ಗಾಯಗೊಂಡ ಗಿಲ್
ಮುಂಬೈ ಟೆಸ್ಟ್ನ ಎರಡನೇ ದಿನ ಭಾರತ ಕ್ರಿಕೆಟ್ ತಂಡಕ್ಕೆ ಶುಭ ದಿನ ಎಂದು ಸಾಭೀತಾಯಿತು. ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ 325 ರನ್ಗಳಿಗೆ ಆಲೌಟ್ ಆದ ನಂತರ, ಟೀಮ್ ಇಂಡಿಯಾ ಬೌಲಿಂಗ್ನಲ್ಲಿ ಅದ್ಭುತ ಪುನರಾಗಮನವನ್ನು ಮಾಡಿತು ಮತ್ತು ಕಿವೀಸ್ ತಂಡವನ್ನು ಕೇವಲ 62 ರನ್ಗಳಿಗೆ ಕಟ್ಟಿಹಾಕಿತು. ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಸಿರಾಜ್ ನಾಯಕತ್ವದಲ್ಲಿ ಟೀಂ ಇಂಡಿಯಾದ ಬೌಲರ್ಗಳು ಕೇವಲ 28 ಓವರ್ಗಳಲ್ಲಿ ಕಿವೀಸ್ ಬ್ಯಾಟ್ಸ್ಮನ್ಗಳನ್ನು ಆಲೌಟ್ ಮಾಡಿದರು. ಇದಾದ ಬಳಿಕ ಎರಡನೇ ಇನಿಂಗ್ಸ್ ನಲ್ಲೂ ಉತ್ತಮ ಆಟ ಆರಂಭಿಸಿದ ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದೆ. ಆದರೆ ಈ ಅವಧಿಯಲ್ಲಿ ಟೀಂ ಇಂಡಿಯಾ ಕೂಡ ದೊಡ್ಡ ಹಿನ್ನಡೆ ಅನುಭವಿಸಿದೆ. ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಇಂಜುರಿಯಿಂದಾಗಿ 2ನೇ ಇನ್ನಿಂಗ್ಸ್ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್ಗೆ ಇಳಿದಿಲ್ಲ.
ನ್ಯೂಜಿಲೆಂಡ್ನ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟ್ಸ್ಮನ್ ಶಾರ್ಟ್ ಲೆಗ್ನಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ಇನಿಂಗ್ಸ್ನ 13ನೇ ಓವರ್ನಲ್ಲಿ ಎಡಗೈ ಕಿವೀಸ್ ಬ್ಯಾಟ್ಸ್ಮನ್ ಹೆನ್ರಿ ನಿಕೋಲ್ಸ್ ಅಕ್ಸರ್ ಪಟೇಲ್ ಎಸೆತದಲ್ಲಿ ಹುರುಪಿನ ಸ್ವೀಪ್ ಶಾಟ್ ಆಡಿದರು. ಬ್ಯಾಟ್ಸ್ಮನ್ಗೆ ಸಮೀಪದಲ್ಲಿ ಕ್ಯಾಚಿಂಗ್ ಸ್ಥಾನದಲ್ಲಿದ್ದ ಶುಬ್ಮನ್ ಈ ಹೊಡೆತದಲ್ಲಿ ಚೆಂಡನ್ನು ತಪ್ಪಿಸಲು ಪ್ರಯತ್ನಿಸಿದರು, ಆದರೆ ಚೆಂಡು ಬಲಗೈ ಮೊಣಕೈಗೆ ಬಡಿಯಿತು. ಚೆಂಡು ಬಡಿದ ತಕ್ಷಣ, ಶುಭಮನ್ ನೋವಿನಿಂದ ನರಳುತ್ತಾ ಮೈದಾನದಲ್ಲಿ ಕುಳಿತುಕೊಂಡರು. ಭಾರತ ತಂಡದ ಫಿಸಿಯೋ ಮೈದಾನಕ್ಕೆ ಬಂದು ಶುಭ್ಮಾನ್ರನ್ನು ಪರೀಕ್ಷಿಸಿದರು ಮತ್ತು ನಂತರ ಗಿಲ್ ಮೈದಾನದಿಂದ ಹೊರಬರಬೇಕಾಯಿತು. ಶುಬ್ಮನ್ ಬದಲಿಗೆ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ಗೆ ಬಂದರು ಮತ್ತು ಅವರು ಶಾರ್ಟ್ ಲೆಗ್ನಲ್ಲಿ ಎರಡು ಅದ್ಭುತ ಕ್ಯಾಚ್ಗಳನ್ನು ಪಡೆದರು.
ಶುಭ್ಮನ್ಗೆ ಕ್ಷೇತ್ರರಕ್ಷಣೆ ಸಾಧ್ಯವಾಗಲಿಲ್ಲ
ಸ್ವಲ್ಪ ಸಮಯದ ನಂತರ, ಬಿಸಿಸಿಐ ಯುವ ಆರಂಭಿಕ ಆಟಗಾರನ ಫಿಟ್ನೆಸ್ ಕುರಿತು ಅಪ್ಡೇಟ್ ಮಾಡಿದೆ. ಮಂಡಳಿ ನೀಡಿರುವ ಹೇಳಿಕೆಯ ಪ್ರಕಾರ, ಮೊದಲ ಇನ್ನಿಂಗ್ಸ್ನಲ್ಲಿ ಫೀಲ್ಡಿಂಗ್ ಮಾಡುವಾಗ ಶುಬ್ಮನ್ ಗಿಲ್ ಅವರ ಬಲ ಮೊಣಕೈಗೆ ಗಾಯವಾಗಿತ್ತು, ಇದರಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಮುನ್ನೆಚ್ಚರಿಕೆಯಾಗಿ ಮೈದಾನಕ್ಕೆ ಮರಳಲಿಲ್ಲ ಎಂದಿದೆ.
🚨 Update 🚨: Shubman Gill suffered a blow to his right elbow while fielding in the first innings. He has not recovered completely and hence not taken the field as a precautionary measure.#TeamIndia #INDvNZ @Paytm pic.twitter.com/UqSzXYTce2
— BCCI (@BCCI) December 4, 2021
ಪೂಜಾರ ಓಪನಿಂಗ್ಗೆ
ಗಿಲ್ ಗಾಯದಿಂದಾಗಿ ಭಾರತ ತಂಡ ತನ್ನ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಯಿತು. ಮೂರನೇ ಸೆಷನ್ನಲ್ಲಿ ನ್ಯೂಜಿಲೆಂಡ್ ಅನ್ನು ಆಲ್ಔಟ್ ಮಾಡಿದ ನಂತರ ಟೀಮ್ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿತು. ಹಿರಿಯ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಮಯಾಂಕ್ ಅಗರ್ವಾಲ್ ಅವರೊಂದಿಗೆ ಆರಂಭಿಕರಾಗಿ ಬ್ಯಾಟಿಂಗ್ಗೆ ಇಳಿದರು. ಮೊದಲ ಇನಿಂಗ್ಸ್ನಲ್ಲಿ ಭರ್ಜರಿ 150 ರನ್ ಗಳಿಸಿದ್ದ ಮಯಾಂಕ್ ಮತ್ತೊಮ್ಮೆ ಉತ್ತಮ ಆರಂಭ ಕಂಡರೆ, ಮೊದಲ ಇನ್ನಿಂಗ್ಸ್ನಲ್ಲಿ ಖಾತೆ ತೆರೆಯದೆ ಔಟಾದ ಪೂಜಾರ ಕೂಡ ಆ ವೈಫಲ್ಯವನ್ನು ಬಿಟ್ಟು ಸುಗಮವಾಗಿ ಆರಂಭ ಮಾಡಿದರು. ಅವರ ಇನ್ನಿಂಗ್ಸ್ ಸಮಯದಲ್ಲಿ, ಪೂಜಾರ ಸರಿಯಾದ ವೇಗದಲ್ಲಿ ರನ್ ಗಳಿಸಿದರು ಮತ್ತು ಉತ್ತಮ ಸಿಕ್ಸರ್ ಅನ್ನು ಸಹ ಹೊಡೆದರು. ದಿನದಾಟದ ಅಂತ್ಯಕ್ಕೆ ಪೂಜಾರ 29 ಮತ್ತು ಮಯಾಂಕ್ 38 ರನ್ ಗಳಿಸಿ ಅಜೇಯರಾಗಿ ಮರಳಿದರು.