GT vs CSK: ಸಿಎಸ್​ಕೆ ಗೆಲುವಿಗೆ ಕಿಲ್ಲರ್ ಆದ ಮಿಲ್ಲರ್: ಈ ಥ್ರಿಲ್ಲರ್ ಪಂದ್ಯ ಹೇಗಿತ್ತು ನೋಡಿ | David Miller and Rashid Khan memorable innings Gujarat Titans to sensational win over CSK in IPL 2022


GT vs CSK: ಸಿಎಸ್​ಕೆ ಗೆಲುವಿಗೆ ಕಿಲ್ಲರ್ ಆದ ಮಿಲ್ಲರ್: ಈ ಥ್ರಿಲ್ಲರ್ ಪಂದ್ಯ ಹೇಗಿತ್ತು ನೋಡಿ

David Miller GT vs CSK IPL 2022

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ (IPL 2022) ನಡೆದ 29ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರೋಚಕ ಗೆಲುವು ಸಾಧಿಸಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​​ನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್​​ ವಿರುದ್ಧದ ಕದನದಲ್ಲಿ ಜಿಟಿ (GT vs CSK) 3 ವಿಕೆಟ್​ಗಳ ಜಯ ಕಂಡಿತು. ಇತ್ತ ಸಿಸ್​​ಕೆ ಐದನೇ ಸೋಲುಂಡಿದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ನಡೆದ ಈ ರಣ ರೋಚಕ ಕಾದಾಟ ಕೊನೆಯ ಓವರ್ ವರೆಗೂ ನಡೆಯಿತು. ಅಂತಿಮ 6 ಎಸೆತಗಳಲ್ಲಿ ಗುಜರಾತ್​ಗೆ ಗೆಲ್ಲಲು 13 ರನ್​ಗಳ ಅವಶ್ಯತೆ ಇದ್ದವು. ಕ್ರೀಸ್​ನಲ್ಲಿದ್ದ ಡೇವಿಡ್ ಮಿಲ್ಲರ್ (David Miller) ಅಕ್ಷರಶಃ ಅಬ್ಬರಿಸಿ ಅಜೇಯ 94 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದಿಟ್ಟರು. ಗುಜರಾತ್ ಈಗ ಆಡಿದ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಕಂಡಿದ್ದು ಕೇವಲ ಒಂದು ಪಂದ್ಯದಲ್ಲಷ್ಟೆ ಸೋತು 10 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​​ಕೆಗೆ ಉತ್ತಮ ಆರಂಭ ಸಿಗಲಿಲ್ಲ. ಆರ್‌ಸಿಬಿ ವಿರುದ್ಧ ಸಿಡಿದು ನಿಂತ ರಾಬಿನ್‌ ಉತ್ತಪ್ಪ (3) ಇಲ್ಲಿ ಸಂಪೂರ್ಣ ವೈಫ‌ಲ್ಯ ಕಂಡರು. ಮೊಯಿನ್‌ ಅಲಿ ಒಂದೇ ರನ್‌ ಮಾಡಿ ವಾಪಸಾದರು. ಆದರೆ ಇಷ್ಟು ಕಾಲ ತೀವ್ರ ರನ್‌ ಬರಗಾಲ ಅನುಭವಿಸುತ್ತಿದ್ದ ರುತುರಾಜ್‌ ಗಾಯಕ್ವಾಡ್‌ ಮತ್ತು ಅಂಬಾಟಿ ರಾಯುಡು ಈ ಬಾರಿ ಕೈಬಿಡಲಿಲ್ಲ. ಇಬ್ಬರೂ ಸೇರಿಕೊಂಡು ತಂಡವನ್ನು ಮೇಲೆತ್ತಿದರು. ಇವರ 3ನೇ ವಿಕೆಟ್‌ ಜತೆಯಾಟ ಚೆನ್ನೈ ಚೇತರಿಕೆಯಲ್ಲಿ ಮಹತ್ವದ ಪಾತ್ರ ವಹಿಸಿತು. ಪವರ್‌ ಪ್ಲೇಯಲ್ಲಿ 2ಕ್ಕೆ 39 ರನ್‌ ಮಾಡಿದ್ದ ಚೆನ್ನೈ, 10 ಓವರ್‌ ಮುಕ್ತಾಯಕ್ಕೆ ಮತ್ತೆ ವಿಕೆಟ್‌ ಕಳೆದುಕೊಳ್ಳದೆ ಮೊತ್ತವನ್ನು 66ಕ್ಕೆ ಏರಿಸಿತು.

