EV Explodes: ಎಲೆಕ್ಟ್ರಾನಿಕ್ ವಾಹನದ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ | EV Scooter Battery Explodes in Andhra Pradesh 40 Year Old Dies Wife Critical


EV Explodes: ಎಲೆಕ್ಟ್ರಾನಿಕ್ ವಾಹನದ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ

ಬೆಂಕಿ ಅವಘಡ

ವಿಜಯವಾಡ: ಹೊಸದಾಗಿ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್​ನ ಬ್ಯಾಟರಿ ಸ್ಫೋಟಿಸಿ ಪತಿ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ವಿಜಯವಾಡ ನಗರದಲ್ಲಿ ಶನಿವಾರ ನಡೆದಿದೆ. ಈ ದಂಪತಿ ತಾವು ಮಲಗಿದ್ದ ಬೆಡ್​ರೂಮ್​ನಲ್ಲಿ ಸ್ಕೂಟರ್​ನ ಬ್ಯಾಟರಿಯನ್ನು ಚಾರ್ಜ್​ಗೆ ಹಾಕಿದ್ದರು. ಸುಟ್ಟಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿರುವ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಮನೆಯನ್ನು ಹೊಗೆ ಆವರಿಸಿಕೊಂಡಿದ್ದರಿಂದ, ಅವರ ಇಬ್ಬರು ಮಕ್ಕಳು ಸಹ ಉಸಿರಾಟದ ತೊಂದರೆಯಿಂದ ಅಸ್ವಸ್ಥರಾದರು. ಆದರೆ ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ಪಕ್ಕದ ತೆಲಂಗಾಣದ ನಿಜಾಬಾದ್ ನಗರದಲ್ಲಿ ನಡೆದಿದ್ದ ದುರ್ಘಟನೆಯನ್ನೇ ಇದು ಬಹುತೇಕ ಹೋಲುತ್ತದೆ. ಅಲ್ಲಿಯೂ ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಸ್ಫೋಟಿಸಿ 80 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಸ್ಫೋಟದಿಂದ ಆದ ಎರಡು ಪ್ರಮುಖ ಅನಾಹುತಗಳಿವು. ಇತ್ತೀಚೆಗಷ್ಟೇ ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿಯೂ ಇಂಥ ಘಟನೆಗಳು ವರದಿಯಾಗಿವೆ.

ವಿಜಯವಾಡ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಕೆ.ಶಿವಕುಮಾರ್ ಎಂದು ಗುರುತಿಸಲಾಗಿದೆ. ಡಿಟಿಪಿ ಕೆಲಸ ಮಾಡುತ್ತಾ ಜೀವನ ಮಾಡುತ್ತಿದ್ದ ಅವರು ಶುಕ್ರವಾರವಷ್ಟೇ ಹೊಸ ಎಲೆಕ್ಟ್ರಿಕ್ ವಾಹನ ಖರೀದಿಸಿದ್ದರು. ಬೂಮ್ ಮೋಟಾರ್ಸ್ ಕಂಪನಿಯ ಕಾರ್ಬೆಟ್ 14 ವಾಹನ ಖರೀದಿಸಿದ್ದ ಅವರು, ತಮ್ಮ ಬೆಡ್​ರೂಮ್​ನಲ್ಲಿ ಶುಕ್ರವಾರ ರಾತ್ರಿ ಚಾರ್ಜ್ ಹಾಕಿ ಮಲಗಿದ್ದರು. ಈ ವೇಳೆ ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದು ಸೂರ್ಯರಾವ್​ಪೇಟೆ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ವಿ.ಜಾನಕಿ ರಾಮಯ್ಯ ಹೇಳಿದರು.

ಅಗ್ನಿ ಅನಾಹುತದಿಂದ ಮನೆಯಲ್ಲಿದ್ದ ಎಸಿ ಮತ್ತಿತರರ ಉಪಕರಣಗಳೂ ಹಾಳಾಗಿವೆ. ಮನೆಯಿಂದ ಹೊಗೆ ಹೊರಬರುತ್ತಿದ್ದುದನ್ನು ಗಮನಿಸಿದ ಅಕ್ಕಪಕ್ಕದ ಮನೆಗಳವರು ಬಾಗಿಲು ಮುರಿದು, ಬೆಂಕಿ ನಂದಿಸಲು ಯತ್ನಿಸಿ, ಒಳಗಿದ್ದವರನ್ನು ಕಾಪಾಡಿದರು. ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಶಿವಕುಮಾರ್ ಮೃತಪಟ್ಟರು.

‘ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ಈವರೆಗೂ ದೃಢಪಟ್ಟಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಿವಕುಮಾರ್ ಅವರಿಗೆ ವಾಹನ ಮಾಡಿದ್ದ ಎಲೆಕ್ಟ್ರಿಕ್ ವಾಹನ ಕಂಪನಿಗೂ ಮಾಹಿತಿ ಕೊಟ್ಟಿದ್ದೇವೆ. ಮೇಲ್ನೋಟಕ್ಕೆ ಎಲೆಕ್ಟ್ರಿಕ್ ಶಾರ್ಟ್ ಸರ್ಕೀಟ್​ನಿಂದಾಗಿ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳು ಸ್ಫೋಟಿಸುವ ಘಟನೆಗಳು ಹೆಚ್ಚಾಗುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನೀತಿ ಆಯೋಗವು ಇತ್ತೀಚೆಗಷ್ಟೇ ಬ್ಯಾಟರಿ ಸ್ವಾಪಿಂಗ್ ಪಾಲಿಸಿ ಪ್ರಕಟಿಸಿ, ಎಲೆಕ್ಟ್ರಿಕ್ ವಾಹನಗಳ ಸುರಕ್ಷಾ ಟೆಸ್ಟಿಂಗ್ ವಿಧಾನಕ್ಕೆ ಮಾನದಂಡಗಳನ್ನು ನಿಗದಿಪಡಿಸಿತ್ತು. ಸುರಕ್ಷಾ ಮಾನದಂಡಗಳನ್ನು ಕಾಪಾಡದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಜೊತೆಗೆ, ಮಾರಾಟ ಮಾಡಿರುವ ವಾಹನಗಳನ್ನು ಹಿಂದಕ್ಕೆ ಪಡೆಯಲು ಸೂಚಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಚ್ಚರಿಸಿದ್ದರು.

TV9 Kannada


Leave a Reply

Your email address will not be published. Required fields are marked *