HD Deve Gowda: ಗೋವಾ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದರೂ ನಮ್ಮ ಪಾಲಿನ ನೀರು ಪಡೆಯಲು ಸಾಧ್ಯವಾಗಿಲ್ಲ; ಮಾಜಿ ಪ್ರಧಾನಿ ದೇವೇಗೌಡ ಆಕ್ರೋಶ | HD Deve Gowda Lashes out at BJP Government over Mahadayi Dispute and Communal Violence


HD Deve Gowda: ಗೋವಾ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದರೂ ನಮ್ಮ ಪಾಲಿನ ನೀರು ಪಡೆಯಲು ಸಾಧ್ಯವಾಗಿಲ್ಲ; ಮಾಜಿ ಪ್ರಧಾನಿ ದೇವೇಗೌಡ ಆಕ್ರೋಶ

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ

ನಮ್ಮ ಯೋಗ್ಯತೆಗೆ ನಮ್ಮ ರಾಜ್ಯಕ್ಕೆ ನಮ್ಮ ಹಕ್ಕಿನ ನೀರನ್ನು ಬಳಸಿಕೊಳ್ಳಲು ಆಗಿಲ್ಲ. ಗೋವಾ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ. ನಮ್ಮ ಪಾಲಿನ ನೀರು ಪಡೆಯುವ ಯೋಗ್ಯತೆ, ಶಕ್ತಿ ಇದೆಯಾ? ಎಂದು ರಾಯಚೂರಿನ ಸಿಂಧನೂರಿನಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಪ್ರಶ್ನಿಸಿದ್ದಾರೆ.

ರಾಯಚೂರು: ನಮ್ಮ ಯೋಗ್ಯತೆಗೆ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಆಗಲಿಲ್ಲ. ಮಹದಾಯಿಯಿಂದ (Mahadayi) 13 ಟಿಎಂಸಿ ನೀರು ಅಡಾಪ್ಟ್ ಮಾಡಿದರು. ಆದರೆ, ನಮಗೆ 5 ಟಿಎಂಸಿ ನೀರನ್ನು ಪಡೆಯೋಕೆ ಆಗಿಲ್ಲ. ಗೋವಾ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ (BJP Government) ಇದೆ. ನಮ್ಮ ಪಾಲಿನ ನೀರು ಪಡೆಯುವ ಯೋಗ್ಯತೆ, ಶಕ್ತಿ ಇದೆಯಾ? ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ (HD Deve Gowda) ಗುಡುಗಿದ್ದಾರೆ. ಚುನಾವಣೆ ಬಳಿಕ ಮಹದಾಯಿ ಸಮಸ್ಯೆ ಸರಿಹೋಗುತ್ತದೆ ಎಂದು ಹೇಳಿದ್ದರು. ಚುನಾವಣೆ ನಡೆದು ಎಷ್ಟು ದಿನವಾಯ್ತು? ನಮ್ಮ ನದಿಗಳ ನೀರನ್ನು ನಾವೇ ಬಳಕೆ ಮಾಡಲು ಆಗುತ್ತಿಲ್ಲ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿನ ನೀರಾವರಿ ಹಾಗೂ ಇತರೆ ನದಿಗಳ ಪಾತ್ರದ ವಿಚಾರವಾಗಿ ನಾವೂ ಯಾರ ಮೇಲೂ ಪೈಪೋಟಿಗೆ ಹೋಗುವುದಿಲ್ಲ. ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಅವರದ್ದು ರಾಷ್ಟ್ರೀಯ ಪಕ್ಷಗಳು. ಅವರ ಬಗ್ಗೆ ನಾನು ಲಘುವಾಗೂ ಮಾತನಾಡುವುದಿಲ್ಲ. ಒಂದು ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲು ನಮ್ಮ ಒದ್ದಾಟ ಮುಂದುವರೆದಿದೆ. ನಮ್ಮ ಯೋಗ್ಯತೆಗೆ ನಮ್ಮ ರಾಜ್ಯಕ್ಕೆ ನಮ್ಮ ಹಕ್ಕಿನ ನೀರನ್ನು ಬಳಸಿಕೊಳ್ಳಲು ಆಗಿಲ್ಲ. ಮಹದಾಯಿಯಲ್ಲಿ 13 ಟಿಎಂಸಿ ನೀರನ್ನ ಟ್ರಿಬ್ಯನಲ್ ಅಡಾಪ್ಟ್ ಮಾಡಿದರು. ಆದರೆ, 5 ಟಿಎಂಸಿ ನೀರನ್ನ ತೆಗೆದುಕೊಳ್ಳೊಕೆ ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಜಲಧಾರೆ ಕಾರ್ಯಕ್ರಮ ಮಾಡಲಾಗಿದೆ. ಇದೇ ಮೇ 13ರಂದು ದೊಡ್ಡ ಸಮಾರೋಪ ಸಮಾರಂಭ ನಡೆಯಲಿದೆ ಎಂದು ದೇವೇಗೌಡರು ತಿಳಿಸಿದ್ದಾರೆ.

ಪಿಎಸ್​ಐ ಪರೀಕ್ಷಾ ಅಕ್ರಮದ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಏನಾದರೂ ಮಾತನಾಡಿದರೆ ಅದನ್ನು ಸಾಬೀತುಪಡಿಸುವ ಶಕ್ತಿ ಇರಬೇಕು. ಆದರೆ, ನನಗೆ ಈ ಬಗ್ಗೆ ಏನೂ ಮಾಹಿತಿ ಇಲ್ಲದ ಕಾರಂ ನಾನೇನೂ ಹೇಳುವುದಿಲ್ಲ ಎಂದು ರಾಯಚೂರು ಜಿಲ್ಲೆಯ ಸಿಂಧನೂರಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್​.ಡಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.

ನನ್ನ 60 ವರ್ಷದ ರಾಜಕೀಯ ಜೀವನದಲ್ಲಿ ಒಂದು ವಿಷಯವನ್ನು ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ಎತ್ತಿದರೆ ಅದಕ್ಕೆ ಈವರೆಗೆ ಯಾರಿಂದಲೂ ಉತ್ತರಿಸಲು ಸಾಧ್ಯವಾಗಿಲ್ಲ. ಕಾಶ್ಮೀರಕ್ಕೆ ಹೋದೆ ಹಿಂದು-ಮುಸ್ಲಿಂ ಗಲಾಟೆಯನ್ನು ನಿಲ್ಲಿಸಿದೆ. ಶೇಖ್ ಹಸೀನಾ ನಮ್ಮ ದೇಶಕ್ಕೆ ಬಂದರು. ಗಂಗಾನದಿಯ ನೀರನ್ನು ನಮ್ಮ ದೇಶಕ್ಕೆ ಬಳಕೆ ಮಾಡಲು ಆಗಲಿಲ್ಲ, ಅದನ್ನು ನಾನು ಪರಿಹರಿಸಿದೆ. ಇವತ್ತಿನವರೆಗೂ ಏನಾದರೂ ಒಂದು ಸಣ್ಣ ಘಟನೆ ನಡೆದಿದೆಯಾ? ಶೇಖ್ ಹಸಿನಾ, ದೇವೆಗೌಡರ ಫೋಟೊವನ್ನು ರೈತರು ಹಾಕಿಕೊಂಡಿದ್ದಾರೆ. ಅದನ್ನು ಹೋಗಿ ನೋಡಬಹುದು. ನಿಮ್ಮ ರಾಜಕೀಯ ಶಕ್ತಿ ಬಳಸಿಕೊಳ್ಳಲು ಇವನ್ನೆಲ್ಲಾ ಮಾಡಲು ಹೋದರೆ ಅದರ ದುಷ್ಪರಿಣಾಮ ಏನಾಗುತ್ತದೆ ಎಂಬುದನ್ನು ನೋಡಬೇಕು. ನಾನೂ ಯಾರ ಬಗ್ಗೆಯೂ ವಾದ- ವಿವಾದ ಮಾಡೋದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.

ಆಜಾನ್ ವಿರುದ್ಧ ಸುಪ್ರಭಾತ ಪಠಣ ಆಂದೋಲನ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿರುವ ದೇವೇಗೌಡರು, ಇದರ ಬಗ್ಗೆ ನೆಮ್ಮದಿ ಕೆಡಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಹಿಂದು ದೇವಾಲಯಗಳಲ್ಲಿ ಬೆಳಿಗ್ಗೆ ಸುಪ್ರಭಾತ ಮಾಡಲಾಗುತ್ತದೆ. ಮುಸ್ಲಿಮರು ಅವರ ಪದ್ಧತಿ ಪ್ರಕಾರ, ಅವರ ಧರ್ಮದ ಪ್ರಕಾರ ಪ್ರಾರ್ಥನೆ ಮಾಡುತ್ತಾರೆ. ಯಾವತ್ತೂ ಇಲ್ಲದೆ ಇರೋದು ಈಗ ಯಾಕೆ ವಿವಾದ ಮಾಡುತ್ತಿದ್ದಾರೆ? ಅದಕ್ಕೆ ಉತ್ತರ ಯಾರು ಕೊಡ್ತಾರೆ? ರಾಜಕೀಯ ಲಾಭ ಪಡೆಯಲು ಇಂಥಹದ್ದನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.

(ವರದಿ: ಭೀಮೇಶ್- ಶ್ರೀರಂಗ)

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *