IND vs AUS: ಲಾಠಿ ಚಾರ್ಜ್​ ನಡುವೆಯೂ ನಿಲ್ಲದ ಟಿಕೆಟ್ ಫೈಟ್; ಮಂಡಳಿ ವಿರುದ್ಧ ಎಫ್‌ಐಆರ್ ದಾಖಲು | Tense situation with huge crowd near gymkhana ground over india vs australia 3rd t20i cricket match tickets


IND vs AUS: ಬೆಳಗಿನ ಜಾವ 3 ರಿಂದಲೇ ಜನರು ಪಂದ್ಯದ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲಲಾರಂಭಿಸಿದ್ದಾರೆ. ದಿನ ಕಳೆದಂತೆ ಜನಸಂದಣಿಯೂ ಹೆಚ್ಚಾಗತೊಡಗಿದೆ. ಆದರೆ ಕ್ರಿಕೆಟ್ ಮಂಡಳಿಯ ಕಳಪೆ ವ್ಯವಸ್ಥೆಯನ್ನು ಕಂಡ ಅಭಿಮಾನಿಗಳು ಹೈದರಾಬಾದ್ ಅಸೋಸಿಯೇಷನ್ ​​ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

IND vs AUS: ಲಾಠಿ ಚಾರ್ಜ್​ ನಡುವೆಯೂ ನಿಲ್ಲದ ಟಿಕೆಟ್ ಫೈಟ್; ಮಂಡಳಿ ವಿರುದ್ಧ ಎಫ್‌ಐಆರ್ ದಾಖಲು

ಟಿಕೆಟ್​ಗಾಗಿ ನೂಕುನುಗ್ಗಲು

3 ಪಂದ್ಯಗಳ ಟಿ20 ಸರಣಿ (T20 series) ಈಗಾಗಲೇ ಭಾರತ- ಆಸ್ಟ್ರೇಲಿಯಾ (India and Australia) ವಿರುದ್ದ ಆರಂಭವಾಗಿದ್ದು, ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಈಗಾಗಲೇ ಮುಗ್ಗರಿಸಿದೆ. ಹೀಗಾಗಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುವ ಮೂಲಕ ರೋಹಿತ್ (Rohit Sharma) ಪಡೆ ಗೆಲುವಿನ ಹಾದಿಗೆ ಮರಳಬೇಕಾಗಿದೆ. ಎರಡನೇ ಟಿ20 ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದ್ದು, ಇದಾದ ಬಳಿಕ ಉಭಯ ತಂಡಗಳ ನಡುವಿನ ಸರಣಿಯ ಅಂತಿಮ ಪಂದ್ಯ ಸೆ.25ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದ್ದು, ಮಂಡಳಿಯ ವಿರುದ್ಧ ನಗರ ಪೊಲೀಸ್ ಕಾಯ್ದೆಯ ಕಲಂ 420, 337 ಮತ್ತು 21/76 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಲಾಠಿ ಚಾರ್ಜ್

ವಾಸ್ತವವಾಗಿ, 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ, ಅಂತಿಮ ಪಂದ್ಯದ ರೋಚಕತೆ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಅಂತಿಮ ಪಂದ್ಯದ ಟಿಕೆಟ್ ಖರೀದಿಸಲು ಸಾವಿರಾರು ಅಭಿಮಾನಿಗಳು ಜಿಮ್ಖಾನಾ ಮೈದಾನಕ್ಕೆ ಆಗಮನಿಸುತ್ತಿದ್ದಾರೆ. ಅಲ್ಲದೆ ಮೈದಾನದ ಹೊರಗೆ ಅಭಿಮಾನಿಗಳ ದಂಡೇ ನೆರೆಯುತ್ತಿದೆ. ಆದ್ದರಿಂದ ಜನಸಂದಣಿಯನ್ನು ನಿಯಂತ್ರಿಸಲಾಗದೆ ಪೊಲೀಸರು ಲಾಠಿ ಪ್ರಹಾರ ಕೂಡ ನಡೆಸಬೇಕಾಯಿತು. ಹೀಗಾಗಿ ಮೈದಾನದ ಸುತ್ತಮುತ್ತ ಅವ್ಯವಸ್ಥೆ ಉಂಟಾಗಿದ್ದು, ಈ ಲಾಠಿ ಪ್ರಹಾರದಿಂದ ಹಲವರು ಗಾಯಗೊಂಡಿದ್ದರೆ, ಇನ್ನು ಕೆಲವರು ಕಾಲ್ತುಳಿತಕ್ಕೆ ಸಿಕ್ಕಿ ಗಾಯಗೊಂಡಿದ್ದಾರೆ. ಈ ಕಾಲ್ತುಳಿತದ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

ಇದೀಗ ಇದೇ ವಿಚಾರವಾಗಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲಾಗಿದೆ. ಬಹಳ ದಿನಗಳ ನಂತರ ಹೈದರಾಬಾದ್‌ನಲ್ಲಿ ಅಂತರಾಷ್ಟ್ರೀಯ ಪಂದ್ಯ ಆಯೋಜಿಸಲಾಗಿದೆ. ಹೀಗಿರುವಾಗ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೋಡಲು ಕಾತರರಾಗಿದ್ದಾರೆ. ಬೆಳಗಿನ ಜಾವ 3 ರಿಂದಲೇ ಜನರು ಪಂದ್ಯದ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲಲಾರಂಭಿಸಿದ್ದಾರೆ. ದಿನ ಕಳೆದಂತೆ ಜನಸಂದಣಿಯೂ ಹೆಚ್ಚಾಗತೊಡಗಿದೆ. ಆದರೆ ಕ್ರಿಕೆಟ್ ಮಂಡಳಿಯ ಕಳಪೆ ವ್ಯವಸ್ಥೆಯನ್ನು ಕಂಡ ಅಭಿಮಾನಿಗಳು ಹೈದರಾಬಾದ್ ಅಸೋಸಿಯೇಷನ್ ​​ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಸರಣಿಯಲ್ಲಿ ಭಾರತಕ್ಕೆ ಸೋಲಿನ ಆರಂಭ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಡೆಯುತ್ತಿರುವ ಸರಣಿಯ ಬಗ್ಗೆ ಮಾತನಾಡುವುದಾದರೆ, ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿದೆ. ಮೊಹಾಲಿಯಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಸೋಲು ಕಂಡಿತ್ತು. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಮೊದಲ ಎರಡು ಓವರ್‌ಗಳಲ್ಲಿ ಕೆಲವು ಉತ್ತಮ ಹೊಡೆತಗಳನ್ನು ಆಡುವ ಮೂಲಕ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು. ಆದರೆ ರೋಹಿತ್ ಮತ್ತು ವಿರಾಟ್ ಕೊಹ್ಲಿ ಬೇಗನೆ ಔಟಾದರು. ಇದಾದ ಬಳಿಕ ರಾಹುಲ್, ಸೂರ್ಯಕುಮಾರ್ ಯಾದವ್ ಜೊತೆ 68 ರನ್ ಜೊತೆಯಾಟ ನಡೆಸಿದರು. ನಂತರ ಹಾರ್ದಿಕ್ ಪಾಂಡ್ಯ ಅಜೇಯ 71 ರನ್ ಗಳಿಸಿ ಟೀಂ ಇಂಡಿಯಾ ನಿಗದಿತ ಓವರ್​ನಲ್ಲಿ 6 ವಿಕೆಟ್​ಗೆ 208 ರನ್ ಗಳಿಸಲು ನೆರವಾದರು. ಬಲಿಷ್ಠ ಟಾರ್ಗೆಟ್ ನೀಡುವಲ್ಲಿ ಟೀಂ ಇಂಡಿಯಾ ಸಫಲವಾಯಿತು, ಆದರೆ ಬೌಲರ್‌ಗಳು ತಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲರಾದರು. ಹೀಗಾಗಿ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 4 ಎಸೆತಗಳು ಬಾಕಿ ಇರುವಂತೆಯೆ ಗುರಿಯನ್ನು ಸಾಧಿಸಿತು.

ತಾಜಾ ಸುದ್ದಿ

TV9 Kannada


Leave a Reply

Your email address will not be published.