ಸ್ಟಾರ್ ಕ್ರೀಡಾಪಟುಗಳು, ಉದ್ಯಮಿಗಳು ಹೆಸರು ಕೂಡ ಇದೆ.

ಲಿಸ್ಟ್​​ನಲ್ಲಿರುವ ಖ್ಯಾತನಾಮರು ಯಾರ್ಯಾರು?
ಪಾಕಿಸ್ತಾನದ ನವಾಜ್​ ಷರೀಫ್​, ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್, ಅರ್ಜೆಂಟೀನಾ ಅಧ್ಯಕ್ಷ ಮಾರಿಶಿಯೊ, ಐಸ್​​ಲ್ಯಾಂಡ್ ಪ್ರಧಾನಿ ಸಿಗ್ಮಂಡೂರ್ ಗುನ್ಲಾಗ್ಸನ್, ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ನಟ ಜಾಕಿ ಚಾನ್, ಇಷ್ಟೇ ಅಲ್ಲ, ಚೀನಾ ಪ್ರಧಾನಿ ಜಿನ್​ಪಿಂಗ್​ ಕುಟುಂಬದವರ ಹೆಸರು ಕೂಡ ಇದೇ ಪನಾಮ ಪೇಪರ್ಸ್​​ನಲ್ಲಿದೆ.

ಇ.ಡಿ ಕರೆಯಿಂದ ಕಳವಳಕ್ಕೀಡಾಯ್ತಾ ಬಚ್ಚನ್ ಫ್ಯಾಮಿಲಿ!
ರಾಜ್ಯಸಭೆಯಲ್ಲಿ ಶಾಂತಿ ಕಳೆದುಕೊಂಡ ಜಯಾಬಚ್ಚನ್!
ಇನ್ನು, ಇ.ಡಿ ಕರೆಯಿಂದ ಬಾಲಿವುಡ್ ಬಿಗ್​ ಬಿ ಅಮಿತಾಭ್​ ಬಚ್ಚನ್ ಕುಟುಂಬ ಅಕ್ಷರಶಃ ಕಳವಳಕ್ಕೀಡಾದಂತಿದೆ. ಯಾಕಂದ್ರೆ, ಅತ್ತ ಇ.ಡಿ ಅಧಿಕಾರಿಗಳು ಸೊಸೆಯ ವಿಚಾರಣೆ ನಡೆಸಿದ್ರೆ, ಇತ್ತ ರಾಜ್ಯಸಭೆಯಲ್ಲಿ ಸಂಸದೆ ಜಯಾಬಚ್ಚನ್ ಅಕ್ಷರಶಃ ರೌದ್ರಾವತಾರ ತಾಳಿದ್ದರು. ಯಾವುದೋ ವಿಚಾರದ ಬಗ್ಗೆ ಮಾತನಾಡಲು ಎದ್ದು ನಿಂತು ಸುಖಾಸುಮ್ಮನೆ ಅಲ್ಲಿದ್ದವರ ವಿರುದ್ಧ ಕೆಂಡಾಮಂಡಲರಾಗಿದ್ದರು. ಜಯಾಬಚ್ಚನ್​ರವರ ಫ್ರಸ್ಟ್ರೇಷನ್ ವೈಯಕ್ತಿಕ ಕಾರಣಕ್ಕೆ ಅನ್ನೋದು ಎದ್ದು ಕಾಣುವಂತಿತ್ತು.

ಜಯಾ ಬಚ್ಚನ್: ನಮಗೆ ನ್ಯಾಯ ಬೇಕಿದೆ. ನಮಗೆ ಬೇಕಿರುವ ನ್ಯಾಯವನ್ನು ನಾವು ಅವರಿಂದ ಅಪೇಕ್ಷಿಸುವುದಿಲ್ಲ. ಆದರೆ, ನಿಮ್ಮಿಂದ ಅಪೇಕ್ಷಿಸಬಹುದೇ? ಈ ಸದನದಲ್ಲಿ ಕುಳಿತಿರುವ ಸದಸ್ಯರ ರಕ್ಷಣೆ ಮಾಡ್ತೀರೋ? ಅಥವಾ ಹೊರಗೆ ಕುಳಿತಿರುವ 12 ಮಂದಿಯ ರಕ್ಷಣೆಯೋ?
ಸ್ಪೀಕರ್​: ಮೇಡಂ, ನೀವು ನಾರ್ಕೋಟಿಕ್​ ಬಿಲ್ ಬಗ್ಗೆ ಮಾತನಾಡಬೇಕಿದೆ. ನೀವು ಅದರ ಬಗ್ಗೆ ಮಾತನಾಡ್ತಿಲ್ಲ
ಜಯಾ ಬಚ್ಚನ್ : ನಾನು ಮಾತನಾಡ್ತೇನೆ.. ಮಾತನಾಡ್ತೇನೆ
ಸ್ಪೀಕರ್​ : ನಿಮಗೆ ಆ ಬಿಲ್​​ ಮೇಲೆ ಇಂಟರೆಸ್ಟ್​ ಇಲ್ಲ ಅನ್ನಿಸುವಂತಿದೆ
ಜಯಾ ಬಚ್ಚನ್ : ಇದು ಮಾತನಾಡಲು ನನಗೆ ಸಿಕ್ಕಿರುವ ಸಮಯ. ಚರ್ಚೆ ಮಾಡಲು ಎಷ್ಟೆಷ್ಟು ದೊಡ್ಡ ದೊಡ್ಡ ವಿಷಯಗಳಿವೆ. ಆದ್ರೆ, ಯಾವುದೋ ಸಣ್ಣ ವಿಚಾರದ ಬಗ್ಗೆ ಡಿಸ್ಕಸ್ ಮಾಡಲು ನಮ್ಮನ್ನು 3-4 ಗಂಟೆ ಕಾಯಿಸಿದ್ದೀರಿ.. ಏನಾಗ್ತಿದೆ ಇಲ್ಲಿ? ಏನಾಗ್ತಿದೆ? ಇದು ಸರಿಯಿಲ್ಲ.. ನಾನು ನಿಮ್ಮೆಲ್ಲರಿಗೂ ಒಂದು ಮಾತ್​ ಕೇಳ್ತೀನಿ.. ನೀವು ಯಾರ ಮುಂದೆ ನಿಮ್ಮ ಕಿನ್ನರಿ ಬಾರಿಸುತ್ತಿದ್ದೀರಿ? ನೋಡಿ..ನಿಮ್ಮ ಕೆಟ್ಟ ದಿನಗಳು ಬಹಳ ಹತ್ತಿರದಲ್ಲಿವೆ..

ಒಟ್ಟಾರೆ, ಪನಾಮಾ ಪೇಪರ್ ಹಗರಣ​ ಯಾವುದೇ ಕಾರಣಕ್ಕೂ ಬಚ್ಚನ್ ಕುಟುಂಬದ ಬೆಂಬಿಡುವಂತೆ ಕಾಣ್ತಿಲ್ಲ. ಐಶ್ವರ್ಯಾ ರೈ ಬಚ್ಚನ್ ಬಂದಿರುವ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸಿ ಕಂಟಕದಿಂದ ಪಾರಾಗ್ತಾರಾ ಅನ್ನೋದೇ ಈಗಿರೋ ಯಕ್ಷ ಪ್ರಶ್ನೆ.

ಭಾರತೀಯ ಚಿತ್ರರಂಗದಲ್ಲಿ ಅಮಿತಾಭ್ ಬಚ್ಚನ್ ಕುಟುಂಬಕ್ಕೆ ಇರುವ ತೂಕನೇ ಬೇರೆ. ಆದ್ರೆ, ಇಂತಹ ವಿವಾದದಲ್ಲಿ ಸಿಕ್ಕಿಕೊಳ್ಳೋದ್ರಿಂದ ಇವರೂ ಅಕ್ರಮವೆಸಗಿದ್ದಾರಾ ಅನ್ನೋ ಪ್ರಶ್ನೆ ಮೂಡುವಂತಾಗುತ್ತದೆ. ತಮ್ಮ ಕುಟುಂಬದ ಮೇಲಿರುವ ಇಂತಹ ಆರೋಪಗಳಿಗೆ ಇಂದು ಐಶ್ವರ್ಯ ರೈ , ಅಮಿತಾಭ್ ಬಚ್ಚನ್ ಹತ್ತಾರು ಸಮಾಜಾಯಿಸಿ ಕೊಡಬಹುದು. ಆದ್ರೆ, ಅಸಲಿಯತ್ತೇನಿದ್ರೂ ಸ್ಪಷ್ಟವಾಗಬೇಕಾದ್ರೆ ಇಡಿ ಅಧಿಕಾರಿಗಳ ತನಿಖೆ ಮಗಿಯುವವರೇಗೆ ಕಾಯಲೇ ಬೇಕಾಗಿದೆ. ಒಂದು ವೇಳೆ ತೆರಿಗೆ ವಂಚಿಸಿದ್ದು ನಿಜವೇ ಆದ್ರೆ, ಅಡಿಕೆಗೆ ಹೋದ ಮಾನ, ಆನೆ ಕೊಟ್ರೂ ಬರಲ್ಲ ಅನ್ನೋ ಗಾದೆ ನಿಜವಾಗೋದು ಪಕ್ಕಾ.

News First Live Kannada


Leave a Reply

Your email address will not be published. Required fields are marked *