ಕೊಹ್ಲಿ, ಲಾಥಮ್
ಮುಂಬೈನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಶುಕ್ರವಾರ ವಾಂಖೆಡೆ ಸ್ಟೇಡಿಯಂನಲ್ಲಿ ಮಳೆಯಿಂದಾಗಿ ತಡವಾಗಿ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ರಾತ್ರಿ ಮಳೆಯ ಕಾರಣ ಮೊದಲ ಸೆಷನ್ ಆಡಲು ಸಾಧ್ಯವಾಗಲಿಲ್ಲ. 9.30 ಮತ್ತು 10.30ಕ್ಕೆ ಎರಡು ಬಾರಿ ಪಿಚ್ ಪರಿಶೀಲಿಸಿದ ಅಂಪೈರ್‌ಗಳು 11.30ಕ್ಕೆ ಟಾಸ್ ಕರೆಯಲು ನಿರ್ಧರಿಸಿದರು. ಈ ಪಂದ್ಯಕ್ಕೆ ಮಳೆ ಹಾಗೂ ಗಾಯಾಳು ಆಟಗಾರರು ತೊಂದರೆ ನೀಡಿದ್ದರು. ಉಭಯ ತಂಡಗಳ ಒಟ್ಟು ನಾಲ್ವರು ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಇದು 133 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ ಕುತೂಹಲಕಾರಿ ಸಾಧನೆಗೆ ಕಾರಣವಾಯಿತು.
ಮುಂಬೈ ಟೆಸ್ಟ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳ ನಾಯಕರು ಬದಲಾಗಿದ್ದಾರೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕನಾಗಿ ಮರಳಿದಾಗ, ಕಿವೀಸ್ ತಂಡವು ಕೇನ್ ವಿಲಿಯಮ್ಸನ್ ಇಲ್ಲದೆ ಕಣಕ್ಕಿಳಿಯಬೇಕಾಯಿತು. ಅವರ ಬದಲಿಗೆ ಟಾಮ್ ಲ್ಯಾಥಮ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ಇದಕ್ಕೂ ಮೊದಲು ಕಾನ್ಪುರ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಭಾರತ ಮತ್ತು ವಿಲಿಯಮ್ಸನ್ ನ್ಯೂಜಿಲೆಂಡ್ ನಾಯಕರಾಗಿದ್ದರು. ಈ ಮೂಲಕ ಎರಡು ಟೆಸ್ಟ್‌ಗಳ ಸರಣಿಯಲ್ಲಿ ನಾಲ್ವರು ಆಟಗಾರರು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1888-89ರ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಸರಣಿಯ ನಂತರ ಎರಡು ಟೆಸ್ಟ್‌ಗಳ ಸರಣಿಯಲ್ಲಿ ನಾಲ್ಕು ವಿಭಿನ್ನ ನಾಯಕರನ್ನು ಮಾಡಿರುವುದು ಇದೇ ಮೊದಲು. 1888-89ರ ಸರಣಿಯ ಮೊದಲ ಟೆಸ್ಟ್‌ನಲ್ಲಿ, ಆಬ್ರೆ ಸ್ಮಿತ್ ಇಂಗ್ಲೆಂಡ್‌ನ ನಾಯಕರಾಗಿದ್ದರು ಮತ್ತು ಓವನ್ ಡನ್ನೆ ದಕ್ಷಿಣ ಆಫ್ರಿಕಾದ ನಾಯಕರಾಗಿದ್ದರು. ನಂತರ ಎರಡನೇ ಟೆಸ್ಟ್‌ನಲ್ಲಿ ಮಾಂಟಿ ಬೌಡೆನ್ ಇಂಗ್ಲೆಂಡ್‌ನ ನಾಯಕರಾದರು ಮತ್ತು ವಿಲಿಯಂ ಮಿಲ್ಟನ್ ದಕ್ಷಿಣ ಆಫ್ರಿಕಾದ ನಾಯಕರಾದರು.
ಉಭಯ ತಂಡಗಳಲ್ಲಿ ನಾಲ್ಕು ಬದಲಾವಣೆ
ಮುಂಬೈ ಟೆಸ್ಟ್‌ನಲ್ಲಿ ಭಾರತದ ಮೂವರು ಮತ್ತು ನ್ಯೂಜಿಲೆಂಡ್‌ನ ಒಬ್ಬ ಆಟಗಾರ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ. ಉಪನಾಯಕ ಅಜಿಂಕ್ಯ ರಹಾನೆ, ವೇಗದ ಬೌಲರ್ ಇಶಾಂತ್ ಶರ್ಮಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡು ಭಾರತ ತಂಡದಿಂದ ಹೊರಗುಳಿದಿದ್ದಾರೆ. ಮಂಡಿರಜ್ಜು ನೋವಿನಿಂದಾಗಿ ರಹಾನೆಗೆ ಆಡಲು ಸಾಧ್ಯವಾಗಲಿಲ್ಲ. ಈ ಮೂವರ ಗಾಯಗಳು ಎಷ್ಟು ಗಂಭೀರವಾಗಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದಾಗ್ಯೂ, ಟಾಸ್ ಸಮಯದಲ್ಲಿ, ಮೂವರಿಗೂ ನಿಗಲ್ (ಸ್ವಲ್ಪ ಗಾಯ) ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರು. ಅಂದರೆ ಈ ಮೂವರೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಲಭ್ಯರಾಗಲಿದ್ದಾರೆ.
ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿದ್ದರಿಂದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ವಾಪಸಾಗಿದ್ದು, ಮೊಹಮ್ಮದ್ ಸಿರಾಜ್ ಮತ್ತು ಜಯಂತ್ ಯಾದವ್ ಅವರಿಗೆ ಅವಕಾಶ ನೀಡಲಾಗಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡ ಮೊಣಕೈ ಗಾಯದಿಂದ ಆಡುತ್ತಿಲ್ಲ. ವಿಲಿಯಮ್ಸನ್ ಬದಲಿಗೆ ಡ್ಯಾರಿಲ್ ಮಿಚೆಲ್ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊಣಕೈ ಗಾಯದಿಂದಾಗಿ ವಿಲಿಯಮ್ಸನ್ ಬಹಳ ಸಮಯದಿಂದ ತೊಂದರೆಗೊಳಗಾಗಿದ್ದರು.