IND vs NZ: ಗಿಲ್ ಮತ್ತೊಂದು ಅರ್ಧಶತಕ; ಲಿಸ್ಟ್ ಎ ಕ್ರಿಕೆಟ್‌ನಲ್ಲಿ 12 ಸಾವಿರ ರನ್ ಪೂರೈಸಿದ ಗಬ್ಬರ್..! – india vs new zealand 1st odi shikhar dhawan completed 12000 runs in list a format


Shikhar Dhawan: ಈ ಪಂದ್ಯದಲ್ಲಿ 77 ಎಸೆತಗಳನ್ನು ಎದುರಿಸಿದ ಧವನ್ 72 ರನ್ ಬಾರಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಈ ವೇಳೆ 13 ಬೌಂಡರಿಗಳನ್ನು ಬಾರಿಸಿದರಾದರೂ ಮತ್ತೊಮ್ಮೆ ಶತಕ ವಂಚಿತರಾದರು.

ನ್ಯೂಜಿಲೆಂಡ್ (New Zealand) ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು (Team India) ಮುನ್ನಡೆಸುತ್ತಿರುವ ಶಿಖರ್ ಧವನ್ (Shikhar Dhawan) ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಶುಕ್ರವಾರ ಆಕ್ಲೆಂಡ್‌ನಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಪಂದ್ಯದಲ್ಲಿ ಬೌಂಡರಿಗಳ ಮಳೆಗರೆದ ಗಬ್ಬರ್ ಇದರೊಂದಿಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 12 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ಧವನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 11 ಸಾವಿರದ 953 ರನ್ ಗಳಿಸಿದ್ದರು.

ಆಕ್ಲೆಂಡ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಧವನ್ ಅತ್ಯುತ್ತಮ ಅರ್ಧಶತಕ ಗಳಿಸಿದರು. 63 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ 39 ನೇ ಅರ್ಧಶತಕವನ್ನು ಗಳಿಸಿದ ಧವನ್ ಈ ಅರ್ಧಶತಕದೊಂದಿಗೆ ತಮ್ಮ 12,000 ಲಿಸ್ಟ್ ಎ ರನ್‌ಗಳನ್ನು ಪೂರ್ಣಗೊಳಿಸಿದರು. 21ನೇ ಓವರ್‌ನಲ್ಲಿ ಆಡಮ್ ಮಿಲ್ನೆ ಅವರ ಮೊದಲ ಎಸೆತವನ್ನು ಬೌಂಡರಿ ಬಾರಿಸುವ ಮೂಲಕ ಧವನ್ 50 ರನ್ ಪೂರೈಸಿದರು. ಹಾಗೆಯೇ ಶುಭಮನ್ ಗಿಲ್ ಅವರೊಂದಿಗೆ ಶತಕದ ಜೊತೆಯಾಟವನ್ನು ಹಂಚಿಕೊಂಡು ಭಾರತಕ್ಕೆ ಬಲವಾದ ಆರಂಭವನ್ನು ನೀಡಿದರು.

ಮತ್ತೊಮ್ಮೆ ಶತಕ ವಂಚಿತ

ಈ ಪಂದ್ಯದಲ್ಲಿ 77 ಎಸೆತಗಳನ್ನು ಎದುರಿಸಿದ ಧವನ್ 72 ರನ್ ಬಾರಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಈ ವೇಳೆ 13 ಬೌಂಡರಿಗಳನ್ನು ಬಾರಿಸಿದರಾದರೂ ಮತ್ತೊಮ್ಮೆ ಶತಕ ವಂಚಿತರಾದರು. ಧವನ್ ಅವರ ಬ್ಯಾಟ್‌ನಿಂದ ಕೊನೆಯ ಏಕದಿನ ಶತಕ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಂದಿತು. ಅಂದಿನಿಂದ ಅವರ ಬ್ಯಾಟ್ ಶತಕದ ಬರ ಎದುರಿಸುತ್ತಿದೆ.

13 ಪಂದ್ಯಗಳಲ್ಲಿ 4 ಅರ್ಧಶತಕ

ಇನ್ನು ಈ ಪಂದ್ಯದಲ್ಲಿ ಮತ್ತೊಬ್ಬ ಓಪನರ್ ಆಗಿ ಕಣಕ್ಕಿಳಿದಿದ್ದ ಗಿಲ್ 65 ಎಸೆತಗಳಲ್ಲಿ 50 ರನ್ ಗಳಿಸಿದರು. ಇದು ವರೆಗೆ ಭಾರತದ ಪರ 13 ನೇ ಏಕದಿನ ಪಂದ್ಯಗಳನ್ನಾಡಿರುವ ಗಿಲ್ ಒಟ್ಟು 4 ಅರ್ಧಶತಕ ಸಿಡಿಸಿದ್ದಾರೆ. ಟಿ20 ಕ್ರಿಕೆಟ್‌ಗೆ ಪಾದಾರ್ಪಣೆಗಾಗಿ ಕಾಯುತ್ತಿರುವ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಗಿಲ್ ಅವರ ಬ್ಯಾಟ್​ನಿಂದ 4 ಅರ್ಧ ಶತಕ ಮತ್ತು ಒಂದು ಶತಕ ಬಂದಿದೆ.

ಧವನ್ ಮತ್ತು ಗಿಲ್ ನಡುವೆ 124 ರನ್ ಜೊತೆಯಾಟ

ಆಕ್ಲೆಂಡ್ ಏಕದಿನ ಪಂದ್ಯದಲ್ಲಿ ಧವನ್ ಮತ್ತು ಗಿಲ್ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರ ನಡುವೆ 124 ರನ್ ಜೊತೆಯಾಟವಿತ್ತು. ಗಿಲ್ 24ನೇ ಓವರ್‌ನ ಮೊದಲ ಎಸೆತದಲ್ಲಿ ಲಾಕಿ ಫರ್ಗುಸನ್‌ಗೆ ಬಲಿಯಾದರೆ ನಂತರದ ಓವರ್ ಅಂದರೆ 25 ನೇ ಓವರ್‌ನ ಮೂರನೇ ಎಸೆತದಲ್ಲಿ ಟಿಮ್ ಸೌಥಿ ಎಸೆತದಲ್ಲಿ ಧವನ್ ಬೌಲ್ಡ್ ಆದರು. ಭಾರತ 25ನೇ ಓವರ್‌ನಲ್ಲಿ 124 ರನ್‌ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡಿತ್ತು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *