Glenn Maxwell
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಮ್ಯಾಕ್ಸ್ವೆಲ್ ಮುಂದಿನ ತಿಂಗಳು ಮೆಲ್ಬೋರ್ನ್ನಲ್ಲಿ ಭಾರತೀಯ ಮೂಲದ ತನ್ನ ಗೆಳತಿಯನ್ನು ಮದುವೆಯಾಗಲಿದ್ದಾರೆ. ಅವರ ಮದುವೆಯ ಕಾರಣ, ಮ್ಯಾಕ್ಸ್ವೆಲ್ ಸ್ವಲ್ಪ ಸಮಯದವರೆಗೆ ಕ್ರಿಕೆಟ್ ಕ್ಷೇತ್ರದಿಂದ ದೂರವಿರಲಿದ್ದಾರೆ. ಅದರಂತೆ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪಾಕಿಸ್ತಾನ ಪ್ರವಾಸ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ 2022 ನ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾದ ODI ಮತ್ತು T20 ತಂಡದ ಪ್ರಮುಖ ಭಾಗವಾಗಿದ್ದಾರೆ. ಅಲ್ಲದೆ IPL ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪ್ರಮುಖ ಆಟಗಾರ ಎಂಬುದು ವಿಶೇಷ.
ಈ ತಿಂಗಳ ಅಂತ್ಯದಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. 24 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಪಾಕ್ನಲ್ಲಿ ಆಡುತ್ತಿದ್ದು, ಈ ಐತಿಹಾಸಿಕ ಪ್ರವಾಸದಿಂದ ವಿವಾಹದ ಕಾರಣ ಮ್ಯಾಕ್ಸ್ವೆಲ್ ಹೊರಗುಳಿಯಲಿದ್ದಾರೆ. ಈ ಬಗ್ಗೆ ಚಾನೆಲ್ ಫಾಕ್ಸ್ ಸ್ಪೋರ್ಟ್ನೊಂದಿಗೆ ಮಾತನಾಡಿದ ಮ್ಯಾಕ್ಸಿ, “ವಿವಾಹ ನಿಶ್ಚಿತವಾಗಿದ್ದ ವೇಳೆ ಯಾವುದೇ ಸರಣಿಯ ವೇಳಾಪಟ್ಟಿ ನಿರ್ಧಾರವಾಗಿರಲಿಲ್ಲ. ಹೀಗಾಗಿ ಇದೀಗ ವಿವಾಹದ ಕಾರಣದಿಂದಾಗಿ ಸರಣಿಯಿಂದ ಹೊರಗುಳಿಯಬೇಕಾಗಿ ಬಂದಿದೆ ಎಂದು ತಿಳಿಸಿದರು.
ಪಾಕಿಸ್ತಾನ ಸರಣಿಯಲ್ಲಿ ಮಾತ್ರವಲ್ಲ, ಐಪಿಎಲ್ನ ಆರಂಭಿಕ ಪಂದ್ಯಗಳಲ್ಲಿಯೂ ಮ್ಯಾಕ್ಸ್ವೆಲ್ ಕಾಣಿಸಿಕೊಳ್ಳುವುದು ಅನುಮಾನ. ಐಪಿಎಲ್ನ ಹೊಸ ಸೀಸನ್ ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೆ ಆರಂಭಿಕ ಪಂದ್ಯಗಳ ವೇಳೆ ಮ್ಯಾಕ್ಸ್ವೆಲ್ ತಂಡವನ್ನು ಕೂಡಿಕೊಳ್ಳುವುದು ಡೌಟ್ ಎನ್ನಲಾಗಿದೆ. ಏಕೆಂದರೆ ಮ್ಯಾಕ್ಸ್ವೆಲ್ ವಿವಾಹ ಮಾರ್ಚ್ 27 ರಂದು ಫಿಕ್ಸ್ ಆಗಿದ್ದು, ವಿವಾಹದ ಸಂಭ್ರಮದ ಬಳಿಕ ಮ್ಯಾಕ್ಸ್ವೆಲ್ ಆಗಮಿಸಿದರೂ ಕ್ವಾರಂಟೈನ್ ಎಲ್ಲಾ ಮುಗಿದ ಬಳಿಕವಷ್ಟೇ ತಂಡವನ್ನು ಕೂಡಿಕೊಳ್ಳಬಹುದು. ಹೀಗಾಗಿ ಐಪಿಎಲ್ನಲ್ಲಿನ ಆರ್ಸಿಬಿಯ ಮೂರು-ನಾಲ್ಕು ಪಂದ್ಯಗಳನ್ನು ಮ್ಯಾಕ್ಸ್ವೆಲ್ ತಪ್ಪಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.