Forest Stories : ತಿಂಗಳ ಕೊನೆಯ ಅಕ್ಕಿಯೂ ಕೋಳಿ ಗೊಜ್ಜೂ ಆ ಢಂ ಢಮಾರ್ ಎನ್ನುವ ಆ ಗುಂಡಿನ ಶಬ್ದವೂ… | Kaade Kaadataava Kaada Column Forest Stories by Photographer Writer VK Vinod Kumar Kushalnagar


Forest Stories : ತಿಂಗಳ ಕೊನೆಯ ಅಕ್ಕಿಯೂ ಕೋಳಿ ಗೊಜ್ಜೂ ಆ ಢಂ ಢಮಾರ್ ಎನ್ನುವ ಆ ಗುಂಡಿನ ಶಬ್ದವೂ...

ಕಾಡೇ ಕಾಡತಾವ ಕಾಡ | Kaade Kaadataava Kaada : ಅಷ್ಟರಲ್ಲಾಗಲೇ ಸೀನಿಯರು ಕೋವಿ ಗುರಿಹಿಡಿದು, ‘ಟಾರ್ಚ್ ಸರೀ ಬುಡಾ’ ಎಂದು ಅರಚಿದ. ಅಂತೂ ಆ ಕಡೆಯವರ ಬಳಿಯೂ ಕೋವಿ ಇದ್ದಿದ್ದು ಸ್ಪಷ್ಟವಾಯಿತು. ಪಕ್ಕದವ ಬೆದರಿ, ‘ಸಾರದ.. ಕೋವಿ ಐತೆ ಅವರತ್ರ’ ಅಷ್ಟರಲ್ಲಾಗಲೇ… ಢಂ! ಕೋವಿಯ ಗುಂಡು ಸಿಡಿಯಿತು. ಸೀನಿಯರ್‌ ಹಿಂದಕ್ಕೆ ಹಾರಿಬಿದ್ದು ಕುಸಿದ. ಪಕ್ಕದಲ್ಲಿದ್ದವನಿಗೆ ಕುಡಿದ ನಶೆ-ಭಯ ಸೇರಿ, ಗುಂಡು ಹೊಡೆದಿದ್ದು ಅವರಾ, ಸೀನಿಯರಾ? ಅನುಮಾನದೊಂದಿಗೆ, ‘ಅಯ್ಯೋ ಗುಂಡೇಟ್‌ ಬಿತ್ತು… ಸಾರ್‌ ಏನಾಯ್ತು ಸಾರ್‌’ ಅನ್ನುತ್ತಾ ಕೂಗಿದ. ಪಕ್ಕದವ ಸೀನಿಯರ್‌ ಬಳಿ ಹೋಗಿ ಅವನ ಕೈಯಿಂದ ಕೋವಿ ಕಿತ್ತುಕೊಂಡವನೇ ಡಬಲ್‌ ಬ್ಯಾರಲ್‌ ಗನ್ನಿನ ಮತ್ತೊಂದು ಬ್ಯಾರಲ್​ನಿಂದ ಮತ್ತೊಂದು ಗುಂಡು ಹೊಡೆದದ್ದೇ ದೊಡ್ಡ ಶಬ್ದದೊಂದಿಗೆ ಅದು ಬೆಂಕಿ ಉಗುಳಿತು. ಸೀನಿಯರ್‌ ಬಳಿ ಬಂದ ಒಬ್ಬ, ‘ಸಾರ್‌’ ಎಂದು ಕೂಗಿಕೊಂಡ. ಇನ್ನೊಬ್ಬ, ‘ಏನಾಯ್ತು ನೋಡೋ’ ಅನ್ನುತ್ತಾ ಕೆಂಗಣ್ಣು ಬೀರಿದ. ಸೀನಿಯರ್ ಬಿದ್ದು ನರಳುತ್ತಿದ್ದ. ಅವರಲ್ಲೊಬ್ಬ ನೀರು ತಂದು ಚಿಮುಕಿಸಿದಾಗ ನಿಧಾನವಾಗಿ ಎದ್ದು ಕುಳಿತು, ‘ಬಡ್ಡೀಮಕ್ಳು ನಂಗೇ ಫೈರ್‌ ಮಾಡ್ತಾರೆ’ ಅನ್ನುತ್ತಾ ಕೋವಿ ಕೊಡ್ರೋ ಎಂದು ಅಬ್ಬರಿಸಿದ.
ವಿ. ಕೆ. ವಿನೋದ್ ಕುಮಾರ್ (V.K. Vinod Kumar), ಕುಶಾಲನಗರ

*

(ಕಥೆ – 1)

ಹಚ್ಚಹಸಿರಿನ ಕಾಡೊಂದರ ಮಧ್ಯದಲ್ಲಿ, ದೊಡ್ಡದೊಡ್ಡ ಸಾಗವಾನಿ ಮರಗಳ ನಡುವೆ, ಬಿದಿರು ಮತ್ತು ತೇಗದ ಸರಗಳಿಂದ ಕಟ್ಟಿದ ಸಣ್ಣ ಗುಡಿಸಲು ಅದು. ದೊಡ್ಡ ಹೆಬ್ಬಿದಿರನ್ನು ಉದ್ದಕ್ಕೆ ಸಾಲುಗಳನ್ನು ತಪ್ಪಿಸಿ ಸೀಳಿ, ಅಗಲಿಸಿದಾಗ, ಒಂದಡಿಗೂ ಮೀರಿದ ಅಗಲವಾದ ಹಲಗೆ ಆಕಾರದ ಬಿದಿರಿನ ತಟ್ಟೆ ಸಿಗುತ್ತಿತ್ತು. ಆ ತಟ್ಟೆಯನ್ನೇ ಎಂಟಡಿ ಎತ್ತರಕ್ಕೆ ನೇರ ನಿಲ್ಲಿಸಿ ಅದಕ್ಕೆ ಎರಡೂ ಬದಿಯಿಂದ ಬಿದಿರಿನ ಗಳವನ್ನು ಕಾಡಿನ ಬಳ್ಳಿಗಳಿಂದ ಬಿಗಿದು ಗಟ್ಟಿ ಮಾಡಿ, ಬಿದಿರಿನ ತಟ್ಟೆಗಳ ನಡುವಿಗೆ ಕಾಡಿನ ಹುತ್ತದ ಮಣ್ಣನ್ನು ತಂದು ನೀರಿನಲ್ಲಿ ಕಲೆಸಿ ಮೆತ್ತಿದರೆ ಅದೇ ಗೋಡೆ! ಗುಡಿಸಿಲಿನ ಒಳಗೆ ನೆಲಕ್ಕೆ ಮಣ್ಣನ್ನು ಹದಮಾಡಿ ಗಟ್ಟಿ ಮಾಡಿದ ನೆಲ. ಹತ್ತಡಿ ಉದ್ದದ ಎಂಟಡಿ ಅಗಲದ ಕೋಣೆ ಅದು. ಅದರಲ್ಲೇ ನಾಲ್ಕಡಿ ಅಗಲಕ್ಕೆ ಸಣ್ಣದಾದ ಅಡುಗೆಕೋಣೆ. ಅದರ ಮೂಲೆಯಲ್ಲಿ ಕುಳಿತು ಆತ ಯೋಚಿಸುತ್ತಿದ್ದ ಒಂದೇ ವಿಚಾವೆಂದರೆ, ಮನೆಗೆ ಯಾವಾಗ ಹೋಗೋದು?

ಅದೊಂದು ಫಾರೆಸ್ಟ್‌ ಕ್ಯಾಂಪು! ಕಾಡುಗಳ್ಳರಿಂದ ಕಾಡನ್ನು ಕಾಯುವವರನ್ನು ಕಾಯುವುದೇ ಆ ಗುಡಿಸಲು. ಅವ ಕೆಲಸಕ್ಕೆ ಸೇರಿ ಎರಡೂವರೆ ತಿಂಗಳು ಕಳೆದಿತ್ತು ಅಷ್ಟೇ. ಕೆಲಸಕ್ಕೆ ಸೇರಿದ ಕೂಡಲೇ ಅವನನ್ನು ನೇರವಾಗಿ ಈ ಕಾಡು ಕಾಯುವ ಕ್ಯಾಂಪಿಗೆ ಕಳುಹಿಸಲಾಗಿತ್ತು. ಕ್ಯಾಂಪಿನ ಸಿಬ್ಬಂದಿಗಳಿಗೆ ಅಡುಗೆ ಮಾಡುವುದೇ ಅವನ ಮುಖ್ಯ ಕೆಲಸವಾಗಿತ್ತು. ಅದೇನು ಕಷ್ಟದ ಕೆಲಸವಾಗಿರಲಿಲ್ಲ ಅವನಿಗೆ. ಇಷ್ಟಕ್ಕೂ ಬೇಯಿಸಲಿಕ್ಕಿದ್ದಿದ್ದು ಅನ್ನ ಸಾರು ಅಷ್ಟೇ. ಆದರೆ ತಿಂಗಳು ಕಳೆದ ಕೂಡಲೇ ಸಂಬಳ ತೆಗೆದುಕೊಂಡು ಮನೆಗೆ ಬರ್ತೀನಿ ಅಂದು ಕೆಲಸಕ್ಕೆ ಬಂದವ ಎರಡು ತಿಂಗಳು ಕಳೆದರೂ ಮನೆಗೆ ಹೋಗಲಾಗಲಿಲ್ಲವಲ್ಲ ಅನ್ನುವುದೇ ಅವನ ಕೊರಗು. ಕ್ಯಾಂಪಿನ ಸೀನಿಯರ್‌ ಬಳಿ ಈ ವಿಚಾರ ಪ್ರಸ್ತಾಪಿಸಿದೊಡನೇ, ‘ಆಯ್ತು ಬಿಡಾ, ಮುಂದಿನ ಸಲ ರೇಷನ್​ಗೆ ಹೋಗುವಾಗ ಸಾಹೇಬ್ರಿಗೇಳಿ ನಿನ್‌ ಸಂಬಳ ಇಸ್ಕೊಂಡ್‌ ಬರ್ತೀನಿ, ಹಾಗೇ ಒಂದ್ವಾರ ರಜೆ ನೂ ಸ್ಯಾಂಕ್ಷನ್‌ ಮಾಡಿಸ್ತಿನಿ ಆಯ್ತಾ?’ ಅಂದಿದ್ದರು. ಕೂಡಲೇ ಇವನೂ, ‘ಸಾರ್‌ ಅಕ್ಕಿ ಖಾಲಿಯಾಗಿದೆ, ಇವತ್‌ ರಾತ್ರಿಗೆ ಆಗ್ಬೋದು ಅಷ್ಟೇ’ ಅಂದ.

