Hindi Diwas ಆಚರಣೆ ಪರಮ ಅನ್ಯಾಯ: ಹಿಂದಿ ದಿವಸ್ ವಿರೋಧಿಸಿ ಸಿಎಂಗೆ ಪತ್ರ ಬರೆದ ಎಚ್​ಡಿ ಕುಮಾರಸ್ವಾಮಿ | JDS Leader HD Kumaraswamy Asks CM Basavaraj Bommai Not to Celebrate Hindi Diwas


‘ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ದಿವಸ ಆಚರಣೆ ಮಾಡಬಾರದೆಂದು ಆಗ್ರಹಿಸುತ್ತೇನೆ’ ಎಂದು ಅವರು ಒತ್ತಾಯಿಸಿದ್ದಾರೆ.

Hindi Diwas ಆಚರಣೆ ಪರಮ ಅನ್ಯಾಯ: ಹಿಂದಿ ದಿವಸ್ ವಿರೋಧಿಸಿ ಸಿಎಂಗೆ ಪತ್ರ ಬರೆದ ಎಚ್​ಡಿ ಕುಮಾರಸ್ವಾಮಿ

ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕದಲ್ಲಿ ಹಿಂದಿ ದಿವಸ್ (Hindi Diwas)​ ಆಚರಣೆಯ ಔಚಿತ್ಯವೇನು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಗೆ ಪತ್ರ ಬರೆದಿರುವ ಅವರು, ‘ಒಂದು ಭಾಷೆಯನ್ನು ಮಾತ್ರ ಮೆರೆಸುವುದು ನಿಜಕ್ಕೂ ಜನತೆಗೆ ಎಸಗುವ ಪರಮ ಅನ್ಯಾಯವಾಗಿದೆ’ ಎಂದು ಹೇಳಿದ್ದಾರೆ. ‘ಭಾರತವು ಸಾವಿರಾರು ಭಾಷೆ ಹಾಗೂ ಉಪಭಾಷೆಗಳನ್ನು ಒಳಗೊಂಡ, 560ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿದ ಮತ್ತು ಸಾಂಸ್ಕೃತಿಕವಾಗಿ ಭಿನ್ನ ಆಚರಣೆಗಳನ್ನು ಹೊಂದಿರುವ ಒಂದು ಮಹಾನ್ ಒಕ್ಕೂಟವಾಗಿದೆ. ಇಂಥ ನಾಡಿನಲ್ಲಿ ಕೇವಲ ಒಂದು ಭಾಷೆಯನ್ನು ಮಾತ್ರವೇ ಮೆರೆಸುವುದು ಸರಿಯಲ್ಲ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಸೆಪ್ಟೆಂಬರ್ 14ರಂದು ಭಾರತ ಒಕ್ಕೂಟ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾದ ಹಿಂದಿ ದಿವಸವನ್ನು ಕರ್ನಾಟಕದಲ್ಲಿ ಒತ್ತಾಯಪೂರ್ವಕವಾಗಿ ಆಚರಿಸುವುದು ರಾಜ್ಯ ಸರ್ಕಾರವು ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ದಿವಸ ಆಚರಣೆ ಮಾಡಬಾರದೆಂದು ಆಗ್ರಹಿಸುತ್ತೇನೆ’ ಎಂದು ಅವರು ಒತ್ತಾಯಿಸಿದ್ದಾರೆ.

ಏಕೆ ಆಚರಣೆಗೆ ಬಂತು ಹಿಂದಿ ದಿವಸ್?

ಹಿಂದಿ ದಿವಸ್ ಆಚರಣೆಗೂ ಒಂದು ಇತಿಹಾಸವಿದೆ. ನಾವೆಲ್ಲರೂ ಭಾರತೀಯರು, ಭಾರತೀಯರೆಲ್ಲಾ ಒಂದೇ, ನಮಗೆಲ್ಲಾ ಒಂದೇ ಕಾನೂನು, ಒಂದೇ ಆಡಳಿತ ಇರುವಂತೆಯೇ ಒಂದೇ ಭಾಷೆಯನ್ನು ಎಲ್ಲರೂ ಮಾತನಾಡುವಂತಿರಬೇಕು. ಅದು ಹಿಂದಿಯೇ ಆಗಿರಬೇಕು ಎಂದು 1940ರ ದಶಕದಲ್ಲಿ ಬಹಳ ಹೋರಾಟಗಳು ನಡೆದವು. ಈ ಬಗ್ಗೆ ಸಂಸತ್ತಿನಲ್ಲಿ ಸುದೀರ್ಘ ಚರ್ಚೆಗಳೂ ನಡೆದವು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತರಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರಮುಖರು ವ್ಯೋಹರ್ ರಾಜೇಂದ್ರ ಸಿಂಹ. ಅವರ 50ನೇ ಹುಟ್ಟುಹಬ್ಬವಾದ 14ನೇ ಸೆಪ್ಟೆಂಬರ್ 1949ರಲ್ಲಿ ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ಘೋಷಿಸಲಾಯಿತು. ವ್ಯೂಹರ್ ಸಿಂಹ ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಸೆಪ್ಟೆಂಬರ್ 14ರಂದು ‘ಹಿಂದಿ ದಿವಸ್’ ಆಚರಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿತು.

ತಾಜಾ ಸುದ್ದಿ

TV9 Kannada


Leave a Reply

Your email address will not be published.