Darshan Farmhouse: ಈ ಪಕ್ಷಿಗಳು ಮಾತ್ರವಲ್ಲದೇ ವಿದೇಶದ ಅನೇಕ ಪಕ್ಷಿಗಳನ್ನು ಫಾರ್ಮ್ಹೌಸ್ನಲ್ಲಿ ಸಾಕಲಾಗಿದೆ. ಅವುಗಳ ಮಾಲಿಕತ್ವ ಪತ್ರ ಮುಂತಾದ ದಾಖಲೆಗಳನ್ನು ಒದಗಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನಟ ದರ್ಶನ್
ನಟ ದರ್ಶನ್ (Darshan) ಅವರು ಪ್ರಾಣಿಪ್ರಿಯರು ಎಂಬುದು ತಿಳಿದಿರುವ ವಿಚಾರ. ವನ್ಯ ಜೀವಿಗಳ ಬಗ್ಗೆ ಅವರು ವಿಶೇಷ ಆಸಕ್ತಿ ಹೊಂದಿದ್ದಾರೆ. ಆದರೆ ಅನುಮತಿ ಇಲ್ಲದೇ ಕೆಲವು ಪಕ್ಷಿಗಳನ್ನು ಸಾಕಿರುವುದರಿಂದ ಈಗ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಟಿ. ನರಸಿಪುರ ರಸ್ತೆಯ ಕೆಂಪಯ್ಯನಹುಂಡಿ ಸಮೀಪ ಇರುವ ಫಾರ್ಮ್ ಹೌಸ್ ಮೇಲೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದು ನಟ ದರ್ಶನ್ ಅವರಿಗೆ ಸಂಬಂಧಿಸಿದ ತೋಟದ ಮನೆ (Darshan Farmhouse) ಎಂದು ಹೇಳಲಾಗಿದೆ. ಇಲ್ಲಿ ಕೆಲವು ಪಕ್ಷಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿ ಆಗಿದೆ. ಶುಕ್ರವಾರ (ಜನವರಿ 20) ತಡರಾತ್ರಿ ಈ ದಾಳಿ ನಡೆದಿದೆ. ಸಂರಕ್ಷಿತ ಪಕ್ಷಿಗಳನ್ನು ಅಧಿಕಾರಿಗಳು (Forest Department Officials) ವಶಪಡಿಸಿಕೊಂಡ ಬಳಿಕ, ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಎಲ್ಲ ಪ್ರಾಣಿ, ಪಕ್ಷಿಗಳನ್ನು ಸಾಕಲು ಅನುಮತಿ ಇರುವುದಿಲ್ಲ. ವನ್ಯಜೀವಿಗಳನ್ನು ಸಾಕಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ನಿಯಮ ಉಲ್ಲಂಘಿಸಿ ಪ್ರಾಣಿ, ಪಕ್ಷಿಗಳನ್ನು ಸಾಕಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ದರ್ಶನ್ ಅವರ ಫಾರ್ಮ್ಹೌಸ್ ವಿಚಾರದಲ್ಲಿ ಹಾಗೆಯೇ ಆಗಿದೆ. ವಿಶೇಷ ಪ್ರಭೇದದ ಪಕ್ಷಿಗಳನ್ನು ಅವರು ಸಾಕಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ಅರಣ್ಯ ಅಧಿಕಾರಿಗಳು ದಾಳಿ ಮಾಡಿದರು. ಈ ವೇಳೆ ಪಕ್ಷಿಗಳು ಇರುವುದು ಖಚಿತವಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಯಿತು.