IND vs SA: 15 ಎಸೆತ, 5 ವಿಕೆಟ್.. ನಾಲ್ವರು ಶೂನ್ಯಕ್ಕೆ ಔಟ್! ಹರಿಣಗಳ ಪೆವಿಲಿಯನ್ ಪರೇಡ್ ವಿಡಿಯೋ ನೋಡಿ | Ind vs sa deepak chahar and arshdeep singh take 5 wicket in 15 balls


IND vs SA: ಇನಿಂಗ್ಸ್‌ನ ಮೊದಲ 15 ಎಸೆತಗಳಲ್ಲಿ ಕೇವಲ 9 ರನ್‌ಗಳಿಗೆ ದಕ್ಷಿಣ ಆಫ್ರಿಕಾದ 5 ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರುವ ಮೂಲಕ ಭಾರತ ಪಂದ್ಯದಲ್ಲಿ ಬಲಿಷ್ಠ ಆರಂಭ ಪಡೆಯಿತು.

ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ತಂಡಗಳು ಸೂಪರ್-12 ಸುತ್ತಿನಲ್ಲಿ ಒಂದೇ ಗುಂಪಿನ ಸ್ಥಾನ ಪಡೆದಿವೆ. ವಿಶ್ವಕಪ್‌ನಲ್ಲಿ ಉಭಯ ತಂಡಗಳ ಘರ್ಷಣೆಗೂ ಮುನ್ನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಈ ತಂಡಗಳು ಮುಖಾಮುಖಿಯಾಗುತ್ತಿದ್ದು, ಮೊದಲ ಪಂದ್ಯದಲ್ಲಿಯೇ ಭಾರತದ ಬೌಲರ್‌ಗಳು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ವಿಭಾಗವನ್ನು ಧ್ವಂಸಗೊಳಿಸಿದ್ದಾರೆ. ಸೆಪ್ಟೆಂಬರ್ 28, ಬುಧವಾರ ತಿರುವನಂತಪುರದಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ದೀಪಕ್ ಚಹಾರ್ ಮತ್ತು ಅರ್ಷದೀಪ್ ಸಿಂಗ್ (Deepak Chahar and Arshdeep Singh) ಜೋಡಿ ದಕ್ಷಿಣ ಆಫ್ರಿಕಾದ ಅರ್ಧದಷ್ಟು ತಂಡವನ್ನು ಕೇವಲ 15 ಎಸೆತಗಳಲ್ಲಿ ಪೆವಿಲಿಯನ್‌ಗೆ ಕಳುಹಿಸುವ ಮೂಲಕ ತಲ್ಲಣ ಮೂಡಿಸಿದೆ.

ಸುಮಾರು ಮೂರು ವರ್ಷಗಳ ನಂತರ, ತಿರುವನಂತಪುರಂನ ಗ್ರೀನ್‌ಫೀಲ್ಡ್ ಮೈದಾನದಲ್ಲಿ ಆಡುತ್ತಿರುವ ಟೀಂ ಇಂಡಿಯಾ, ಟಾಸ್‌ನಲ್ಲಿಯೇ ದೊಡ್ಡ ಸಹಾಯವನ್ನು ಪಡೆದುಕೊಂಡಿತು. ಏಕೆಂದರೆ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಹಿರಿಯ ಬೌಲರ್‌ಗಳಿಲ್ಲದೆಯೇ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಆಡುತ್ತಿದೆ. ಆದರೆ ಅರ್ಶ್‌ದೀಪ್ ಮತ್ತು ಚಹಾರ್ ಈ ಇಬ್ಬರ ಕೊರತೆ ಬಾರದಂತೆ ನೋಡಿಕೊಂಡಿದ್ದಾರೆ.

ವಿಕೆಟ್ ಬೇಟೆ ಆರಂಭಿಸಿದ ಚಹಾರ್

ತಿರುವನಂತಪುರಂನ ಈ ಮೈದಾನದ ಪಿಚ್‌ನಲ್ಲಿ ಸ್ವಲ್ಪ ಗ್ರಾಸ್ ಇದ್ದು, ಆರಂಭಿಕ ಓವರ್‌ಗಳಲ್ಲಿ ಭಾರತದ ಇಬ್ಬರೂ ವೇಗಿಗಳು ಅದರ ಲಾಭ ಪಡೆದರು. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಪ್ರವಾಸಿ ನಾಯಕ ಟೆಂಬಾ ಬವುಮಾ ಅವರನ್ನು ಅದ್ಭುತ ಇನ್ಸ್ವಿಂಗ್‌ ಮಾಡುವ ಮೂಲಕ ದೀಪಕ್ ಬೌಲ್ಡ್ ಮಾಡಿದರು. ಹೀಗಾಗಿ ಬವುಮಾಗೆ ಖಾತೆಯನ್ನೂ ತೆರೆಯಲಾಗಲಿಲ್ಲ. ಇದರ ನಂತರ, ಚಹರ್ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಮತ್ತೆ ಬೌಲಿಂಗ್​ಗೆ ಮರಳಿದರು. ಈ ಓವರ್​ನ ಮೂರನೇ ಎಸೆತದಲ್ಲಿ ಟ್ರಿಸ್ಟಾನ್ ಸ್ಟಬ್ಸ್ (0) ಥರ್ಡ್ ಮ್ಯಾನ್‌ನಲ್ಲಿ ಕ್ಯಾಚ್ ನೀಡಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಅರ್ಷದೀಪ್ ಸ್ವಿಂಗ್ ದಾಳಿ

