#Election ಇಂದು ಅಖಿಲೇಶ್, ಸಿಧು, ಕ್ಯಾಪ್ಟನ್, ಚನ್ನಿ ಭವಿಷ್ಯ ನಿರ್ಧಾರ


ಇಂದು ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ವೋಟಿಂಗ್ ಡೇ. ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದ್ರೆ, ಉತ್ತರ ಪ್ರದೇಶದಲ್ಲಿ 3ನೇ ಹಂತದ ಮತದಾನ ಶುರುವಾಗಿದೆ. ಇಂದಿನ ಮತದಾನ ಅಖಿಲೇಶ್ ಸೇರಿದಂತೆ ಹಲವಾರು ಘಟಾನುಘಟಿಗಳು ಭವಿಷ್ಯ ನಿರ್ಧರಿಸಲಿದೆ.

59 ಕ್ಷೇತ್ರ.. 627 ಅಭ್ಯರ್ಥಿಗಳು.. 2.15 ಕೋಟಿ ಮತದಾರರು
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ 3ನೇ ಹಂತದ ಮತದಾನ ಪ್ರಕ್ರಿಯೆ ಶುರುವಾಗಿದೆ. 16 ಜಿಲ್ಲೆಗಳ 59 ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 2 ಕೋಟಿ 15 ಲಕ್ಷ ಮತದಾರರು 627 ಅಭ್ಯರ್ಥಿಗಳ ಹಣೆಬರಹ ಬರೆಯುತ್ತಿದ್ದಾರೆ.

8 ಜಿಲ್ಲೆಗಳಲ್ಲಿ ಯಾದವ-ಮುಸ್ಲಿಂ ಪ್ರಾಬಲ್ಯ
16 ಜಿಲ್ಲೆಗಳ ಪೈಕಿ 8ರಲ್ಲಿ ಮುಸ್ಲಿಂ ಹಾಗೂ ಯಾದವ ಮತಗಳೇ ನಿರ್ಣಾಯಕ. 59 ಕ್ಷೇತ್ರಗಳ ಪೈಕಿ 29ರಲ್ಲಿ ಯಾದವ-ಮುಸ್ಲಿಂ ಜನಸಂಖ್ಯೆ ಶೇ.40ರಷ್ಟಿದೆ. ಹೀಗಾಗಿ, ಈ ಹಂತದಲ್ಲಿ ಎಸ್ಪಿ ಮುನ್ನಡೆ ಪಡೆಯುತ್ತದೆ ಎಂಬುದು ಸಮಾಜವಾದಿ ಪಕ್ಷದ ವಿಶ್ವಾಸ. ಮತ್ತೊಂದೆಡೆ, 59 ಕ್ಷೇತ್ರಗಳಲ್ಲಿ ಓಬಿಸಿ ಹಾಗೂ ಮೇಲ್ವರ್ಗದ ಬ್ರಾಹ್ಮಣ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಲೋಧ, ಕಾಯಸ್ಥ, ದಲಿತ ಜಾಟ್ ಮತಗಳು ಕೂಡ ನಿರ್ಣಾಯಕವಾಗಿವೆ. ಈ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈ ಸಮುದಾಯಗಳು ತಮ್ಮ ಪಕ್ಷದ ಪರ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ಬಿಜೆಪಿ ನಾಯಕರದ್ದು.

ಇಂದೇ ನಿರ್ಧಾರವಾಗಲಿದೆ ಅಖಿಲೇಶ್ ಭವಿಷ್ಯ..!
ಈ ಬಾರಿ ಬಿಜೆಪಿಗೆ ಭಾರೀ ಪ್ರಮಾಣದಲ್ಲಿ ಸವಾಲೊಡ್ಡಿರುವ ಎಸ್ಪಿ ಮುಖ್ಯಸ್ಥ ಹಾಗೂ ಪಕ್ಷದ ಸಿಎಂ ಅಭ್ಯರ್ಥಿ ಅಖಿಲೇಶ್ ಯಾದವ್ ಸ್ಪರ್ಧಿಸುವ ಕರ್ಹಾಲ್ ಕ್ಷೇತ್ರದಲ್ಲಿ ಇಂದೇ ಮತದಾನ. ಬಿಜೆಪಿ ನಾಯಕರು ಅಖಿಲೇಶ್ ಕೋಟೆಗೆ ಲಗ್ಗೆ ಇಡಲು ಹರಸಾಹಸ ಪಟ್ಟಿದ್ದ್ದು, ಕೇಂದ್ರ ಸಚಿವ ಬಘೇಲ್ ಅವರನ್ನ ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ 1.25 ಲಕ್ಷ ಯಾದವ, 18 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಎಸ್ಪಿ ಪಕ್ಷ ಸ್ಥಾಪನೆಯಾದಾಗಿನಿಂದ ಈವರೆಗೆ ಒಂದು ಬಾರಿ ಮಾತ್ರ ಇಲ್ಲಿ ಸೋತಿದೆ. ಈ ಬಾರಿ ಅಖಿಲೇಶ್‌ರನ್ನ ಸೋಲಿಸಲೇಬೇಕೆಂದು ಬಿಜೆಪಿ ಪಣ ತೊಟ್ಟಿದೆ.

ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಜಶ್ವಂತ್‌ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇಲ್ಲಿಯೂ ಇಂದೇ ಮತದಾನ. ಸಲ್ಮಾನ್ ಖುರ್ಷಿದ್ ಪತ್ನಿ ಲೂಯಿಸ್ ಖುರ್ಷಿದ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿರೋ ಫಾರೂಕಾಬಾದ್ ಸದರ್ ಕ್ಷೇತ್ರದಲ್ಲೂ ಇಂದೇ ಮತದಾನ. ಮಾಜಿ ಐಪಿಎಸ್ ಅಧಿಕಾರಿ ಅಸಿಮ್ ಅರುಣ್ ಬಿಜೆಪಿಯಿಂದ ಕನ್ನೌಜ್ ಸದರ್‌ನಿಂದ ಸ್ಪರ್ಧಿಸಿದ್ದು, ಉತ್ತರ ಪ್ರದೇಶದ ಸಚಿವ ರಾಮನರೇಶ್ ಅಗ್ನಿಹೋತ್ರಿ ಕೂಡ ಈ ಹಂತದಲ್ಲಿ ಕಣದಲ್ಲಿದ್ದಾರೆ. 2017ರಲ್ಲಿ 59 ಸ್ಥಾನಗಳ ಪೈಕಿ ಬಿಜೆಪಿ 49, ಎಸ್‌ಪಿ 9 ಹಾಗೂ ಕಾಂಗ್ರೆಸ್ 1 ಸ್ಥಾನ ಪಡೆದಿದ್ದರೆ, ಬಿಎಸ್ಪಿ ಶೂನ್ಯ ಸಂಪಾದನೆ ಮಾಡಿತ್ತು.

ಪಂಜಾಬ್‌ನಲ್ಲಿಂದು ಒಂದೇ ಹಂತದಲ್ಲಿ ಮತದಾನ
ಪಂಚರಾಜ್ಯ ಚುನಾವಣೆಗಳ ಪೈಕಿ ಉತ್ತರ ಪ್ರದೇಶ ಬಿಟ್ಟರೆ ಹೆಚ್ಚು ಗಮನ ಸೆಳೆದಿರೋ ಮತ್ತೊಂದು ರಾಜ್ಯ ಪಂಜಾಬ್. ಇಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಎಲ್ಲಾ 117 ಕ್ಷೇತ್ರಗಳಲ್ಲಿ 1,304 ಅಭ್ಯರ್ಥಿಗಳ ಭವಿಷ್ಯ ಇಂದು ಮತಯಂತ್ರ ಸೇರಲಿದೆ. 2.14 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಪ್ರಮುಖ ಹುರಿಯಾಳುಗಳು

  • ಪ್ರಕಾಶ್ ಸಿಂಗ್ ಬಾದಲ್-ಲಂಬಿ
  • ಕ್ಯಾಪ್ಟನ್ ಅಮರಿಂದರ್ ಸಿಂಗ್-ಪಟಿಯಾಲಾ
  • ರಾಜಿಂದರ್ ಕೌರ್ ಬಟ್ಟಾಲ್-ಲೆಹ್ರಾ ಗಾಗಾ
  • ಚರಣ್‌ಜಿತ್ ಸಿಂಗ್ ಚನ್ನಿ-ಚಮ್ಕೌರ್ ಸಾಹಿಬ್ & ಭದೌರ್
  • ನವಜೋತ್ ಸಿಂಗ್ ಸಿಧು-ಅಮೃತಸರ (ಪೂರ್ವ)
  • ಬಿಕ್ರಮ್ ಸಿಂಗ್ ಮಜಿತಿಯಾ-ಅಮೃತಸರ (ಪೂರ್ವ)
  • ಡಾ.ಮನೋಹರ್ ಸಿಂಗ್-ಬಸ್ಸಿ ಪಠಾಣ
  • ಕೈ, ಕಮಲಕ್ಕೆ ಪೊರಕೆಯದ್ದೇ ಭಯ!

2017ರ ಚುನಾವಣೆಯಲ್ಲಿ ಕಾಂಗ್ರೆಸ್ 77 ಕ್ಷೇತ್ರಗಳಲ್ಲಿ ಗೆದ್ದು ಗದ್ದುಗೆ ಏರಿತ್ತು. ಇನ್ನು, ಆಪ್ 20ರಲ್ಲಿ ಗೆದ್ದು ವಿರೋಧ ಪಕ್ಷ ಸ್ಥಾನ ಅಲಂಕರಿಸಿತ್ತು. ಶಿರೋಮಣಿ ಅಕಾಲಿದಳ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದ್ರೆ, ಈ ಬಾರಿ ಕೇಜ್ರಿವಾಲ್ ಕಾಂಗ್ರೆಸ್ ಹಾಗೂ ಬಿಜೆಪಿ ನಿದ್ದೆಗೆಡಿಸಿದ್ದು, ಸ್ಪಲ್ಪ ಹೆಚ್ಚುಕಡಿಮೆಯಾದ್ರೂ ಆಪ್ ಪಂಜಾಬ್ ಗದ್ದುಗೆ ಏರೋದ್ರಲ್ಲಿ ಎರಡನೇ ಮಾತೇ ಇಲ್ಲ. ಒಟ್ಟಿನಲ್ಲಿ ಇಂದಿನ ಮತದಾನ ಕಾಂಗ್ರೆಸ್, ಬಿಜೆಪಿ ಹಾಗೂ ಎಸ್ಪಿಗೆ ಅತ್ಯಂತ ಪ್ರಮುಖವಾಗಿದ್ದು, ಸಿಎಂ ಅಭ್ಯರ್ಥಿಗಳ ಪ್ರತಿಷ್ಠೆ ಇಂದಿನ ಮತದಾನದಲ್ಲಿ ಅಡಗಿದೆ. ಆದ್ರೆ, ಮತದಾರ ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ.

News First Live Kannada


Leave a Reply

Your email address will not be published. Required fields are marked *