Gold Price: ದಿಢೀರನೇ ಜಿಗಿದ ಚಿನ್ನದ ದರದ ಹಿಂದಿನ ಕಾರಣ ಏನು? ಆಭರಣ ವ್ಯಾಪಾರಿಗಳು ಏನಂತಾರೆ? | What Are The Factors Which Leads To Gold Price Rise In India And Opinion Of Retail Jewelers


Gold Price: ದಿಢೀರನೇ ಜಿಗಿದ ಚಿನ್ನದ ದರದ ಹಿಂದಿನ ಕಾರಣ ಏನು? ಆಭರಣ ವ್ಯಾಪಾರಿಗಳು ಏನಂತಾರೆ?

ಅನ್ನಪೂರ್ಣಾ ಜ್ಯುವೆಲ್ಲರ್ಸ್ ಮಾಲೀಕ ದಿನೇಶ್​ ರಾವ್

“24 ಕ್ಯಾರೆಟ್ ಶುದ್ಧತೆಯ ಚಿನ್ನದ ಬೆಲೆ ಒಂದು ದಿನದಲ್ಲಿ 52 ಸಾವಿರ ಹತ್ತಿರ ಹೋಗಿ, ವಾಪಸ್ ಬಂದಿದೆ. ಅದೂ ವಾರ್ಷಿಕ ಗರಿಷ್ಠ ಮಟ್ಟವನ್ನು ಮುಟ್ಟಿತು. ಅದು ನಮಗೆ, ಅಂದರೆ ರೀಟೇಲ್ ಮಾರಾಟಗಾರರ ಗಮನಕ್ಕೂ ಬಂದಿಲ್ಲ. ಅದು ಬುಲಿಯನ್ ಮಾರ್ಕೆಟ್ ಟ್ರೇಡಿಂಗ್. ಯಾರು ಚಿನ್ನದ ಮೇಲೆ ವಹಿವಾಟು ನಡೆಸುತ್ತಾರಲ್ಲ ಅವರಿಗೆ ಅನುಭವಕ್ಕೆ ಬರುವಂಥದ್ದು. ನಾವು ಆಭರಣ ವ್ಯಾಪಾರಿಗಳು. ಬೆಳಗ್ಗಿನ ಆರಂಭದ ಬೆಲೆ ಮತ್ತು ದಿನದ ಕೊನೆಯ ಬೆಲೆ ಇವೆರಡು ನಮಗೆ ಮುಖ್ಯ. ಹಾಗಂತ ಬೇರೆ ವಿದ್ಯಮಾನಗಳು ಚಿನ್ನದ ದರದ ಮೇಲೆ ಪ್ರಭಾವ ಬೀರುವುದೇ ಇಲ್ಲ ಅಂತೇನಿಲ್ಲ. ಈಗ ಕೂಡ ಅಂಥ ಕೆಲವು ಸಂಗತಿಗಳು ಪರಿಣಾಮ ಬೀರಿವೆ,” ಅಂತಲೇ ಟಿವಿ9ಕನ್ನಡ ಡಿಜಿಟಲ್ ಜತೆ ಮಾತು ಶುರು ಮಾಡಿದರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದ ಅನ್ನಪೂರ್ಣ ಜ್ಯುವೆಲ್ಲರ್ಸ್ ಮಾಲೀಕರಾದ ದಿನೇಶ್ ರಾವ್. ಈಚೆಗೆ ಚಿನ್ನದ (Gold Rate) ಬೆಲೆ ಏಕಾಏಕಿ ಏರಿಕೆ ಆಗಿ, ಹೌಹಾರುವ ಮಟ್ಟಿಗೆ ಆಯಿತಲ್ಲಾ ಅದು ನಿಮಗೆ ನೆನಪಿರಬಹುದು. ಮೊದಲೇ ಮದುವೆ ಸೀಸನ್. ಭಾರತದಲ್ಲಿ ಚಿನ್ನ ಖರೀದಿಯಿಲ್ಲದೆ ಆಗುವ ಮದುವೆ ಮೊದಲಾದ ಸಂದರ್ಭಗಳನ್ನು ಊಹಿಸುವುದೂ ಕಷ್ಟ. ಆದ್ದರಿಂದ ಹೀಗೆ ಬೆಲೆ ಏರಿಕೆಯಿಂದ ಗಾಬರಿ ಬೀಳುವಂತಾಯಿತು.

ಆಭರಣ ಚಿನ್ನ ಅಥವಾ 999 ಶುದ್ಧತೆಯ ಅಪರಂಜಿ ಚಿನ್ನವಾಗಲೀ ಈಗಲೂ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಆರೇಳು ಸಾವಿರ ರೂಪಾಯಿ ಕಡಿಮೆಯಲ್ಲೇ ವಹಿವಾಟು ನಡೆಸುತ್ತಿವೆ. 2020ರ ಆಗಸ್ಟ್​ನಲ್ಲಿ ಅಪರಂಜಿ ಚಿನ್ನದ 10 ಗ್ರಾಮ್ ಬೆಲೆ 56000 ರೂಪಾಯಿ ದಾಟಿದ್ದು, ಸಾರ್ವಕಾಲಿಕ ದಾಖಲೆ. ಆದರೆ ಸಾಮಾನ್ಯವಾಗಿ 22 ಕ್ಯಾರೆಟ್ (ಶೇ 91.7 ಶುದ್ಧತೆ ಇರುವಂಥದ್ದು) ಚಿನ್ನದಲ್ಲೇ ಆಭರಣ ಮಾಡಲಾಗುತ್ತದೆ. 24 ಕ್ಯಾರೆಟ್​ (999 ಶುದ್ಧತೆ) ಆಭರಣ ಬಂದರೂ ಅದನ್ನು ಬಹಳ ನಾಜೂಕಾಗಿ ಬಳಸಬೇಕಾಗುತ್ತದೆ ಹಾಗೂ ತುಂಬ ಶ್ರೀಮಂತ ವರ್ಗ ಮತ್ತು ಆಯ್ದ ಸಂದರ್ಭಗಳಿಗೆ ಅಂತ ಬಳಸುವುದುಂಟು. ಇನ್ನು ಈಗಿನ ಸನ್ನಿವೇಶಕ್ಕೆ ಹಿಂತಿರುಗುವುದಾದರೆ, ರಷ್ಯಾ- ಉಕ್ರೇನ್ ಮಧ್ಯದ ಬಿಕ್ಕಟ್ಟು ಜಾಗತಿಕವಾಗಿ ಷೇರು ಮಾರುಕಟ್ಟೆ ಮೇಲೆ ಆಗಿದೆ. ಆ ಕಾರಣಕ್ಕೆ ಹೂಡಿಕೆದಾರರು ಷೇರು ಮಾರಾಟದಲ್ಲಿ ತೊಡಗಿದ್ದರು.

ಭಾರತದ ದೇಶೀ ಷೇರು ಮಾರುಕಟ್ಟೆಯಲ್ಲೂ ಮೇಲಿಂದ ಮೇಲೆ ಸೂಚ್ಯಂಕಗಳು ನೆಲ ಕಚ್ಚಿ, ಹೂಡಿಕೆದಾರರ ಸಂಪತ್ತು ಕರಗುವಂತಾಯಿತು. ಇಂಥ ಸಂದರ್ಭದಲ್ಲಿ ಸಹಜವಾಗಿಯೇ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಚಿನ್ನ ಸೇರಿದಂತೆ ಬೆಲೆ ಬಾಳುವ ಲೋಹಗಳ ಮೇಲೆ ಮಾಡುತ್ತಾರೆ. ಆಗ ಬೆಲೆ ಬಾಳುವ ಲೋಹಗಳ ಬೇಡಿಕೆ ಹೆಚ್ಚಾಗಿ, ಅದರ ಮಾರುಕಟ್ಟೆ ದರಕ್ಕಿಂತ ಪ್ರೀಮಿಯಂಗೆ (ಹೆಚ್ಚಿನ ಹಣಕ್ಕೆ) ವಹಿವಾಟು ಆಗುತ್ತದೆ. ಉಳಿದ ಅವಧಿಯಾಗಿದ್ದರೆ ಚಿನ್ನದ ಬೆಲೆ ಏರಿಕೆ ಮಾತ್ರ ಗಮನಕ್ಕೆ ಬರುತ್ತಿತ್ತೋ ಏನೋ ಅಥವಾ ಬಾರದೆಯೂ ಹೋಗಬಹುದಿತ್ತು. ಆದರೆ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳ ತನಕ ಭಾರತದಲ್ಲಿ ಮದುವೆ ಸೀಸನ್ ಎಂದು ಪರಿಗಣಿಸಲಾಗುತ್ತದೆ. ಶುಭ ಮುಹೂರ್ತಗಳು ಅನುಸರಿಸುವವರು ಕಾಯುತ್ತಾರೆ. ಇನ್ನು ಗ್ರಾಮೀಣ ಭಾಗದಲ್ಲಿ ತಮ್ಮ ಪಾಲಿನ ಕೃಷಿ ಆದಾಯ ಪಡೆದುಕೊಂಡಿರುತ್ತಾರೆ. ಆದ್ದರಿಂದ ಮದುವೆ ಮೊದಲಾದ ಶುಭ ಸಮಾರಂಭಗಳನ್ನು ಆಯೋಜಿಸುತ್ತಾರೆ.

ಇಂಥ ಕಾರ್ಯಕ್ರಮಗಳಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿ ಮಾಡುವುದು ಸಾಮಾನ್ಯವಾದ್ದರಿಂದ ಈಗಿನ ಬೆಲೆ ಏರಿಕೆಗೆ ಮಹತ್ವ ಹೆಚ್ಚು. ಬೆಳ್ಳಿ ಕೂಡ ಈಚೆಗೆ ಕೇಜಿಗೆ 68 ಸಾವಿರ ರೂಪಾಯಿ ದಾಟಿತ್ತು. ನಿಮಗೆ ಗೊತ್ತಿರಲಿ, ಬೆಳ್ಳಿಯನ್ನು ಹಲವು ಕೈಗಾರಿಕೆಗಳಲ್ಲಿ ಬಳಸುತ್ತಾರೆ. ಕೈಗಾರಿಕೆಗಳ ಚಟುವಟಿಕೆಗೆ ಉತ್ತಮಗೊಂಡು, ಬೇಡಿಕೆ ಸುಧಾರಿಸಿದಲ್ಲಿ ಬೆಳ್ಳಿಯೂ ಮೇಲೇರುತ್ತದೆ. ಈಗ ಕೊರೊನಾ ನಿರ್ಬಂಧಗಳು ಮುಗಿದು, ಬಹುತೇಕ ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆ ಚಟುವಟಿಕೆಗಳು ಶುರುವಾಗಿವೆ. ಆದ್ದರಿಂದಲೇ ಬೆಳ್ಳಿಯ ಬೆಲೆಯೂ ಜಾಸ್ತಿ ಆಗಿದೆ. ಇಷ್ಟಂತೂ ಈಗಿನ ಸನ್ನಿವೇಶ ಆಯಿತು. ಅಲ್ಪಾವಧಿಯಲ್ಲಿ ಬೆಲೆಯ ಟ್ರೆಂಡ್ ಹೇಗಿರಬಹುದು ಎಂಬ ಬಗ್ಗೆ ದಿನೇಶ್​ ರಾವ್ ಅವರೇ ಮಾತನಾಡಿ, “ಈಗಿನ ಟ್ರೆಂಡ್​ನಲ್ಲಿ ಹೇಳಬೇಕಾದರೆ ಹತ್ತು ಗ್ರಾಮ್​ ಚಿನ್ನಕ್ಕೆ ಒಂದೆರಡು ಸಾವಿರ ರೂಪಾಯಿ ಬೆಲೆ ಏರಿಕೆ ಆಗಬಹುದು ಅಥವಾ ಇಳಿಕೆ ಆಗಬಹುದು. ತೀರಾ ದೊಡ್ಡ ಮಟ್ಟದ್ದು ಆಗಬಹುದು ಅಂತೇನೂ ಅನಿಸಲ್ಲ. ಚಿನ್ನದ ಟ್ರೇಡಿಂಗ್ ಮಾಡುವವರು ಬೇರೆ, ನಮ್ಮಂಥ ರೀಟೇಲ್ ಆಭರಣ ವ್ಯಾಪಾರಿಗಳು ಬೇರೆ. ತಮ್ಮ ಮನೆ ಕಾರ್ಯಕ್ರಮಗಳಿಗಾಗಿ ಚಿನ್ನ- ಬೆಳ್ಳಿ ಖರೀದಿ ಮಾಡಬೇಕು ಅಂತಿರುವವರು ಈಗಿನ ದರದಲ್ಲೂ ಕೊಳ್ಳಬಹುದು,” ಎಂದರು.

TV9 Kannada


Leave a Reply

Your email address will not be published. Required fields are marked *