Hiraben Modi: ನನ್ನಮ್ಮ ತುಂಬಾ ಸಿಂಪಲ್ ಆದರೆ ಅಸಾಮಾನ್ಯಳು!; ಹೀರಾಬೆನ್ 100 ವರ್ಷದ ಪಯಣದ ಬಗ್ಗೆ ನರೇಂದ್ರ ಮೋದಿ ಭಾವನಾತ್ಮಕ ಬರಹ | PM Narendra Modi wrote Emotional Article on his Mother Hiraben Modi on her 100th Birthday in Modi Blog


1923ರ ಜೂನ್ 18ರಂದು ಜನಿಸಿದ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ (Hiraben Modi) ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ತಾಯಿಯ ಹುಟ್ಟುಹಬ್ಬದ ಪ್ರಯುಕ್ತ ಇಂದು ಮುಂಜಾನೆಯೇ ಗುಜರಾತ್​ನ ಗಾಂಧಿನಗರಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿ (Narendra Modi) ಅವರು ತಾಯಿಯ ಪಾದಗಳಿಗೆ ನಮಸ್ಕರಿಸಿ, ಅವರ ಆಶೀರ್ವಾದ ಪಡೆದು, ಅಮ್ಮನೊಂದಿಗೆ ತಿಂಡಿ ಸೇವಿಸಿ, ಸ್ವಲ್ಪ ಸಮಯ ಕಳೆದಿದ್ದಾರೆ. ಶತಾಯುಷಿಯಾಗಿರುವ ತಮ್ಮ ತಾಯಿ ಹೀರಾಬೆನ್ ಮೋದಿ ಅವರ ಬಗ್ಗೆ ನರೇಂದ್ರ ಮೋದಿ ತಮ್ಮ ಬ್ಲಾಗ್​​ನಲ್ಲಿ ಭಾವನಾತ್ಮಕ ಬರಹವೊಂದನ್ನು ಬರೆದುಕೊಂಡಿದ್ದಾರೆ. ಈ ಲೇಖನದಲ್ಲಿ ತಮ್ಮ ಹಾಗೂ ತಮ್ಮ ತಾಯಿಯ ಬಾಂಧವ್ಯ, ತಮಗಾಗಿ ಆಕೆ ಮಾಡಿದ ತ್ಯಾಗ, ತಮ್ಮ ಸಾಧನೆಯ ಬಗ್ಗೆ ತಾಯಿಗಿರುವ ಹೆಮ್ಮೆ ಹೀಗೆ ನಾನಾ ವಿಷಯಗಳ ಬಗ್ಗೆ ಬರೆದುಕೊಂಡಿದ್ದಾರೆ. ಆ ಬ್ಲಾಗ್ ಬರಹದ ಸಂಕ್ಷಿಪ್ತ ರೂಪ ಇಲ್ಲಿದೆ.

ಅಮ್ಮ,
ಈ ಪದ ಪ್ರೀತಿ, ಸಹನೆ, ನಂಬಿಕೆ ಮತ್ತು ಇನ್ನೂ ಅನೇಕ ಭಾವನೆಗಳ ಸಂಗಮ. ಪ್ರಪಂಚದಾದ್ಯಂತ ಅದು ಯಾವುದೇ ದೇಶ ಅಥವಾ ಪ್ರದೇಶವಾಗಿರಲಿ, ಮಕ್ಕಳು ತಮ್ಮ ತಾಯಂದಿರ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುತ್ತಾರೆ. ತಾಯಿಯು ತನ್ನ ಮಕ್ಕಳಿಗೆ ಜನ್ಮ ನೀಡುವುದು ಮಾತ್ರವಲ್ಲ, ಅವರ ಮನಸ್ಸು, ಅವರ ವ್ಯಕ್ತಿತ್ವ ಮತ್ತು ಅವರ ಆತ್ಮವಿಶ್ವಾಸವನ್ನು ರೂಪಿಸುತ್ತಾಳೆ. ಅದಕ್ಕಾಗಿ ತಾಯಂದಿರು ನಿಸ್ವಾರ್ಥವಾಗಿ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾರೆ.

ಇಂದು, ನನ್ನ ಅಮ್ಮ ಶ್ರೀಮತಿ ಹೀರಾಬಾ ತಮ್ಮ ನೂರನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಹಂಚಿಕೊಳ್ಳಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಇದು ಅವರ ಜನ್ಮ ಶತಮಾನೋತ್ಸವದ ವರ್ಷ. ನನ್ನ ತಂದೆ ಬದುಕಿದ್ದರೆ ಅವರೂ ಕಳೆದ ವಾರ ನೂರನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ನನ್ನ ತಾಯಿಯ ಶತಮಾನೋತ್ಸವ ವರ್ಷ ಆರಂಭವಾಗುತ್ತಿರುವುದರಿಂದ ಮತ್ತು ನನ್ನ ತಂದೆಯವರು ಶತಮಾನೋತ್ಸವವನ್ನು ಪೂರ್ಣಗೊಳಿಸುತ್ತಿದ್ದರಿಂದ 2022 ನನಗೆ ಒಂದು ವಿಶೇಷ ವರ್ಷವಾಗಿದೆ.

ಹಿಂದೆ ನಮ್ಮ ಕುಟುಂಬದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಪದ್ಧತಿ ಇರಲಿಲ್ಲ. ಆದರೆ, ನನ್ನ ತಂದೆಯ ಜನ್ಮದಿನದಂದು ಅವರ ನೆನಪಿಗಾಗಿ ಯುವ ಪೀಳಿಗೆಯ ಮಕ್ಕಳು 100 ಗಿಡಗಳನ್ನು ನೆಟ್ಟರು. ನನ್ನ ಜೀವನದಲ್ಲಿ ನಡೆದ ಒಳ್ಳೆಯದಕ್ಕೆ ಮತ್ತು ನನ್ನಲ್ಲಿರುವ ಒಳ್ಳೆಯತನಕ್ಕೆ ನನ್ನ ಹೆತ್ತವರೇ ಕಾರಣ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನನ್ನ ತಾಯಿ ಎಷ್ಟು ಅಸಾಧಾರಣಳೋ ಅಷ್ಟೇ ಸರಳ, ಎಲ್ಲಾ ತಾಯಂದಿರಂತೆ!. ಇದನ್ನು ಓದುವಾಗ, ನೀವು ನಿಮ್ಮ ಸ್ವಂತ ತಾಯಿಯ ಚಿತ್ರವನ್ನೇ ನೋಡಬಹುದು.

ನನ್ನ ತಾಯಿ ಗುಜರಾತ್​ನ ಮೆಹ್ಸಾನಾದ ವಿಸ್ನಗರದಲ್ಲಿ ಜನಿಸಿದರು. ಇದು ನನ್ನ ತವರು ವಡ್ನಾಗರಕ್ಕೆ ಬಹಳ ಹತ್ತಿರದಲ್ಲಿದೆ. ಆಕೆಗೆ ಸ್ವಂತ ತಾಯಿಯ ವಾತ್ಸಲ್ಯ ಸಿಗಲಿಲ್ಲ. ನನ್ನ ತಾಯಿಯು ಎಳೆವಯಸ್ಸಿನಲ್ಲಿಯೇ ನನ್ನ ಅಜ್ಜಿಯನ್ನು ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ರೋಗದಿಂದಾಗಿ ಕಳೆದುಕೊಂಡರು. ಆಕೆಗೆ ನನ್ನ ಅಜ್ಜಿಯ ಮುಖವಾಗಲಿ, ಅವಳ ಮಡಿಲಿನ ನೆಮ್ಮದಿಯಾಗಲಿ ನೆನಪಿಲ್ಲ. ಆಕೆ ತನ್ನ ಇಡೀ ಬಾಲ್ಯವನ್ನು ತನ್ನ ತಾಯಿಯಿಲ್ಲದೆ ಕಳೆದರು. ನಾವೆಲ್ಲರೂ ಮಾಡುವಂತೆ ಅವರು ತನ್ನ ತಾಯಿಯ ಮೇಲೆ ಕೋಪತಾಪ ತೋರಿಸಲು ಸಾಧ್ಯವಾಗಲಿಲ್ಲ. ನಮ್ಮೆಲ್ಲರಂತೆ ಅವರಿಗೆ ತನ್ನ ತಾಯಿಯ ಮಡಿಲಿನಲ್ಲಿ ಮಲಗಲಾಗಲಿಲ್ಲ. ಶಾಲೆಗೆ ಹೋಗಿ ಓದು ಬರಹ ಕಲಿಯಲೂ ಆಗಲಿಲ್ಲ. ಆಕೆಯ ಬಾಲ್ಯವು ಬಡತನ ಮತ್ತು ಕಷ್ಟದಿಂದ ಕೂಡಿತ್ತು.

TV9 Kannada


Leave a Reply

Your email address will not be published.