Flood Alert: ಗೋಕಾಕ ಪಟ್ಟಣಕ್ಕೆ ನುಗ್ಗಿದ ಘಟಪ್ರಭಾ, ಬಾಗಲಕೋಟೆಯಲ್ಲಿ ಕೃಷ್ಣಾ ಪ್ರವಾಹಕ್ಕೆ ಹಲವು ಸೇತುವೆಗಳು ಜಲಾವೃತ | Heavy Rains in Western Ghats Water Level in Bhima Krishna Ghataprabha Malaprabha River Rise to Danger Level


ಪಶ್ಚಿಮ ಘಟ್ಟಗಳಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿರುವುದರಿಂದ ಘಟಪ್ರಭಾ, ಮಲಪ್ರಭಾ, ಕೃಷ್ಣಾ, ಭೀಮಾ ನದಿಗಳಲ್ಲಿ ನೀರಿನ ಪ್ರಮಾಣ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ.

Flood Alert: ಗೋಕಾಕ ಪಟ್ಟಣಕ್ಕೆ ನುಗ್ಗಿದ ಘಟಪ್ರಭಾ, ಬಾಗಲಕೋಟೆಯಲ್ಲಿ ಕೃಷ್ಣಾ ಪ್ರವಾಹಕ್ಕೆ ಹಲವು ಸೇತುವೆಗಳು ಜಲಾವೃತ

ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ ನದಿಯ ನೀರು ಕೃಷಿ ಭೂಮಿಗೆ ನುಗ್ಗಿದೆ.

ಬಾಗಲಕೋಟೆ/ಬೆಳಗಾವಿ: ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹ ಭೀತಿ ಮುಂದುವರಿದಿದೆ. ಜಮಖಂಡಿ ತಾಲ್ಲೂಕಿನ ಮುತ್ತೂರು, ತುಬಚಿ ನಡುಗಡ್ಡೆಗಳನ್ನು ನೀರು ಸುತ್ತುವರಿದಿದೆ. ಸುರಕ್ಷಿತ ಸ್ಥಳಗಳಿಗೆ ಜಾನುವಾರುಗಳನ್ನು ಸ್ಥಳಾಂತರಿಸುತ್ತಿರುವ ಜನರು ತಾವೂ ಮನೆಗಳನ್ನು ಬಿಟ್ಟು ಹೊರಡುತ್ತಿದ್ದಾರೆ. ಈ ಎರಡೂ ನಡುಗಡ್ಡೆಗಳಲ್ಲಿ 40 ಕುಟುಂಬಗಳು ವಾಸವಾಗಿವೆ. ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾದರೆ ದೋಣಿಗಳನ್ನೇ ಸಂಚಾರಕ್ಕೆ ಆಶ್ರಯಿಸಬೇಕಾಗುತ್ತದೆ. ಸತತ 4ನೇ ವರ್ಷವೂ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸುತ್ತುವರಿದಿರುವ ನಡುಮಟ್ಟದ ನೀರಿನಲ್ಲಿಯೇ ಜಾನುವಾರುಗಳನ್ನು ಹೊಡೆದುಕೊಂಡು ಜನರು ಹೊರಟಿದ್ದಾರೆ. ಎರಡೂ ನಡುಗಡ್ಡೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಜಾನುವಾರುಗಳಿವೆ. ಅಗತ್ಯವಸ್ತುಗಳ ಖರೀದಿಗಾಗಿ ಜನರು ನೀರಿನಲ್ಲಿಯೇ ನಡೆದುಕೊಂಡು ತುಬಚಿಗೆ ಹೋಗುತ್ತಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿರುವುದರಿಂದ ಘಟಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣಕ್ಕೆ ನದಿ ನೀರು ನುಗ್ಗಿದೆ. ಮಟನ್ ಮಾರ್ಕೆಟ್, ದನದ‌ ಮಾರ್ಕೆಟ್ ಮುಳುಗಡೆಯಾಗಿದ್ದು, 15ಕ್ಕೂ ಹೆಚ್ಚು ಅಂಗಡಿಗಳು ಜಲಾವೃತಗೊಂಡಿವೆ. 10ಕ್ಕೂ ಹೆಚ್ಚು ಮನೆಗಳಿಗೂ ನದಿ ನೀರು ನುಗ್ಗಿದೆ. ನೀರು ನುಗ್ಗುವ ಆತಂಕದಿಂದ ವ್ಯಾಪಾರಸ್ಥರು ತರಾತುರಿಯಲ್ಲಿ ಅಂಗಡಿಗಳನ್ನ ಖಾಲಿ ಮಾಡುತ್ತಿದ್ದಾರೆ. ಯಾವಾಗ ನೀರು ನುಗ್ಗೀತೋ ಎನ್ನುವ ಆತಂಕದಲ್ಲಿ ಮಹಿಳೆಯರು ಮನೆಗಳ ಎದುರು ಕಾಯುತ್ತಾ ಕುಳಿತಿದ್ದಾರೆ. ಗೋಕಾಕ ಪಟ್ಟಣದ ಜನರು 2019ರಿಂದ ಪ್ರತಿವರ್ಷ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿಯೂ ಘಟಪ್ರಭಾ ಉಕ್ಕಿ ಹರಿಯುತ್ತಿದೆ. ನದಿಯಲ್ಲಿದ್ದ ಪಂಪ್​ಸೆಟ್ ಹೊರತರಲು ನದಿಗೆ ಇಳಿದಿದ್ದ ಬಸಪ್ಪ ಇರ್ಕನ್ನವರ (38) ನಾಪತ್ತೆಯಾಗಿದ್ದಾರೆ. ಇವರನ್ನು ಮೊಸಳೆ ಎಳೆದೊಯ್ದಿದಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆಯಿಂದ ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಬಾದಾಮಿ ತಾಲ್ಲೂಕಿನ ವಿವಿಧೆಡೆ ಮಲಪ್ರಭಾ ಉಕ್ಕಿ ಹರಿಯುತ್ತಿದೆ. ಬೀರನೂರು ಗ್ರಾಮದ ಬಳಿ ನೂರಾರು ಎಕರೆಯ ಕಬ್ಬು ಜಲಾವೃತಗೊಂಡಿದೆ. ಊರಿಗೂ ನೀರು ನುಗ್ಗುವ ಆತಂಕ ಎದುರಾಗಿದೆ. ಬೆಳೆ ಕಳೆದುಕೊಂಡು ಕಂಗಾಲಾಗಿರುವ ಗ್ರಾಮಸ್ಥರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಈ ಹಿಂದೆಯೂ ಪ್ರವಾಹದಿಂದ ಬೀರನೂರು ಗ್ರಾಮ ಜಲಾವೃತವಾಗಿತ್ತು

ಮಹಾರಾಷ್ಟ್ರದಿಂದ ನೀರು ಬಿಡುಗಡೆ

ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಉಜನಿ, ವೀರ್ ಡ್ಯಾಂನಿಂದ ನೀರು ಬಿಡಲಾಗುತ್ತಿದೆ. ಭೀಮಾ ನದಿಗೆ 70 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನ ಭೀಮಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲು ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಸೂಚನೆ ನೀಡಿದ್ದಾರೆ. ನೀರು ಬಿಡುತ್ತಿರುವ ಪ್ರಮಾಣ ಒಂದುವರೆ ಲಕ್ಷ ಕ್ಯೂಸೆಕ್​ಗೆ ಹೆಚ್ಚಿದರೆ, ಹಲವು ಗ್ರಾಮಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *