ಸಾಂದರ್ಭಿಕ ಚಿತ್ರ
ನವದೆಹಲಿ: ನಿಮ್ಮ ಆಹಾರ ಪದ್ಧತಿ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೋ ಹಾಗೆಯೇ ನೀವು ಕುಡಿಯುವ ಪಾನೀಯವೂ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೀವು ಏನು ಕುಡಿಯುತ್ತೀರಿ, ಯಾವಾಗ ಕುಡಿಯುತ್ತೀರಿ, ಎಷ್ಟು ಕುಡಿಯುತ್ತೀರಿ, ಇತ್ಯಾದಿಗಳು ನಿಮ್ಮ ದೇಹ ಮತ್ತು ಜೀವನಶೈಲಿಯ ಮೇಲೆ ವಿವಿಧ ಪರಿಣಾಮಗಳನ್ನು ಬೀರಬಹುದು. ನೀವು ಕುಡಿಯುವ ಜ್ಯೂಸ್ ಅಥವಾ ಪಾನೀಯದ ಸೇವನೆಯ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ.
ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಕೆಲವು ಅನಾರೋಗ್ಯಕರವಾದ ಕುಡಿಯುವ ಅಭ್ಯಾಸಗಳು ಇಲ್ಲಿವೆ:
1. ನಿಯಮಿತವಾಗಿ ಆಲ್ಕೋಹಾಲ್ ಕುಡಿಯುವುದು:
ಆಲ್ಕೋಹಾಲ್ ಸೇವನೆಯಿಂದ ಆರೋಗ್ಯಕ್ಕೆ ಯಾವ ರೀತಿಯಲ್ಲೀ ಒಳ್ಳೆಯದಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ನೀವು ನಿಯಮಿತವಾಗಿ ಆಲ್ಕೋಹಾಲ್ ಗ್ರಾಹಕರಾಗಿದ್ದರೆ, ನಿಮಗೆ ಹೃದಯರಕ್ತನಾಳದ ಕಾಯಿಲೆಗಳು, ಬೊಜ್ಜು, ನರ ಉರಿಯೂತ, ಯಕೃತ್ತಿನ ಸಮಸ್ಯೆಗಳು ಇತ್ಯಾದಿಗಳ ಅಪಾಯಕ್ಕೆ ಸಿಲುಕಿಸಬಹುದು.
2. ಅತಿಯಾದ ಸಕ್ಕರೆ ಹಾಕಿದ ಪಾನೀಯ ಸೇವಿಸುವುದು:
ನೀವು ಆಗಾಗ ಸೋಡಾ ಕುಡಿಯುತ್ತೀರಾ? ಹಾಗಿದ್ದರೆ, ಈ ಅಭ್ಯಾಸವು ನಿಮ್ಮ ದೇಹಕ್ಕೆ ತೊಂದರೆ ಮಾಡಬಹುದು. ಮಧುಮೇಹಿಗಳು ಮಾತ್ರ ತಮ್ಮ ಸಕ್ಕರೆ ಸೇವನೆಯ ಬಗ್ಗೆ ಜಾಗರೂಕರಾಗಿರಬೇಕು ಎಂಬುದು ನಿಮ್ಮ ತಪ್ಪು ಕಲ್ಪನೆ. ಸಕ್ಕರೆ ಎಂಬ ಈ ವಿಷದ ಅತಿಯಾದ ಸೇವನೆಯು ತೂಕದ ಅಸಮರ್ಪಕ ನಿರ್ವಹಣೆ, ಅರಿವಿನ ಕಾರ್ಯದ ಕೊರತೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಸಕ್ಕರೆ ಅಂಶ ಹೆಚ್ಚಾಗಿರುವ ಪಾನೀಯಗಳಾದ ತಂಪು ಪಾನೀಯಗಳು, ಜ್ಯೂಸ್, ಎನರ್ಜಿ ಡ್ರಿಂಕ್, ಸೋಡಾ ಪಾನೀಯವನ್ನು ಕುಡಿಯಬೇಡಿ.
3. ಸಾಕಷ್ಟು ನೀರು ಕುಡಿಯದಿರುವುದು:
ನಮ್ಮ ದೇಹವು ಆಹಾರವಿಲ್ಲದೆ ಕೆಲವು ವಾರಗಳವರೆಗೆ ಬದುಕಬಲ್ಲದು. ಆದರೆ ನಮ್ಮ ದೇಹ ನೀರಿಲ್ಲದೆ ಕೆಲವೇ ದಿನಗಳು ಮಾತ್ರ ಬದುಕಬಲ್ಲದು ಎಂದು ನಿಮಗೆ ತಿಳಿದಿದೆಯೇ? ದೇಹವನ್ನು ಹೈಡ್ರೇಟೆಡ್ ಆಗಿ ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ನಿಮಗೆ ಗೊತ್ತಿರಲೇಬೇಕು. ಕೆಲವು ಸಂದರ್ಭಗಳಲ್ಲಿ ನಿರ್ಜಲೀಕರಣವು ತಲೆನೋವು, ಯಕೃತ್ತಿನ ಸಮಸ್ಯೆಗಳು, ಅರಿವಿನ ದುರ್ಬಲತೆ, ಇತ್ಯಾದಿಗಳಂತಹ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ, ನೀರಿನ ನಿರಂತರ ಅಸಮರ್ಪಕ ಸೇವನೆಯು ಮೆದುಳಿನ ತೊಂದರೆಗೂ ಕಾರಣವಾಗುತ್ತದೆ.
4. ಏನನ್ನೂ ತಿನ್ನದೆ ಮದ್ಯಪಾನ ಮಾಡುವುದು:
ಮದ್ಯಪಾನಕ್ಕಿಂತ ಕೆಟ್ಟದ್ದು ಏನು ಗೊತ್ತಾ? ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಕುಡಿಯುವುದು. ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವನೆಯು ಅದರ ಹೀರಿಕೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಹೆಚ್ಚು ತೀವ್ರವಾದ ಹ್ಯಾಂಗೊವರ್ಗಳಿಗೆ ಕಾರಣವಾಗಬಹುದು. ಹೀಗಾಗಿ, ಮದ್ಯಪಾನ ಮಾಡುವುದೇ ದೊಡ್ಡ ತಪ್ಪು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಮದ್ಯಪಾನ ಮಾಡುವುದು ಇನ್ನೂ ಅಪಾಯಕಾರಿ.
5. ಅತಿಯಾದ ಕೆಫೇನ್ ಸೇವನೆ:
ಜಗತ್ತಿನಾದ್ಯಂತ ಹೆಚ್ಚು ಸೇವಿಸುವ ಪಾನೀಯಗಳಲ್ಲಿ ಕಾಫಿ ಕೂಡ ಒಂದಾಗಿದೆ. ಈ ಕಾಫಿಯನ್ನು ಆಗಾಗ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜವಾಗುತ್ತದೆ ಎಂಬುದು ನಿಜವಾಗಿದ್ದರೂ, ಕೆಫೇನ್ನ ಅತಿಯಾದ ಸೇವನೆಯು ಆತಂಕ, ಖಿನ್ನತೆ, ಇತ್ಯಾದಿಗಳಂತಹ ವಿವಿಧ ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದು ಎಂಬುದನ್ನು ಗಮನಿಸಬೇಕು.