ಅರ್ಷದೀಪ್ ಸಿಂಗ್ ಈ ಎರಡು ವಿಕೆಟ್‌ಗಳ ನಡುವೆ ವಿಧ್ವಂಸಕ ದಾಳಿ ನಡೆಸಿದರು. ಇನಿಂಗ್ಸ್​ನ ಎರಡನೇ ಓವರ್​ನಲ್ಲಿ ಬೌಲಿಂಗ್ ಮಾಡಲು ಬಂದ ಅರ್ಷದೀಪ್ ಅದ್ಭುತ ಸ್ವಿಂಗ್ ಬೌಲಿಂಗ್ ಪ್ರದರ್ಶಿಸಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು. ಅರ್ಷದೀಪ್ ಎರಡನೇ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ (1) ಅವರನ್ನು ಬೌಲ್ಡ್ ಮಾಡಿದರು. ಬಳಿಕ ಐದನೇ ಎಸೆತದಲ್ಲಿ ರಿಲೆ ರುಸ್ಸೋ (0) ವಿಕೆಟ್‌ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಅನಂತರ ಓವರ್‌ನ ಕೊನೆಯ ಎಸೆತದಲ್ಲಿ ಎಡಗೈ ವೇಗಿ ಡೇವಿಡ್ ಮಿಲ್ಲರ್ (0) ಅವರನ್ನು ಅರ್ಷದೀಪ್ ಬೌಲ್ಡ್ ಮಾಡಿದರು.

15 ಎಸೆತ, 5 ವಿಕೆಟ್, 9 ರನ್

ಈ ಮೂಲಕ ಇನಿಂಗ್ಸ್‌ನ ಮೊದಲ 15 ಎಸೆತಗಳಲ್ಲಿ ಕೇವಲ 9 ರನ್‌ಗಳಿಗೆ ದಕ್ಷಿಣ ಆಫ್ರಿಕಾದ 5 ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರುವ ಮೂಲಕ ಭಾರತ ಪಂದ್ಯದಲ್ಲಿ ಬಲಿಷ್ಠ ಆರಂಭ ಪಡೆಯಿತು. ಈ 5 ಬ್ಯಾಟ್ಸ್‌ಮನ್‌ಗಳ ಪೈಕಿ ನಾಲ್ವರು ತಮ್ಮ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇದು ಪುರುಷರ ಟಿ20ಯಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದ್ದು, ಅಂಕಿಅಂಶಗಳ ಪ್ರಕಾರ ಈ ಹಿಂದೆ ಭಾರತ 2016 ರಲ್ಲಿ ಶ್ರೀಲಂಕಾ ವಿರುದ್ಧ 31 ಎಸೆತಗಳಲ್ಲಿ ಮೊದಲ 5 ವಿಕೆಟ್ಗಳನ್ನು ತೆಗೆದುಕೊಂಡು ಬೆಸ್ಟ್ ಪ್ರದರ್ಶನ ನೀಡಿತ್ತು.

ಆಡುವ XI ನಲ್ಲಿ ಬದಲಾವಣೆ

ಮೂರು ಪಂದ್ಯಗಳ ಸರಣಿಯ ಈ ಮೊದಲ ಪಂದ್ಯದಲ್ಲಿ ಅರ್ಷದೀಪ್ ಮತ್ತು ಚಹಾರ್ ಹೊರತುಪಡಿಸಿ, ಟೀಂ ಇಂಡಿಯಾ ರಿಷಬ್ ಪಂತ್ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ XI ಗೆ ಸೇರಿಸಿದೆ. ಈ ಸರಣಿಯಿಂದ ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಪಂದ್ಯಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಬೆನ್ನಿನ ಸಮಸ್ಯೆಗೆ ತುತ್ತಾಗಿರುವುದರಿಂದ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಜೊತೆಗೆ ಯುಜುವೇಂದ್ರ ಚಹಾಲ್‌ ಕೂಡ ರೆಸ್ಟ್​ನಲ್ಲಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.