ದ್ವಿತೀಯಾರ್ಧದಲ್ಲಿ ರಾಯುಡು-ಗಾಯಕ್ವಾಡ್ ಆಟ ಮತ್ತಷ್ಟು ರಂಗೇರಿತು. ಗುಜರಾತ್ ಬೌಲರ್​​ಗಳಿಗೆ ಯಾರಿಗೂ ರಿಯಾಯಿತಿ ತೋರಲಿಲ್ಲ. ಈ ಜೋಡಿ 56 ಎಸೆತಗಳಿಂದ 92 ರನ್‌ ಪೇರಿಸಿತು. 15ನೇ ಓವರ್‌ನಲ್ಲಿ ರಾಯುಡು ಅವರನ್ನು ಔಟ್‌ ಮಾಡುವ ಮೂಲಕ ಜೋಸೆಫ್ ಗುಜರಾತ್‌ಗೆ ಅಗತ್ಯವಾದ ಬ್ರೇಕ್‌ ಒದಗಿಸಿದರು. ರಾಯುಡು ಗಳಿಕೆ 31 ಎಸೆತಗಳಿಂದ 46 ರನ್‌ (4 ಬೌಂಡರಿ, 2 ಸಿಕ್ಸರ್‌). ಗಾಯಕ್ವಾಡ್‌ 48 ಎಸೆತಗಳಿಂದ 73 ರನ್‌ ಬಾರಿಸಿದರು. ಈ ಆಕರ್ಷಕ ಬೀಸುಗೆಯ ವೇಳೆ 5 ಸಿಕ್ಸರ್‌, 5 ಫೋರ್‌ ಸಿಡಿಸಿದರು. ಕೊನೆಯಲ್ಲಿ ನಾಯಕ ಜಡೇಜಾ 12 ಎಸೆಗಳಲ್ಲಿ ಅಜೇಯ 22 ರನ್ ಸಿಡಿಸಿದ ಕಾರಣ ಚೆನ್ನೈ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.

ಚೆನ್ನೈ ನೀಡಿದ 170 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಗುಜರಾತ್‌ ಟೈಟಾನ್ಸ್‌ ನೀರಸ ಆರಂಭ ಪಡೆಯಿತು. ಗುಜರಾತ್‌ ತಂಡದ ಬ್ಯಾಟಿಂಗ್‌ ಅಸ್ತ್ರವಾಗಿದ್ದ ಶುಭ್ಮನ್‌ ಗಿಲ್‌(0) ಮೊದಲ ಬಾಲ್‌ನಲ್ಲೇ ಔಟಾದರೆ, ವಿಜಯ್‌ ಶಂಕರ್‌(0) ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಇವರ ಬೆನ್ನಲ್ಲೇ ಅಭಿನವ್‌ ಮನೋಹರ್‌(12), ಮ್ಯಾಥ್ಯೂ ವೇಡ್‌ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ವೃದ್ಧಿಮಾನ್‌ ಸಾಹ(11) ಹಾಗೂ ರಾಹುಲ್‌ ತೆವಾಟಿಯಾ(6) ತಂಡಕ್ಕೆ ಆಸರೆಯಾಗಲಿಲ್ಲ. ಪರಿಣಾಮ ಗುಜರಾತ್‌ 87ಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಸಂದರ್ಭದಲ್ಲಿ ಮಿಲ್ಲರ್ (ಔಟಾಗದೆ 94; 51 ಎಸೆತ, 8 ಬೌಂಡರಿ, 6 ಸಿಕ್ಸರ್) ಮತ್ತು ಹಂಗಾಮಿ ನಾಯಕ ರಶೀದ್ ಖಾನ್ (40; 21 ಎ, 2 ಬೌಂ, 3 ಸಿ) ಸ್ಫೋಟಕ 70 ರನ್‌ಗಳನ್ನು ಸೇರಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ರಶೀದ್ ಔಟಾದ ನಂತರ ಕೊನೆಯ ಓವರ್‌ಗಳಲ್ಲಿ ಒತ್ತಡ ಮೆಟ್ಟಿನಿಂತ ಮಿಲ್ಲರ್ ಏಕಾಂಗಿಯಾಗಿ ತಂಡವನ್ನು ದಡ ಸೇರಿಸಿದರು. ಹೀಗಾಗಿ 19.5 ಓವರ್​ನಲ್ಲಿ ಜಿಟಿ 7 ವಿಕೆಟ್ ನಷ್ಟಕ್ಕೆ 170 ರನ್ ಸಿಡಿಸಿ 3 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಪಂದ್ಯದ ಹೈಲೇಟ್ಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

IPL 2022: ಹಾರ್ದಿಕ್ ಪಾಂಡ್ಯ ಹೊರಗುಳಿಯಲು ಕಾರಣವೇನು?

TV9 Kannada


Leave a Reply

Your email address will not be published.