Harbhajan Singh
ಟೀಮ್ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ. 2016 ರಲ್ಲಿ ಭಜ್ಜಿ ಕೊನೆಯ ಬಾರಿ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರಲಿಲ್ಲ. ಆದರೆ ಇದೀಗ ಕ್ರಿಕೆಟ್ಗೆ ವಿದಾಯ ಹೇಳಿ ಹರ್ಭಜನ್ ಸಿಂಗ್ ಹೊಸ ಜವಾಬ್ದಾರಿವಹಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದರಂತೆ ಮುಂದಿನ ಸೀಸನ್ ಐಪಿಎಲ್ನಲ್ಲಿ 41 ವರ್ಷದ ಹರ್ಭಜನ್ ಸಿಂಗ್ ಆಟಗಾರನಾಗಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ತಂಡವೊಂದರ ಮೆಂಟರ್ ಆಗಿ ತಂಡದಲ್ಲಿ ಇರಲಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಸೀಸನ್ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಹರ್ಭಜನ್ ಸಿಂಗ್ ಮುಂದಿನ ಸೀಸನ್ನಲ್ಲಿ ಯಾವ ತಂಡದ ಮಾರ್ಗದರ್ಶಕರಾಗಲಿದ್ದಾರೆ ಎಂಬುದೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಐಪಿಎಲ್ ಫ್ರಾಂಚೈಸಿಯೊಂದರ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಹರ್ಭಜನ್ ಸಿಂಗ್ ಅವರನ್ನು ತಂಡವೊಂದು ಸಂಪರ್ಕಿಸಿದೆ. ಅವರನ್ನು ತಂಡದ ಸಲಹೆಗಾರ, ಮಾರ್ಗದರ್ಶಕ ಅಥವಾ ಸಲಹಾ ಗುಂಪಿನ ಸದಸ್ಯರಾಗುವಂತೆ ಆಹ್ವಾನ ನೀಡಿದೆ. ಹೀಗಾಗಿ ಹರಾಜಿನಲ್ಲಿ ಆಟಗಾರರನ್ನು ಆಯ್ಕೆ ಮಾಡುವಲ್ಲಿ ಫ್ರಾಂಚೈಸಿಗೆ ಸಹಾಯ ಮಾಡುವಲ್ಲಿ ಅವರು ಸಕ್ರಿಯ ಪಾತ್ರವನ್ನು ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಹರ್ಭಜನ್ ಸಿಂಗ್ ಐಪಿಎಲ್ನಲ್ಲಿ ಯುವ ಆಟಗಾರರಿಗೆ ಮಾರ್ಗದರ್ಶಕರಾಗಿದ್ದರು ಎಂಬುದು ವಿಶೇಷ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗ ರಾಹುಲ್ ಚಹರ್ ಅವರಿಗೆ ಬೌಲಿಂಗ್ ಕಲೆಯನ್ನು ಹೇಳಿಕೊಟ್ಟಿದ್ದರು. ಹಾಗೆಯೇ ಕೆಕೆಆರ್ ತಂಡದಲ್ಲಿದ್ದಾಗ ವರುಣ್ ಚಕ್ರವರ್ತಿಗೆ ಮಾರ್ಗದರ್ಶನ ನೀಡಿದ್ದರು. ಇದೀಗ ಕ್ರಿಕೆಟ್ಗೆ ವಿದಾಯ ಹೇಳಿ ಮಾರ್ಗದರ್ಶಕರಾಗಿಯೇ ಮುಂದುವರೆಯಲು ಭಜ್ಜಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಕಳೆದ ಸೀಸನ್ನಲ್ಲಿ ಫೈನಲ್ ಪ್ರವೇಶಿಸಿದ್ದ ಕೆಕೆಆರ್ ತಂಡದ ಕೋಚ್ ಬ್ರೆಂಡನ್ ಮೆಕಲಮ್ ಹಾಗೂ ನಾಯಕ ಇಯಾನ್ ಮೋರ್ಗನ್ ಕೂಡ ತಂಡದ ಆಯ್ಕೆಯಲ್ಲಿ ಅನುಭವಿ ಹರ್ಭಜನ್ ಸಿಂಗ್ ಅವರ ಸಲಹೆಗಳನ್ನು ಪಡೆಯುತ್ತಿದ್ದರು. ಹೀಗಾಗಿ ಭಜ್ಜಿ ಕೆಕೆಆರ್ ತಂಡದಲ್ಲೇ ಮೆಂಟರ್ ಆಗಿ ಮುಂದುವರೆಯಲಿದ್ದಾರಾ ಎಂಬ ಪ್ರಶ್ನೆಯೊಂದು ಕೂಡ ಹುಟ್ಟಿಕೊಂಡಿದೆ.
ಕ್ರಿಕೆಟ್ ಅಂಗಳದ ಟರ್ಬೊನೇಟರ್ ಎಂದೇ ಜನಪ್ರಿಯರಾಗಿರುವ ಭಜ್ಜಿ ಭಾರತದ ಪರ 103 ಟೆಸ್ಟ್, 236 ODI ಮತ್ತು 28 T20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 417 ಟೆಸ್ಟ್ ವಿಕೆಟ್, 269 ಏಕದಿನ ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 25 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ ಹರ್ಭಜನ್ ಸಿಂಗ್ 2007ರಲ್ಲಿ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಭಾಗವಾಗಿದ್ದರು. ಈ ಎರಡು ವಿಶ್ವಕಪ್ ಆಡಿದ ಎಲ್ಲಾ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ಆದರೆ ಹರ್ಭಜನ್ ಸಿಂಗ್ ಮಾತ್ರ ತಮ್ಮ ನಿವೃತ್ತಿಯನ್ನು ಪ್ರಕಟಿಸಿರಲಿಲ್ಲ. ಇದೀಗ ಭಜ್ಜಿ ಅವರ ನಿವೃತ್ತಿ ಸುದ್ದಿಗಳು ಕೇಳಿ ಬಂದಿದ್ದು, ಹೀಗಾಗಿ ಶೀಘ್ರದಲ್ಲೇ ಹರ್ಭಜನ್ ಸಿಂಗ್ ಅಧಿಕೃತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಧಿಕೃತವಾಗಿ ವಿದಾಯ ಹೇಳುವ ಸಾಧ್ಯತೆಯಿದೆ.