ಭಾರತ ಮತ್ತು 27 ಯುರೋಪಿಯನ್ ಯೂನಿಯನ್​​ ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಮೊದಲ ಭಾರತ-ಇಯು ಶೃಂಗಸಭೆ ನಿನ್ನೆ ಪ್ರಾರಂಭವಾಗಿದೆ. ಪ್ರಧಾನಿ ಮೋದಿ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಈ ವೇಳೆ.. ಕಳೆದ ವರ್ಷ ರೋಗದಿಂದ ತಮ್ಮ ದೇಶಗಳು ತತ್ತರಿಸಿದ್ದಾಗ ಭಾರತ ಮಾಡಿದ ಸಹಾಯವನ್ನು ಮರೆಯಲು ಸಾಧ್ಯವಿಲ್ಲ ಅಂತಾ ವಿವಿಧ ದೇಶಗಳ ನಾಯಕರು ನೆನಪಿಸಿಕೊಂಡರು. ಭಾರತವು “ಯಾರ ಉಪನ್ಯಾಸಗಳನ್ನೂ ಕೇಳುವ ಅಗತ್ಯವಿಲ್ಲ”  ಅಂತ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ರು. ಪೋರ್ಚುಗೀಸ್ ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರು ಭಾರತದ ಸಾಗರೋತ್ತರ ನಾಗರಿಕರಾಗಿದ್ದು, ಅವರು ತಮ್ಮ ಒಸಿಐ ಕಾರ್ಡ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಎಲ್ಲಾ ನಾಯಕರು ತಾವು ಪಡೆದ ವೈದ್ಯಕೀಯ ಸಾಮಗ್ರಿಗಳಿಗಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು.

ಅಲ್ಲದೇ ಕೊರೊನಾ 2ನೇ ಅಲೆಯ ಭೀಕರತೆಗೆ ತತ್ತರಿಸಿರುವ ಭಾರತಕ್ಕೆ ಸಾಧ್ಯವಾದಷ್ಟು ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಒಕ್ಕೊರಲಿನಿಂದ ಸಾರಿದರು. ಇನ್ನು ಯುರೋಪಿಯನ್ ಕಮಿಷನ್​​​ ಅಧ್ಯಕ್ಷೆ ಅರ್ಸುಲಾ ಲಯೆನ್, ನಾವು ಈ ಸಂಕಷ್ಟದ ಸಮಯದಲ್ಲಿ ಭಾರತದ ಜೊತೆ ದೃಢವಾಗಿ ನಿಲ್ಲುತ್ತೇವೆ ಎಂದರು.

ಇದೇ ವೇಳೆ ಪ್ರಧಾನಿ ಮೋದಿ, ವರ್ಲ್ಡ್​ ಟ್ರೇಡ್​ ಸೆಂಟರ್​​ನಲ್ಲಿ TRIPS(Trade-related aspects of intellectual property rights) ಮನ್ನಾ ಮಾಡುವಂತೆ ಯುರೋಪಿಯನ್ ಯೂನಿಯನ್ ನಾಯಕರಿಗೆ ಮನವಿ ಮಾಡಿದರು. ಕೋವಿಡ್ ಸಂಬಂಧಿತ ಚಿಕಿತ್ಸೆಗಳು ಮತ್ತು ಲಸಿಕೆಗಳು ಪ್ರಪಂಚದಾದ್ಯಂತ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವ ಸಲುವಾಗ TRIPS ಮನ್ನಾ ಮಾಡುವಂತೆ ಕೋರಲಾಗಿದೆ.

ಇನ್ನು ಈ ಸಭೆಯ ಮಹತ್ವದ ಅಂಶವೆಂದರೆ 8 ವರ್ಷಗಳ ಬಳಿಕ,​​ FTA(ಮುಕ್ತ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದ) ಸಂಬಂಧ ಮಾತುಕತೆ ಮುಂದುವರೆಸಲು ಭಾರತ ಹಾಗೂ ಯುರೋಪಿಯನ್ ಯೂನಿಯನ್ ತೀರ್ಮಾನಿಸಿವೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದ (BTIA)ಗಾಗಿ 2013ರಲ್ಲಿ ಸ್ಥಗಿತಗೊಂಡಿದ್ದ ಮಾತುಕತೆಗಳನ್ನು ಪುನರಾರಂಭಿಸಲು ಒಪ್ಪಿಕೊಂಡಿವೆ.

 

The post EU ಸಭೆಯಲ್ಲಿ ವಿಶ್ವ ನಾಯಕರಿಂದ ಭಾರತಕ್ಕೆ ಬೆಂಬಲ, 8 ವರ್ಷಗಳ ಬಳಿಕ FTA ಚರ್ಚೆ ಮುಂದುವರೆಸಲು ಒಪ್ಪಿಗೆ appeared first on News First Kannada.

Source: newsfirstlive.com

Source link