Emma Chamberlain: ಭಾರತದ ರಾಜರಿಗೆ ಸೇರಿದ ನೆಕ್ಲೇಸ್ ಧರಿಸಿ ಹೆಜ್ಜೆ ಹಾಕಿದ್ರಾ ಖ್ಯಾತ ತಾರೆ? ಏನಿದರ ಇತಿಹಾಸ? | Met Gala 2022 Emma Chamberlain necklace in Met Gala is similar to Bhupinder Singh necklace here is what netizens say


Emma Chamberlain: ಭಾರತದ ರಾಜರಿಗೆ ಸೇರಿದ ನೆಕ್ಲೇಸ್ ಧರಿಸಿ ಹೆಜ್ಜೆ ಹಾಕಿದ್ರಾ ಖ್ಯಾತ ತಾರೆ? ಏನಿದರ ಇತಿಹಾಸ?

ಮಹಾರಾಜ ಭೂಪಿಂದರ್ ಸಿಂಗ್ (ಎಡ ಚಿತ್ರ), ಎಮ್ಮಾ ಚೇಂಬರ್ಲೇನ್ (ಬಲ ಚಿತ್ರ)

Met Gala 2022: ಎಮ್ಮಾ ಚೇಂಬರ್ಲೀನ್ ಧರಿಸಿದ್ದ ನೆಕ್ಲೆಸ್​ ಭಾರತದ ಪಂಜಾಬ್‌ನ ಪಟಿಯಾಲಾದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್‌ಗೆ ಸೇರಿದ್ದು ಎನ್ನಲಾಗಿದೆ. ಕಾರ್ಟಿಯರ್ ವಿನ್ಯಾಸ ಮಾಡಿರುವ ಆ ನೆಕ್ಲೇಸ್ ಧರಿಸಿರುವ ಎಮ್ಮಾ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.

ಅಮೇರಿಕದ ಜನಪ್ರಿಯ ಯುಟ್ಯೂಬ್ ತಾರೆಯಾಗಿರುವ ಎಮ್ಮಾ ಚೇಂಬರ್ಲೇನ್ (Emma Chamberlain) ಪ್ರಸ್ತುತ ಭಾರತದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಇತ್ತೀಚೆಗೆ ಧರಿಸಿದ್ದ ನೆಕ್ಲೆಸ್. ಹೌದು, ಪ್ರಖ್ಯಾತ ಫ್ಯಾಶನ್​ ಕಾರ್ಯಕ್ರಮವಾದ ‘ಮೆಟ್ ಗಾಲಾ 2022’ದಲ್ಲಿ (Met Gala 2022) ಮೊದಲ ಬಾರಿಗೆ ಕಾಣಿಸಿಕೊಂಡ ಎಮ್ಮಾ ವಿಶೇಷ ಬಗೆಯ ದಿರಿಸನ್ನು ಧರಿಸಿದ್ದರು. ಆದರೆ ಅದಕ್ಕಿಂತ ಅವರು ಹೆಚ್ಚು ಸುದ್ದಿಯಾಗಿದ್ದು ತಮ್ಮ ನೆಕ್ಲೇಸ್ ಮೂಲಕ. ಎಮ್ಮಾ ಚೇಂಬರ್ಲೀನ್ ಧರಿಸಿದ್ದ ಆಭರಣ​ ಭಾರತದ ಪಂಜಾಬ್‌ನ ಪಟಿಯಾಲಾದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್‌ಗೆ ಸೇರಿದ್ದು ಎನ್ನಲಾಗಿದೆ. ಕಾರ್ಟಿಯರ್ ವಿನ್ಯಾಸ ಮಾಡಿರುವ ಆ ನೆಕ್ಲೇಸನ್ನು ಧರಿಸಿರುವ ಎಮ್ಮಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿರೋದೇಕೆ? ಏನಿದರ ಇತಿಹಾಸ? ಈ ಕುರಿತ ಮಾಹಿತಿ ಇಲ್ಲಿದೆ.

ಆಭರಣದ​ ಬಗ್ಗೆ ಇತಿಹಾಸ ಏನು ಹೇಳುತ್ತದೆ?

ವರದಿಗಳ ಪ್ರಕಾರ, ಪಟಿಯಾಲದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್ ಡಿ-ಬೀರ್ಸ್ ವಜ್ರಗಳನ್ನು ಹೊಂದಿದ್ದರು. ಅದನ್ನಿಟ್ಟುಕೊಂಡು ನೆಕ್ಲೇಸ್ ತಯಾರಿಸಲು ಅವರು ಕಾರ್ಟಿಯರ್​ಗೆ (ಪ್ರಖ್ಯಾತ ವಿನ್ಯಾಸ ಸಂಸ್ಥೆ) ನೀಡಿದ್ದರು. ನೆಕ್ಲೇಸ್ ಅನ್ನು 1928ರಲ್ಲಿ ತಯಾರಿಸಲಾಯಿತು. ಅದನ್ನು ಪಟಿಯಾಲಾ ನೆಕ್ಲೇಸ್ ಎಂದು ಕರೆಯಲಾಗುತ್ತಿತ್ತು.

ಈ ನೆಕ್ಲೇಸ್​ನ ವಿಶೇಷವೆಂದರೆ ಇದು 2930 ವಜ್ರಗಳು ಮತ್ತು ಕೆಲವು ಬರ್ಮೀಸ್ ಮಾಣಿಕ್ಯಗಳಿಂದ ಅಲಂಕರಿಸಲ್ಪಟ್ಟ ಐದು ಸಾಲುಗಳ ಪ್ಲಾಟಿನಂ ಚೈನ್​ಗಳನ್ನು ಹೊಂದಿದೆ. ತುಸು ಹಳದಿ ಬಣ್ಣದ ಡಿ-ಬೀರ್ಸ್ ವಜ್ರವನ್ನು ಮಧ್ಯದಲ್ಲಿ ಇರಿಸಲಾಗಿದೆ. ಇತಿಹಾಸದಲ್ಲೇ ಅತ್ಯಂತ ದುಬಾರಿ ವೆಚ್ಚದಲ್ಲಿ ತಯಾರಾದ ಆಭರಣ ಇದು ಎನ್ನಲಾಗಿದ್ದು, ಇದರ ತಯಾರಿಕೆಗೆ ಇಂದಿನ ಲೆಕ್ಕದಲ್ಲಿ ಸುಮಾರು 30 ಮಿಲಿಯನ್ ಡಾಲರ್ ವೆಚ್ಚವಾಗಿತ್ತು ಎಂದು ಹೇಳಲಾಗಿದೆ.

1888 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆಯ ಮೂಲಕ ತೆಗೆಯಲಾದ ಈ ವಜ್ರವನ್ನು ಭೂಪಿಂದರ್ ಸಿಂಗ್ 1889ರಲ್ಲಿ ಖರೀದಿಸಿದ್ದರು ಎಂದು ವರದಿಯಾಗಿದೆ. ಆದರೆ 1948 ರಲ್ಲಿ ಪಟಿಯಾಲಾ ರಾಜಮನೆತನದ ಖಜಾನೆಯಿಂದ ಪ್ರಸಿದ್ಧ ಹಾರ ಕಾಣೆಯಾಗಿತ್ತು. 32 ವರ್ಷಗಳವರೆಗೆ ಈ ಹಾರದ ಯಾವುದೇ ಕುರುಹು ಇರಲಿಲ್ಲ.

1982ರಲ್ಲಿ ಸೋಥೆಬಿ ಹರಾಜಿನ ಸಮಯದಲ್ಲಿ ಹಾರವು ನಿಗೂಢವಾಗಿ ಪತ್ತೆಯಾಯಿತು. ಅಚ್ಚರಿಯೆಂದರೆ ಹಾರವು ಅದರ ಮೊದಲಿನ ರೂಪದಲ್ಲಿ ಪತ್ತೆಯಾಗಿರಲಿಲ್ಲ. ಬದಲಾಗಿ ಕೇವಲ ಡಿ-ಬಿಯರ್ಸ್ ವಜ್ರ ಮಾತ್ರ ಹರಾಜಿಗೆ ಲಭ್ಯವಾಗಿತ್ತು. ಕಾರ್ಟಿಯರ್ ಹರಾಜಿನಲ್ಲಿ ವಜ್ರವನ್ನು ಖರೀದಿಸಿತ್ತು. ಲಂಡನ್‌ನ ಪುರಾತನ ವಸ್ತುಗಳ ಅಂಗಡಿಯೊಂದರಲ್ಲಿ ನೆಕ್ಲೇಸ್‌ನ ಒಂದು ಭಾಗ ಪತ್ತೆಯಾಗಿತ್ತು. ಕಾರ್ಟಿಯರ್ ನಂತರ ಹಾರವನ್ನು ಖರೀದಿಸಿ, ಅದರಲ್ಲಿ ನಾಪತ್ತೆಯಾಗಿದ್ದನ್ನು ಪ್ರತಿಕೃತಿಯೊಂದಿಗೆ ಬದಲಾಯಿಸಿತ್ತು.

ಈಗ ವಿವಾದವೇಕೆ?

‘‘ಮೆಟ್​ ಗಾಲಾದಲ್ಲಿ ಪ್ರದರ್ಶಿತವಾದ ನೆಕ್ಲೇಸ್​ನ ಮೂಲವು ಭಾರತದಲ್ಲಿದೆ. ಅದು ಅಚಾನಕ್ಕಾಗಿ ನಾಪತ್ತೆಯಾಗಿ ಹೇಗೇಗೋ ಕಾರ್ಟಿಯರ್​ಗೆ ಸೇರಿದೆ. ದುರದೃಷ್ಟವಶಾತ್ ಜನರಿಗೆ ಇದರ ಬಗ್ಗೆ ಅರಿವಿಲ್ಲ’’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ ನೆಟ್ಟಿಗರು. ಹಳೆಯ ನೆಕ್ಲೇಸ್ ಹಾಗೂ ಈಗಿನ ಹೊಸ ವಿನ್ಯಾಸದ ನೆಕ್ಲೇಸ್​ಗಳ ಚಿತ್ರಗಳನ್ನು ತುಲನೆ ಮಾಡಿ ಚರ್ಚೆಗಳು ನಡೆಯುತ್ತಿವೆ.

‘‘ಭಾರತದ ಅನೇಕ ಆಭರಣಗಳು ಹಾಗೂ ಅಮೂಲ್ಯ ವಸ್ತುಗಳು ಅನಿವಾರ್ಯ ಕಾರಣಗಳಿಂದ ಬೇರೆಯವರಲ್ಲಿದೆ. ಕೊಹಿನೂರ್ ವಜ್ರವೂ ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳನ್ನು ಈಗಲೂ ಅದರ ಮೂಲ ಮಾಲಿಕರಿಗೆ ಹಿಂತಿರುಗಿಸಲಾಗಿಲ್ಲ’’ ಎಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ನೆಟ್ಟಿಗರ ಕೆಲವು ಅಭಿಪ್ರಾಯಗಳು ಇಲ್ಲಿವೆ:

ಭಾರತದ ಪರಂಪರೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದೂ ಹಲವರು ಟ್ವಿಟರ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

TV9 Kannada


Leave a Reply

Your email address will not be published. Required fields are marked *