Hardik pandya: ಗುಜರಾತ್ ಫೈನಲ್​ಗೆ ಎಂಟ್ರಿ: ಎಲ್ಲದಕ್ಕೂ ಧೋನಿ ಕಾರಣ ಎಂದ ಪಾಂಡ್ಯ | IPL 2022: MS Dhoni has played a big role in my life Hardik Pandya


Hardik Pandya: ಈ ಸೀಸನ್​ನಲ್ಲಿ ಹಾರ್ದಿಕ್ ಪಾಂಡ್ಯ 45 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 453 ರನ್ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲಿ 7. 73ರ ಎಕನಾಮಿ ರೇಟ್​ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದಾರೆ.

IPL 2022: ಹಾರ್ದಿಕ್ ಪಾಂಡ್ಯ…ಟೀಮ್ ಇಂಡಿಯಾದ ಯುವ ಆಲ್​ರೌಂಡರ್ ಆಟಗಾರ ತಮ್ಮ ಅಲ್ಪಾವಧಿಯ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಏರಿಳಿತಗಳು, ಗಾಯಗಳು, ಶಸ್ತ್ರಚಿಕಿತ್ಸೆಗಳು, ವಿವಾದಗಳನ್ನು ಎದುರಿಸಿದ್ದಾರೆ. ಈ ಎಲ್ಲವನ್ನೂ ನಾನು ನಗುವಿನಿಂದಲೇ ಎದುರಿಸಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ (Hardik pandya) ತಮ್ಮ ಆತ್ಮ ವಿಶ್ವಾಸವನ್ನು ಮತ್ತೊಮ್ಮೆ ತೆರೆದಿಟ್ಟಿದ್ದಾರೆ. ಏಕೆಂದರೆ ಈ ಬಾರಿ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಪಾಂಡ್ಯರನ್ನು ನಾಯಕರಾಗಿ ಆಯ್ಕೆ ಮಾಡಿದಾಗ ಅಚ್ಚರಿ ವ್ಯಕ್ತಪಡಿಸಿದವರೇ ಹೆಚ್ಚು. ಆದರೆ ಇದೀಗ ಗುಜರಾತ್ ಟೈಟಾನ್ಸ್ ಪರ ಆಲ್ ರೌಂಡರ್ ಆಗಿ ಮಿಂಚಿದ್ದಲ್ಲದೆ ಉತ್ತಮ ನಾಯಕನಾಗಿ ಹೊರಹೊಮ್ಮಿ ತಂಡವನ್ನು ಫೈನಲ್ ಗೆ ಕೊಂಡೊಯ್ದಿದ್ದಾರೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಏಳು ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸಿದ ನಂತರ, ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ , ‘ಜನರು ಮಾತನಾಡುತ್ತಾರೆ. ಇದು ಅವರ ಕೆಲಸ. ನಾನೇನೂ ಮಾಡಲಾರೆ. ಹಾರ್ದಿಕ್ ಪಾಂಡ್ಯ ಹೆಸರು ಯಾವಾಗಲೂ ಮಾರಾಟವಾಗುತ್ತಿದೆ. ಅದರಲ್ಲಿ ನನಗೆ ಯಾವುದೇ ತೊಂದರೆ ಇಲ್ಲ. ಅದನ್ನು ನಗುಮುಖದಿಂದ ಎದುರಿಸುತ್ತೇನೆ’ ಎಂದು ಹೇಳಿದರು.

ಮುಂಬೈ ಇಂಡಿಯನ್ಸ್ ಜೊತೆಗಿನ ಯಶಸ್ಸಿನ ನಂತರ 2016 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಪಾಂಡ್ಯ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗಿತ್ತು. ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್‌ಗೆ ಹೋಲಿಸಲಾಯಿತು. ನಂತರ 2019 ರಲ್ಲಿ, ಕಾಫಿ ವಿತ್ ಕರಣ್ ನಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಗಾಗಿ ತಂಡದಿಂದ ಅಮಾನತುಗೊಳಿಸಲಾಯಿತು. ಬಳಿಕ ಬಿಸಿಸಿಐನ ವಿಚಾರಣಾ ಸಮಿತಿಯ ಮುಂದೆ ಕ್ಷಮೆಯಾಚಿಸಿದರು. ನವೆಂಬರ್ 8 ರಂದು ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಅವರು ಭಾರತಕ್ಕಾಗಿ ಆಡಿದ ಕೊನೆಯ ಪಂದ್ಯವಾಗಿತ್ತು. ಆ ಬಳಿಕ ಗಾಯದ ಕಾರಣ ಮೈದಾನ ತೊರೆದಿದ್ದರು. ಇದೀಗ ಐಪಿಎಲ್ ಮೂಲಕ ಕಂಬ್ಯಾಕ್ ಮಾಡಿರುವ ಪಾಂಡ್ಯ ನಾಯಕನಾಗಿಯೇ ಮಿಂಚಿರುವುದು ವಿಶೇಷ.

ಮುಂಬೈ ಇಂಡಿಯನ್ಸ್‌ನಿಂದ ಬಿಡುಗಡೆಯಾದ ನಂತರ, ಗುಜರಾತ್ ಟೈಟಾನ್ಸ್​ ತಂಡವು ಪಾಂಡ್ಯರನ್ನು ಡ್ರಾಫ್ಟ್‌ನಲ್ಲಿ ಆಯ್ಕೆ ಮಾಡಿಕೊಂಡಿತು. ಅಲ್ಲದೆ ಬರೋಬ್ಬರಿ 15 ಕೋಟಿ ರೂ. ನೀಡಿ ಜೊತೆ ಪಾಂಡ್ಯ ಅವರಿಗೆ ನಾಯಕತ್ವ ನೀಡುವುದರ ಕುರಿತು ಪ್ರಶ್ನೆಗಳು ಎದಿದ್ದವು. ಆದರೆ ತನ್ನ ಮೆಂಟರ್ ‘ಎಂಎಸ್ ಧೋನಿ’, ‘ಕ್ಯಾಪ್ಟನ್ ಕೂಲ್’..ಅವರಂತೆ ಉತ್ತಮ ಪ್ರದರ್ಶನದ ಮೂಲಕ ಇದೀಗ ಹಾರ್ದಿಕ್ ಪಾಂಡ್ಯ ಕೂಡ ಟೀಕಾಕಾರರಿಗೆ ಉತ್ತರಿಸಿದ್ದಾರೆ.

ನನ್ನ ಜೀವನದಲ್ಲಿ ಮಹಿ ಭಾಯ್ (ಧೋನಿ) ದೊಡ್ಡ ಪಾತ್ರ ವಹಿಸಿದ್ದಾರೆ. ಅವರು ನನಗೆ ಸಹೋದರ, ಸ್ನೇಹಿತ ಮತ್ತು ಕುಟುಂಬದಂತೆ. ನಾನು ಅವರಿಂದ ಸಾಕಷ್ಟು ಒಳ್ಳೆಯ ವಿಷಯಗಳನ್ನು ಕಲಿತಿದ್ದೇನೆ. ವೈಯಕ್ತಿಕವಾಗಿ ದೃಢವಾಗಿ ಉಳಿಯುವ ಮೂಲಕ ಮಾತ್ರ ನಾನು ಈ ಎಲ್ಲ ವಿಷಯಗಳನ್ನು ಎದುರಿಸಬಲ್ಲೆ ಎಂಬುದು ಅವರಿಂದಲೇ ಕಲಿದ್ದೇನೆ ಎಂದು ಪಾಂಡ್ಯ ಹೇಳಿದ್ದಾರೆ.

‘ನಾಯಕತ್ವಕ್ಕೂ ಮುನ್ನ ನಾನು ಪ್ರತಿ ಸಂದರ್ಭದಲ್ಲೂ ಶಾಂತವಾಗಿ ಇರುತ್ತಿದ್ದೆ. ಈ ಮೂಲಕ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನನ್ನ ವೃತ್ತಿಜೀವನದಲ್ಲಿ ಮತ್ತು ಜೀವನದಲ್ಲಿಯೂ ನಾನು ಭಯಭೀತರಾಗುವುದಕ್ಕಿಂತ ಹತ್ತು ಸೆಕೆಂಡುಗಳ ಕಾಲ ಕಾಯಲು ಇಷ್ಟಪಡುತ್ತೇನೆ. ಇದೀಗ ನಾನು ನಾಯಕನಾಗಿ ತಂಡವನ್ನು ಫೈನಲ್​ಗೆ ಕೊಂಡೊಯ್ದಿರುವ ಬಗ್ಗೆ ಖುಷಿ ಇದೆ ಎಂದು ಪಾಂಡ್ಯ ಹೇಳಿದರು.

ಭಾನುವಾರ ತವರು ಮೈದಾನ ಮೊಟೆರಾದಲ್ಲಿ ನಡೆಯಲಿರುವ ಫೈನಲ್ ಬಗ್ಗೆ ಮಾತನಾಡಿದ ಪಾಂಡ್ಯ, “ಇದು ಅದ್ಭುತ ಅನುಭವ ಆಗಿರಲಿದೆ”. ದೊಡ್ಡ ಕ್ರೀಡಾಂಗಣ, ನಮ್ಮ ತವರು ನೆಲ, ನಮ್ಮ ರಾಜ್ಯ. ಎಲ್ಲರೂ ನಮ್ಮನ್ನು ಬೆಂಬಲಿಸಲು ಬರಲಿದ್ದಾರೆ. ಹೀಗಾಗಿ ಮುಂದಿನ ಪಂದ್ಯವು ನಮ್ಮ ಪಾಲಿಗೆ ಬಹಳ ಮುಖ್ಯ ಪಂದ್ಯ ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

ಈ ಸೀಸನ್​ನಲ್ಲಿ ಹಾರ್ದಿಕ್ ಪಾಂಡ್ಯ 45 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 453 ರನ್ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲಿ 7. 73ರ ಎಕನಾಮಿ ರೇಟ್​ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಗುಜರಾತ್ ಟೈಟಾನ್ಸ್​ ಗೆಲುವಿನಲ್ಲಿ ಆಲ್​ರೌಂಡರ್​ ಆಗಿ, ಜೊತೆಗೆ ನಾಯಕನಾಗಿ ಉತ್ತಮ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *