Cruelty : ಸಾಮಾಜಿಕವಾಗಿ ನಾವು ಬೆಳೆಸಿ ಪೋಷಿಸಿಕೊಂಡು ಬಂದಂತಹ ಹುಸಿ ಮೌಲ್ಯಗಳೇ ಇಂಥ ಕೃತ್ಯಗಳಿಗೆ ಕಾರಣ, ಧರ್ಮ ಅಲ್ಲ. ಅಷ್ಟಕ್ಕೂ, ಕ್ರೌರ್ಯ- ಧರ್ಮದ ಹೆಸರಲ್ಲಾದರೂ ಜಾತಿಯ ಹೆಸರಲ್ಲಾದರೂ ಪ್ರೇಮದ ಹೆಸರಲ್ಲಾದರೂ ಕ್ರೌರ್ಯವೇ ಮತ್ತು ಕಠಿಣ ದಂಡನಾರ್ಹವೇ, ಅಪರಾಧಿ ಹಿಂದುವಾದರೂ ಮುಸ್ಲಿಮ್ ಆದರೂ.
ನಿಮ್ಮ ಟೈಮ್ಲೈನ್ : ಮುಸ್ಲಿಂ ಯುವಕನನ್ನು ಹಿಂದೂ ಯುವತಿ ಪ್ರೀತಿಸಿ, ಮುಸ್ಲಿಂ ಪದ್ಧತಿಯ ಪ್ರಕಾರ ವಿವಾಹವಾಗುವುದರಿಂದ ಯುವತಿಯ ಕುಟುಂಬಕ್ಕೆ ಉಂಟಾಗುವ ಮಾನಸಿಕ ಕ್ಲೇಶವನ್ನು ನಿರಾಕರಿಸಿ ಮಾತಾಡಬೇಕಿಲ್ಲ. ಸಂಬಂಧಿಕರು ಮತ್ತು ನೆರೆಯವರಿಂದ ಇರಿಯುವ ನೂರು ಮಾತುಗಳನ್ನು ಈ ಕುಟುಂಬ ಕೇಳಬೇಕಾಗುತ್ತದೆ. ಉಪದೇಶ, ಧರ್ಮ ಪಾಠಗಳು ಯಥೋಚಿತವಾಗಿ ಅವರನ್ನು ಕಾಡಿಕಾಡಿ ತಿವಿಯುತ್ತವೆ. ತಂದೆ-ತಾಯಿ ಎನಿಸಿಕೊಳ್ಳುವುದಕ್ಕೆ ನೀವು ನಾಲಾಯಕ್ಕು.. ಎಂಬ ಷರಾವನ್ನು ಸಮಾಜ ನೀಡಿಬಿಡುತ್ತದೆ. ಹಾಗೆಯೇ ಹಿಂದೂ ಯುವಕನನ್ನು ಮುಸ್ಲಿಂ ಯುವತಿ (Muslim woman) ಪ್ರೀತಿಸಿ ಹಿಂದೂ ಪದ್ಧತಿಯಂತೆ ವಿವಾಹವಾದರೂ ಪರಿಸ್ಥಿತಿ ಹೀಗೆಯೇ ಇರುತ್ತದೆ. ಆದರೆ, ಶ್ರೀಮಂತ ಕುಟುಂಬಕ್ಕೆ ಸಂಬಂಧಿಸಿ ಮಾತ್ರ ಈ ಮಾತುಗಳು ಅನ್ವಯಿಸುವುದಿಲ್ಲ. ವಿಷಾದವೇನೆಂದರೆ, ಜನವರಿ 31ರಂದು ಹಿಂದೂ ಪದ್ಧತಿಯಂತೆ ಮುಸ್ಲಿಂ ಯುವತಿ ಅಶ್ರೀನ್ ಸುಲ್ತಾನರನ್ನು ( Syed Ashrin Sultan) ಆರ್ಯ ಸಮಾಜದಲ್ಲಿ ವಿವಾಹವಾಗಿದ್ದ ನಾಗರಾಜುವನ್ನು ನಿನ್ನೆ ಯುವತಿಯ ಸಹೋದರ ಸಯ್ಯದ್ ಮುಬೀನ್ ಅಹ್ಮದ್ ಮತ್ತು ಸಂಬಂಧಿಕ ಮಹಮ್ಮದ್ ಮಸೂದ್ ಎಂಬಿಬ್ಬರು ಯುವತಿಯ ಎದುರೇ ಹತ್ಯೆ ಮಾಡಿದ್ದಾರೆ. ತಕ್ಷಣ ತೆಲಂಗಾಣ ಬಿಜೆಪಿ ಈ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದೆ.
ಏ.ಕೆ. ಕುಕ್ಕಿಲ, ಪತ್ರಕರ್ತ (A.K.Kukkila)
ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾದರೆ ಅದನ್ನು ಲವ್ ಜಿಹಾದ್ ಎಂದು ಹೇಳುವ ಇದೇ ಪಕ್ಷ, ಸುಲ್ತಾನ ಮತ್ತು ನಾಗರಾಜು ಹಿಂದೂ ಪದ್ಧತಿಯಂತೆಯೇ ಆರ್ಯ ಸಮಾಜದಲ್ಲಿ ಮದುವೆಯಾದುದನ್ನು ತಣ್ಣಗೆ ಸಹಿಸಿಕೊಂಡಿತ್ತು. ಅಂದಹಾಗೆ, 2 ವರ್ಷಗಳ ಹಿಂದೆ Ground Zero: killing love with caste pride ಎಂಬ ಶೀರ್ಷಿಕೆಯಲ್ಲಿ ದ ಹಿಂದೂ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿತ್ತು. ಮೇಲ್ಜಾತಿಯ ಅವಂತಿ ರೆಡ್ಡಿಯನ್ನು ಮದುವೆಯಾದ ಮೂರೇ ತಿಂಗಳೊಳಗೆ ಕೆಳಜಾತಿಯ ಹೇಮಂತಕುಮಾರ್ ಇದೇ ತೆಲಂಗಾಣದಲ್ಲಿ ಯುವತಿಯ ಕುಟುಂಬದಿಂದ ಹತ್ಯೆಗೀಡಾಗಿರುವುದನ್ನು ಈ ವರದಿಯಲ್ಲಿ ಹೇಳಲಾಗಿತ್ತು. 2014ರಲ್ಲಿ 28, 2015ರಲ್ಲಿ 251 ಮತ್ತು 16ರಲ್ಲಿ 77 ಇಂತಹ ಮರ್ಯಾದಾ ಹತ್ಯೆಗಳು ಆಗಿರುವುದನ್ನು ವರದಿ ಪಟ್ಟಿ ಮಾಡಿದೆ. ಅಂದಹಾಗೆ, ಪತ್ನಿ ಸುಲ್ತಾನರ ಎದುರಲ್ಲೇ ನಾಗರಾಜುವನ್ನು ಹತ್ಯೆಗೈದ ರೀತಿಯಲ್ಲೇ 2018 ಅಕ್ಟೋಬರ್ 14 ರಂದು ಇದೇ ತೆಲಂಗಾಣದಲ್ಲಿ ಪ್ರಣಯ್ನನ್ನು ಹತ್ಯೆ ಮಾಡಲಾಗಿತ್ತು. ಮೇಲ್ಜಾತಿ ಯುವತಿ ಅಮೃತ ರೆಡ್ಡಿಯನ್ನು ಪ್ರೀತಿಸಿ ವಿವಾಹವಾಗಿದ್ದ ಈ ದಲಿತ ಯುವಕ, ಆಕೆಯ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಯ ತಂದೆ ಮತ್ತು ಸಹೋದರರು ಕಣ್ಣೆದುರೇ ಪ್ರಣಯ್ ನನ್ನು ಹತ್ಯೆ ಮಾಡಿದ್ದರು. ಆಗ ಅಮೃತ 5 ತಿಂಗಳ ಬಸುರಿ. ನಿಜವಾಗಿ, ಸಾಮಾಜಿಕವಾಗಿ ನಾವು ಬೆಳೆಸಿ ಪೋಷಿಸಿಕೊಂಡು ಬಂದಂತಹ ಹುಸಿ ಮೌಲ್ಯಗಳೇ ಇಂಥ ಕೃತ್ಯಗಳಿಗೆ ಕಾರಣ, ಧರ್ಮ ಅಲ್ಲ. ಅಷ್ಟಕ್ಕೂ, ಕ್ರೌರ್ಯ- ಧರ್ಮದ ಹೆಸರಲ್ಲಾದರೂ ಜಾತಿಯ ಹೆಸರಲ್ಲಾದರೂ ಪ್ರೇಮದ ಹೆಸರಲ್ಲಾದರೂ ಕ್ರೌರ್ಯವೇ ಮತ್ತು ಕಠಿಣ ದಂಡನಾರ್ಹವೇ, ಅಪರಾಧಿ ಹಿಂದುವಾದರೂ ಮುಸ್ಲಿಮ್ ಆದರೂ.
‘ಮುಸ್ಲಿಮರೊಳಗೂ ಜಾತಿ ಇದೆ…’
ಹೈದರಾಬಾದಿನ ನಾಗರಾಜು ಎಂಬ ಯುವಕನ ಹತ್ಯೆಯು, ‘ಮುಸ್ಲಿಂ ಸಮುದಾಯದ ಒಳಗೂ ಜಾತಿ ಇದೆ’ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಹಾಗಂತ, ಈ ಚರ್ಚೆಯನ್ನು ಇಸ್ಲಾಮೊಫೋಬಿಯಾ ಎಂದು ಮುಸ್ಲಿಮರು ಸಾರಾಸಗಟು ತಿರಸ್ಕರಿಸಬೇಕಿಲ್ಲ.
ಸೈಯದ್, ಶೇಖ್, ಪಠಾಣ, ಪಿಂಜಾರ, ನದಾಫ್, ಪೆಂಡಾರ್, ಭಾಗವಾನ್, ಅತ್ತಾರ, ಬುನಕರ್, ಲೋಹಾರ್, ಚಪ್ಪರಬಂದ್, ನಾಲಬಂದ್, ಜಾತಕಾರ್, ದರ್ವೇಶ್, ಕಸಾಯಿ, ನಾವಿ, ಖಾನ್ ಇತ್ಯಾದಿಗಳೆಲ್ಲಾ ಏನು? ಮುಸ್ಲಿಂ ಸಮುದಾಯದೊಳಗಿನ ಜಾತಿಗಳೇ ಇವು? ಅಲ್ಲ ಎಂದಾದರೆ ಮತ್ತೂ ಕೆಲವು ಪ್ರಶ್ನೆಗಳಿವೆ. ಈ ಸಂಬೋಧೀತರ ನಡುವೆ ಸಂಬಂಧಗಳು ಹೇಗಿವೆ? ವೈವಾಹಿಕ ಸಂಬಂಧ ಇದೆಯೇ? ಪರಸ್ಪರ ಒಟ್ಟು ಸೇರುತ್ತಾರೆಯೇ? ಮಸೀದಿಗಳಲ್ಲಿ ತರತಮ ಇದೆಯೇ? ಒಂದೇ ಪ್ರದೇಶದಲ್ಲಿ ಎಲ್ಲ ಸಂಬೋಧಿತರು ಒಟ್ಟಾಗಿ ಬದುಕುತ್ತಿದ್ದಾರೆಯೇ? ಸಮಾನತೆಯ ಪಾಠ ಹೇಳಿ ಕೊಡುವುದರಲ್ಲಿ ಮದ್ರಸಗಳ ಪಾತ್ರ ಬಹುದೊಡ್ಡದು. ಇಲ್ಲಿ ಅವುಗಳ ಪರಿಸ್ಥಿತಿ ಏನು? ಅಂದಹಾಗೆ,
ಈಗ ನಡೆಯುತ್ತಿರುವ ಚರ್ಚೆ, ಕೇಳಿಬರುತ್ತಿರುವ ಆರೋಪ ಮತ್ತು ಜಿಜ್ಞಾಸೆಗಳನ್ನು ಮುಸ್ಲಿಂ ಸಮುದಾಯ ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಕೇಳಿಬಂದಿರುವ ಆರೋಪಗಳ ಬಗ್ಗೆ ಅಧ್ಯಯನಕ್ಕೆ ಏರ್ಪಾಡು ಮಾಡಬೇಕು.