Facebook: ಜನರ ಮಾತು ಕದ್ದಾಲಿಸುತ್ತಿದೆಯೇ ಫೇಸ್​ಬುಕ್: ಇಷ್ಟೊಂದು ಜನರಿಗೆ ಅನುಮಾನ ಬರಲು ಕಾರಣವಿದೆ | Is Facebook Spying on You Here is an experience of journalist from Coastal Karnataka


Facebook: ಜನರ ಮಾತು ಕದ್ದಾಲಿಸುತ್ತಿದೆಯೇ ಫೇಸ್​ಬುಕ್: ಇಷ್ಟೊಂದು ಜನರಿಗೆ ಅನುಮಾನ ಬರಲು ಕಾರಣವಿದೆ

ಫೇಸ್​ಬುಕ್ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನಿಮ್ಮ ಮೊಬೈಲ್​ಗೆ ಫೇಸ್​ಬುಕ್​, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ಇನ್​ಸ್ಟಾಲ್ ಆಗಿದೆಯೇ? ಹಾಗಿದ್ದರೆ ಮೊಬೈಲ್ ಹತ್ತಿರವಿದ್ದಾಗ ಹುಷಾರಾಗಿ ಮಾತಾಡಿ. ಪೆಗಾಸಸ್​ನಂಥ ಸುಧಾರಿತ ಸ್ಪೈವೇರ್​ಗಳು ಪ್ರಭಾವಿಗಳ ಮೇಲೆ ಗೂಢಚರ್ಯೆ ನಡೆಸಿದರೆ ಫೇಸ್​ಬುಕ್​ನಂಥ ಸಾಮಾಜಿಕ ಮಾಧ್ಯಮ ಸಾಮಾನ್ಯ ಜನರ ಮಾತನ್ನೂ ಕದ್ದಾಲಿಸುತ್ತಿರುವ ಶಂಕೆ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಈ ಕುರಿತು ವಿಶ್ವಾದ್ಯಂತ ಆತಂಕ ವ್ಯಕ್ತವಾಗಿದ್ದಾಗ ಸ್ಪಷ್ಟನೆ ನೀಡಿದ್ದ ಫೇಸ್​ಬುಕ್, ತಾನು ಅಂಥ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಂಡಿತ್ತು. ಆದರೂ ಜನರಲ್ಲಿ ಅನುಮಾನಗಳು ಪರಿಹಾರವಾಗಿಲ್ಲ.

ಕುಂದಾಪುರದ ಪತ್ರಕರ್ತ ಶಶಿಧರ ಹೆಮ್ಮಾಡಿ ಅವರು ಫೇಸ್​ಬುಕ್​ನಲ್ಲಿ ಗುರುವಾರ (ನ.4) ಹಾಕಿರುವ ಪೋಸ್ಟ್​ನಲ್ಲಿ ಈ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್​ಗೆ ಕಾಮೆಂಟ್ ಮಾಡಿರುವ ಹಲವರು, ತಮಗೂ ಇಂಥ ಅನುಭವಗಳಾಗಿವೆ ಎಂದು ಹೇಳಿಕೊಂಡಿದ್ದಾರೆ.

ಈ ಜಾಹೀರಾತು ಹೇಗೆ ಬಂತು?
ಶಶಿಧರ ಹೆಮ್ಮಾಡಿ ಅವರು ಪೋಸ್ಟ್ ಹೀಗಿದೆ… ‘ಮೊನ್ನೆ ನಾವು ಮೂವರು ಗೆಳೆಯರು ಕೋಡಿ ಕಿನಾರೆಯಲ್ಲಿ ಕೂತಿದ್ದೆವು. ಅಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವುದು ಕಡಿಮೆ. ಯಾವಾಗಲೂ ನಮಗೆ ಅಲ್ಲಿ Youtubeನಿಂದ ಹಾಡುಗಳನ್ನು ಕೇಳುವ ಆಸೆ. ಆದರೆ ಅಲ್ಲಿ ಡೌನ್‌ಲೋಡ್ ಆಗುವುದಿಲ್ಲ. ಆಗ ನನ್ನ ಗೆಳೆಯ ‘Spotify’ ಡೌನ್‌ಲೋಡ್ ಮಾಡಿಕೊ, ಅದು ಆಫ್‌ಲೈನ್‌ನಲ್ಲಿಯೂ ಹಾಡುಗಳನ್ನು ಪ್ಲೇ ಮಾಡುತ್ತೆ ಎಂದು ಹೇಳಿದ. ನಾನು ಈ ತನಕ Spotify ಡೌನ್‌ಲೋಡ್ ಮಾಡಿಕೊಂಡಿಲ್ಲ. ಟಿವಿಯಲ್ಲಿ ಅದರ ಜಾಹೀರಾತುಗಳನ್ನು ಮಾತ್ರ ನೋಡಿದ್ದೆ. ನಾನು ಅದನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತೇನೆ ಎಂದು ನನ್ನ ಗೆಳೆಯನಿಗೆ ಹೇಳಿದೆ. ನಡೆದಿದ್ದು ಇಷ್ಟೇ. ಮುಂದಿನ ಐದು ನಿಮಿಷಗಳಲ್ಲಿ ನನ್ನ Facebook ನಲ್ಲಿ ಮೊತ್ತಮೊದಲ ಬಾರಿಗೆ Spotify ಜಾಹೀರಾತು ಪ್ರತ್ಯಕ್ಷವಾಯಿತು.

‘ಮೊನ್ನೆಯಿಂದ ಇಂದಿನ ತನಕವೂ Spotify ಜಾಹೀರಾತು ಕಾಣಿಸುತ್ತಲೇ ಇದೆ. ಅಚ್ಚರಿ ಎಂದರೆ ನಾವು spotify ಬಗ್ಗೆ ಮಾತನಾಡಿದ್ದು ಮಾತ್ರ. ಅದೂ ಸಹ ಮೊಬೈಲ್‌ನಲ್ಲಿ ಅಲ್ಲ, ಮುಖಾಮುಖಿಯಾಗಿ ಮಾತನಾಡಿದ್ದು. Spotify ಅನ್ನು ಮೊಬೈಲ್‌ನಲ್ಲಿ ಸರ್ಚ್ ಮಾಡಲೂ ಇಲ್ಲ. ಆದರೂ ಮರುಕ್ಷಣ ಹೇಗೆ ಆ ಜಾಹೀರಾತು ಬರಲು ಶುರುವಾಯಿತು? ಇದು ಕಾಕತಾಳಿಯವೋ ಅಥವಾ ನಮ್ಮ ಸಂಭಾಷಣೆಯನ್ನೂ ಕೂಡ ಫೇಸ್‌ಬುಕ್, ಗೂಗಲ್ ಆಲಿಸುತ್ತದೆಯೊ ಎಂದು ನನಗೀಗ ಅನುಮಾನ ಕಾಡುತ್ತಿದೆ’ ಎಂದು ಶಶಿಧರ ಅವರು ತಮ್ಮ ಪೋಸ್ಟ್ ಮುಗಿಸಿದ್ದಾರೆ.

Facebook-Spying

ಫೇಸ್​ಬುಕ್ ಕದ್ದಾಲಿಕೆ ಬಗ್ಗೆ ಶಶಿಧರ್ ಹೆಮ್ಮಾಡಿ ಹಾಕಿರುವ ಪೋಸ್ಟ್ ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆ.

ನಮ್ಮದೂ ಇದೇ ಅನುಭವ ಎಂದ ಹಲವರು
‘ಇಂಥ ನಿಗೂಢ ಅನುಭವ ಬಹಳಷ್ಟು ಮಂದಿಗೆ ಆಗಿದೆಯಂತೆ. ನಿಜಕ್ಕೂ ಭಯಹುಟ್ಟಿಸುತ್ತೆ ಇದು. ಎಲ್ಲೆಲ್ಲಿ ಕಿವಿಗಳಿವೆಯೋ’ ಎಂದು ಸತೀಶ್ ಆಚಾರ್ಯ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

‘Google voice assistant ನಮ್ಮ ಫೋನ್ ನ ಮೈಕ್ರೋಫೋನ್‌ನನ್ನು permanent permission allow ಮಾಡಿರುತ್ತದೆ.. ನೀವು ಮಾತಾಡಿದ್ದು, ನಿಮ್ಮ ಪಕ್ಕದಲ್ಲಿ ಯಾರೇ ಪೇಸ್ಭುಕ್ ಇನ್‌ಸ್ಟ್ರಾಗ್ರಾಮ್ ನಂತಹಾ ಆಪ್‌ನಲ್ಲಿ ವಿಡಿಯೋ ರೀಲ್ಸ್ ಪ್ಲೇ ಮಾಡಿದರೂ ಅದೇ ರೀಲ್ ಅಥವಾ ವಿಡಿಯೋ ನಿಮ್ಮ ಫೇಸ್ಬುಕ್​ನಲ್ಲೂ ಬರುತ್ತದೆ’ ಎಂದು ಗುರುರಾಜ ಪೂಜಾರಿ ಹೊಳೆಬಾಗಿಲು ಎನ್ನುವವರು ವಿಶ್ಲೇಷಿಸಿದ್ದಾರೆ.

‘ಫೋನಿನಲ್ಲಿ ಮಾತಾಡುವಾಗ ಒಬ್ಬರಲ್ಲಿ ಶೂ ಬಗ್ಗೆ ವಿಚಾರಿಸಿದ್ದೆ. ಈಗ ಎಲ್ಲೆಲ್ಲೂ ಶೂಗಳೇ ಕಾಣ್ತಿವೆ’ ಎಂದು ನಾಗರಾಜ ಬಳ್ಳೂರು ಎನ್ನುವವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ‘ಈಗ ಯಾವುದೂ ಗುಟ್ಟಾಗಿ ಇರುವುದಿಲ್ಲ, ವೈಯಕ್ತಿಕ ಬದುಕಿಗೂ ಕಳ್ಳಕಿವಿಗಳು ಇಣುಕುತ್ತಿವೆ’ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶ್ವದ ಹಲವು ದೇಶಗಳಲ್ಲಿ ಕದ್ದಾಲಿಕೆ ಆತಂಕ
ಇಸ್ರೇಲ್​ನ ಸ್ಪೈವೇರ್​ ಪೆಗಾಸಸ್ ಮತ್ತು ಅದಕ್ಕೂ ಮೊದಲು ಫೇಸ್​ಬುಕ್ ಅನಲಿಟಿಕಾ ಹಗರಣದ ಸಂದರ್ಭದಲ್ಲಿ ಫೇಸ್​ಬುಕ್ ಸಹ ಜನಸಾಮಾನ್ಯರ ಮೊಬೈಲ್​ಗಳ ಮೂಲಕ ಅವರ ಮಾತುಗಳನ್ನು ಕದ್ದಾಲಿಸುತ್ತಿದೆ ಎಂಬ ಆತಂಕ ದೊಡ್ಡಮಟ್ಟದಲ್ಲಿ ವ್ಯಕ್ತವಾಗಿತ್ತು. ಯಾವುದೇ ಉತ್ಪನ್ನವನ್ನು ಕೊಳ್ಳಲು ನಾವು ಆಲೋಚನೆ ಮಾಡಿ, ನನ್ನ ಹೆಂಡತಿ ಅಥವಾ ತಂದೆಯೊಂದಿಗೆ ಮಾತನಾಡಿದ ತಕ್ಷಣ ಫೇಸ್​ಬುಕ್ ಅದಕ್ಕೆ ಸಂಬಂಧಿಸಿದ ಜಾಹೀರಾತು ತೋರಿಸಲು ಆರಂಭಿಸುತ್ತದೆ. ಕದ್ದಾಲಿಕೆ ಮಾಡದಿದ್ದರೆ ಇದು ಹೇಗೆ ಸಾಧ್ಯ ಎಂದು ವಿಶ್ವದ ಹಲವು ದೇಶಗಳ ಸಾಕಷ್ಟು ಜನರು ಫೇಸ್​ಬುಕ್ ವಿರುದ್ಧ ಹರಿಹಾಯ್ದಿದ್ದರು.

ಫೇಸ್​ಬುಕ್ ಸ್ಪಷ್ಟನೆ
ಈ ಆತಂಕಗಳಿಗೆ ಪತ್ರಿಕಾ ಹೇಳಿಕೆಯ ಮೂಲಕ ಪ್ರತಿಕ್ರಿಯಿಸಿದ್ದ ಫೇಸ್​ಬುಕ್, ‘ಜಾಹೀರಾತು ಅಥವಾ ನ್ಯೂಸ್​ಫೀಡ್​ ತೋರಿಸಲು ಬಳಕೆದಾರರ ಮೈಕ್ರೊಫೋನ್ ಮೂಲಕ ನಾವು ಅವರ ಆಸಕ್ತಿಯನ್ನು ಗಮನಿಸುವುದಿಲ್ಲ. ಜನರು ಇಂಟರ್ನೆಟ್​ನಲ್ಲಿ ಏನೆಲ್ಲಾ ಜಾಲಾಡುತ್ತಿದ್ದಾರೆ, ಯಾವ ವಿಷಯ ತಿಳಿಯಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಆಧರಿಸಿ ಜಾಹೀರಾತು ತೋರಿಸುತ್ತೇವೆ. ಅವರು ಜೋರಾಗಿ ಏನು ಮಾತಾಡುತ್ತಾರೆ ಎಂಬುದು ನಮಗೆ ತಿಳಿಯುವುದಿಲ್ಲ’ ಎಂದು ಹೇಳಿತ್ತು.

Facebook-Spying

ಐಫೋನ್ (ಎಡಚಿತ್ರ) ಮತ್ತು ಗೂಗಲ್​ನಲ್ಲಿ ಮೈಕ್ರೊಫೋನ್ ನಿರ್ವಹಣೆ ಹೀಗೆ

ತಜ್ಞರು ಏನು ಹೇಳುತ್ತಾರೆ?
ಫೇಸ್​ಬುಕ್ ಕದ್ದಾಲಿಕೆ ಆತಂಕದ ಕುರಿತು ಜನವರಿ 30, 2021ರಲ್ಲಿ ಪ್ರತಿಷ್ಠಿತ ಬ್ಯುಸಿನೆಸ್ ಇನ್​ಸೈಡರ್ ಜಾಲತಾಣದಲ್ಲಿ ಲೇಖನ ಬರೆದಿದ್ದ ಡೇವ್ ಜಾನ್​ಸನ್ ಫೇಸ್​ಬುಕ್ ಹೀಗೆ ಮಾಡಲಾರದು ಎಂಬ ಧಾಟಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

‘ಬಳಕೆದಾರರ ಅನುಮತಿಯಿಲ್ಲದೆ ಫೇಸ್​ಬುಕ್ ಯಾರೊಬ್ಬರ ಸಾಧನದಲ್ಲಿರುವ ಮೈಕ್ರೊಫೋನ್ ಬಳಸಲಾರದು. ಒಂದು ವೇಳೆ ಫೇಸ್​ಬುಕ್ ನಮ್ಮ ಅನುಮತಿಯಿಲ್ಲದೆ ನಮ್ಮ ಮೊಬೈಲ್​ನ ಮೈಕ್ರೊಫೋನ್ ಬಳಸಿದ್ದು ಸಾಬೀತಾದರೆ ಫೇಸ್​ಬುಕ್​ನಷ್ಟೇ ಬಲಿಷ್ಠವಾಗಿರುವ ಆ್ಯಪಲ್ ಮತ್ತು ಗೂಗಲ್ ಕಂಪನಿಗಳು ಶಿಸ್ತುಕ್ರಮ ಜರುಗಿಸುತ್ತವೆ. ಎಲ್ಲಕ್ಕೂ ಮಿಗಿಲಾಗಿ ಇದು ಜನರ ಮೂಲಭೂತ ಹಕ್ಕಿನ ಉಲ್ಲಂಘನೆ ಎನಿಸಿಕೊಳ್ಳುತ್ತದೆ. ಹತ್ತಾರು ದೇಶಗಳಲ್ಲಿ ಕಠಿಣ ಕಾನೂನು ಕ್ರಮಗಳನ್ನು ಫೇಸ್​ಬುಕ್ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದ್ದರು.

