Elon Musk Advise To Tech Companies: ಒಂದಿಷ್ಟು ತಾಳ್ಮೆ ಸಮಾಧಾನದಿಂದ ಉದ್ಯೋಗಕಡಿತ ಮಾಡುತ್ತಿರುವ ಟೆಕ್ಕಿ ಕಂಪನಿಗಳಿಗೆ ಎಲಾನ್ ಮಸ್ಕ್ ಭಯಂಕರ ಸಲಹೆಯೊಂದನ್ನು ನೀಡಿದ್ದಾರೆ. ಬಹಳ ಮಂದಿರುವ ಅಪ್ರಯೋಜಕ ಉದ್ಯೋಗಿಗಳನ್ನು ಕಿತ್ತುಹಾಕುವಂತೆ ಅವರು ಕರೆ ನೀಡಿದ್ದಾರೆ.

ಎಲಾನ್ ಮಸ್ಕ್
ಲಂಡನ್: ಟೆಕ್ಕೀ ಜಗತ್ತಿನಲ್ಲಿ ಬಹಳ ಸಂಚಲನಗಳಾಗಿವೆ. ಒಂದೆಡೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಯಾಂತ್ರಿಕ ಬುದ್ಧಿಮತ್ತೆ (AI) ನಮ್ಮ ನಮ್ಮ ತಂತ್ರಜ್ಞಾನದಲ್ಲಿ ಮಿಳಿತಗೊಳ್ಳುತ್ತಾ ಹೋಗುತ್ತಿದೆ. ಇನ್ನೊಂದೆಡೆ ತಂತ್ರಜ್ಞಾನ ಕಂಪನಿಗಳು ಎಗ್ಗಿಲ್ಲದೇ ಜನರನ್ನು ಉದ್ಯೋಗದಿಂದ ಕಿತ್ತುಬಿಸಾಡುತ್ತಿವೆ. ಈ ಯಾಂತ್ರಿಕ ಬುದ್ಧಿಮತ್ತೆ ಉಚ್ಛ್ರಾಯ ಸ್ಥಿತಿಗೆ ಹೋಗುವ ಹಾದಿಯಲ್ಲಿ ಅದೆಷ್ಟು ಉದ್ಯೋಗಿಗಳು ನಿರುಪಯುಕ್ತರ ಸಾಲಿಗೆ ಸೇರಿ ಕೆಲಸ ಕಳೆದುಕೊಳ್ಳುತ್ತಾರೋ ಆ ದೇವರೇ ಬಲ್ಲ. ಈಗೇನೋ ಒಂದಿಷ್ಟು ತಾಳ್ಮೆ ಸಮಾಧಾನದಿಂದ ಉದ್ಯೋಗಕಡಿತ ಮಾಡುತ್ತಿರುವ ಟೆಕ್ಕಿ ಕಂಪನಿಗಳಿಗೆ ಎಲಾನ್ ಮಸ್ಕ್ ಭಯಂಕರ ಸಲಹೆಯೊಂದನ್ನು ನೀಡಿದ್ದಾರೆ. ಟ್ವಿಟ್ಟರ್ನಲ್ಲಿ ನೋಡನೋಡುತ್ತಿದ್ದಂತೆಯೇ ಶೇ. 80ರಷ್ಟು ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಟ್ಟಿದ್ದ ಎಲಾನ್ ಮಸ್ಕ್ ಈಗ ಅಂಥದ್ದೇ ಕೆಲಸ ಮಾಡುವಂತೆ ಸಿಲಿಕಾನ್ ವ್ಯಾಲಿ ಕಂಪನಿಗಳಿಗೆ ಸಲಹೆ ನೀಡಿದ್ದಾರಂತೆ.
ಸಿಲಿಕಾನ್ ವ್ಯಾಲಿ ಎಂಬುದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಒಂದು ಪ್ರದೇಶ. ಬಹುತೇಕ ಅಮೆರಿಕನ್ ಟೆಕ್ ಕಂಪನಿಗಳು ಇಲ್ಲಿಯೇ ನೆಲಸಿರುವುದು. ಇನ್ನು, ಎಲಾನ್ ಮಸ್ಕ್ ವಿಚಾರಕ್ಕೆ ಮರಳುವುದಾದರೆ, ಅವರು ಲಂಡನ್ನಲ್ಲಿ ನಡೆದ ಸಿಇಒ ಕೌನ್ಸೆಲ್ ಸಮಿಟ್ನಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಗೆ ನೀಡಿದ ಆನ್ಲೈನ್ ಸಂದರ್ಶನದಲ್ಲಿ ಜಾಬ್ ಕಟ್ ವಿಚಾರದ ಬಗ್ಗೆ ಮಾತನಾಡಿದರು. ಟ್ವಿಟ್ಟರ್ನಲ್ಲಿ ತಾನು ಉದ್ಯೋಗಿಗಳನ್ನು ವಜಾಗೊಳಿಸಿದ ರೀತಿಯಲ್ಲೇ ಬೇರೆ ಕಂಪನಿಗಳೂ ಅನುಸರಿಸಲಿ ಎಂದು ಅವರು ಕರೆ ನೀಡಿದ್ದಾರೆ.
ತಾನು ಟ್ವಿಟ್ಟರ್ ಅನ್ನು ಖರೀದಿಸುವ ಮುನ್ನ ಬಹಳ ಮಂದಿ ಪ್ರಯೋಜನಕ್ಕೆ ಬರುವಂತಿರಲಿಲ್ಲ. ಆದ್ದರಿಂದ ತಾನು ಉದ್ಯೋಗಕಡಿತ ಮಾಡಿದ್ದರಿಂದ ಕಂಪನಿಯ ಪ್ರೊಡಕ್ಟಿವಿಟಿ ಉತ್ತಮಗೊಂಡಿತು ಎಂದು ಎಲಾನ್ ಮಸ್ಕ್ ವಿವರ ನೀಡಿದ್ದಾರೆ.