Hardik Pandya: ಹಾರ್ದಿಕ್ ಪಾಂಡ್ಯ ಕಂಬ್ಯಾಕ್ ಯಾವಾಗ? ಆಯ್ಕೆ ಸಮಿತಿ ಅಧ್ಯಕ್ಷರು ಹೇಳಿದ್ದೇನು? | Chief Selector Chetan Sharma Provides Update On Hardik Pandya’s Return


Hardik Pandya: ಹಾರ್ದಿಕ್ ಪಾಂಡ್ಯ ಕಂಬ್ಯಾಕ್ ಯಾವಾಗ? ಆಯ್ಕೆ ಸಮಿತಿ ಅಧ್ಯಕ್ಷರು ಹೇಳಿದ್ದೇನು?

Hardik Pandya

ಶ್ರೀಲಂಕಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಟಿ20 ಹಾಗೂ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡಗಳಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೆಸರು ಕಾಣಿಸಿಕೊಂಡಿಲ್ಲ. ಅಂದರೆ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಅತ್ತ ಪಾಂಡ್ಯ ರಣಜಿ ಟ್ರೋಫಿಯಲ್ಲೂ ಭಾಗವಹಿಸುತ್ತಿಲ್ಲ. ಹೀಗಾಗಿಯೇ ಹಾರ್ದಿಕ್ ಪಾಂಡ್ಯ ಅವರ ಕಂಬ್ಯಾಕ್ ಬಗ್ಗೆ ಪ್ರಶ್ನೆಗಳು ಮೂಡಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಉತ್ತರ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರ ಕಂಬ್ಯಾಕ್ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಚೇತನ್ ಶರ್ಮಾ, ಅವರು ಈಗ ಬೌಲಿಂಗ್‌ಗೆ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಇನ್ನು ಆಯ್ಕೆಗೆ ಅವರು ತಯಾರಿರುವುದು ಖಚಿತವಾದಾಗ ಮಾತ್ರ ಆಯ್ಕೆ ಸಮಿತಿಯು ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಹಾರ್ದಿಕ್ ಪಾಂಡ್ಯ ರಣಜಿ ಟ್ರೋಫಿಯಲ್ಲಿ ಏಕೆ ಆಡುತ್ತಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಚೇತನ್ ಶರ್ಮಾ, “ಯಾರಾದರೂ ಆಡಲು ಬಯಸದಿದ್ದರೆ, ಆಯ್ಕೆ ಸಮಿತಿಯು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ರಣಜಿ ಟ್ರೋಫಿಯಲ್ಲಿ ಏಕೆ ಆಡುತ್ತಿಲ್ಲ ಎಂದು ನೀವು ಹಾರ್ದಿಕ್ ಅವರನ್ನು ಕೇಳಬಹುದು. ರಣಜಿಯಲ್ಲಿ ಆಡುವ ಮತ್ತು ಉತ್ತಮ ಪ್ರದರ್ಶನ ನೀಡುವುದು ಅವರಿಗೆ ಬಿಟ್ಟಿದ್ದು. ದೇಶೀಯ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರ ಮೇಲೆ ಆಯ್ಕೆ ಸಮಿತಿ ಕಣ್ಣಿಟ್ಟಿರುತ್ತದೆ ಎಂದು ಚೇತನ್ ಶರ್ಮಾ ಹೇಳಿದರು.

ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದು. ಏಕೆಂದರೆ ಅವರು ಭಾರತ ತಂಡದ ಪ್ರಮುಖ ಭಾಗವಾಗಿದ್ದರು. ಆದರೆ ಗಾಯಗೊಂಡ ನಂತರ, ಅವರು 100 ರಷ್ಟು ಫಿಟ್ ಆಗಿದ್ದರೆ, ಆಡಲು ಸಿದ್ಧರಾಗಿದ್ದರೆ ಮತ್ತು ಅವರು ಬೌಲಿಂಗ್ ಮಾಡಲು ಫಿಟ್​ನೆಸ್ ಹೊಂದಿದ್ದರೆ ಮಾತ್ರ ನಾವು ಹಾರ್ದಿಕ್ ಪಾಂಡ್ಯ ಅವರ ಹೆಸರನ್ನು ಪರಿಗಣಿಸುತ್ತೇವೆ. ಹೀಗಾಗಿ ಅವರು ತಮ್ಮ ಫಿಟ್​ನೆಸ್​ ಅನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಇದೇ ವೇಳೆ ಚೇತನ್ ಶರ್ಮಾ ಸ್ಪಷ್ಟಪಡಿಸಿದರು.

ಐಪಿಎಲ್ 2022 ಮೂಲಕ ಕಂಬ್ಯಾಕ್:
ಹಾರ್ದಿಕ್ ಪಾಂಡ್ಯ ಈ ಬಾರಿ ರಣಜಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ ಐಪಿಎಲ್-2022 ರಲ್ಲಿ ಆಡುವುದನ್ನು ಈಗಾಗಲೇ ಖಚಿತಪಡಿಸಿದ್ದಾರೆ. ಅದರಂತೆ ಗುಜರಾತ್ ಟೈಟಾನ್ಸ್‌ಗೆ ನಾಯಕರಾಗಿ ಪಾಂಡ್ಯ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ತಮ್ಮ ಫಿಟ್​ನೆಸ್​ ಅನ್ನು ಸಾಬೀತುಪಡಿಸಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗುವ ವಿಶ್ವಾಸದಲ್ಲಿ ಪಾಂಡ್ಯ. ಅದರಂತೆ ಟಿ20 ವಿಶ್ವಕಪ್​ ವೇಳೆಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.

TV9 Kannada


Leave a Reply

Your email address will not be published. Required fields are marked *