ರಿಸ್ಕೇ ಬೇಡ ಅಂದ್ರಾ: ಮೊಬೈಲ್ ಸೆಟಿಂಗ್ಸ್​ ಬದಲಿಸಿ
ಫೇಸ್​ಬುಕ್​ ನಿಮಗಿಷ್ಟ, ಆದರೆ ಅದರ ಕಳ್ಳಗಿವಿ ಅನುಮಾನ ಕಷ್ಟ ಎಂದಾದರೆ ನಿಮ್ಮ ಮೊಬೈಲ್​ನ ಸೆಟಿಂಗ್ಸ್​ ಒಮ್ಮೆ ಚೆಕ್ ಮಾಡಿಕೊಳ್ಳಿ. ನಿಮ್ಮ ಮೈಕ್ರೊಫೋನ್​ ಬಳಸಲು ಫೇಸ್​ಬುಕ್ ಆ್ಯಪ್​ಗೆ ಅನುಮತಿ ಕೊಟ್ಟಿದ್ದರೆ ಅದನ್ನು ಡಿಸೇಬಲ್ ಅಥವಾ ಡಿನೈ ಮಾಡಿ. ಒಂದು ವಿಚಾರ ಗಮನಿಸಿ, ನೀವು ಹೀಗೆ ಮಾಡಿದರೆ ಫೇಸ್​ಬುಕ್ ಲೈವ್ ಅಥವಾ ಫೇಸ್​ಬುಕ್ ಕಾಲ್ ಮಾಡಲು ಆಗುವುದಿಲ್ಲ.

ಅಮೆಜಾನ್​ನ ಎಕೊ ಡಾಟ್, ಗೂಗಲ್​ನ ಪರ್ಸನಲ್ ಅಸಿಸ್ಟೆಂಟ್, ಆ್ಯಪಲ್​ನ ಸಿರಿ ಸೇರಿದಂತೆ ಹಲವು ವರ್ಚುವಲ್ ಅಸಿಸ್ಟೆಂಟ್​ಗಳ ಬಗ್ಗೆಯೂ ಆಗಾಗ್ಗೆ ಬಳಕೆದಾರರು ಇಂಥ ಅನುಮಾನಗಳನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಈ ದೈತ್ಯ ಕಂಪನಿಗಳು ಇಂಥ ಅನುಮಾನಗಳನ್ನು ತಳ್ಳಿಹಾಕುತ್ತಲೇ ಇರುತ್ತವೆ. ‘ಆಲ್ಗರಿದಂ, ಆರ್ಟಿಫಿಷಿಯಲ್ ಇಂಟಿಲಿಜೆನ್ಸ್​ನ ಈ ಕಾಲದಲ್ಲಿ ಖಾಸಗಿ ಬದುಕಿಗೆ ಅರ್ಥವೇ ಇಲ್ಲ’ ಎಂಬ ಮಾತುಗಳು ಇದರ ಜೊತೆಜೊತೆಗೆ ಸಹ ಕೇಳಿಸುತ್ತಿರುತ್ತವೆ.

ಇದನ್ನೂ ಓದಿ: WhatsApp: ಫೇಸ್​ಬುಕ್ ಹೆಸರು ಬದಲಾವಣೆಯಿಂದ ವಾಟ್ಸ್​ಆ್ಯಪ್​ನಲ್ಲಿ ಆಗುತ್ತಿದೆ ದೊಡ್ಡ ಬದಲಾವಣೆ: ಏನು ಗೊತ್ತೇ?
ಇದನ್ನೂ ಓದಿ: Meta: ಕಂಪೆನಿಯ ಹೆಸರು ಬದಲಿಸಿದ ಫೇಸ್​ಬುಕ್​: ಸಾಮಾಜಿಕ ಮಾಧ್ಯಮಗಳಲ್ಲಿ ಹಿಗ್ಗಾಮುಗ್ಗಾ ಜಾಲಾಡಿದ ನೆಟ್ಟಿಗರು

TV9 Kannada


Leave a Reply

Your email address will not be published. Required fields are marked *