ಕೋರ್ಟ್ಗಳಿಗೆ ನಿಷೇಧ ಹೇರಿದ ತಾಲಿಬಾನ್
ಅಫ್ಘಾನ್ ವಶಪಡಿಸಿಕೊಂಡ ಮೂರು ತಿಂಗಳ ನಂತರ ಅನಿಯಂತ್ರಿತ ಸೇನೆ ಮತ್ತು ಅನೌಪಚಾರಿಕ ನ್ಯಾಯಾಲಯಗಳಿಗೆ ನಿಷೇಧ ಹೇರುವಂತೆ ತಾಲಿಬಾನ್ ಸರ್ಕಾರ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿರುವ ತಾಲಿಬಾನ್, ನಮ್ಮ ಹೆಸರಿನಲ್ಲಿ ಜನರಿಗೆ ತೊಂದರೆ ಕೊಟ್ಟರೆ ಪರಿಣಾಮ ನೆಟ್ಟಗಿರಲ್ಲ ಖಾರವಾಗಿಯೇ ಹೇಳಿದೆ. ತಾಲಿಬಾನ್ ಹೆಸರು ಹೇಳಿಕೊಂಡು ಸ್ಥಳೀಯ ಸೇನೆ ಬೇಕಾಬಿಟ್ಟಿ ಕಾರ್ಯಾಚರಣೆ ಮತ್ತು ನ್ಯಾಯಾಲಯಗಳಲ್ಲಿ ತಮಗೆ ಬೇಕಾದಂತೆ ಆದೇಶಗಳನ್ನು ನೀಡುತ್ತಿರುವುದರ ಕುರಿತು ತಾಲಿಬಾನ್ ಮುಖಂಡರ ಗಮನಕ್ಕೆ ಬಂದಿದೆ ಎಂದು ಹೇಳಿದೆ.
100 ಮೀ.ಓಟದ ಸ್ಪರ್ಧೆಯಲ್ಲಿ ಅಜ್ಜಿ ಸಾಧನೆ..!
ಲೂಸಿಯಾನದ 105 ವರ್ಷ ವಯಸ್ಸಿನ ಅಜ್ಜಿಯೊಬ್ಬರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಐತಿಹಾಸಿಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಲೂಸಿಯಾನ ಮೂಲದ ಜೂಲಿಯಾ, 2021ರ ಲೂಸಿಯಾನ ಸೀನಿಯರ್ ಗೇಮ್ಸ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮೊದಲ ಮಹಿಳಾ ಟ್ರ್ಯಾಕ್ ಫೀಲ್ಡ್ ಅಥ್ಲೀಟ್ ಮತ್ತು ಮೊದಲ ಅಮೇರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 105 ವಯಸ್ಸಿನವರ 100 ಮೀಟರ್ ಓಟದ ಸ್ಪರ್ಧೆಯಲ್ಲಿ 39 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ಈ ಅಜ್ಜಿ ದಾಖಲೆ ಬರೆದಿದ್ದಾರೆ.
ಏನಿದು ಅಚ್ಚರಿ..!
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರ ಸ್ವೀಕರಿಸಿದ ಬಳಿಕ ಮಹಿಳೆಯರ ಶಿಕ್ಷಣದ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿತ್ತು. ಈಗ ಈ ವಿಚಾರವಾಗಿ ತಾಲಿಬಾನ್ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಮಾತನಾಡಿದ್ದು, ದೇಶಾದ್ಯಂತ ಶೇ.75ರಷ್ಟು ಹುಡುಗಿಯರು ತಮ್ಮ ಶಿಕ್ಷಣವನ್ನು ಮುಂದುವರಿಸಿದ್ದಾರೆ ಅಂತ ತಿಳಿಸಿದ್ದಾರೆ. ಶೇ.75ರಷ್ಟು ಹುಡುಗಿಯರು ಶಾಲೆಗಳಿಗೆ ತೆರಳಿ ತರಗತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಅಂತ ಹೇಳಿದ್ದಾರೆ.
ಫ್ರಾನ್ಸ್ನಲ್ಲಿ ಲಗ್ಗೆಯಿಟ್ಟ ಕೊರೊನಾ 5ನೇ ಅಲೆ
ಭಾರತದಲ್ಲಿ ಕೊರೊನಾ ಮೂರನೇ ಅಲೆಯ ಭೀತಿಯಿದ್ದರೆ ಯುರೋಪ್ನ ಫ್ರಾನ್ಸ್ನಲ್ಲಿ 5ನೇ ಅಲೆ ಲಗ್ಗೆಯಿಟ್ಟಿದೆ. ಇದು ಹಿಂದಿನ ಅಲೆಗಳಿಗಿಂತ ಭೀಕರವಾಗಿದೆ ಎಂದು ಫ್ರ್ಯಾನ್ಸ್ನ ಆರೋಗ್ಯ ಸಚಿವ ಆಲಿವರ್ ವೆರನ್ ಹೇಳಿದ್ದಾರೆ. ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ ಆಲಿವರ್, ಅಕ್ಕಪಕ್ಕದ ಹಲವಾರು ದೇಶಗಳಲ್ಲಿ 5ನೇ ಅಲೆ ಆರಂಭವಾಗಿದೆ. ಇದನ್ನೆಲ್ಲಾ ಗಮನಿಸಿದ್ರೆ ಫ್ರ್ಯಾನ್ಸ್ನಲ್ಲೂ 5ನೇ ಅಲೆ ಆರಂಭವಾಗಿದೆ ಎಂಬ ಮುನ್ಸೂಚನೆ ಸಿಕ್ಕಿರೋದು ಸ್ಪಷ್ಟವಾಗಿದೆ ಅಂತ ತಿಳಿಸಿದ್ದಾರೆ.
ಬಿಗ್ಬಾಸ್ ಸ್ಪರ್ಧಿಗಳ ಮೇಲೆ ಸಲ್ಮಾನ್ ಗರಂ
ಪ್ರತಿ ವೀಕೆಂಡ್ ಸಲ್ಮಾನ್ ಖಾನ್ ಸ್ಫರ್ಧಿಗಳ ಜೊತೆ ಕೂಲ್ ಆಗಿ ಕಾರ್ಯಕ್ರಮ ನಡೆಸಿಕೊಡುವ ಸಲ್ಲು ಭಾಯ್, ಈ ವಾರ ತಮ್ಮ ತಾಳ್ಮೆ ಕಳೆದುಕೊಂಡು ಸ್ಪರ್ಧಿ ಪ್ರತೀಕ್ ಸೆಹಜ್ಪಾಲ್ಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಈ ವಾರದ ಪ್ರೋಮೊವನ್ನ ಚಾನೆಲ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸ್ಪರ್ಧಿಗಳಾದ ಪ್ರತೀಕ್ ಹಾಗೂ ರಾಜೀವ್ಗೆ ನೀವು ಬೇರೆಯವರ ಬಗ್ಗೆ ಹಾಸ್ಯ ಮಾಡೋಕೆ ಇದು ಕಾಮಿಡಿ ಶೋ ಎಂದುಕೊಂಡಿದ್ದೀರಾ? ನಾನು ಯಾವಾಗಲೂ ನನ್ನ ಲಿಮಿಟ್ ದಾಟಿಲ್ಲ. ರಾಜೀವ್ಗೆ ನೀವು ಏನು ಹೇಳೋಕೆ ಹೊರಟಿದ್ರಿ ಅಂತ ಪ್ರಶ್ನಿಸಿದ್ದಾರೆ.
ಪೇಚಿಗೆ ಸಿಲುಕಿದ ರಾಣಿ ಮುಖರ್ಜಿ
ಖಾಸಗಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟಿ ರಾಣಿ ಮುಖರ್ಜಿ ಟೊಮ್ಯಾಟೋ ಬೆಲೆ ಹೇಳಲು ತಡವರಿಸಿದ ಘಟನೆ ನಡೆದಿದೆ. ಬಂಟಿ ಆರ್ ಬಬ್ಲಿ 2 ಚಿತ್ರದ ಪ್ರಚಾರ ಮಾಡಲು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿಗೆ ಅಲ್ಲಿದ್ದ ಪ್ರೇಕ್ಷಕರು, ಟೊಮ್ಯಾಟೋ ಕೆಜಿಗೆ ಎಷ್ಟು ಬೆಲೆ ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ತಿಳಿಯದ ರಾಣಿ ಮುಖರ್ಜಿ ಪೆಚ್ಚಾಗಿದ್ದಾರೆ. ಇದೇ ವೇಳೆ ಮಾತನಾಡಿದ ಷೋ ಆ್ಯಂಕರ್ ಕಪಿಲ್ ಶರ್ಮ ರಾಣಿ ದೊಡ್ಡ ಹಿರೋಯಿನ್, ಇವರು ಟೊಮ್ಯಾಟೋಗೆ ಪ್ರಾಮುಖ್ಯತೆ ಕೊಡ್ತಾರಾ ಅಂತ ಕಾಲೆಳೆದಿದ್ದಾರೆ.
ದೇವರ ದುಡ್ಡನ್ನೇ ಕದ್ದ ಖತರ್ನಾಕ್ ಕಳ್ಳ
ದೇವಸ್ಥಾನದಲ್ಲಿ ದೇವರ ಹುಂಡಿ ಕದಿಯಲು ಹೋದ ಕಳ್ಳ ದೇವರ ಪಾದ ಮುಟ್ಟಿ ಆಶೀರ್ವಾದ ಪಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಮಹಾರಾಷ್ಟ್ರದ ಥೇನ್ನಲ್ಲಿ ನಡೆದಿದ್ದು, ಹನುಮಂತನ ದೇವಾಲಯದಲ್ಲಿ ಕಳ್ಳ ಹುಂಡಿಯಲ್ಲಿದ್ದ 1ಸಾವಿರ ರೂಪಾಯಿ ಕದ್ದಿದ್ದಾನೆ. ಅಷ್ಟೇ ಅಲ್ಲ ಹಣ ಕದ್ದು ಹೊರಡುವ ಮುನ್ನ ದೇವರ ಪಾದ ಮುಟ್ಟಿ ಆಶೀರ್ವಾದ ಪಡೆದಿರುವ ದೃಶ್ಯಾವಳಿ ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
48 ಲೀಟರ್ ಹಾಲು ಕದ್ದ ಕಳ್ಳರು
ಗುಂಪೊಂದು ಕಾರಲ್ಲಿ ಬಂದು 48 ಲೀಟರ್ ಹಾಲು ಕಳ್ಳತನ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ನಡೆದಿದೆ. ಬೆಳಗ್ಗೆ 4 ಗಂಟೆ ಸಮಯದಲ್ಲಿ ಗೋಣಿಬೀಡು ಹೋಬಳಿ ಕರುಣಾಕರ ಎಂಬುವರ ಅಂಗಡಿಯ ಎದುರಿಗಿದ್ದ 48 ಲೀಟರ್ ಹಾಲು ಕಳ್ಳತನವಾಗಿದ್ದು, ಖದೀಮರು ಹಾಲು ಕದ್ದು ಬೇಲೂರು ಮಾರ್ಗದ ಕಡೆಗೆ ತೆರಳಿದ್ದಾರೆ. ಹಾಲು ಕದ್ದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಾನೂ ಸಿಎಂ ಆಗ್ಬೇಕು -ಡಾ.ಜಿ.ಪರಮೇಶ್ವರ್
ತಾನು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಇಂಗಿತವನ್ನು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಛಲವಾದಿ ಸಾಂಸ್ಕೃತಿಕ ವೇದಿಕೆಯಿಂದ ನಡೆದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ಕಳೆದ ಮೂರ್ನಾಲ್ಕು ತಿಂಗಳಿಂದೆ ಮುಂದಿನ ದಿನದಲ್ಲಿ ದಲಿತರು ಸಿಎಂ ಆಗಬೇಕು ಎಂಬ ಬೇಡಿಕೆ ಬಂದರೂ ಬರಬಹುದು ಅಂತ ತಿಳಿಸಿದ್ರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದನ್ನು ಆಧರಿಸಿ ಸ್ವತಃ ರಾಹುಲ್ ಗಾಂಧಿ ತಮ್ಮ ಬಳಿ ಸ್ಪಷ್ಟನೆ ಕೇಳಿದ್ರು. ಅದಕ್ಕೆ ನಾನು ತಡಮಾಡದೇ ಹೌದು ನಾನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಬೇಕು ಸರ್ ಎಂದು ಉತ್ತರ ಕೊಟ್ಟಿದ್ದೇನೆ ಅಂತ ಹೇಳಿದ್ದಾರೆ.
ಇಂದು ಮಕ್ಕಳ ದಿನಾಚರಣೆಯ ಸಂಭ್ರಮ
ಇಂದು ಭಾರತದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು 132ನೇ ಜನ್ಮ ದಿನದ ಅಂಗವಾಗಿ ದೇಶಾದ್ಯಂತ ಮಕ್ಕಳ ದಿನಾಚರಣೆ ಸಂಭ್ರಮವಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಸಾರ್ವತ್ರಿಕ ಘೋಷಣೆ ಹಿನ್ನೆಲೆ ಭಾರತದಲ್ಲಿ ಈ ಮೊದಲು ನವೆಂಬರ್ 20ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು. ಆದರೆ ಜವಾಹರಲಾಲ್ ನೆಹರೂ ಮರಣದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ.
The post #HappyChildrensDay -ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್ appeared first on News First Kannada.