‘ಹೇಯ್‌ ಮೂರ್‌ ದಿನ ಮೊದ್ಲೇ ಹೇಳೋದಲ್ವೇನಾ? ಅನ್ನುತ್ತಾ ಮತ್ತೊಬ್ಬ ಸಿಬ್ಬಂದಿ ಎಗರಾಡಿದ. ಇವ್ನಿಗೇನಪ್ಪಾ… ಆರಾಮಾಗಿ ಮಲ್ಗಿರೋದ್‌ ತಾನೆ? ಅದ್ಕೇ ಅವನಿಗೆ ಅಷ್ಟ್‌ ಸೀರಿಯಸ್​ನೆಸ್​ ಇಲ್ಲ’ ಅಂದ ಮತ್ತೊಬ್ಬ.

‘ಇಲ್ಲಾ ಸಾರ್‌ ಮೊನ್ನೇನೆ ಸಾರ್​ಗೆ ಹೇಳಿದ್ದೆ’ ಅಂದ ಇವ.

‘ನಂಗೇಳಿದ್ದಾ?’ ಅನ್ನುತ್ತಾ ಕಣ್ಣು ಕೆಕ್ಕರಿಸಿದ ಸೀನಿಯರ್. ಇವನ ಧ್ವನಿಯೇ ಅಡಗಿ ಹೋಯ್ತು.

‘ಸರಿ ಬಿಡು, ನಾಳೆನೇ ಹೋಗಿ ರೇಷನ್‌ ತಂದು ಜೊತೆಗೆ ನಿನ್‌ ಸಂಬ್ಳನೂ ಇಸ್ಕಬರ್ತಿನಿ’ ಅಂದ.

ಕ್ಯಾಂಪಿನ ಸಿಬ್ಬಂದಿಗಳು ಬೆಳಗ್ಗೆ ಎದ್ದಕೂಡಲೇ ಕಾಲಿ ಕಾಪಿ (ಬ್ಲ್ಯಾಕ್ ಕಾಫಿ) ಮಾಡಿಕೊಟ್ಟು, ರಾತ್ರಿಯ ಅನ್ನದಲ್ಲಿ ಚಿತ್ರಾನ್ನ ಮಾಡಿಕೊಟ್ಟರೆ ಸಾಕಿತ್ತು. ಚಿತ್ರಾನ್ನ ತಿಂದು ಹೊರಡುವ ಹೊತ್ತಿಗೆ ಕೋವಿ ಕ್ಲೀನ್‌ ಮಾಡಿಟ್ಟು, ಒಬ್ಬೊಬ್ಬರಿಗೆ ಒಂದರಂತೆ ಸಣ್ಣ ಪ್ಯಾಕೇಟ್​ನಲ್ಲಿ ಅವಲಕ್ಕಿ, ಬೆಲ್ಲದ ಚೂರು ಕಟ್ಟಿ ಕೊಟ್ಟರೆ ಸಾಕಿತ್ತು. ನಂತರ ಇಡೀ ದಿನ ಅವನೊಬ್ಬನೇ. ಮಧ್ಯಾಹ್ನಕ್ಕೆ ಉಳಿಸಿಕೊಂಡ ಚೂರು ಚಿತ್ರಾನ್ನ ತಿಂದು ಮಲಗಿದರೆ ಮತ್ತೆ ಸಂಜೆ ಅವರು ಬರುವವರೆಗೂ ಕಾಯವುದೇ ಕೆಲಸ. ಅಪರೂಪಕ್ಕೊಮ್ಮೆ ವೈರ್‌ಲೆಸ್ ಮೆಸೇಜ್‌ ಬರುತ್ತಿತ್ತು. ಅದಕ್ಕೊಂದು ಸಿದ್ಧ  ಉತ್ತರ. ಇಲ್ಲೇನೂ ಪ್ರಾಬ್ಲಂ ಇಲ್ಲ ಸಾರ್..‌. ಓವರ್‌ ಸಾರ್…‌ ಮಧ್ಯಾಹ್ನ ಮಲಗಿದರೂ ಆಗಿಂದಾಗ್ಗೆ ಭಯಕ್ಕೆ ಎಚ್ಚರವಾಗಿ ನಿಧಾನವಾಗಿ ಗೋಡೆಯ ಕಿಂಡಿಯಿಂದ ಹೊರಗೆ ಸುತ್ತಾ ನೋಡಿಯೇ  ಬಾಗಿಲು ತೆಗೆಯುತ್ತಿದ್ದ. ಹೆಕ್ಟೇರ್​ಗಟ್ಟಲೆ ಹರಡಿದ್ದ ಆ ಅರಣ್ಯ ಪ್ರದೇಶದಲ್ಲಿ ಸಾವಿರಾರು ಕಾಡಾನೆಗಳು, ನೂರಾರು ಹುಲಿಗಳು, ಕರಡಿಗಳು ಇದ್ದು ಮಧ್ಯದಲ್ಲಿದ್ದ ಈ ಸಣ್ಣ ಗುಡಿಸಲು ಆತನಿಗೆ ಭದ್ರ ಕೋಟೆಯಂಥ ಅನುಭವ ಕೊಡುತ್ತಿತ್ತು.

ಸಂಜೆಯಾಗುತ್ತಿದ್ದಂತೆ ಆತನಿಗೆ ಟೆನ್ಷನ್‌ ಹೆಚ್ಚಾಗುತ್ತಿತ್ತು. ಹಗಲಿನ ಕೆಲಸ ಮುಗಿಸಿ ಬರುವ ಸಿಬ್ಬಂದಿಗಳು ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೇ ಕ್ಯಾಂಪಿಗೆ ವಾಪಾಸ್‌ ಬರುತ್ತಿದ್ದರು. ಅವರು ವಾಪಾಸು ಬರುತ್ತಿದ್ದಂತೆಯೇ ಕುಡಿಯಲು ಕಾಫಿ ರೆಡಿಯಿರಬೇಕಿತ್ತು ಜೊತೆಗೆ ಸ್ನಾನಕ್ಕೆ ಬಿಸಿ ನೀರು. ಆಮೇಲೆ ಊಟಕ್ಕೆ ತಯಾರಿ ಮಾಡಬೇಕಿತ್ತು. ಊಟವೂ ಬಿಸಿಬಿಸಿಯೇ ಇರಬೇಕಿತ್ತು. ಅದೆಲ್ಲದರ ಜವಾಬ್ದಾರಿ ಈತನದ್ದೇ. ಅಡುಗೆ ಮಾಡುತ್ತಿದ್ದಂತೇ, ಯಾರಾದರೂ ಮೆಲ್ಲನೇ ತಂದಿಟ್ಟುಕೊಂಡಿದ್ದ ಸಾರಾಯಿ ಪ್ಯಾಕೆಟ್ ಓಪನ್‌ ಮಾಡಿಕೊಂಡರೆಂದರೇ ಮುಗಿಯಿತು. ಆಮೇಲೆ ಅವರ ಅಬ್ಬರವೇ ಬೇರೆ. ಸಂಪೂರ್ಣ ವ್ಯಕ್ತಿಯೇ ಬದಲಾಗಿ ಹೋಗುತ್ತಿದ್ದ. ಸಾರಾಯಿ ಒಳಹೋಗುತ್ತಿದ್ದಂತೇ ರಾಕ್ಷಸ ಅವತಾರ ತಾಳುತ್ತಿದ್ದ ಆ ಸೀನಿಯರ್​ ಕಂಡರೆ ಇವನಿಗೆ ವಿಪರೀತ ಭಯ. ಆದರೆ ಆತ ಮಾತ್ರ ಬೆಳಿಗ್ಗೆ ಎದ್ದಕೂಡಲೇ ಈತನನ್ನು ಸ್ವಂತ ಮಗನಂತೆ ಪ್ರೀತಿ ತೋರುತ್ತಿದ್ದ. ಆಗೆಲ್ಲಾ ಇವ, ‘ಸಾರ್..‌. ಊರಿಗೋಗ್ಬೇಕು’ ಅನ್ನುತ್ತಾ ತಲೆ ತೆರೆದುಕೊಳ್ತಿದ್ದ. ‘ಆಯ್ತ್‌ ಬುಡು… ನಾಳೆ ಸಾಹೇಬ್ರಿಗೆ ಹೇಳಿ ರಜೆ ಕೊಡಿಸ್ತೀನಿ ನಾಕ್‌ ದಿನ ಹೋಗ್‌ ಬರುವಂತೆ’ ಅನ್ನುವ ಮಾತೇ ಅವನನ್ನು ಹಿಂದಿನ ರಾತ್ರಿಯ ಬೈಗುಳಗಳನ್ನು ಮರೆಸುತ್ತಿತ್ತು. ಆ ದಿನವೂ ಸಂಜೆಯಾಯ್ತು. ತುಸು ಕತ್ತಲಾಗುತ್ತಿದ್ದಂತೇ ಎಲ್ಲರೂ ಬಂದು ಗುಡಿಸಲು ಸೇರಿದರು. ಜೊತೆಗೆ ಕೈಲೊಂದು ಕೋಳಿ ಕೂಡಾ!

‘ಲೋ ಮಗಾ, ತಗಳ ಇದ್ನ ಕ್ಲೀನ್‌ ಮಾಡಿ ಗೊಜ್ಜು ಮಾಡು’ ಅನ್ನ ಮಾಡಿ ಟೊಮ್ಯಾಟೋ ರಸ ಮಾಡು ಸಾಕು ಅಂದಿದ್ರು ಆ ಸೀನಿಯರು. ಅಪರೂಪಕ್ಕೊಮ್ಮೆ ಹಗಲು ಗಸ್ತಿನ ಸಮಯದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ವಾಸ ಇರುವ ಜನರ ಮನೆಯಿಂದ ಸಾಕಿದ ಕೋಳಿ ಕೇಳ್ಕೊಂಡು ಬರುವುದು ಸಾಮಾನ್ಯವಾಗಿತ್ತು. ಕೋಳಿಗೊಜ್ಜು ರೆಡಿ ಮಾಡಿ, ಟೊಮ್ಯಾಟೋ ಬೇಯಲು ಇಟ್ಟು, ಅನ್ನಕ್ಕೆ ನೀರಿಟ್ಟು, ಕೋಳಿಗೊಜ್ಜನ್ನು ಗುಡಿಸಲಿನ ಮಧ್ಯದಲ್ಲಿ ಕುಳಿತಿದ್ದವರಿಗೆ ತಂದುಕೊಟ್ಟ. ಕೋಳಿಗೊಜ್ಜನ್ನು ನೆಂಚುತ್ತಾ, ಸಾರಾಯಿಯ ಗುಟುಕು ಒಳಗೇರಿಸುತ್ತಾ, ‘ಮಗಾ ಗೊಜ್‌ ಸಕತ್‌ ಆಗಿ ಮಾಡಿದಿಯಾ’ ಅನ್ನುತ್ತಾ ಹೊಗಳಿದರು. ಅವರು ಹೊಗಳಿದಾಗೆಲ್ಲಾ ಇವನಿಗೆ ಭಯ! ಯಾಕೆಂದ್ರೆ ಕೆಲವೇ ಹೊತ್ತಿನಲ್ಲಿ ನಶೆ ಏರಿದ ಕೂಡಲೇ ಅವರ ವರಸೆಯೇ ಬದಲಾಗುತ್ತಿತ್ತು.

ನಶೆ ಏರಿಯೇಬಿಟ್ಟಿತು. ಮಾತು ಕಥೆ ಕೇಕೆ ಜೋರಾಯಿತು! ಇನ್ನು ತಡಮಾಡಿದರೇ ಬೈಗುಳ ಬರಬಹುದು ಅನ್ನುತ್ತಾ ಇವ ಹೋಗಿ ಅನ್ನಕ್ಕಿಟ್ಟಿದ್ದ ನೀರಿಗೆ ಚೀಲದಲ್ಲಿದ್ದ ಕೊನೆಯ ಪಾಲಿನ ಅಕ್ಕಿ ಹಾಕಿ ಬಂದ. ಅಕ್ಕಿ ಹಾಕಿ ಅಡುಗೆ ಕೋಣೆಯ ಮೂಲೆಯಲ್ಲಿ ಕುಳಿತ. ಅಷ್ಟರಲ್ಲಿ ವೈರ್​ಲೆಸ್ ಮೆಸೇಜ್‌ ಬಂತು! ಕಾಡಿನ ಮತ್ತೊಂದು ಬದಿಯಿಂದ ನಾಲ್ಕೈದು ಟಾರ್ಚಿನ ಬೆಳಕಿನ ಕಿರಣಗಳು ಹಾದು ಹೋಗಿದ್ದು, ಬಹುಷಃ ಯಾರೋ ಕಾಡುಗಳ್ಳರು ಕಾಡು ನುಗ್ಗಿರಬಹುದೆಂತಲೂ ಯಾವುದಕ್ಕೂ ಅಲರ್ಟ್‌ ಆಗಿರಬೇಕಂತಲೂ ಇದ್ದ ಮೆಸೇಜ್‌ ಅದು. ಕೂಡಲೇ ಮೂಲೆಯಲ್ಲಿದ್ದ ಗನ್ನು ಸೀನಿಯರ್‌ ಕೈಗೆ ಬಂತು, ‘ಯಾರೂ ಹೆದರ್ಬೇಡಿ, ನಾನಿಲ್ವಾ? ನನ್‌ ಸರ್ವೀಸಲ್ಲಿ ಅದೆಷ್ಟ್‌ ಜನ್ರನ್ನು ಹೊಡ್ದಿಲ್ಲ. ನೀವ್‌ ಧೈರ್ಯವಾಗಿರಿ. ನೀನ್‌ ಬೇಗ ಅನ್ನ ಮಾಡು. ಊಟ ಮಾಡ್ಬಿಟ್ ಹೋಗಣ, ನೋಡೇ ಬಿಡಣ… ಕಂಡ್ರೆ ಮಾತ್ರ ಢಮಾರ್!’ ಅನ್ನುತ್ತಾ ಕೋವಿಯನ್ನು ಎದೆಗೇರಿಸಿ ಗುರಿ ಇಟ್ಟು ನೋಡಿದ! ಇವ ಹೋಗಿ ಕುದಿಯುತ್ತಿದ್ದ ಅನ್ನದ ಪಾತ್ರೆಗೆ ತೆಂಗಿನಕಾಯಿಯ ಕರಟದಿಂದ ಮಾಡಿದ ಸೌಟನ್ನು ಹಾಕಿ ತಿರುವಿ ಸೌಟಿನಲ್ಲಿ ತೆಗೆದು ಎರಡು ಬೆರಳಿನಲ್ಲಿ ಅನ್ನವನ್ನು ಹಿಸುಕಿ ನೋಡಿ, ‘ಆಯ್ತ್‌ ಸಾರ್‌ ಇನ್ನೇನ್‌ ಮೂರ್‌ ನಿಮಿಷಕ್ಕೆ ಬಸೀತೀನಿ’ ಅಂದ.

‘ಮೂರ್‌ ನಿಮಿಷ? ಅದೇನ್‌ ಅಡುಗೆ ಮಾಡ್ತೀಯೊ? ಇನ್ನೂ ಟೇಮಿಗೆ ಸರಿಯಾಗಿ ಬೇಯ್ಸೋದು ಕಲ್ತಿಲ್ಲ. ಕೋಳಿಗೊಜ್‌ ಬೇರೆ ಖಾರ ಖಾರ ಮಾಡಿದೀಯಾ’ ಅನ್ನುತ್ತಾ ಎಗರಾಡತೊಡಗಿದ ಸೀನಿಯರು.

ಅದಕ್ಕೆ ಸರಿಯಾಗಿ ತೀರಾ ಹತ್ತಿರದಲ್ಲೇ ಢಮಾರ್‌! ಎಲ್ಲರೂ ಬೆಚ್ಚಿದರು. ಸೀನಿಯರು ತುಟಿಮೇಲೆ ಬೆರಳಿಟ್ಟು ಹುಷ್‌ ಹುಷ್ ಅನ್ನುತ್ತಾ ಎಲ್ಲರನ್ನೂ ಸುಮ್ಮನಿರಿಸಿದ. ಶಬ್ದ ಕೇಳಿದ ಕಡೆಗೆ ಕಿವಿಯಾನಿಸಿದ. ಅಲ್ಲಿಯವರೆಗೂ ಗಜಿಬಿಜಿ ಎನ್ನುತ್ತಿದ್ದ ಗುಡಿಸಲೀಗ ಏಕ್ದಂ ಸೈಲೆಂಟ್.

‘ಸಾರ್..‌. ಹಸಿವಾಗ್ತಿದೆ ಚೂರ್‌ ಉಣ್ಕಬುಡನಾ. ಆಮೇಲೆ ಹೋಗಿ ನೋಡಿದ್ರಾಯ್ತು’ ಅಂದ ಒಬ್ಬ. ಹೌದು ಅದೇ ಸರಿ ಅನ್ನುತ್ತಾ ಮತ್ತೊಬ್ಬ ಜೊತೆಯಾದ.

ಅಷ್ಟರಲ್ಲೇ ಮತ್ತೊಂದು ಢಮಾರ್‌! ಕೂಡಲೇ ಸೀನಿಯರ್‌ ಕೋವಿ ಎತ್ತಿಕೊಂಡವನೇ, ‘ಎಲ್ರೂ ನಡೀರೋ, ನೋಡೇ ಬಿಡುವಾ’ ಅನ್ನುತ್ತಾ ಗುಡಿಸಲಿಂದ ಹೊರನಡೆದ. ಎಲ್ಲರೂ ಕೈಲಿ ಟಾರ್ಚು, ಕತ್ತಿ ಹಿಡಿದು ಹೊರನಡೆದರು. ಅನತಿ ದೂರದಲ್ಲಿ ಟಾರ್ಚಿನ ಕಿರಣ ಕಾಣಿಸಿತು.

ಯಾರೋ ಬಂದವ್ರೇ ಸಾರ್! ಒಬ್ಬ ಹೇಳಿದ.

‘ಟಾರ್ಚ್‌ ಬುಡೋ’ ಅಂದ ಸೀನಿಯರು

ಟಾರ್ಚು ಆನ್‌ ಮಾಡಿದರೇ ಅದರ ಪವರೇ ಸಾಲುತ್ತಿರಲಿಲ್ಲ. ‘ಥೂ ಬ್ಯಾಟರಿ ಹಾಕಿರ್ಬೇಕು ತಾನೆ? ಈಡಿಯಟ್‌’ ಬೈಯುತ್ತಾ, ‘ಲೋ ಮಗಾ ಆ ಬ್ಯಾಟ್ರಿ ತಗಬಾರ್ಲಾ’ ಅಂದು ಕೂಗಿದ. ಗುಡಿಸಲಿನ ಬಾಗಿಲ ಬಳಿಯೇ ನಿಂತಿದ್ದ ಇವ ಒಳಬಂದು ಬ್ಯಾಟರಿ ತಗಂಡು ಓಡಿದ. ಇವನ ಕೈಗೆ ಟಾರ್ಚು ಕೊಟ್ಟು ಬ್ಯಾಟ್ರಿ ಬದಲಾಯಿಸಿ ಬೆಳಕು ಬಿಡಲು ಹೇಳಿದ. ಇವ ಬ್ಯಾಟರಿ ಹಾಕಿ ಟಾರ್ಚು ಬಿಡುತ್ತಿದ್ದಂತೇ ಅ ಕಡೆ ದೂರದಲ್ಲಿ ಮತ್ತೊಂದು ಟಾರ್ಚಿನ ಬೆಳಕು ಜೊತೆಗೆ ಯಾರೋ ಹೆಜ್ಜೆ ಹಾಕುತ್ತಿರುವುದು ಕಾಣಿಸಿತು.

ಕೂಡಲೇ ಸೀನಿಯರು, ಲೇಯ್‌ ಯಾರೋ ಅದು ಅನ್ನುತ್ತಾ ಕೂಗಿದ.

ಆ ಕಡೆಯಿಂದ… ‘ನಿಮ್ಮಪ್ಪ ಕಣೊ! ತಿಕಾ ಮುಚ್ಕಂಡ್ ಹೋಗು’ ಅನ್ನುವ ಧ್ವನಿ ಕೇಳಿಬಂತು.

‘ನಮ್‌ ಕಾಡಿಗೇ ನುಗ್ಗಿ ನಂಗೇ ಬೈತೀಯೇನೋ ಬೋಳಿಮಗನೇ’ ಸೀನಿಯರ್ ಕೋವಿ ತಿರುಗಿಸಿ, ‘ಟಾರ್ಚು ಬಿಡ್ರೋ ಆಕಡೆ, ಇವತ್‌ ಕೊಲ್ತೀನಿ ಅವ್ನ’ ಕೂಗಿದ.

ಒಬ್ಬ ಟಾರ್ಚ್‌ ಬಿಟ್ಟ. ‘ಸರಿಯಾಗಿ ಬಿಡೋ ಲೋಫರ್’ ಸೀನಿಯರ್ ಗುಡುಗಿದ.

ಆ ಕಡೆ ವ್ಯಕ್ತಿ ಕಾಣುತ್ತಿದ್ದಂತೆ, ‘ಅಲ್ಲೇ ಅಲ್ಲೇ ಬಿಡು ಟಾರ್ಚು ಹೊಡೀತೀನಿ ಇವತ್ತು’ ಅನ್ನುತ್ತ, ಕೈಲಿದ್ದ ಡಬಲ್‌ ಬ್ಯಾರಲ್‌ ಗನ್ನಿನ ಬ್ಯಾರಲ್‌ ಅನ್ನು ಆ ಕಡೆ ತಿರುಗಿಸಿ ಗುರಿ ಇಟ್ಟ. ಆ ಕಡೆಯಿಂದ ಟಾರ್ಚಿನ ಪ್ರಖರ ಬೆಳಕು ಇವನ ಕಣ್ಣಿಗೇ ಬಡಿಯಿತು. ಕಣ್ಣು ಕತ್ತಲಾಗಿ ಕೈಯಿಂದ ಮುಚ್ಚಿಕೊಳ್ಳುತ್ತಾ, ‘ಯಾವನೋ ಅದು… ಹೊಡಿರೋ ಅವ್ನಿಗೆ’ ಕೂಗಿದ.

ಅವನ ಜೊತೆಯಲ್ಲಿದ್ದವ ಬೆಳಕು ತೂರಿಬಂದ ಕಡೆ ಕಲ್ಲು ತೂರಿದ. ಆ ಕಡೆಯಿಂದ ಯಾರೋ ಓಡುತ್ತಿದ್ದಂತೆ ಕಾಣಿಸಿತು. ಈ ಕಡೆಯ ಟಾರ್ಚಿನ ಬೆಳಕಿಗೆ ಆ ಕಡೆಯವರು ಅಸ್ಪಷ್ಟವಾಗಿ ಕಾಣತೊಡಗಿದರು. ಸೀನಿಯರು ಮತ್ತೆ ಕೋವಿ ಎದೆಗೇರಿಸಿ ಕೂಗಿದ, ‘ಧೈರ್ಯ ಇದ್ರೆ ಎದುರಿಗೆ ಬನ್ರೋ ನಿಮ್ಮ ಹುಟ್ಲಿಲ್ಲಾ ಅನ್ಸುಬುಡ್ತಿನಿ!’

ಆ ಕಡೆಯಿಂದ ಓ ಹೋಯ್… ಹೋಗಾ ಅನ್ನುವ ಧನಿ. ಜೊತೆಗೆ ಜೋರು ನಗು.

ಸೀನಿಯರ್​ಗೆ ಕೋಪ ಮಿತಿಮೀರಿತು. ‘ಮಗಾ ಸರ್ಯಾಗಿ ಆ ಕಡೆ ಟಾರ್ಚ್‌ ಬಿಡೋ’ ಅನ್ನುತ್ತಾ ಗುರಿಇಟ್ಟ. ಟಾರ್ಚಿನ ಬೆಳಕಿಗೆ ಆ ಕಡೆಯಿಂದಲೂ ಯಾರೋ ಈ ಕಡೆಗೇ ನೋಡುತ್ತಿದ್ದಂತೇ ಕಾಣಿಸಿತು.

ಈ ಕಡೆಯ ಒಬ್ಬ, ‘ಸಾರ್..‌. ಅವನತ್ರನೂ ಕೋವಿ ಇದ್ದಂಗಿದೆ ಹುಷಾರು’ ಅಂದ.

ಅಷ್ಟರಲ್ಲಾಗಲೇ ಸೀನಿಯರು ಕೋವಿ ಗುರಿಹಿಡಿದು, ‘ಟಾರ್ಚ್ ಸರೀ ಬುಡಾ’ ಎಂದು ಅರಚಿದ. ಅಂತೂ ಆ ಕಡೆಯವರ ಬಳಿಯೂ ಕೋವಿ ಇದ್ದಿದ್ದು ಸ್ಪಷ್ಟವಾಯಿತು. ಪಕ್ಕದವ ಬೆದರಿ, ‘ಸಾರದ.. ಕೋವಿ ಐತೆ ಅವರತ್ರ’
ಅಷ್ಟರಲ್ಲಾಗಲೇ… ಢಂ! ಕೋವಿಯ ಗುಂಡು ಸಿಡಿಯಿತು. ಸೀನಿಯರ್‌ ಹಿಂದಕ್ಕೆ ಹಾರಿಬಿದ್ದು ಕುಸಿದ.
ಪಕ್ಕದಲ್ಲಿದ್ದವನಿಗೆ ಕುಡಿದ ನಶೆ-ಭಯ ಸೇರಿ, ಗುಂಡು ಹೊಡೆದಿದ್ದು ಅವರಾ, ಸೀನಿಯರಾ? ಅನುಮಾನದೊಂದಿಗೆ, ‘ಅಯ್ಯೋ ಗುಂಡೇಟ್‌ ಬಿತ್ತು… ಸಾರ್‌ ಏನಾಯ್ತು ಸಾರ್‌’ ಅನ್ನುತ್ತಾ ಕೂಗಿದ. ಪಕ್ಕದವ ಸೀನಿಯರ್‌ ಬಳಿ ಹೋಗಿ ಅವನ ಕೈಯಿಂದ ಕೋವಿ ಕಿತ್ತುಕೊಂಡವನೇ ಡಬಲ್‌ ಬ್ಯಾರಲ್‌ ಗನ್ನಿನ ಮತ್ತೊಂದು ಬ್ಯಾರಲ್​ನಿಂದ ಮತ್ತೊಂದು ಗುಂಡು ಹೊಡೆದದ್ದೇ ದೊಡ್ಡ ಶಬ್ದದೊಂದಿಗೆ ಅದು ಬೆಂಕಿ ಉಗುಳಿತು.

ಸೀನಿಯರ್‌ ಬಳಿ ಬಂದ ಒಬ್ಬ, ‘ಸಾರ್‌’ ಎಂದು ಕೂಗಿಕೊಂಡ. ಇನ್ನೊಬ್ಬ, ‘ಏನಾಯ್ತು ನೋಡೋ’ ಅನ್ನುತ್ತಾ ಕೆಂಗಣ್ಣು ಬೀರಿದ. ಸೀನಿಯರ್ ಬಿದ್ದು ನರಳುತ್ತಿದ್ದ. ಅವರಲ್ಲೊಬ್ಬ ನೀರು ತಂದು ಚಿಮುಕಿಸಿದಾಗ ನಿಧಾನವಾಗಿ ಎದ್ದು ಕುಳಿತು, ‘ಬಡ್ಡೀಮಕ್ಳು ನಂಗೇ ಫೈರ್‌ ಮಾಡ್ತಾರೆ’ ಅನ್ನುತ್ತಾ ಕೋವಿ ಕೊಡ್ರೋ ಎಂದು ಅಬ್ಬರಿಸಿದ.

‘ಏನಾಯ್ತ್‌ ಸಾರ್?‌ ನಿಮಗೆ ಪೆಟ್‌ ಬಿತ್ತಾ?’ ಅನ್ನುತ್ತಾ ಮತ್ತೊಬ್ಬ ಕೋವಿಯೊಂದಿಗೆ ಹತ್ತಿರ ಬಂದ.

‘ನಂಗೇನ್‌ ಆಗಿಲ್ಲ. ಕೋವಿ ಫೈರ್‌ ಆಯ್ತಲಾ… ಆ ಫೋರ್ಸಿಗೆ ನಾನ್‌ ಹಿಂದಕ್‌ ಬಿದ್ದೆ ಅಷ್ಟೇ’ ಎಂದ.

‘ಉಫ್…‌ ನಾನು ನಿಮ್ಗೇ ಗುಂಡೇಟ್‌ ಬಿತ್ತು ಅಂದ್ಕಂಡೆ ಸಾರ್‌’ ಅನ್ನುತ್ತಾ ಮತ್ತೊಬ್ಬ ನೀರು ಕುಡಿದ.

ತಾನೂ ನೀರು ಕುಡಿದ ಸೀನಿಯರ್, ‘ಸ್ವಲ್ಪ ಸುಧಾರಿಸ್ಕಳಣ ಇರಿ’ ಅಂದ. ಕುಡಿದ ಸಾರಾಯಿ ಸ್ವಲ್ಪ ಹೆಚ್ಚೇ ಸುಸ್ತು ಮಾಡಿಸಿತ್ತು ಅವರನ್ನು.

ಎರಡನೇ ಗುಂಡು ಹೊಡೆದವ… ‘ಸಾರ್‌ ನೀವು ಫೈರ್‌ ಮಾಡಿದ್ಮೇಲೆ ನಾನ್‌ ಮಾಡ್ದೆ ಸಾರ್..‌. ಏಟ್‌ ಬಿತ್ತೂಂತ ಕಾಣುತ್ತೆ. ನೋಡಿ ಸೌಂಡೇ ಇಲ್ಲ ಅವ್ರದ್ದು ಅಂದ.’

‘ಬಿದ್ರೂ ಬಿದ್ದಿರ್ಬೋದು, ನಡೀರ್ಲಾ ನಡೀರಿ, ನಾಳೆ ಓಗಿ ನೋಡ್ಕಂಡ್ರಾಯ್ತದೆ, ದಿನಾ ಇದ್ದದ್ದೇಯಾ’ ಸೀನಿಯರ್ ಅಂದ. ಅಷ್ಟರಲ್ಲಿ ಏನೋ ಕಮಟು ವಾಸನೆ. ‘ಈ ಕೋವಿ ಸಿಡದ್ರೆ ಇದೊಂದ್​ ವಾಸ್ನೆ ಥೂ’ ಅನ್ನುತ್ತಾ ಸೀನಿಯರ್ ಮೂಗೊರೆಸಿಕೊಂಡು ಕುಡಿಯಲು ತಂದ ನೀರನ್ನು ಕೋವಿಯ ನಳಿಕೆಯ ಮೇಲೆ ಸುರಿದ. ಆದರೂ ಕಮಟು ವಾಸನೆ! ‘ಸರಿ ನಡೀರಿ ಹೋಗುವಾ ಹೊಟ್ಟೆ ಹಸಿದು ಕಣ್‌ ಕಾಣ್ತಿಲ್ಲ’ ಎಲ್ಲರೂ ಸೀನಿಯರ್​ನನ್ನು ಹಿಂಬಾಲಿಸುತ್ತ ಗುಡಿಸಲಿನೆಡೆ ನಡೆದರು.

‘ಲೋ ಮಗಾ ಊಟ ತಗಬಾರ್ಲಾ’ ಸೀನಿಯರ್ ಕೂಗಿದ. ಕೂಗುತ್ತಲೇ ಇದ್ದ. ಧಡಬಡಿಸಿ ಅಡುಗೆಕೋಣೆಗೆ ತೆರಳಿದ ಇವ ದಂಗಾಗಿ ಮೂಗು ಮುಚ್ಚಿಕೊಂಡು ನಿಂತೇ ಇದ್ದ. ಪಾತ್ರೆಯೂ ಸೀದು, ಅನ್ನವೂ ಕಮಟಿಕ್ಕಿ ಕಾಡನ್ನು ಆವರಿಸತೊಡಗಿತ್ತು.

ಅಂಕಣದ ಆಶಯ : Forest Stories : ಕಾಡೇ ಕಾಡತಾವ ಕಾಡ ; ಛಾಯಾಗ್ರಾಹಕ ವಿನೋದ್ ಕುಮಾರರ ಹೇಳದೆ ಉಳಿದ ಕಾಡಕಥನಗಳು

TV9 Kannada


Leave a Reply

Your email address will not be published. Required fields are marked *