ಹಂಸಲೇಖ, ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)
ರಾಜ್ಯದ ಮಕ್ಕಳಿಗೆ ಹಾಲು ಕೊಟ್ಟ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದು ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ. ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರ ‘ಯರೆಬೇವು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ. ಅವರು ಧರ್ಮೋಕ್ರಸಿ ಬದಿಗೆ ಸರಿಸಿ ಡೆಮೋಕ್ರಸಿ ಉಳಿಸಲಿ ಎಂದು ಹಂಸಲೇಖ ನುಡಿದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಿನ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಬಸವಜಯಂತಿ ದಿನ ಅಧಿಕಾರ ಸ್ವೀಕರಿಸುವ ಅವಕಾಶ ಸಿದ್ದರಾಮಯ್ಯನವರಿಗೆ ಸಿಕ್ಕಿತ್ತು. ಅಧಿಕಾರ ವಹಿಸಿಕೊಂಡ ತಕ್ಷಣವೇ ಅನ್ನಭಾಗ್ಯ ಘೋಷಿಸಿದರು. ಇದರಿಂದ ಸೋಮಾರಿಗಳಿಗೆ ಪ್ರೋತ್ಸಾಹ ಕೊಟ್ಟಂತಾಗಲಿದೆ ಎಂದು ಹಲವರು ಟೀಕಿಸಿದ್ದರು. ದಾಸೋಹ ಪರಂಪರೆ ಗೊತ್ತಿದ್ದರೆ ಹೀಗೆ ಟೀಕೆ ಮಾಡುತ್ತಿರಲಿಲ್ಲ. ಸಿದ್ದರಾಮಯ್ಯಗೆ ಶರಣ ಪರಂಪರೆ ಬಗ್ಗೆ ದೊಡ್ಡ ಅರಿವು ಇದೆ ಎಂದು ಹಂಸಲೇಖ ಹೇಳಿದ್ದಾರೆ. ಹಾಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶಿ ಶಾಲೆಗೂ ನೆರವು ನೀಡಿದ್ದನ್ನು ಇದೇ ವೇಳೆ ಹಂಸಲೇಖ ಸ್ಮರಿಸಿಕೊಂಡಿದ್ದಾರೆ.
ಇತ್ತೀಚಿನ ಹೇಳಿಕೆಯೊಂದು ವಿವಾದ ಪಡೆದುಕೊಂಡ ಕುರಿತಂತೆ ಹಂಸಲೇಖ ಪ್ರತಿಕ್ರಿಯಿಸಿದರು. ನಾನು ಭಯಸ್ತನಲ್ಲ, ಮಾಗಡಿ ರೋಡ್ನಲ್ಲಿ ಆಟವಾಡಿ ಬಂದವನು. ‘ಯರೆಬೇವು’ ಪುಸ್ತಕ ದೇಸಿ ಸಮುದಾಯದ ಕರುಳಿನ ಕಥೆಯಾಗಿರುವಂತೆಯೇ, ನಮ್ಮದೂ ಕೂಡ ಅದೇ ರೀತಿಯ ಕರುಳಿನ ಕಥೆ. ಇತ್ತೀಚೆಗೆ ಒಂದು ವಿಚಾರದಲ್ಲಿ ಗೊತ್ತಿಲ್ಲದ ಸಮುದಾಯಗಳೆಲ್ಲ ಬೆಂಬಲ ನೀಡಿವೆ. ಹೀಗೆಲ್ಲ ಆಗುತ್ತೆ ಎಂದು ನನಗೆ ಗೊತ್ತಿರಲಿಲ್ಲ. ಆಗ ನನ್ನ ಬೆಂಬಲಕ್ಕೆ ನಿಂತವರು ಎಸ್.ಜಿ.ಸಿದ್ದರಾಮಯ್ಯ’’ ಎಂದು ಹಂಸಲೇಖ ನುಡಿದಿದ್ದಾರೆ. ಅಲ್ಲದೇ ಕಾರ್ಯಕ್ರಮಕ್ಕೆ ಆಹ್ವಾನಿಸಿ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದರು.
ಹಂಸಲೇಖ ಏನಾದರೂ ಅಪರಾಧದ ಹೇಳಿಕೆ ಕೊಟ್ಟಿದ್ದರಾ?; ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಎಸ್.ಜಿ ಸಿದ್ದರಾಮಯ್ಯ ಅವರ ‘ಯರೆಬೇವು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅವರು ಮಾತನಾಡುತ್ತಾ ಹಂಸಲೇಖ ಅವರ ಹೇಳಿಕೆನ್ನು ಸಮರ್ಥಿಸಿಕೊಂಡರು. ‘‘ಹಂಸಲೇಖ ಏನಾದರೂ ದೊಡ್ಡ ಅಪರಾಧದ ಹೇಳಿಕೆ ಕೊಟ್ಟಿದ್ರಾ?’’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸಂಗೀತ ನಿರ್ದೇಶಕ ವಾಸ್ತವಾಂಶವನ್ನು ತೆರೆದಿಟ್ಟಿದ್ದರು ಅಷ್ಟೇ. ಅವರ ಹೇಳಿಕೆಯ ಬಗ್ಗೆ ದೊಡ್ಡ ರಂಪ ಮಾಡಿಬಿಟ್ಟರು ಎಂದರು.
ಶರಣ ಧರ್ಮವನ್ನು ವೈದಿಕ ಧರ್ಮದ ಬಾಲಂಗೋಚಿ ಮಾಡಲು ಹೊರಟಿದ್ದಾರೆ: ಚಿಂತಕ ಡಾ.ಕೆ ಮರುಳಸಿದ್ದಪ್ಪ
ಪ್ರಗತಿಪರ ಚಿಂತಕ ಡಾ.ಕೆ ಮರುಳಸಿದ್ದಪ್ಪ ಮಾತನಾಡಿ, ‘‘ಹುಟ್ಟಿನಿಂದ ಲಿಂಗಾಯತರಾಗಿರುವವರೆಲ್ಲ ಬಸವಣ್ಣನ ವಾರಸುದಾರರಲ್ಲ. ಇಲ್ಲಿರುವುದು ಶರಣ ಧರ್ಮ. ಆದರೆ, ಇದನ್ನು ವೈದಿಕ ಧರ್ಮದ ಬಾಲಂಗೋಚಿ ಮಾಡಲು ಹೊರಟಿದ್ದಾರೆ. ದೇವಸ್ಥಾನ ಸಂಸ್ಕೃತಿಯನ್ನ ಬಸವಣ್ಣ ವಿರೋಧಿಸಿದ್ದರು. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಆಳಿವಿಲ್ಲ ಎಂದು ಸಾರಿದ್ದರು. ದೇವಸ್ಥಾನ ಕೇಂದ್ರಿತವಾಗಿದ್ದ ಧರ್ಮವನ್ನ ವಿಕೇಂದ್ರಕರಣಗೊಳಿಸಿದ್ದರು. ನಾನು ಒರಟಾಗಿ ಹೇಳಿದರೆ ಅದು ಬೇರೆ ರೂಪ ಪಡೆದುಕೊಳ್ಳುತ್ತದೆ. ಅದು ರವೀಂದ್ರ ಕಲಾಕ್ಷೇತ್ರ, ಸಾಣೆಹಳ್ಳಿಯಲ್ಲಿ ಅನುಭವಕ್ಕೆ ಬಂದಿದೆ’’ ಎಂದು ಹೇಳಿದ್ದಾರೆ.