Farhan Akhtar: ಬಾಲಿವುಡ್​ನಲ್ಲೀಗ ಮದುವೆಗಳದ್ದೇ ಸುದ್ದಿ; ಶೀಘ್ರ ವಿವಾಹವಾಗಲಿದ್ದಾರೆ ಮತ್ತೋರ್ವ ತಾರಾ ಜೋಡಿ | Farhan Akhatr and Shibani Dandekar will tie knot on February 21st details inside


Farhan Akhtar: ಬಾಲಿವುಡ್​ನಲ್ಲೀಗ ಮದುವೆಗಳದ್ದೇ ಸುದ್ದಿ; ಶೀಘ್ರ ವಿವಾಹವಾಗಲಿದ್ದಾರೆ ಮತ್ತೋರ್ವ ತಾರಾ ಜೋಡಿ

ಫರ್ಹಾನ್, ಶಿವಾನಿ

ಬಾಲಿವುಡ್​ನಲ್ಲಿ ಸದ್ಯ ವಿವಾಹ ಮಹೋತ್ಸವಗಳದ್ದೇ ಸುದ್ದಿ. ಖ್ಯಾತ ತಾರೆಯರು ತಮ್ಮ ಪ್ರೀತಿಪಾತ್ರರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೌನಿ ರಾಯ್, ಕತ್ರಿನಾ ಕೈಫ್- ವಿಕ್ಕಿ ಕೌಶಲ್, ಅಂಕಿತಾ ಲೋಖಂಡೆ ಮೊದಲಾದವರು ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ನಿರ್ದೇಶಕ, ನಟ ಫರ್ಹಾನ್ ಅಖ್ತರ್ (Farhan Akhtar) ಹಾಗೂ ನಟಿ ಶಿವಾನಿ ದಾಂಡೇಕರ್ (Shibani Dandekar). 4 ವರ್ಷಗಳ ಕಾಲ ಜತೆಯಾಗಿ ಸುತ್ತಾಡಿದ್ದ ಈ ಜೋಡಿ ವಿವಾಹವಾಗಲು ನಿರ್ಧರಿಸಿದೆ. ಈ ಕುರಿತು ಫರ್ಹಾನ್ ತಂದೆ ಜಾವೇದ್ ಅಖ್ತರ್ (Javed Akhtar) ಮಾಹಿತಿ ನೀಡಿದ್ದಾರೆ.‘ಬಾಂಬೆ ಟೈಮ್ಸ್​​’ಗೆ ನೀಡಿದ ಸಂದರ್ಶನದಲ್ಲಿ ವಿವಾಹದ ತಯಾರಿಯ ಕುರಿತು ಅವರು ಮಾತನಾಡಿದ್ದಾರೆ. ಫರ್ಹಾನ್ ಹಾಗೂ ಶಿವಾನಿ ಫೆಬ್ರವರಿ 21ರಂದು ವಿವಾಹವಾಗಲಿದ್ದಾರೆ ಎಂದಿರುವ ಜಾವೇದ್, ಶಿವಾನಿ ಬಹಳ ಒಳ್ಳೆಯ ಹುಡುಗಿ. ಕುಟುಂಬದವರೆಲ್ಲರಿಗೂ ಆಕೆ ಅಚ್ಚುಮೆಚ್ಚು ಎಂದು ಸೊಸೆಯನ್ನು ಹಾಡಿಹೊಗಳಿದ್ದಾರೆ. ವಿವಾಹದ ತಯಾರಿಯನ್ನು ಸಂಸ್ಥೆಯೊಂದು ನಿರ್ವಹಿಸುತ್ತಿದ್ದು, ಕೆಲಸಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಬಾಲಿವುಡ್ ತಾರೆಯರ ವಿವಾಹವೆಂದರೆ ಅದು ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಸಖತ್ ಸುದ್ದಿಯಾಗುತ್ತದೆ. ಆದರೆ ಈ ವಿವಾಹ ಇದಕ್ಕೆ ಅಪವಾದ. ಕಾರಣ, ಕೊರೊನಾ ಕಾರಣದಿಂದ ಸಣ್ಣ ಮಟ್ಟದಲ್ಲಿ, ಆಪ್ತರಷ್ಟೇ ಹಾಜರಿರುವ ಕಾರ್ಯಕ್ರಮದಲ್ಲಿ ಫರ್ಹಾನ್- ಶಿವಾನಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಜಾವೇದ್.

ಜಾವೇದ್ ಅಖ್ತರ್ ಅವರ ಕುಟುಂಬದ ನಿವಾಸ ‘ಖಾಂಡಾಲಾ’ದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಇನ್ನೂ ಯಾರಿಗೂ ತಿಳಿಸಲಾಗಿಲ್ಲ. ಆಹ್ವಾನ ಪತ್ರಿಕೆಯನ್ನೂ ನೀಡಿಲ್ಲ ಎಂದು ಜಾವೇದ್ ನುಡಿದಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚಿರುವಾಗ ದೊಡ್ಡ ಮಟ್ಟದಲ್ಲಿ ಸಮಾರಂಭ ನಡೆಸುವುದು ಉಚಿತವಲ್ಲ. ಆದ್ದರಿಂದ ಕುಟುಂಬ ವರ್ಗ ಹಾಗೂ ಕೆಲವೇ ಕೆಲವು ಆಪ್ತರಷ್ಟೇ ವಿವಾಹ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಜಾವೇದ್ ಹೇಳಿದ್ದಾರೆ.

ಕಳೆದ ತಿಂಗಳಷ್ಟೇ ಫರ್ಹಾನ್ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಗೆಳೆಯನಿಗೆ ವಿಶ್ ಮಾಡುತ್ತಾ ಶಿವಾನಿ, ‘ಸದಾಕಾಲ ಖುಷಿಯಾಗಿರಿ’ ಎಂದು ಹಾರೈಸಿದ್ದರು. ಕಳೆದ ವರ್ಷ ತಮ್ಮ ಜನ್ಮದಿನದ ಸಂದರ್ಭದಲ್ಲಿ ಶಿವಾನಿ, ಫರ್ಹಾನ್ ಅವರ ಹೆಸರನ್ನು ತಮ್ಮ ಕುತ್ತಿಗೆಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು.

ಫರ್ಹಾನ್ ಅಖ್ತರ್ ಅವರಿಗೆ ಇದು ಎರಡನೇ ವಿವಾಹ. ಈ ಮುನ್ನ ಅವರು ಕೇಶ ವಿನ್ಯಾಸಕಿ ಅದ್ಬುನ ಭಬಾನಿ ಅವರನ್ನು ವಿವಾಹವಾಗಿದ್ದರು. 2017ರಲ್ಲಿ ಈರ್ವರೂ ಬೇರ್ಪಟ್ಟಿದ್ದರು. ಈ ದಂಪತಿಗೆ ಶಕ್ಯ ಹಾಗೂ ಅಕಿರಾ ಎಂಬ ಮಕ್ಕಳಿದ್ದಾರೆ. ಪ್ರಸ್ತುತ ಫರ್ಹಾನ್ ವಿವಾಹವಾಗುತ್ತಿರುವ ಶಿವಾನಿ ನಿರೂಪಕಿ, ಹಾಡುಗಾರ್ತಿ ಹಾಗೂ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಚಿತ್ರಗಳ ವಿಷಯಕ್ಕೆ ಬಂದರೆ ಫರ್ಹಾನ್ ‘ಜೀ ಲೇ ಜರಾ’ ಮೂಲಕ ನಿರ್ದೇಶನಕ್ಕೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಹಾಗೂ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಟ್ರಾವೆಲ್ ಮಾದರಿಯ ಚಿತ್ರ ಇದಾಗಿರಲಿದೆ.

TV9 Kannada


Leave a Reply

Your email address will not be published.