GT vs MI: 6 ಎಸೆತಗಳಲ್ಲಿ 9 ರನ್: ಮುಂಬೈ-ಗುಜರಾತ್ ಪಂದ್ಯದ ಕೊನೆಯ ಓವರ್ ಹೇಗಿತ್ತು ನೋಡಿ | Daniel Sams defends 9 runs in the last over as Mumbai Indians beat Gujarat Titans Video


Daniel Sams: ಅಂತಿಮ ಓವರ್‌ನಲ್ಲಿ ಗುಜರಾತ್ ಟೈಟಾನ್ಸ್​ಗೆ ಗೆಲುವಿಗೆ 9 ರನ್‌ಗಳ ಅಗತ್ಯವಿತ್ತು. ಚೆಂಡು ಡ್ಯಾನಿಯಲ್ ಸ್ಯಾಮ್ಸ್ ಕೈಯಲ್ಲಿತ್ತು. ಆದರೆ ಈ ಬಾರಿ ತಂಡವನ್ನು ಗೆಲುವಿನ ದಡ ಸೇರಿಸಲು ಡೇವಿಡ್ ಮಿಲ್ಲರ್ (19*) ಹಾಗೂ ರಾಹುಲ್ ತೇವಾಟಿಯಾಗೆ (3) ಸಾಧ್ಯವಾಗಲಿಲ್ಲ.

ಬ್ರಬೌರ್ನ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ (IPL 2022) ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ (GT vs MI) ನಡುವಣ ಪಂದ್ಯ ರಣ ರೋಚಕವಾಗಿತ್ತು. ಕೊನೆಯ ಎಸೆದ ವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಕಾದಾಟದಲ್ಲಿ ರೋಹಿತ್ ಶರ್ಮಾ (Rohit Sharma) ಪಡೆ 5 ರನ್​​ಗಳ ರೋಚಕ ಗೆಲುವು ಸಾಧಿಸಿತು. ಚೇಸಿಂಗ್​ನಲ್ಲಿ ಕಿಂಗ್ ಎನಿಸಿಕೊಂಡಿದ್ದ ಹಾರ್ದಿಕ್ ಪಡೆಗೆ ಕೊನೆಯ ಓವರ್​ನಲ್ಲಿ 9 ರನ್ ಗಳಿಸಲು ಸಾಧ್ಯವಾಗಲಿಲ್ಲ. ಅದುಕೂಡ ಕ್ರೀಸ್​ನಲ್ಲಿದ್ದಿದ್ದು ಜಿಟಿಯ ಗ್ರೇಟ್ ಫಿನಿಶರ್ ಆದ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೇವಾಟಿಯ. ಹೀಗೆ ಪ್ಲೇ ಆಫ್​​ಗೇರಲು ಇನ್ನೊಂದು ಪಂದ್ಯ ಗೆಲ್ಲಬೇಕು ಎಂಬುವಷ್ಟರಲ್ಲಿ ಸತತ ಎರಡು ಪಂದ್ಯವನ್ನು ಸೋತಿರುವುದು ಗುಜರಾತ್​ಗೆ ತಲೆನೋವಾಗಿದೆ. ಇತ್ತ ಪ್ಲೇ ಆಫ್ ರೇಸ್​ನಿಂದ ಹೊರಬಿದ್ದಿರುವ ಮುಂಬೈ ಮೈ ಚಳಿ ಬಿಟ್ಟು ಆಡುತ್ತಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಕೊನೆಗೂ ಫಾರ್ಮ್​ಗೆ ಮರಳಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಅದ್ಭುತ ಆರಂಭ ಪಡೆಯಿತು. ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಫಾರ್ಮ್‌ಗೆ ಮರಳಿದರು. ಇಶಾನ್ ಕಿಶನ್ 29 ಎಸೆತಗಳಲ್ಲಿ 45 ರನ್‌ಗಳಿಸಿದರೆ ರೋಹಿತ್ ಶರ್ಮಾ 28 ಎಸೆತಗಳಲ್ಲಿ 43 ರನ್‌ಗಳ ಕೊಡುಗೆ ನೀಡಿದರು. ಮೊದಲ ವಿಕೆಟ್​ಗೆ ಈ ಜೋಡಿ 7.3 ಓವರ್​ನಲ್ಲಿ 74 ರನ್​ಗಳ ಕಾಣಿಕೆ ನೀಡಿತು. ಕಿರಾನ್ ಪೊಲಾರ್ಡ್ ಈ ಪಂದ್ಯದಲ್ಲಿಯೂ ವೈಫಲ್ಯ ಅನುಭವಿಸಿದರೆ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಅವರಿಂದಲೂ ದೊಡ್ಡ ಕೊಡುಗೆ ಲಭ್ಯವಾಗಲಿಲ್ಲ.

ಆದರೆ ಅಂತಿಮ ಹಂತದಲ್ಲಿ ಟಿಮ್ ಡೇವಿಡ್ ಅವರ ಸ್ಪೋಟಕ ಬ್ಯಾಟಿಂಗ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಸರೆಯಾಯಿತು. 21 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನೊಂದಿಗೆ 44 ರನ್‌ಗಳನ್ನು ಗಳಿಸಿದರು. ಈ ಭರ್ಜರಿ ಪ್ರದರ್ಶನದ ನೆರವಿನಿಂದಾಗಿ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್‌ಗಳನ್ನು ಗಳಿಸಿತು. ಗುಜರಾತ್ ಟೈಟನ್ಸ್ ತಂಡದ ಪರವಾಗಿ ರಶೀದ್ ಖಾನ್ 2 ವಿಕೆಟ್ ಕಿತ್ತು ಮಿಂಚಿದರು.

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್‌ಗೆ ವೃದ್ಧಿಮಾನ್ ಸಹಾ ಹಾಗೂ ಶುಭ್ಮನ್ ಗಿಲ್ ಬಿರುಸಿನ ಆರಂಭವೊದಗಿಸಿದರು. ಆರಂಭದಲ್ಲಿ ಗಿಲ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಸಾಹಾ ಬೌಂಡರಿ ಚಚ್ಚಿದರು. ಇವರಿಬ್ಬರು ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 10 ಓವರ್‌ ಅಂತ್ಯಕ್ಕೆ ಗುಜರಾತ್ ವಿಕೆಟ್ ನಷ್ಟವಿಲ್ಲದೆ ಬರೋಬ್ಬರಿ 95 ರನ್ ಗಳಿಸಿತ್ತು. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 83 ರನ್​ಗಳಷ್ಟೇ ಬೇಕಾಗಿತ್ತು.ವೃದ್ಧಿಮಾನ್ 34 ಹಾಗೂ ಗಿಲ್ 33 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು.

ಆದರೆ 13ನೇ ಓವರ್‌ನಲ್ಲಿ ಗಿಲ್ ಹಾಗೂ ಸಹಾ ವಿಕೆಟ್‌ಗಳನ್ನು ಮುರುಗನ್ ಅಶ್ವಿನ್ ಕಬಳಿಸಿದರು. ಈ ಮೂಲಕ ಡಬಲ್ ಆಘಾತ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 12.1 ಓವರ್‌ಗಳಲ್ಲಿ 106 ರನ್ ಒಟ್ಟು ಸೇರಿಸಿದರು. ಗಿಲ್ 36 ಎಸೆತಗಳಲ್ಲಿ 52 ಮತ್ತು ಸಹಾ 40 ಎಸೆತಗಳಲ್ಲಿ 55 ರನ್ ಗಳಿಸಿದರು. ಅವರಿಬ್ಬರು ತಲಾ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರು. ಸಾಯಿ ಸುದರ್ಶನ್ 14 ರನ್‌ಗಳ ಕಾಣಿಕೆ ನೀಡಿದರು. ಆದರೆ 18ನೇ ಓವರ್‌ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ (24) ರನೌಟ್ ಆಗುವುದರೊಂದಿಗೆ ಗುಜರಾತ್ ಹಿನ್ನಡೆ ಅನುಭವಿಸಿತು.

ಕೊನೇ ಓವರ್ ಡ್ರಾಮ್:

ಅಂತಿಮ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 9 ರನ್‌ಗಳ ಅಗತ್ಯವಿತ್ತು. ಚೆಂಡು ಡ್ಯಾನಿಯಲ್ ಸ್ಯಾಮ್ಸ್ ಕೈಯಲ್ಲಿತ್ತು. ಆದರೆ ಈ ಬಾರಿ ತಂಡವನ್ನು ಗೆಲುವಿನ ದಡ ಸೇರಿಸಲು ಡೇವಿಡ್ ಮಿಲ್ಲರ್ (19*) ಹಾಗೂ ರಾಹುಲ್ ತೇವಾಟಿಯಾಗೆ (3) ಸಾಧ್ಯವಾಗಲಿಲ್ಲ. ಮೊದಲ ಬಾಲ್​ನಲ್ಲಿ ಮಿಲ್ಲರ್ ಸಿಂಗಲ್ ತೆಗೆದುಕೊಂಡರೆ, ಎರಡನೇ ಬಾಲ್ ತೇವಾಟಿಯರಿಂದ ಡಾಟ್ ಆಯಿತು. ಮೂರನೇ ಎಸೆತದಲ್ಲಿ 2 ರನ್ ಕದಿಯಲು ಹೋಗಿ ತೇವಾಟಿಯ ರನೌಟ್ ಆದರು. 4ನೇ ಎಸೆತದಲ್ಲಿ ರಶೀದ್ ಖಾನ್ ಸಿಂಗಲ್. 5ನೇ ಎಸೆತ ಹಾಗೂ 6ನೇ ಎಸೆತದಲ್ಲಿ ಮಿಲ್ಲರ್​ಗೆ ಒಂದು ರನ್ ಕೂಡ ಕಲೆಹಾಕಲು ಸಾಧ್ಯವಾಗಲಿಲ್ಲ. ಕೊನೆಯ ಓವರ್ ಹೇಗಿತ್ತು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಈ ಹಿಂದೆ ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ಕೊನೆಯ ಓವರ್‌ನಲ್ಲಿ ಗೆಲುವು ದಾಖಲಿಸಿದ್ದ ಗುಜರಾತ್ ಈ ಬಾರಿ ಸೋಲು ಕಾಣಬೇಕಾಯಿತು. ಸ್ಯಾಮ್ಸ್ 3 ಓವರ್‌ಗಳಲ್ಲಿ 18 ರನ್ ಮಾತ್ರ ಬಿಟ್ಟುಕೊಟ್ಟು ಪರಿಣಾಮಕಾರಿ ಎನಿಸಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಟಿಮ್ ಡೇವಿಡ್ ಪಂದ್ಯಶ್ರೇಷ್ಠ ಬಾಜಿಕೊಂಡರು.

TV9 Kannada


Leave a Reply

Your email address will not be published. Required fields are marked *